Sunday, 26th May 2024

ಪ್ರಶ್ನೆ ಪತ್ರಿಕೆ ಸೋರಿಕೆ: ಅಧಿಕಾರಿಗಳನ್ನು ವಜಾಗೊಳಿಸಲು ಆಗ್ರಹ

ತುಮಕೂರು: ಕೆ.ಪಿ.ಎಸ್‌ಸಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ, ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುತ್ತಿರುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಇದಕ್ಕೆ ಷಾಮೀಲಾಗಿರುವ ಸರಕಾರಿ ಅಧಿಕಾರಿಗಳನ್ನು ಕೂಡಲೇ ಸರಕಾರಿ ನೌಕರಿಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಡಮರುಗೇಶ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಡಮರುಗೇಶ್,ಕಳೆದ ಭಾನುವಾರ ಕರ್ನಾಟಕ ಲೋಕಸೇವಾ ಆಯೋಗದವತಿಯಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಆಯ್ಕೆ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.

ಆದರೆ ಪರೀಕ್ಷೆ ನಡೆಯುವ ಮುನ್ನವೇ ಕೆಲ ಕಿಡಿಗೇಡಿಗಳು ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಚಲ್ಲಾಟವಾಡಿದ್ದಾರೆ.ಪರೀಕ್ಷೆ ಬರೆಯಲು ಹಗಲಿರುಳೆನ್ನದೆ ಓದಿದ್ದ ಉತ್ತಮ ಅಂಕಗಳಿಸುವ ಕನಸು ಕಾಣುತ್ತಿದ್ದ ಲಕ್ಷಾಂತರ ನಿರುದ್ಯೋಗಿಗಳಿಗೆ ಸರಕಾರ ಪರೀಕ್ಷೆ ಮುಂದೂಡಿರುವುದು ತುಂಬಲಾರದ ನಷ್ಟವನ್ನು ಉಂಟು ಮಾಡಿದೆ. ಈಗಾಗಲೇ ಪೊಲೀಸರು ಕೆಲಸವನ್ನು ಬಂಧಿಸಿದ್ದು, ಬಂಧಿತರಲ್ಲಿ ಸರಕಾರಿ ನೌಕರರು ಸೇರಿರುವುದು ಅತ್ಯಂತ ಖಂಡನೀಯ ಎಂದರು.

ಸರಕಾರ ಕೂಡಲೇ ಸದರಿ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು,ಹಾಗೆಯೇ ಈಗಾಗಲೇ ಬಂಧಿತ ಆರೋಪಿ ಗಳಲ್ಲಿರುವ ಸರಕಾರಿ ನೌಕರರು ಕೂಡಲೇ ಸೇವೆಯಿಂದ ವಜಾ ಮಾಡಬೇಕು.ಅಲ್ಲದೆ ವಿದ್ಯಾರ್ಥಿಗಳ ಆಸೆಗೆ ತಣ್ಣೀರೆರಚದಂತೆ ಕೂಡಲೇ ಮತ್ತೊಂದು ಪರೀಕ್ಷೆ ನಡೆಸಿ,ನಿರುದ್ಯೋಗಿಗಳಿಗೆ ಭವಿಷ್ಯದ ಬಗ್ಗೆ ಆಶಾಭಾವನೆ ಉಂಟಾಗುವಂತೆ ಮಾಡಬೇಕೆಂದು ಕರವೇ ಪ್ರವೀಣ್‌ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಡಮರುಗೇಶ್ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರವೇ ಪ್ರವೀಣ್‌ಶೆಟ್ಟಿ ಬಣದ ಕಾನೂನು ಘಟಕ ಅಧ್ಯಕ್ಷ ಶಿವಕುಮಾರ್,ಕಾರ್ಯದರ್ಶಿ ಪದ್ಮನಾಭ್, ತುಮಕೂರು ಜಿಲ್ಲಾ ಕಾರ್ಯದರ್ಶಿ ರೂಪತಾರಾ, ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!