Monday, 20th May 2024

ಸಂಗೊಳ್ಳಿ ರಾಯಣ್ಣ ಸೇನೆಯಿಂದ ಉಚಿತವಾಗಿ ರಾಯಣ್ಣ ಪೋಟೋಗಳ ವಿತರಣೆ

ಚಿತ್ರದುರ್ಗ: ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ, ಹುತಾತ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಗಳನ್ನು ಎಲ್ಲೆಡೆ ಉಚಿತವಾಗಿ ನೀಡುವ ಮೂಲಕ ರಾಯಣ್ಣನ ಸೇವೆ ಮಾಡುತ್ತೇವೆ ಎಂದು ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆಯ ಜಿಲ್ಲಾಧ್ಯಕ್ಷರಾದ ಪೈಲ್ವಾನ್ ಜಯಶಂಕರ್ ಹೇಳಿದರು.

ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆಯ ಮೂಲಕ ಜಿಲ್ಲೆಯ ಅನೇಕ ಜಿಲ್ಲಾ ಮಟ್ಟದ ಕಚೇರಿಗಳಿಗೆ ಉಚಿತ ಭಾವಚಿತ್ರಗಳನ್ನು ನೀಡಿ ಮಾತನಾಡಿದರು.

ರಾಯಣ್ಣನ ವಂಶದಲ್ಲಿ ಹುಟ್ಟಿರುವ ರಾಯಣ್ಣನವರ ಕುಡಿಗಳು, ಅರಾಧಕರು, ಅಭಿಮಾನಿಗಳು ಅನೇಕ ವರ್ಷ ಗಳಿಂದ ರಾಯಣ್ಣನವರ ಬಗ್ಗೆ ಹೆಚ್ಚು, ಹೆಚ್ಚು ಪ್ರಚಾರ ಮಾಡುತ್ತಾ, ರಾಯಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ ಮಾಡಿದ ಕಾರ್ಯವನ್ನು ಇಂದು ನೆನೆಯಬೇಕು ಎಂದರು.

ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಮಾಲತೇಶ್ ಮಾತನಾಡಿ, ರಾಯಣ್ಣ ಹುಟ್ಟಿದ್ದು ಆಗಸ್ಟ್ 15 ನಮಗೆ ಸ್ವಾತಂತ್ರೋತ್ಸವ – ಅಂದು ರಾಯಣ್ಣೋತ್ಸವ, ಜನವರಿ 26, ರಾಯಣ್ಣ ಬಲಿದಾನ್ ದಿವಸ ನಮಗೆ ಗಣರಾಜ್ಯೋತ್ಸವ – ಅದೇ ವಿಶೇಷವಾಗಿದೆ. ರಾಯಣ್ಣನವರ ಹೆಸರು ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಲು, ಆನಂದರಾವ್ ಸರ್ಕಲ್ ಮೇಲ್ಸುತುವೆಗೆ ನಾಮಕರಣ ಮಾಡಲು ಹೀಗೆ ಹಲವಾರು ವಿಷಯಗಳ ಜೊತೆಗೆ, ಸ್ವಯಂ ಆಗಿ ಶಾಲೆಗಳು, ಕಚೇರಿಗಳಿಗೆ ರಾಯಣ್ಣನವರ ಭಾವಚಿತ್ರಗಳನ್ನು ನೀಡುತ್ತಾ, ರಾಜ್ಯದೆಲ್ಲೆಡೆ ರಾಯಣ್ಣನವರ ಮೂರ್ತಿಗಳನ್ನು ಸ್ಥಾಪನೆಯಾಗುತ್ತಿರುವ ಬೆಳವಣಿಗೆ ಗಳಿಂದಾಗಿ ಸ್ವಾತಂತ್ರ್ಯ ಸೇನಾನಿ ರಾಯಣ್ಣನವರ ಶಕ್ತಿ ರಾಜ್ಯವ್ಯಾಪಿ, ದೇಶವ್ಯಾಪಿ ಪಸರಿಸಿದೆ. ಇಂತಹ ಹೋರಾಟಗಾರರನ್ನು ಪಡೆದ ಭಾರತ ಧನ್ಯವಾಗಿದೆ. ರಾಯಣ್ಣನವರಿಗೆ ಗೌರವ ಸಲ್ಲಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ ರಾಜ್ಯ ಸರ್ಕಾರಕ್ಕೆ ಎಲ್ಲರ ಪರವಾಗಿ ಧನ್ಯವಾದಗಳು ಎಂದು ಹೇಳಿದರು.

ಇದೇವೇಳೆ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆಯ ಪದಾಧಿಕಾರಿಗಳು ನಗರಸಭಾ ಅಧ್ಯಕ್ಷರಾದ ತಿಪ್ಪಮ್ಮ, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ಅವರಿಗೆ, ಡಿಡಿಪಿಐ ರವಿಶಂಕರ್ ರೆಡ್ಡಿ ಅವರಿಗೆ, ತಹಶಿಲ್ದಾರ್ ಸತ್ಯನಾರಾಯಣ ಅವರಿಗೆ, ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಬಸವರಾಜ್, ಅವರಿಗೆ, ಪೊಲೀಸ್ ಅಧಿಕಾರಿ ಲೋಕೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ಅವರಿಗೆ ಸೇರಿದಂತೆ ಅನೇಕರಿಗೆ ಭಾವಚಿತ್ರಗಳನ್ನು ಉಚಿತವಾಗಿ ನೀಡಿದರು.

ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆಯ ಪ್ರಧಾನ ಕಾರ್ಯದರ್ಶಿ ಕಮಲಾಕರ್, ಸಂಘಟನಾ ಕಾರ್ಯದರ್ಶಿ ಮಧು, ಕಲ್ಲೇಶ್, ರುದ್ರೇಶ್, ರಾಘವೇಂದ್ರ, ಕಿರಣ್, ಭರತ್, ಸ್ವಾಮಿ, ವಾಸು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!