Sunday, 28th April 2024

ಹಾವೇರಿಯಲ್ಲಿ ಕೋವಿಡ್ ನೆಗೆಟಿವ್ ಬಂದವರು ಮಾತ್ರ ಕಾಲೇಜಿಗೆ

ಹಾವೇರಿ: ನ.17 ರಿಂದ ಅಂತಿಮ ವರ್ಷದ ಪದವಿ ತರಗತಿಗಳು ಆರಂಭವಾಗಿದ್ದು, ಜಿಲ್ಲೆಯಲ್ಲಿನ ಪದವಿ ಕಾಲೇಜಿನ ಪ್ರಾಚಾರ್ಯರು ಕೋವಿಡ್ ಪ್ರಮಾಣೀಕೃತ ಮಾರ್ಗಸೂಚಿಯ ಪಾಲನೆಯಲ್ಲಿ ಗರಿಷ್ಠ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವ ಮುನ್ನ ಕೋವಿಡ್-19 ಪರೀಕ್ಷೆಮಾಡಿಸಿಕೊಂಡು ನೆಗಟಿವ್ ವರದಿ ಬಂದರೆ ಪಾಲಕರ ಒಪ್ಪಿಗೆ ಪತ್ರದೊಂದಿಗೆ ತರಗತಿಗೆ ಹಾಜರಾಗಬೇಕು. ಈ ಕುರಿತಂತೆ ಕಟ್ಟುನಿಟ್ಟಿನ ನಿಯಮ ಗಳ ಪಾಲನೆಗೆ‌ ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾಲೇಜುಗಳ ಆರಂಭದ ಹಿನ್ನೆಲೆಯಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಡಿಪ್ಲೋಮಾ, ಇಂಜನೀಯರಿಂಗ್ ಹಾಗೂ ವಿವಿಧ ಪದವಿಯ ಅಂತಿಮ ವರ್ಷದ ತರಗತಿಗಳು ಮಾತ್ರ ನ.17 ರಿಂದ ಆರಂಭಗೊಳ್ಳಲಿವೆ.

ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದು ಕಡ್ಡಾಯವಲ್ಲ. ಕಾಲೇಜುಗಳ ಆಡಳಿತ ಮಂಡಳಿ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಗೊಳಿಸುವಂತಿಲ್ಲ. ಕಾಲೇಜಿಗೆ ಹಾಜರಾಗುವುದು ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ಆಯ್ಕೆಗೆ ಬಿಟ್ಟಿದ್ದು. ಆಫ್‍ಲೈನ್ ಮತ್ತು ಆನ್‍ಲೈನ್ ತರಗತಿಗಳು ಮುಂದುವರೆಯಲಿವೆ. ಕಾಲೇಜಿಗೆ ಹಾಜರಾಗಿದ್ದರೆ ಆನ್‍ಲೈನ್ ತರಗತಿ ಮೂಲಕ ತಮ್ಮ ಅಭ್ಯಾಸ ಮುಂದುವರಿಸಬಹುದು ಎಂದು ತಿಳಿಸಿದರು.

ಕೋವಿಡ್ ಮಾರ್ಗಸೂಚಿ ಪಾಲನೆ: ಜಿಲ್ಲೆಯ ಎಲ್ಲ ಪದವಿ ಹಾಗೂ ಇಂಜನೀಯರಿಂಗ್ ಡಿಪ್ಲೋಮಾ ಕಾಲೇಜುಗಳ ಪ್ರಾಚಾರ್ಯರು ಸ್ಥಳೀಯ ನಗರ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಕಾಲೇಜುಗಳ ಕೊಠಡಿ, ಲ್ಯಾಬ್, ಗ್ರಂಥಾಲಯ, ಶೌಚಾಲಯ, ಕ್ಯಾಂಪಸ್ ಹೊರ ಆವರಣ ಮುಂಚಿತವಾಗಿ ಸ್ಯಾನಿ ಟೈಸ್ ಮಾಡಿಸಬೇಕು. ಅಲ್ಲದೇ ಪ್ರತಿದಿನ ತರಗತಿ ಮುಗಿದ ನಂತರ ಸ್ಯಾನಿಟೈಸ್ ಮಾಡಿಸಬೇಕು. ತಂಡ ತಂಡವಾಗಿ ಪ್ರಯೋಗಾಲಯ ತರಗತಿಗಳು ನಡೆಸಬೇಕು. ಪ್ರತಿ ತಂಡದ ಪ್ರಯೋಗಾ ಲಯ ತರಗತಿಗಳು ಮುಗಿದಾಗ ಸ್ಯಾನಿಟೈಸ್ ಮಾಡಿಸುವುದು ಕಡ್ಡಾಯವಾಗಿದೆ.

ವಿದ್ಯಾರ್ಥಿಗಳು ಕಡ್ಡಾಯವಾಗಿ ಕನಿಷ್ಠ ಎರಡು ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಕ್ರಮವಹಿಸಬೇಕು. ತರಗತಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಕೊಠಡಿಯಲ್ಲಿ 20 ಜನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗಟಿವ್ ಬಂದ ಕುರಿತಂತೆ ಪರಿಶೀಲನೆಗೆ ಕಾಲೇಜ್ ಹಂತದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸ ಬೇಕು. ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್‍ನಿಂದ ಜ್ವರತಪಾಸಣೆಗೆ ಒಳಪಡಿಸಬೇಕು. ಮಾಸ್ಕ್ ಇಲ್ಲದೆ ಪ್ರವೇಶ ನೀಡಬಾರದು. ಕಾಲೇಜು ಪ್ರಾಚಾರ್ಯರು ಸೇರಿದಂತೆ ಬೋಧಕರು, ಸಿಬ್ಬಂದಿಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪಾಸಿಟಿವ್ ಬಂದವರಿಗೆ ಕಡ್ಡಾಯವಾಗಿ ನಿಯಮನುಸಾರ ಕಡ್ಡಾಯವಾಗಿ ರಜೆ ಮೇಲೆರ ಕಳುಹಿಸಬೇಕು. ಮಾರ್ಗಸೂಚಿಗಳ ಪಾಲನೆಯಲ್ಲಿ ಯಾವುದೇ ಲೋಪವಾಗದಂತೆ ಗರಿಷ್ಠ ಎಚ್ಚರವಹಿಸುವಂತೆ ಕಾಲೇಜು ಪ್ರಾಚಾರ್ಯರರಿಗೆ ಸೂಚನೆ ನೀಡಿದರು.

ಹಾಸ್ಟೇಲ್ ವಿದ್ಯಾರ್ಥಿಗಳು: ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ನಿಲಯಗಳಲ್ಲಿ ಸರ್ಕಾರದ ಮಾರ್ಗಸೂಚಿ ಯಂತೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈವರೆಗೂ ಪರೀಕ್ಷೆ ಮಾಡಿಸಿ ಕೊಳ್ಳದ ವಿದ್ಯಾರ್ಥಿಗಳು ಕಡ್ಡಾಯವಾಗಿ ಆರ್.ಟಿ.ಪಿ.ಆರ್. ಲ್ಯಾಬ್‍ನಲ್ಲಿ ಪರೀಕ್ಷೆ ಮಾಡಿಸಿಕೊಂಡು ಬರಬೇಕು. ಪಾಲಕರ ಒಪ್ಪಿಗೆ ಪತ್ರತರಬೇಕು. ಎಲ್ಲ ವಸತಿ ನಿಲಯಗಳನ್ನು ಈಗಾಗಲೇ ಸ್ಯಾನಿಟೈಸ್ ಮಾಡಿಸ ಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ ತಿಳಿಸಿದರು.

ವಿದ್ಯಾರ್ಥಿಗಳಿಗೆ ಮಾರ್ಗಸೂಚಿ: ಕಾಲೇಜಿಗೆ ಬರುವ 72 ಗಂಟೆ ಮುಂಚಿತವಾಗಿ ಆರ್.ಟಿ.ಪಿ.ಸಿ.ಆರ್. ಲ್ಯಾಬ್‍ಗಳಲ್ಲಿ ಪರೀಕ್ಷೆ ಮಾಡಿಕೊಂಡು ನೆಗಟಿವ್ ಬಂದ ಕುರಿತಂತೆ ಪ್ರಮಾಣಪತ್ರ ತರಬೇಕು ಹಾಗೂ ಕಾಲೇಜಿಗೆ ಬರುವ ತಂದೆ-ತಾಯಿ ಅಥವಾ ಪೋಷಕರಿಂದ ತರಗತಿಗೆ ಹಾಜರಾಗುವ ಕುರಿತಂತೆ ಒಪ್ಪಿಗೆ, ಮುಚ್ಚಳಿಕೆ ಪ್ರಮಾಣಪತ್ರ ಕಾಲೇಜಿಗೆ ಸಲ್ಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್, ಕುಡಿಯುವ ನೀರು, ಉಪಹಾರ ಅಥವಾ ಊಟವನ್ನು ವಿದ್ಯಾರ್ಥಿಗಳೇ ಮನೆಯಿಂದ ತರಬೇಕು. ಕಾಲೇಜ್ ಆವರಣದಲ್ಲಿ ವಿನಾಕರಣ ಯಾವುದೇ ವಸ್ತುಗಳನ್ನು ಮುಟ್ಟಬಾರದು. ಕನಿಷ್ಠ ಎರಡು ಮೀಟರ್ ಭೌತಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಗುಂಪು ಸೇರಬಾರದು, ಕೆಮ್ಮು, ನೆಗಡಿ ಮತ್ತು ಜ್ವರದ ಸೂಚನೆಗಳಿದ್ದರೆ ಕಾಲೇಜಿನ ಕಚೇರಿಗೆ ಮಾಹಿತಿ ನೀಡಬೇಕು. ಕಡ್ಡಾಯವಾಗಿ ಎಲ್ಲ ವಿದ್ಯಾರ್ಥಿಗಳು ಹಾಗೂ ಕಾಲೇಜ್ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಆರೋಗ್ಯ ಸೇತು ಆಪ್ ಡೌನ್‍ಮಾಡಿಕೊಳ್ಳಬೇಕು.

ಕೋವಿಡ್ ಪರೀಕ್ಷೆ ವ್ಯವಸ್ಥೆ: ಕಾಲೇಜಿಗೆ ಹಾಜರಾಗುವ 72 ಗಂಟೆ ಮುಂಚಿತವಾಗಿ ಜಿಲ್ಲಾ ಆಸ್ಪತ್ರೆ ಅಥವಾ ಆಯಾ ತಾಲೂಕಾ ಸರ್ಕಾರಿ ಆಸ್ಪತ್ರೆಗಳು ಅಥವಾ ಸಮೀಪದ ನಗರಸಭೆ, ಪುರಸಭೆ ಅಥವಾ ಪಟ್ಟಣ ಪಂಚಾಯತಿಗಳಲ್ಲಿ ಸ್ಥಾಪಿಸಲಾದ ಗಂಟಲು ದ್ರವ ಪರೀಕ್ಷಾ ಕೇಂದ್ರಗಳಲ್ಲಿ ಕಾಲೇಜಿನ ಗುರುತು ಪತ್ರ ಅಥವಾ ದಾಖಲಾತಿ ಪ್ರವೇಶ ರಸೀದಿ ನೀಡಿ ಪರೀಕ್ಷೆಗೆ ಒಳಗಾಗುವುದು. ಗಂಟಲು ದ್ರವ ಮಾದರಿ ವರದಿ ತಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವುದು ಅಥವಾ ಐ.ಸಿ.ಎಂ.ಆರ್. ಪೋರ್ಟೆಲ್ ಸಂಪರ್ಕಿಸಿದರೆ ತಮ್ಮ ಕೋವಿಡ್ ಪರೀಕ್ಷಾ ಫಲಿತಾಂಶ ದೊರೆಯಲಿದೆ. ನೆಗಟಿವ್ ಬಂದರೆ ಕಾಲೇಜಿಗೆ ಪಾಲಕರ ಒಪ್ಪಿಗೆ ಪತ್ರ ದೊಂದಿಗೆ ಕಾಲೇಜಿಗೆ ಹಾಜರಾಗಬಹುದು.

Leave a Reply

Your email address will not be published. Required fields are marked *

error: Content is protected !!