Monday, 13th May 2024

ದ್ವಿತೀಯ ಪಿಯುಸಿ ಎರಡನೇ ವಾರ್ಷಿಕ ಪರೀಕ್ಷೆ ನಾಳೆಯಿಂದ ಪ್ರಾರಂಭ

ಬೆಂಗಳೂರು: ದ್ವಿತೀಯ ಪಿಯುಸಿ ಎರಡನೇ ವಾರ್ಷಿಕ ಪರೀಕ್ಷೆ ನಾಳೆಯಿಂದ ಪ್ರಾರಂಭವಾಗಲಿದ್ದು, ರಾಜ್ಯದಲ್ಲಿ 301 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಪರೀಕ್ಷೆ ಬರೆಯಲು 1,49,300 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 84,933 ವಿದ್ಯಾರ್ಥಿಗಳು ಹಾಗೂ 64,367 ವಿದ್ಯಾರ್ಥಿನಿಯರು ಸೇರಿದ್ದಾರೆ. 32,848 ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಲು ಪರೀಕ್ಷೆಯನ್ನು ಬರೆಯಲಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ವೌಲ್ಯ ನಿರ್ಣಯ ಮಂಡಳಿಯು ನಾಳೆಯಿಂದ ಪ್ರಾರಂಭವಾಗಿ ಮೇ 16 ರವರೆಗೂ ಈ ಪರೀಕ್ಷೆ ನಡೆಸಲಿದೆ. ದ್ವಿತೀಯ ಪಿಯುಸಿ ಮೊದಲ ವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಲು ಎರಡನೇ ವಾರ್ಷಿಕ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ.

27,092 ಪುನರಾವರ್ತಿತ ಅಭ್ಯರ್ಥಿಗಳು ಹಾಗೂ 139 ಖಾಸಗಿ ಅಭ್ಯರ್ಥಿಗಳು 89,221 ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದರು. ಭಾಷಾ ಪರೀಕ್ಷೆಗಳಾದ ಕನ್ನಡ, ಅರೇಬಿಕ್‌ ವಿಷಯಗಳ ಪರೀಕ್ಷೆ ನಾಳೆ ಬೆಳಿಗ್ಗೆ 10.15 ರಿಂದ 1.30 ರವರೆಗೆ ನಡೆಯಲಿದೆ. ಏ.30 ರಂದು ಇತಿಹಾಸ, ಭೌತಶಾಸ್ತ್ರ, ಮೇ 2 ರಂದು ಇಂಗ್ಲಿಷ್‌, ಮೇ 3 ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮೇ 4 ರಂದು ಭೌಗೋಳ ಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಗೃಹವಿಜ್ಞಾನ, ಮೂಲ ಗಣಿತದ ವಿಷಯಗಳ ಪರೀಕ್ಷೆಗಳು ನಡೆಯಲಿವೆ.

ಮೇ 9 ರಂದು ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ, ಮೇ 11 ರಂದು ಸಮಾಜಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಮೇ 13 ರಂದು ಅರ್ಥಶಾಸ್ತ್ರ, ಮೇ 14 ರಂದು ಐಚ್ಛಿಕ ಕನ್ನಡ, ಲೆಕ್ಕ ಶಾಸ್ತ್ರ, ಮೇ 15 ರಂದು ಹಿಂದಿ ಪರೀಕ್ಷೆಗಳು ನಡೆಯಲಿವೆ.

ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌ ಭಾಷಾ ಪರೀಕ್ಷೆಗಳು ಮೇ 16 ರಂದು ಬೆಳಗಿನ ಅವಧಿಯಲ್ಲಿ ನಡೆದರೆ, ಇತರೆ ಕಲಾ ಮತ್ತು ಕೌಶಲ್ಯ ವಿಭಾಗಕ್ಕೆ ಸಂಬಂಧಪಟ್ಟ ವಿಷಯಗಳಾದ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್‌, ಆಟೋಮೊಬೈಲ್‌, ಬ್ಯೂಟಿ ಅಂಡ್‌ ವೆಲ್‌ನೆಸ್‌ ಪರೀಕ್ಷೆಗಳು ಮಧ್ಯಾಹ್ನ 2.15 ರಿಂದ ಸಂಜೆ 4.30 ರವರೆಗೆ ನಡೆಯಲಿವೆ.

Leave a Reply

Your email address will not be published. Required fields are marked *

error: Content is protected !!