Monday, 20th May 2024

ಗ್ರಾಮಗಳಲ್ಲಿ ಹರಡುತ್ತಿದೆ ಗ್ರಾಪಂ ಕದನದ ರಂಗು

7142 ಅಭ್ಯರ್ಥಿಗಳು

156 ಮಂದಿ ಅವಿರೋಧ ಆಯ್ಕೆ

ರಂಗನಾಥ ಕೆ.ಮರಡಿ

ತುಮಕೂರು: ಜಿಲ್ಲೆಯಲ್ಲಿ ಮೊದಲ ಸುತ್ತಿನ ಗ್ರಾಪಂ ಕದನಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಹಳ್ಳಿಗಳಲ್ಲಿ ರಾಜಕೀಯ ಕಾವು ಏರುತ್ತಿದೆ. ವಿಧಾನಸಭೆ, ಲೋಕಸಭೆಗಿಂತಲೂ ಕಡಿಮೆಯಿಲ್ಲದಂತೆ ಗ್ರಾಪಂ ಕದನದ ರಂಗು ಗ್ರಾಮಗಳಲ್ಲಿ ಹರಡುತ್ತಿದೆ.

ಕುಣಿಗಲ್, ಗುಬ್ಬಿ, ಕೊರಟಗೆರೆ ಹಾಗೂ ಪಾವಗಡ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಕ್ಕೆ ಡಿ.22ರಂದು ನಡೆಯ ಲಿರುವ ಮೊದಲ ಹಂತದ ಚುನಾವಣೆಯ ಅಂತಿಮ ಕಣದಲ್ಲಿ 7142 ಅಭ್ಯರ್ಥಿಗಳಿದ್ದಾರೆ.

ಮೊದಲ ಹಂತದಲ್ಲಿ 168 ಗ್ರಾಮ ಪಂಚಾಯತಿಗಳ 2786 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾಗಿದ್ದು, ಈ ಪೈಕಿ ಗುಬ್ಬಿ ತಾಲ್ಲೂಕಿನ 36 ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಿರುವುದರಿಂದ ಖಾಲಿ ಉಳಿದಿದ್ದು, ಅವಿರೋಧ ವಾಗಿ 156 ಸದಸ್ಯರು ಆಯ್ಕೆಯಾಗಿದ್ದಾರೆ.

ಚುನಾವಣೆ ನಡೆಯಲಿರುವ 2594 ಸದಸ್ಯ ಸ್ಥಾನಗಳಿಗೆ ಸ್ಪರ್ಧಿಸಲು 1639 ಪರಿಶಿಷ್ಟ ಜಾತಿ, 639 ಪ.ಪಂಗಡ, 875 ಹಿಂದುಳಿದ ಅ ವರ್ಗ, 244 ಹಿಂದುಳಿದ ಬಿ ವರ್ಗ ಹಾಗೂ 3745 ಸಾಮಾನ್ಯ ಅಭ್ಯರ್ಥಿಗಳು ಸೇರಿ ಒಟ್ಟು 7142 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ದ್ದಾರೆ.

ಹಣದ ಹೊಳೆಯು ಹರಿಯಲಿದೆ: ಹಣವಿಲ್ಲದೆ ಚುನಾವಣೆ ನಡೆಸುವುದು ಕಷ್ಟ ಎನ್ನುವ ಕಾಲಬಂದಿದೆ. ಗ್ರಾಮಗಳಲ್ಲಿ ಈಗಾ ಗಲೇ ಮನೆ ಮನೆಗೆ ಹಣಹಂಚಿ ಮತಕೇಳುವ ಕಾಯಕದಲ್ಲಿ ಅಭ್ಯರ್ಥಿಗಳು ತೊಡಗಿದ್ದಾರೆ. ಮತದಾನ ನಾಳೆ ಎನ್ನುವ ಸಂದರ್ಭ ದಲ್ಲಿ ಇಡೀ ರಾತ್ರಿ ಅಭ್ಯರ್ಥಿಗಳು ನಿದ್ದೆ, ಊಟ ಬಿಟ್ಟು ಪ್ರತಿಯೊಂದು ಮನೆಯನ್ನು ತಡಕಾಡಿ ಹಣಹಂಚುವುದು ಹಗಲಿನಷ್ಟೇ ಸತ್ಯ.

ಶತ್ರು-ಮಿತ್ರ: ಚುನಾವಣೆಯಿಂದಾಗಿ ಹಳ್ಳಿಯಲ್ಲಿ ಮಿತ್ರ ಶತ್ರುವಾಗುತ್ತಿದ್ದಾರೆ, ಶತ್ರು ಮಿತ್ರರಾಗುತ್ತಿದ್ದಾರೆ. ಸಹೋದರರ ನಡುವೆ ಯೇ ವೈರತ್ವವನ್ನು ಮೂಡಿಸುವ ಲಕ್ಷಣ ಕಾಣುತ್ತಿದೆ. ಗ್ರಾಪಂ ಕದನ ಪಕ್ಷಗಳ ಬೆಂಬಲಿತವಾಗಿ ನಡೆಯುತ್ತಿರುವುದರಿಂದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಗುಂಪುಗಳು ಹಳ್ಳಿಗಳಲ್ಲಿ ಸೃಷ್ಟಿಯಾಗಿದ್ದು, ಚುನಾವಣೆ ಮುಗಿಯುವವರೆಗೂ ಗಲಾಟೆ, ಗದ್ದಲ ತಪ್ಪಿದ್ದಲ್ಲ. ಕೆಲವು ಘಟನೆಗಳು ಪೊಲೀಸ್ ಠಾಣೆಯ ಹಂತಕ್ಕೂ ಹೋಗಿವೆ.

ಮುಖ್ಯಾಂಶಗಳು
*ಮೊದಲ ಸುತ್ತಿನ ಮತದಾನ ಡಿ.22ಕ್ಕೆ.
* ಕುಣಿಗಲ್, ಗುಬ್ಬಿ,ಕೊರಟಗೆರೆ, ಪಾವಗಡ ತಾಲ್ಲೂಕಿನಲ್ಲಿ ಚುನಾವಣೆ.
*168 ಗ್ರಾಮ ಪಂಚಾಯತಿಗಳು.
* ಮೊದಲ ಸುತ್ತಿನಲ್ಲಿ 7142 ರಣಕಲಿಗಳು.
*156 ಮಂದಿ ಅವಿರೋಧ ಆಯ್ಕೆ.

ಗುಂಟು ತುಂಡು ಪಾರ್ಟಿ ಜೋರು, ಜೋರು
ಹಳ್ಳಿಗಳಲ್ಲಿ ರಣರಂಗ ಕಾವೇರಿದ್ದು, ಕಣದಲ್ಲಿರುವ ರಣಕಲಿಗಳು ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಮತದಾನಕ್ಕೆ ನಾಲ್ಕೈದು ದಿನ ಬಾಕಿ ಇರುವುದರಿಂದ ಗುಂಡು, ತುಂಡಿನ ಪಾರ್ಟಿ ಹಳ್ಳಿಗಳಲ್ಲಿ ಜೋರಾಗಿಯೇ ನಡೆಯುತ್ತಿದೆ. ಯಾವ ಹಳ್ಳಿಗೆ ಕಾಲಿಟ್ಟರೂ ಈಗ ಚುನಾವಣೆಯ ಮಾತು ಕೇಳಿಬರುತ್ತಿದೆ. ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ಅಧಿಕ ಮಂದಿ ಕಣದಲ್ಲಿರುವುದರಿಂದ ಪೈಪೋಟಿ ಕಂಡುಬಂದಿದೆ.

ದೂರ ಇರುವವರಿಗೆ ತಡಕಾಟ
ಹಳ್ಳಿ ಬಿಟ್ಟು ಪಟ್ಟಣ ಸೇರಿರುವವರನ್ನು ಅಭ್ಯರ್ಥಿಗಳು ಹುಡುಕುವ ಭರಾಟೆಯಲ್ಲಿದ್ದಾರೆ. ಮತದಾನದ ದಿನ ಬಂದು ಮತದಾನ ಮಾಡಿಹೋಗುವಂತೆ ಮನವಿ ಮಾಡುತ್ತಿದ್ದು, ಎಲ್ಲಾ ವ್ಯವಸ್ಥೆ ಮಾಡುವ ಭರವಸೆ ನಿಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!