Saturday, 18th May 2024

ಜನಸ್ವರಾಜ್ ಸಮಾವೇಶ: ಯಲ್ಲಾಪುರದಲ್ಲಿ ರಣಕಹಳೆ

ಶಿರಸಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ವಿಧಾನ ಪರಿಷತ್ ಸ್ಥಾನವನ್ನು ಗೆಲ್ಲಬೇಕು ಎಂಬ ಪಣತೊಟ್ಟಿರುವ ಬಿಜೆಪಿ ಚುನಾವಣಾ ಯಲ್ಲಾಪುರದಲ್ಲಿ ಜನಸ್ವರಾಜ್ ಸಮಾವೇಶದ ಮೂಲಕ ರಣಕಹಳೆಯನ್ನು ಮೊಳಗಿಸಿದೆ.

ಯಲ್ಲಾಪುರ ನಗರದ ಈಶ್ವರಿ ವಿಶ್ವವಿದ್ಯಾಲಯದ ಆವರಣದಲ್ಲಿ ಗುರವಾರ ನಡೆದ ಸಮಾವೇಶದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಪರಿಷತ್ ಚುನಾವಣೆಯನ್ನು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿ ದರು. ಮೊದಲ ಬಾರಿಗೆ ಗೆದ್ದು ಇತಿಹಾಸ ನಿರ್ಮಾಣ ಮಾಡುವ ಭರವಸೆ ನೀಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಬಿಜೆಪಿ ಈ ಹಿಂದೆ ಗೆಲ್ಲಲು ಸಾಧ್ಯವಾಗದ ಕ್ಷೇತ್ರಕ್ಕೆ ಈ ಬಾರಿ ಪ್ರವಾಸ ಕೈಗೊಂಡಿದ್ದೇನೆ. ಗೆದ್ದೆ ಗೆಲ್ಲಬೇಕು ಎಂಬ ಛಲದೊಂದಿಗೆ ಕಾರ್ಯಕರ್ತರು ಮನಸ್ಸು ಮಾಡಿದಲ್ಲಿ ಎಲ್ಲವೂ ಸಾಧ್ಯವಿದೆ. ನಾನೇ ಅಭ್ಯರ್ಥಿ ಎಂದು ತಿಳಿದುಕೊಂಡು ಕಾರ್ಯ ಕರ್ತರು ಇಂದಿನಿಂದಲೇ ಕೆಲಸ ಮಾಡಿದಲ್ಲಿ ಬಿಜೆಪಿ ಅಭ್ಯರ್ಥಿ ದೊಡ್ಡ ಅಂತರದಿಂದ ವಿಜಯ ಸಾಧಿಸುತ್ತಾರೆ ಎಂದರು.

ಪ್ರಧಾನಿ ಮೋದಿಯಂತವರು ಸಿಕ್ಕಿರುವುದು ದೇಶದ ಸೌಭಾಗ್ಯವಾಗಿದೆ. ವಿಶ್ವದಲ್ಲಿ ಮನ್ನಣೆ ದೊರಕಿದೆ. ಅಂತಹ ನಾಯಕನ ಪಕ್ಷದಲ್ಲಿ ನಾವಿರುವುದು ಹೆಮ್ಮೆಯಾಗಿದೆ. ದೇಶದ ಜನ ಅವರನ್ನು ನಂಬಿದ್ದಾರೆ. ಇದರಿಂದ ಇನ್ನೂ ೨೫ ವರ್ಷ ಆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸ್ಸು ಇಟ್ಟುಕೊಳ್ಳಬಾರದು ಎಂದು ವ್ಯಂಗ್ಯವಾಡಿದ ಅವರು, ರಾಹುಲ್ ಗಾಂಧಿಗೆ ಎಲ್ಲಿಯೂ ಜನ ಮನ್ನಣೆ ಸಿಗುವುದಿಲ್ಲ. ಅವರು ಯಾಕೆ ವಿದೇಶಕ್ಕೆ ಹೋಗುತ್ತಾರೆ ಬರುತ್ತಾರೆ ತಿಳಿಯುವುದಿಲ್ಲ. ಅದೊಂದು ಮುಳುಗುವ ಹಡಗಾಗಿದ್ದು, ಅವರನ್ನು ಸೋಲಿಸಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯು ಬಹುಮತ ಬರುವಂತೆ ಮಾಡಬೇಕು ಎಂದರು.

ಚುನಾವಣೆ ಬಂದು ಹೋಗುತ್ತದೆ. ಆದರೆ ಕಾರ್ಯಕರ್ತರು ಅಗತ್ಯ ಇರುವವರ ಸೇವೆ ಮಾಡಬೇಕು. ಅವರಿಗೆ ನೆರವಾಗಬೇಕು. ಇದನ್ನು ಅನುಸರಿಸಿಕೊಂಡು ಹೋಗಬೇಕು. ಅದೇ ರೀತಿ ನಾನು ಶೀಘ್ರದಲ್ಲಿ ರಾಜ್ಯ ಪ್ರವಾಸ ಮಾಡುತ್ತೇನೆ. ನಾನು ಯಾರ ಒತ್ತಾಯಕ್ಕೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಬದಲಾಗಿ ನನ್ನ ಜನರಿಗಾಗಿ ಕಣ್ಣೀರು ಹಾಕಿಲ್ಲ. ಈಗಲೂ ನನ್ನ ಮೇಲೆ ಜನರಿಗೆ ಪ್ರೀತಿ ಇದೆ. ಇದೇ ರೀತಿಯ ಪ್ರೀತಿ ವಿಶ್ವಾಸವನ್ನು ನೀವೂ ಜನರ ಸೇವೆ ಮಾಡಿ ಗಳಿಸಬೇಕು ಎಂದರು.

ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ಹೆಚ್ಚಾಗಿ ಹಾರಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿರುವ ಬಿಜೆಪಿಯ ಕಾರ್ಯಕರ್ತರ ಶಕ್ತಿಯಿಂದ ೧೨ ರಿಂದ ೧೩ ಪರಿಷತ್ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ. ಅದೇ ರೀತಿ ಪರಿಷತ್ ಚುನಾವಣೆಯಲ್ಲಿ ಎಲ್ಲಾ ಬಿರುಗಾಳಿಯನ್ನು ತೊಡೆದುಕೊಂಡು ಬಿಜೆಪಿ ದಿಗ್ವಿಜಯ ಸಾಧಿಸಲಿದೆ ಎಂದರು.

ಮುಂಬರುವ ಪರಿಷತ್ ಜೊತೆಗೆ ೨೦೨೩ ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ೧೫೦ ಕ್ಕೂ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ. ಆದ ಕಾರಣ ಬಿಜೆಪಿಯ ತಟ್ಟೆಯಲ್ಲಿ ಹೆಗ್ಗಣ ಹುಡುಕುವ ಬದಲು ಕಾಂಗ್ರೆಸ್ ತನ್ನ ತಟ್ಟೆಯಲ್ಲಿ ಬಿದ್ದಿರುವ ಕತ್ತೆ ತೆಗೆದು ಹಾಕಲಿ ಎಂದು ವಾಗ್ದಾಳಿ ನಡೆಸಿದ ಅವರು, ಬಿಜೆಪಿಯ ವಿರುದ್ಧ, ಪ್ರಧಾನಿಯ ವಿರುದ್ಧ ಮಾತನಾಡುವ ಸಿದ್ಧರಾಮಯ್ಯನವರನ್ನು ಅವರದ್ದೇ ಪಕ್ಷದ ನಾಯಕರು ಮುಂದಿನ ಚುನಾವಣೆಯಲ್ಲಿ ಸೋಲುಣಸಲಿದೆ ಎಂದರು.‌

ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಜಿಲ್ಲೆಯು ಈವರೆಗೆ ೬ ಬಾರಿ ಪರಿಷತ್ ಚುನಾವಣೆ ಎದುರಿಸಿದೆ. ೨ ಬಾರಿ ಜನತಾ ದಳ, ೪ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆದರೆ ಈ ಬಾರಿ ಕಾಂಗ್ರೆಸ್ ನಿಂದ ಗೆಲುವು ಕಸಿಯಲು ಎಲ್ಲಾ ಸಿದ್ಧತೆ ನಡೆಸಲಾಗಿದೆ. ಬಿಜೆಪಿಯಲ್ಲಿ ೨೪ ಜನರು ಅರ್ಜಿ ನೀಡಿದ್ದಾರೆ. ಆದರೆ ಕಾಂಗ್ರೆಸ್ ಗೆ ಈವರೆಗೂ ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಾಗಿಲ್ಲ. ಈಗ ಆಯ್ಕೆಯಾದವರು ಬೆಳಿಗ್ಗೆ ಓಡಿಹೋಗುವ ಸ್ಥಿತಿಯಿದೆ. ಆದ ಕಾರಣ ಈ ಬಾರಿ ಜಿಲ್ಲೆಯ ಪರಿಷತ್ ಸ್ಥಾನವನ್ನು ಗೆದ್ದು ಬಿಜೆಪಿಗೆ, ಯಡಿಯೂರಪ್ಪನವರಿಗೆ ಉಡುಗೊರೆಯಾಗಿ ನೀಡಲಿದ್ದೇವೆ ಎಂದರು.

೧೫ ದಿನದಿಂದ ಪರಿಷತ್ ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ. ಹಿರಿಯರ ಸಲಹೆಯ ಸ್ವೀಕಾರ ಮಾಡಲಾಗಿದೆ. ಬಿಜೆಪಿಯ ಎಲ್ಲಾ ನಾಯಕರು ನಿಶ್ಚಿಂತೆಯಿಂದ ಇರಬಹುದಾಗಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಅದೇ ರೀತಿ ಬಿಜೆಪಿಯ ಸದಸ್ಯರು, ಕಾರ್ಯಕರ್ತರು ಚುನಾವಣೆಯಲ್ಲಿ ಗೆಲ್ಲಲು ಸಹಕರಿಸಬೇಕು ಎಂದು ವಿನಂತಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಜಿಲ್ಲೆಯಲ್ಲಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಒಮ್ಮೆಯೂ ಗೆಲುವು ಸಾಧಿಸಿಲ್ಲ. ಕಳೆದ ಎರಡು ಅವಧಿಗೆ ಆಯ್ಕೆಯಾಗಿದ್ದ ಘೋಟ್ನೇಕರ್ ಅವರು ಗ್ರಾಮ ಪಂಚಾಯತಿ ವ್ಯವಸ್ಥೆಯ ಬಗ್ಗೆ ಕಿಂಚಿತ್ ಸಹ ಮಾಹಿತಿಯಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇಂತವರ ಮಧ್ಯದಲ್ಲಿ ಬಿಜೆಪಿ ಈ ಬಾರಿ ಪ್ರಬುದ್ಧ ಅಭ್ಯರ್ಥಿಯನ್ನು ನೀಡಲಿದ್ದು, ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು. ಗೆದ್ದು ಇತಿಹಾಸ ರಚನೆ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬದನಗೋಡ ಕಾಂಗ್ರೆಸ್ ಘಟಕದ ರಾಜಶೇಖರ ಪುಟ್ಟಪ್ಪ, ಚಿಗಳ್ಳಿಯ ಅಶೋಕ ಬದನಗೌಡ್ರು, ಹೊನ್ನಾವರದ ತಾರಾ ನಾಯ್ಕ, ಶಿರಸಿ ನಗರಸಭೆ ಸದಸ್ಯರಾದ ಕುಮಾರ ಬೋರಕರ, ರಾಘವೇಂದ್ರ ಶೆಟ್ಟಿ ಮುಂತಾದವರು ಬಿಜೆಪಿ ಸೇರ್ಪಡೆಯಾದರು.

ಈ ವೇಳೆ ಶಾಸಕರಾದ ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ದಿನಕರ ಶೆಟ್ಟಿ, ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್, ಮಾಜಿ ಶಾಸಕ ಸುನೀಲ್ ಹೆಗಡೆ, ಮೀನುಗಾರ ಪ್ರಮುಖ ಗಣಪತಿ ಉಳ್ವೇಕರ ಸೇರಿದಂತೆ ರಾಜ್ಯ, ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

***
ಪರಿಷತ್ ಗೆ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಆದರೆ ಪಕ್ಷ ಟಿಕೇಟ್ ನೀಡಿರಿರುವವರಿಗೆ ಎಲ್ಲರೂ ಸೇರಿ ಬೆಂಬಲ ನೀಡಿ ಗೆಲ್ಲಿಸಲು ಪ್ರಯತ್ನಿಸಬೇಕು. ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಆಗಬೇಕು.
ಗಣಪತಿ ಉಳ್ವೇಕರ, ಮೀನುಗಾರ ಮುಖಂಡ.‌

ಉತ್ತರ ಕನ್ನಡ ಪರಿಷತ್ ಚುನಾವಣೆಯಲ್ಲಿ ಅತಿದೊಡ್ಡ ಅಂತರದಿಂದ ಬಿಜೆಪಿ ಗೆಲುವು ಸಾಧಿಸಲಿದೆ. ೨೮೦೦ ಮತಗಳಲ್ಲಿ ಕನಿಷ್ಠ ೨೦೦೦ ಮತಗಳನ್ನು ಪಡೆಯಬೇಕು. ಸರ್ಕಾರದ ಸಾಧನೆಯನ್ನು ಗಮನಿಸಿ ಎಲ್ಲರೂ ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕು. ಮುಂಬರುವ ತಾಲೂಕು, ಜಿಲ್ಲಾ ಪಂಚಾಯತ ಚುನಾವಣೆಗೆ ಇದು ಮುನ್ನಡಿಯಾಗಬೇಕು.
ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ.

ಉಳ್ವೇಕರ ಅಭ್ಯರ್ಥಿ !
ಸಮಾವೇಶದಲ್ಲಿ ಪರಿಷತ್ ಅಭ್ಯರ್ಥಿಯ ಹೆಸರು ಪ್ರಕಟಿಸಬಹುದು ಎಂಬ ನಿರೀಕ್ಷೆ ಸುಳ್ಳಾಯಿತು. ಆದರೆ ಅಲ್ಲಿ ನಡೆದ ಕೆಲ ಘಟನೆಗಳು ಮೀನುಗಾರ ಮುಖಂಡ ಗಣಪತಿ ಉಳ್ವೇಕರ ಅವರೇ ಅಭ್ಯರ್ಥಿ ಎಂದು ಸ್ಪಷ್ಟವಾಗುವಂತೆ ಮಾಡಿತು. ಹಲವು ಆಕಾಂಕ್ಷಿಗಳಲ್ಲಿ ಉಳ್ವೇಕರ್ ಅವರಿಗೆ ಮಾತ್ರ ವೇದಿಕೆಯಲ್ಲಿ ಘಟಾನುಘಟಿ ನಾಯಕರ ಜೊತೆ ಭಾಷಣಕ್ಕೆ ಅವಕಾಶ ಮಾಡುಕೊಡಲಾಗಿತ್ತು. ಅಲ್ಲದೇ ಅವರ ನಂತರ ಭಾಷಣಕ್ಕೆ ಬಂದ ಯಡಿಯೂರಪ್ಪ ಅವರು ‘ನಿಮಗೆ ಬಹುಷಃ ಈಗಾಗಲೇ ಅಭ್ಯರ್ಥಿ ಯಾರು ಎಂಬುದು ಸ್ಪಷ್ಟ ಆಗಿರಬೇಕು ‘ ಎಂದು ಸೂಚ್ಯವಾಗಿ ಗಣಪತಿ ಅವರೇ ಅಭ್ಯರ್ಥಿ ಎಂದು ತಿಳಿಸಿದರು. ಆದರೆ ಅಧಿಕೃತ ಘೋಷಣೆ ಪಕ್ಷದಿಂದ ಇನ್ನಷ್ಟೇ ಆಗಲಿದೆ ಎಂದೂ ಹೇಳಿದರು.

Leave a Reply

Your email address will not be published. Required fields are marked *

error: Content is protected !!