Thursday, 18th April 2024

ಘೋಷಣೆಗೆ ಸೀಮಿತವೇ ಮಹಿಳಾ ಸಬಲೀಕರಣ?

ಚುನಾವಣೆ ಸಮೀಪಿಸಿದರೆ ಸಾಕು, ರಾಜಕಾರಣಿಗಳಿಗೆ ಮಹಿಳಾ ಸಬಲೀಕರಣ ನೆನಪಾಗುತ್ತದೆ. ಮಹಿಳೆಯರ ಸಮಾವೇಶ ಮಾಡಿ ಸಬಲೀಕರಣದ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುತ್ತಾರೆ. ಬಜೆಟ್‌ನಲ್ಲಿ ಮಹಿಳೆಯರಿಗಾಗಿ ಒಂದಿಷ್ಟು ಘೋಷಣೆಗಳನ್ನು ಮಾಡಿ, ಅನುದಾನವನ್ನು ಮೀಸಲಿಡುತ್ತಾರೆ. ಹಾಗಾದರೆ ಮಹಿಳೆಯರು ನಿಜಕ್ಕೂ ಸಬಲೆಯರಾಗಿದ್ದಾರೆಯೇ ಎಂದು ನೋಡಿದರೆ, ಈಗಲೂ ಅನೇಕ ಮಹಿಳೆಯರು ಶೋಷಣೆಗೆ ಒಳಗಾಗುತ್ತಿರುವುದು ಕಂಡು ಬರುತ್ತದೆ.

ನಾನಾ ರೀತಿಯ ಕಿರುಕುಳ, ತಾತ್ಸಾರ, ನಿಂದನೆಗೆ ಗುರಿಯಾಗುತ್ತಲೇ ಇದ್ದಾರೆ. ವಿಶ್ವ ಮಹಿಳಾ ದಿನವಾದ ಇಂದು, ಇದಕ್ಕೆಲ್ಲ ಕೊನೆ ಎಂದು ನಾವೆಲ್ಲರೂ ಗಂಭೀರವಾಗಿ ಯೋಚಿಸಬೇಕಾ ಗಿದೆ. ಡಿಸೆಂಬರ್ ೧೬, ೨೦೧೨ರಂದು ದೆಹಲಿಯಲ್ಲಿ ನಡೆದ ‘ನಿರ್ಭಯಾ ಅತ್ಯಾಚಾರ ಪ್ರಕರಣ’ವು ಇಡೀ ದೇಶವನ್ನು ತಲ್ಲಣಗೊಳಿಸಿತ್ತು. ಅತ್ಯಾಚಾರಿಗಳು ಹಾಗೂ ಸರಕಾರಗಳ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ನಿರ್ಭಯಾ ಪ್ರಕರಣದಿಂದಾಗಿ, ಅತ್ಯಾಚಾರ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಅನುಕೂಲವಾಗು ವಂತೆ ಕಾನೂನಿಗೆ ತಿದ್ದುಪಡಿ ತರಲಾಯಿತು.

‘ನಿರ್ಭಯಾ ನಿಧಿ’ ಹೆಸರಿನಲ್ಲಿ ಮಹಿಳಾ ಸುರಕ್ಷತೆಗಾಗಿ ದೊಡ್ಡ ಮೊತ್ತದ ಹಣವನ್ನು ಕೇಂದ್ರ ಬಜೆಟ್‌ನಲ್ಲಿ ಮೀಸಲಿಡುವ ಪರಿಪಾಠ ಕೂಡ ಆರಂಭವಾಯಿತು. ಇಷ್ಟೆಲ್ಲ ಆದರೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಮಾತ್ರ ಕಡಿಮೆ ಯಾಗಿಲ್ಲ. ಕರ್ನಾಟಕದ ಪ್ರತಿದಿನ ಸರಾಸರಿ ಒಂದಕ್ಕಿಂತ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ಹಾಗಾದರೆ ಅಷ್ಟೆಲ್ಲ ಮಾಡಿ ಸರಕಾರ ಸಾಧಿಸಿದ್ದೇನು ಎಂಬ ಪ್ರಶ್ನೆಗೆ ಸರಿಯಾದ ಉತ್ತರವೇ ಇಲ್ಲ.

ಹೆಣ್ಣು ಭ್ರೂಣ ಹತ್ಯೆಯಿಂದಾಗಿ, ಹುಟ್ಟುವ ಮೊದಲೇ ದೌರ್ಜನ್ಯಕ್ಕೆ ಒಳಗಾಗುವವರು ಸೀಯರು. ಸರಕಾರವು ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆಯನ್ನು ನಿಷೇಧಿಸಿದ್ದರೂ ಇದು ಎಗ್ಗಿಲ್ಲದೇ ಸಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಹಾಗೂ ಮಾಧ್ಯಮಗಳಲ್ಲಿ ವರದಿಯಾಗುವ ಪ್ರಕರಣಗಳು ಕೆಲವಾದರೆ, ಅದಕ್ಕೂ ಹೆಚ್ಚಿನ ಸಂಖ್ಯೆಯ ಭ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬಾರದೇ ನಡೆಯುತ್ತಿವೆ. ಭ್ರೂಣದ ಪೋಷಕರು ಹಾಗೂ ವೈದ್ಯರ ನಡುವೆ ಹೊಂದಾಣಿಕೆ ಇರುವುದರಿಂದ ಅನೇಕ ಪ್ರಕರಣಗಳು
ಪೊಲೀಸ್ ಠಾಣೆ ತನಕ ಹೋಗುವುದೇ ಇಲ್ಲ.

ಹೀಗಾಗಿ ಭ್ರೂಣ ಲಿಂಗ ಪತ್ತೆ ಮಾಡಿದ ಹಾಗೂ ಅದರ ಸಾವಿಗೆ ಕಾರಣವಾದ ವೈದ್ಯರಿಗೆ ಕಾನೂನು ಹೇಳಿರುವ ಶಿಕ್ಷೆಯಾಗುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡುವ ಬದಲು ಕೇವಲ ಜನಜಾಗೃತಿ ಮೂಲಕ ಭ್ರೂಣಹತ್ಯೆ ತಡೆಗಟ್ಟುವ ಸರಕಾರದ ಪ್ರಯತ್ನದಿಂದ ಹೆಣ್ಣ ಭ್ರೂಣ ಸಂರಕ್ಷಣೆ ಯೋಜನೆಗಳು ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ನಿರ್ಜನ ಪ್ರದೇಶದಲ್ಲಿ ಮಹಿಳೆಯರು ಏಕಾಂಗಿಯಾಗಿ ಸಂಚರಿಸಬೇಕಾದರೆ, ಜೀವವನ್ನು ಕೈಯಲ್ಲಿ ಹಿಡಿದು ಹೆಜ್ಜೆ ಇಡಬೇಕಾದ ಪರಿಸ್ಥಿತಿ ಸ್ವಾತಂತ್ರ್ಯ ಬಂದು ೭೫
ವರ್ಷಗಳಾದರೂ ಇದೆ. ಒಂದು ವೇಳೆ ಮಹಿಳೆಯರ ಆತಂಕವನ್ನು ಅಂತ್ಯಗೊಳಿಸಬೇಕೆಂದು ಸರಕಾರ ನಿರ್ಧರಿಸಿದರೆ, ಅದಕ್ಕೆ ಆಧುನಿಕ ಯುಗದಲ್ಲಿ ಹಲವು ದಾರಿಗಳಿವೆ.

ಉದಾಹರಣೆಗೆ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಬಹುದು. ಪ್ರತಿದಿನ ಒಮ್ಮೆಯಾದರೂ ನಿರ್ಜನ ಪ್ರದೇಶಗಳಿಗೆ ಪೊಲೀಸರು ಗಸ್ತು ತಿರುಗುವುದನ್ನು ಕಡ್ಡಾಯ ಮಾಡಬಹುದು. ಕಿಡಿಗೇಡಿ ವರ್ತನೆ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು. ಮಹಿಳೆ ಮೇಲೆ ಅಪರಾಧ ಕೃತ್ಯಗಳು ನಡೆದಾಗ ತನಿಖೆ ನಡೆಸಲು ನಿರ್ಲಕ್ಷ್ಯ ತೋರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬಹುದು. ಇನ್ನೂ ದಾರಿಗಳು ಇರುವುದು ಸರ್ಕಾರಕ್ಕೆ ತಿಳಿದಿದೆಯಾದರೂ ಯಾವುದನ್ನೂ ಸರಿಯಾಗಿ ಮಾಡುತ್ತಿಲ್ಲ. ಮಹಿಳಾ ಸಬಲೀಕರಣವನ್ನು ಕೇವಲ ಮಾತಿಗೆ ಸೀಮಿತ ಮಾಡಿಕೊಂಡಿರುವ ಜನಪ್ರತಿನಿಧಿಗಳು ಇನ್ನಾದರೂ ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರಿಗೆ ಸುರಕ್ಷತೆ ಕಲ್ಪಿಸದೇ ಸಬಲೀಕರಣ ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು.
-ದಿವ್ಯಶ್ರೀ.ವಿ, ಬೆಂಗಳೂರು

ನೆನಪಿಡಿ, ಹೆಣ್ಣು ಕೆರಳಿದರೆ ಸಿಂಹಿಣಿ
ಹಳೆಯ ಕಾಲದಿಂದಲೂ ಮಹಿಳೆ ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತನ್ನ ಎಲ್ಲ ರೀತಿಯ ಅಸ್ತಿತ್ವವನ್ನು ಕಳೆದುಕೊಂಡು ಪುರುಷನಿಗೆ ಸಮಾನವಾಗಿ ಕೆಲಸ ಕಾರ್ಯ ಮಾಡಿದರು ಕೂಡ ಅವಳನ್ನು ಮೂಲೆಯಲ್ಲಿ ಕೂರಿಸುವುದನ್ನೇ ರೂಢಿಯಲ್ಲಿ ಇಟ್ಟಿದ್ದಾರೆ. ಹೆಣ್ಣು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಹಲವಾರು ಸಂಘಟನೆಗಳನ್ನು ಸ್ವತಃ ರಚಿಸಿಕೊಂಡು ಮೇಲುಗೈ ಸಾಧಿಸುತ್ತಿದ್ದಾರೆ.

ಪ್ರತಿಯೊಂದು ಹೆಣ್ಣೂ ಸ್ವತಂತ್ರಳಾಗಿ ಎಲ್ಲ ಕ್ಷೇತ್ರದಲ್ಲಿ ಮುಂದುವರಿಯುತ್ತಿzಳೆ. ಇಷ್ಟಾದರೂ ಕೇವಲ ನೊಗಕ್ಕೆ ಕಟ್ಟಿ ಉಳಿಸುವ ಜೀತದಾಳು ಆಗಿದ್ದಾಳೆ ಹೆಣ್ಣು. ತನ್ನ ಎಲ್ಲ ಕನಸುಗಳನ್ನು ಕತ್ತಲೆ ಕೋಣೆಯಲ್ಲಿ ಸುಟ್ಟು ಸ್ಮಶಾನಕ್ಕೆ ದೂಕುತ್ತಿದ್ದಾಳೆ. ಅದು ಅಲ್ಲದೆ ಬಾಲ್ಯ ವಿವಾಹ ಎಂಬ ಅನಿಷ್ಟ ಪದ್ಧತಿಗೆ ಒಳಗಾಗಿ ಸಾಲು ಸಾಲು ನೋವುಗಳಿಗೆ ತುತ್ತಾಗುತ್ತಿದ್ದಾಳೆ. ನಮ್ಮ ದೇಶದ ಪ್ರತಿ ಹೆಣ್ಣಿಗೂ ಸಮಾನತೆ ಮತ್ತು ಸ್ವಾತಂತ್ರ್ಯ ಸಿಗಬೇಕು. ಯಾರಿಂದನೋ ಅವಳು ಸ್ವಾತಂತ್ರ್ಯ ಪಡೆದುಕೊಳ್ಳಬೇಕಾಗಿಲ್ಲ; ತಾನಾಗಿಯೇ
ಪಡೆದುಕೊಳ್ಳಬೇಕು. ತನ್ನ ಇಚ್ಛೆಯಂತೆ ಬದುಕುವ ಹಕ್ಕು ಅವಳಿಗಿದೆ. ಇತಿಹಾಸ ಕಾಲದಿಂದಲೂ ಹಲವಾರು ಮೂಢನಂಬಿಕೆ ಗಳಿಗೆ ಮತ್ತು ಮಡಿ ಮೈಲಿಗೆಗೆ ಅಂಟಿಕೊಳ್ಳುವಂತೆ ಅವಳ ಮನದಲ್ಲಿ ಬೀಜ ಬಿತ್ತಿದ ಪೂರ್ವಿಕರಂತೆ, ಯುವ ಪೀಳಿಗೆಗೆ ನಾವುಗಳು
ಕಾರಣರಾಗೋದು ಬೇಡ. ಹೆಣ್ಣು ಇನ್ನೊಬ್ಬರ ಅಸೆ ಆಕಾಂಶಕ್ಕೆ ತಲೆ ದೂಗೋದೂ ಬೇಡ. ಇಂದಿನ ಸಮಾನತೆ ಅವಳಿಗೆ ನಾಳೆಯ ಸುವ್ಯವಸ್ಥೆ ಆಗಬೇಕು.

ಒಬ್ಬ ಮಹಿಳೆ ತನ್ನ ಮನೆ ಕೆಲಸ ಹಿಡಿದು ಅಂತರಿಕ್ಷ ಯಾನ ಮಾಡೋವರೆಗೂ ಬೆಳೆದು ನಿಂತಿzಳೆ. ದೇಶ ಸ್ವಾತಂತ್ರ್ಯ ಪಡೆಯುವ ಮುಂಚೆ ತನಗೆ ಸಿಕ್ಕ ಎಲ್ಲ ರೀತಿಯ ಅವಕಾಶಗಳನ್ನು ಬಳಸಿಕೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜಯಭೇರಿಯನ್ನು ಬಾರಿಸಿದ್ದಾಳೆ. ಇವತ್ತಿನ ದಿನ ನಾವು ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಅಬ್ಬಕ್ಕ ದೇವಿ, ರಜಿಯಾ ಸುಲ್ತಾನ, ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಅವರನ್ನ ಹೀಗೆ ಹಿತಿಹಾಸಗಳ ಪುಟ ತಿರುವಿ ನೋಡಿದಾಗ ಹಲವು ಹೋರಾಟಗಾರ್ತಿಯರನ್ನು ನೆನಪಿಸಿಕೊಳ್ಳಬಹುದು. ಅವರ ಸಾಧನೆ ಆಗಸದೆತ್ತರಕ್ಕೆ ಪಸರಿಸಿದೆ. ಮಹಿಳೆಯರ ಸಾಮರ್ಥ್ಯಕ್ಕೆ ಈ ಎಲ್ಲ ಮಹಿಳೆಯರು ಹಿಡಿದ ಕನ್ನಡಿಯ ಕೈಯಾಗಿದ್ದರೆ.
ಇಂಥವರನ್ನು ನೆನೆಯದೇ ಮಹಿಳಾ ದಿನ ಅಪೂರ್ಣ. ಆದರೆ ಒಮದು ಮಾಥು ನೆನಪಿಡಿ, ಹೆಣ್ಣು ಒಲಿದರೆ ನಾರಿ ಮುನಿದರೆ
ಮಾರಿಯಷ್ಟೇ ಅಲ್ಲ, ಕೆರಳಿದರೆ ಸಿಂಹಿಣಿಯೂ ಸಹ ಆಗಬಲ್ಲಳು.
– ಪವಿತ್ರ ಕೆ ಡಿಗ್ಗಿ, ಕಲಬುರಗಿ

error: Content is protected !!