Sunday, 28th April 2024

ಬಸವಕಲ್ಯಾಣದಲ್ಲಿ ಗೆಲ್ಲದಿದ್ದರೆ ಬಿಜೆಪಿ ಬಿದ್ದು ಹೋಗಲ್ಲ: ಕೃಷಿ ಸಚಿವ ಬಿ.ಸಿ. ಪಾಟೀಲ

ಕೊಪ್ಪಳ: ಬಸವಕಲ್ಯಾಣದಲ್ಲಿ ಗೆಲ್ಲದಿದ್ರೆ ಬಿಜೆಪಿ ಬಿದ್ದು ಹೋಗಲ್ಲ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜನರು ಬಿಜೆಪಿ ಗೆಲ್ಲಿಸುತ್ತಾರೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಲೈಕೆಗಾಗಿ ವಿವಿಧ ಸಮುದಾಯಗಳ ಪ್ರಾಧಿಕಾರ ಘೋಷಣೆ ಮಾಡಿಲ್ಲ. ಆಯಾ ಸಮುದಾಯಗಳ ಬೇಡಿಕೆಗೆ ಅನುಗುಣವಾಗಿ ಪ್ರಾಧಿಕಾರ ರಚಿಸಲಾಗ್ತಾ ಬಂದಿದೆ. ಮರಾಠಾ ಅಭಿವೃದ್ಧಿ ಪ್ರಾಧಿಕಾರದಿಂದ ಮರಾಠವನ್ನು ಉದ್ಧಾರ ಮಾಡೋದಲ್ಲ, ಮರಾಠಿ ಕನ್ನಡಿಗರ ಪ್ರಗತಿಗಾಗಿ ಪ್ರಾಧಿಕಾರ ರಚಿಸಲಾಗಿದೆ ಎಂದರು.

ಶಿರಾ, ಆರ್‌ಆರ್ ನಗರ ಚುನಾವಣೆಯನ್ನೇ ಗೆದ್ದಿದ್ದೇವೆ, ಬಸವ ಕಲ್ಯಾಣ ಗೆಲ್ಲಲ್ವಾ? ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಜಯ ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸಂಪುಟಕ್ಕೆ ಹೊಸಬರ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೊಸಬರಿಗೆ ಸಚಿವ ಸ್ಥಾನ ನೀಡೋದು ಸಿಎಂ ಅವರ ಪರಮಾಧಿಕಾರ. ಕೊಪ್ಪಳ ಜಿಲ್ಲೆಯ ಬಿಜೆಪಿ ಶಾಸಕರು ಸಚಿವ ಸ್ಥಾನ ಕೇಳಿದ್ರೆ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಶಿವರಾಜ ತಂಗಡಗಿ ಇವಿಎಂ ಮೇಲೆ ಅನುಮಾನ ವಿಚಾರಕ್ಕೆ ಕುಣಿಯಾಕೆ ಬರದವರಿಗೆ ನೆಲ ಡೊಂಕು ಅಂತ ಹೇಳುತ್ತಾರೆ. ಶಿವರಾಜ ತಂಗಡಗಿಯನ್ನು ತೃಪ್ತಿ ಮಾಡಲು ಚುನಾವಣೆ ವ್ಯವಸ್ಥೆ ಬದಲಾವಣೆ ಮಾಡಲು ಆಗಲ್ಲ ಎಂದು ಕೊಪ್ಪಳದಲ್ಲಿ ಕೃಷಿ ಸಚಿವ ಬಿ.ಸಿ.‌ಪಾಟೀಲ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಗೆದ್ದಲ್ಲಿ ಇವಿಎಂ ಯಾಕೆ ಕೆಲಸ ಮಾಡಿದವು? ಬಿಹಾರದಲ್ಲಿ 25 ಸೀಟ್ ಯಾಕೆ ಗೆದ್ದರು? ಕಾಂಗ್ರೆಸ್ ಪಕ್ಷ ಸ್ವಂತಿಕೆ ಕಳೆದುಕೊಂಡಿದೆ. ತನ್ನ ಕಾಲ‌ ಮೇಲೆ ನಿಲ್ಲುವ ಶಕ್ತಿ ಹೋಗಿದೆ. ಸೋಲಿಗೆ ಇವಿಎಂ ಹೊಣೆ ಮಾಡುವುದು. ಅವರು ಗೆದ್ದರೆ ಸರಿಯಾಗಿರುತ್ತೆ. ಅವರು ಸೋತರೆ ಕೆಟ್ಟಿದೆ ಎಂದು ಹೇಳುತ್ತಾರೆ.

ಶಾಸಕ ಪರಣ್ಣ ಮುನವಳ್ಳಿ ಸಚಿವ ಸ್ಥಾನದ ಬೇಡಿಕೆ ವಿಚಾರಕ್ಕೆ, ಸಚಿವ ಸ್ಥಾನ ಕೇಳುವುದು ತಪ್ಪೇನಿಲ್ಲ. 119 ಜನರು ಸಚಿರಾಗಲು ಅರ್ಹರಿದ್ದಾರೆ. ಮುಖ್ಯಮಂತ್ರಿಗಳು ಯಾರನ್ನು ಬೇಕಾದರೂ ಮಂತ್ರಿ ಮಾಡಬಹುದು.

ಸಂಪುಟ ಪುನರ್ ರಚನೆ ವಿಚಾರದಲ್ಲಿ ಅದು ಸಿಎಂ ಪರಮಾಧಿಕಾರ. ಅದಕ್ಕೆ ಸಿಎಂ, ಪಕ್ಷದ ವರಿಷ್ಠರು ತೀರ್ಮಾನ  ತೆಗೆದುಕೊಳ್ಳ ಬೇಕು.

ಸರಕಾರ ಸರಿಯಾದ ನಿರ್ಧಾರ ಕೈಗೊಂಡಿದೆ. ಸರಕಾರ ಮಾಡಿರುವುದು ಮರಾಠಿ ಭಾಷೆ ಪ್ರಾಧಿಕಾರ ಅಲ್ಲ. ಸರಕಾರ ರಚನೆ ಮಾಡಿರುವುದು ಮರಾಠ ಜನಾಂಗದ ಅಭಿವೃದ್ಧಿ ಪ್ರಾಧಿಕಾರ. ಕರ್ನಾಟಕದಲ್ಲಿರುವ ಮರಾಠರನ್ನು ರಾಜ್ಯ ಬಿಟ್ಟು ಕಳುಹಿಸಲು ಆಗುತ್ತಾ ನೀವು ನಮ್ಮವರು ಅಲ್ಲ ಅಂತ ಹೇಳಲು ಆಗುತ್ತಾ? ಬೆಳಗಾವಿಯಲ್ಲಿ ಕೆಲವೊಂದು ಪುಂಡ ಪೋಕರಿಗಳು ರಾಜಕೀಯ ಸ್ವಾರ್ಥ ಲಾಭಕ್ಕಾಗಿ ವಿರೋಧಿಸುತ್ತಾರೆ. ಅವರ ಮಾತು ಕೇಳಿ ಮರಾಠರನ್ನು ಕರ್ನಾಟಕ ಬಿಟ್ಟು ಕಳುಹಿಸಲು ಆಗುತ್ತಾ ?

ಮರಾಠ ಸಮುದಾಯದ ಕಡುಬಡವ- ನಿರ್ಗತಿಕರಿಗಾಗಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ನಾನು ಸ್ವಾಗತ ಮಾಡುತ್ತೇನೆ ವೀರಶೈವ- ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ನಾನು ಸ್ವಾಗತ ಮಾಡುತ್ತೇನೆ. ಈಗಾಗಲೇ ಸರಕಾರ ಹಲವಾರು ಜಾತಿಗಳ ಅಭಿವೃದ್ಧಿ ನಿಗಮಗಳನ್ನು ಮಾಡಲಾಗಿದೆ. ಬಸವಕಲ್ಯಾಣ ಚುನಾವಣೆ ಹಿನ್ನಲೆಯಲ್ಲಿ ಪ್ರಾಧಿಕಾರಿಗಳನ್ನು ರಚನೆ ಮಾಡಿಲ್ಲ ಎಂದು ಮರಾಠ, ವೀರಶೈವ-ಲಿಂಗಾಯತ ಪ್ರಾಧಿಕಾರ ರಚನೆ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬಸವಕಲ್ಯಾಣ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!