Saturday, 27th April 2024

ಸಿಎಂಗೆ ರೈತರ ಹಿತಕ್ಕಿಂತ ಸರ್ಕಾರ ಉಳಿಸುವುದೇ ಮುಖ್ಯವಾಗಿದೆ: ಡಿಕೆಶಿ ಆರೋಪ

ಬಿಜೆಪಿಯ ಅನೇಕರು ಕಾಂಗ್ರೆಸ್ ಸೇರುತ್ತಾರೆ ಕಾದು ನೋಡಿ

ಕೊಪ್ಪಳ: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಮ್ಮ‌ ಸರ್ಕಾರ ಉಳಿಸಿಕೊಳ್ಳುವುದು ಮುಖ್ಯವಾಗಿ ದೆಯೇ ಹೊರತು ರೈತರ ಹಿತ ಅವರಿಗೆ ಮುಖ್ಯವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರು ಸರ್ಕಾರದ ವಿರುದ್ದ ಗುಡುಗಿದರು.

ಕೊಪ್ಪಳ ತಾಲೂಕಿನ ಹಿಟ್ನಾಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕೊಪ್ಪಳ-ರಾಯಚೂರು ಭಾಗದಲ್ಲಿ ಬೆಳೆದ ಭತ್ತಕ್ಕೆ ಬೆಲೆ ಸಿಗುತ್ತಿಲ್ಲ. ಈಗಿರುವ ಭತ್ತದ ಬೆಲೆ ಜೊತೆಗೆ ಹೆಚ್ಚುವರಿ ೫೦೦ ರೂ ಬೆಲೆ ಹೆಚ್ಚಳ ಮಾಡಬೇಕು. ಪ್ರತ ದಿನವೂ ಬೆಲೆ ಏರಿಕೆ ಆಗುತ್ತಿದೆ. ಈಗ ವಿದ್ಯುತ್ ಸಹ ಹೆಚ್ಚಳ ಮಾಡಲಾಗಿದೆ. ಸರ್ಕಾರ ಭತ್ತಕ್ಕೆ ಹೆಚ್ಚುವರಿ ೫೦೦ ರೂ ಬೆಂಬಲ ಬೆಲೆ ಘೋಷಣೆ ಮಾಡಬೇಕು.

40 ಪೈಸೆ ವಿದ್ಯುತ್ ಶುಲ್ಕ ಹೆಚ್ಚಳ ಮಾಡಿದ್ದು, ಕೊರೊನಾ ವರ್ಷದಲ್ಲಿ ಜನರು ತುಂಬ ಸಂಕಷ್ಟ ಎದುರಿಸುತ್ತಿದ್ದಾರೆ.‌ ಕೂಡಲೇ ಶುಲ್ಕ ಇಳಿಕೆ ಮಾಡುವ ಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

ರೈತ ಬೆಲೆ ಇಲ್ಲದೆ ಕಂಗಾಲಾಗಿದ್ದಾನೆ. ಮುಖ್ಯಮಂತ್ರಿಗಳು ಮೊದಲು ರೈತರನ್ನು ಉಳಿಸಲು ಆಧ್ಯತೆ ನೀಡಲಿ, ಮೆಕ್ಕೆಜೋಳದ ಬೆಲೆಯೂ ಸಂಪೂರ್ಣ ಕುಸಿದಿದೆ. ಕೂಡಲೇ ಖರೀದಿ ಕೇಂದ್ರ ಆರಂಭ ಮಾಡಲಿ ಎಂದರು.
ಬಿಜೆಪಿ ಜಾತಿ ಜಾತಿಗಳನ್ನು ಕೂಡಿಸುವುದನ್ನ ಬಿಟ್ಟು ಒಡೆಯುವ ಕೆಲಸ ಮಾಡುತ್ತಿದೆ.‌ ಮರಾಠ ಅಭಿವೃದ್ಧಿ ನಿಗಮ‌ ಸ್ಥಾಪನೆ ಮಾಡಿದ್ದಾರೆ. ಹೀಗೆ ಜಾತಿಗೊಂದು ನಿಗಮ ಮಾಡಲು ಹೊರಟಿದ್ದಾರೆ. ರೈತರ ಬೆಳೆಗೆ ಬೆಂಬಲ ಬೆಲೆ ಸೇರಿ ನಿಗಮಗಳ ಕುರಿತಂತೆ ಸುದೀರ್ಘ ಚರ್ಚೆ ನಡೆಸಲು ನ.30 ರಂದು ಹಿರಿಯರ ಸಭೆ ಕರೆದಿದ್ದೇನೆ. ಸಭೆಯಲ್ಲಿ ಹಲವು ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ ಎಂದರು.

ಕಾಂಗ್ರೆಸ್ ನಿಂದ‌ ಬಿಜೆಪಿಗೆ ಹೋಗುವವರು ಯಾರೂ ಇಲ್ಲ. ಬಿಜೆಪಿಯಿಂದಲೇ ಕಾಂಗ್ರೆಸ್ ಗೆ ಬರ್ತಾರೆ ಎಂದರಲ್ಲದೇ, ಸರ್ಕಾರ ಶಾಲೆಗಳ ಆರಂಭದ ಕುರಿತು ಚರ್ಚೆ ನಡೆಸುತ್ತಿದೆ. ಅವರು ಏನು ನಿರ್ಧಾರ ಕೈಗೊಳ್ತಾರೋ ನೋಡೋಣ. ನಮ್ಮ ಅಭಿಪ್ರಾಯವನ್ನ ಅವರು ಕೇಳಿಲ್ಲ. ಈ ಹಿಂದೆ ಒಂದು ಬಾರಿ ನಮ್ಮ ಸಲಹೆ ಕೇಳಿದ್ದರು.‌ ಶಾಲೆ ಆರಂಭದ ಕುರಿತು ಸರ್ಕಾರದ ನಿರ್ಧಾರದ ಮೇಲೆ ನಾವು ತೀರ್ಮಾನ ಹೇಳುತ್ತೇವೆ ಎಂದರು.

ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಣ್ಣ ಅಂತರದಿಂದ ಸೋತ ಬಸವನಗೌಡ ತುರ್ವಿಹಾಳ ಅವರನ್ನು ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದೇವೆ. ಎಲ್ಲರೂ ಚುನಾವಣಾ ತಯಾರಿ ನಡೆಸಲು ಸಿದ್ದರಾಗಿದ್ದಾರೆ ಎಂದರು.

ಈ ವೇಳೆ ಶಾಸಕರಾದ ಅಮರೆಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಕೆಪಿಸಿಸಿ ಕಾರ್ಯದರ್ಶಿ ಶಿವಕುಮಾರ್ ಮೆಣಸಿನಕಾಯಿ ಸೇರಿ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!