Monday, 20th May 2024

ಸದ್ಗುಣಗಳ ಅಳವಡಿಕೆ ಇಂದಿನ ಅವಶ್ಯ

ಅಭಿಮತ

ಬಸವರಾಜ ಎನ್.‌ ಬೋದೂರು

ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ದಿನಾಲೂ ಹತ್ತಾರು ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆಯಂಥ ಪ್ರಕರಣಗಳನ್ನು ನೋಡು ತ್ತಿರು ತ್ತೇವೆ.

ಗ್ಯಾಂಗ್ ರೇಪ್, ಒಂಟಿ ಮಹಿಳೆಯ ಮೇಲೆ ದುಷ್ಕರ್ಮಿಗಳಿಂದ ನಿರಂತರ ಅತ್ಯಾಚಾರ, ಕೋಮು ಗಲಭೆ ಸುದ್ದಿಗಳು, ಮರ್ಯಾದಾ ಹತ್ಯೆ ಪ್ರಕರಣಗಳನ್ನು, ಇತ್ತೀಚಿಗೆ ಗದಗ ಜಿ ರೋಣ ತಾಲೂಕಿನ ಲಕ್ಕಕಟ್ಟಿ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯಾ ಪ್ರಕರಣ, ಹೈದ್ರಾಬಾದ್‌ನಲ್ಲಿ ಪಶುವೈದ್ಯೆಯನ್ನು ಹೊತ್ತೋಯ್ದು ರೇಪ್ ಮಾಡಿ ಸುಟ್ಟ ಪ್ರಕರಣ, ಉನ್ನಾವೋ ರೇಪ್ ಸಂತ್ರಸ್ತೆ ನ್ಯಾಯಾ ಲಯಕ್ಕೆ ಹಾಜರಾಗುವಾಗ ದಾರಿ ನಡುವೆ ಅಡ್ಡಗಟ್ಟಿ ಬೆಂಕಿಹಚ್ಚಿ ಸುಟ್ಟ ಪ್ರಕರಣ, ಹತ್ರಾಸ್‌ನಲ್ಲಿ ಅತ್ಯಾಚಾರ ಮಾಡಿ ನಾಲಿಗೆ ಕತ್ತರಿಸಿದ, ಪೊಲೀಸರೆ ಸಂತ್ರಸ್ತೆಯನ್ನು ಸುಟ್ಟು ಹಾಕಿದ ಪ್ರಕರಣ, ಇಂಥ ಹತ್ತಾರು ತರಹದ ಸುದ್ದಿಗಳನ್ನು ದಿನಾಲೂ ಕೇಳುತ್ತೇವೆ, ಓದುತ್ತೇವೆ.

ಆದರೂ ನಮಗದು ಏನೂ ಅನಿಸುವುದೇ ಇಲ್ಲ. ದಿನಾಲೂ ಇಂಥ ನೂರಾರು ಪ್ರಕರಣಗಳು ನಡೆಯುತ್ತಿರುವುದರಿಂದ ಸರ್ವೇ ಸಾಮಾನ್ಯವಾಗಿ, ಹತ್ತರಲ್ಲಿ ಹನ್ನೊಂದಾಗಿ ಬಿಟ್ಟಿವೆ. ಸಾಮಾಜಿಕ ಜಾಲತಾಣದಲ್ಲಿ ಒಂದು ದುಃಖದ ಲೈಕ್ ಕೊಟ್ಟು RIP ಎಂದು ಕಾಮೇಂಟ್ ಮಾಡುವುದು ಬಿಟ್ಟರೆ ಮತ್ತೇನೂ ನಮ್ಮ ಕೈಯಿಂದ ಮಾಡಲಾಗುವುದಿಲ್ಲ. ಒಂದರ್ಥದಲ್ಲಿ ದಿನ ಸಾಯೋರಿಗೆ ಅಳೋರು ಯಾರು ಎನ್ನುವಂತಾಗಿ ಬಿಟ್ಟಿದೆ.

ಇಂಥ ಕ್ರೌರ್ಯಗಳು ಸರ್ವೇ ಸಾಮಾನ್ಯವಾಗಿರುವ, ವಿಕೃತ ಮನಸ್ಥಿತಿಗಳು ಹೆಚ್ಚಾಗಿರುವ ಈ ಕಾಲಮಾನದಲ್ಲಿ ನಾವೆಲ್ಲ ಆತಂಕದಿಂದಲೇ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಂತೂ ಸತ್ಯ. ಪ್ರತಿಯೊಂದು ವಿಷಯದಲ್ಲಿಯೂ ಇಂದು ಆತಂಕ ಪಡಲೇಬೇಕು. ಆ ತರಹದ ವಾತಾವರಣ ಸೃಷ್ಟಿಯಾಗಿದೆ. ಎಂಥ ಕ್ರೌರ್ಯ ನಡೆದರೂ ಕೂಡ, ಇಂದು ಯಾರು ಏನೂ ಮಾಡದಂಥ ನಿಸ್ಸಹಾಯಕ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಕೇವಲ ಒಂದುಕ್ಷಣ ಮನದಲ್ಲಿ ಮರುಗಬಹುದು, ಬಿಟ್ಟರೆ ಮುಖಪುಟದಲ್ಲಿ ತಮ್ಮಲ್ಲಿರುವ ಸಿಟ್ಟನ್ನು ಹೊರಹಾಕಬಹುದು, ಕಿರುಚಾಡಬಹುದು, ಇನ್ನಷ್ಟು ಜನರು ಮೇಣ ಬೆಳಗಿ ಶಾಂತಿ ಕೋರಬಹುದು. ಅತ್ಯಾಚಾರಿಗಳನ್ನ ಗಲ್ಲಿಗಾಕಬೇಕೆಂದು ಪ್ರತಿಭಟಿಸಬಹುದು.

ಮರುದಿನ ಯತಾಸ್ಥಿತಿ, ಆಗಲೇ ಮರೆತುಬಿಟ್ಟಿರುತ್ತೇವೆ. ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾದರೆ ದಲಿತ ಸಮುದಾಯ ಸಿಡಿದೆದ್ದು ಹೋರಾಡಬೇಕು. ಒಕ್ಕಲಿಗ ಸಮುದಾಯದ ಹೆಣ್ಣುಮಕ್ಕಳಾದರೆ ಒಕ್ಕಲಿಗರು. ಕುರುಬರಾದರೆ, ಕುರುಬರು. ಲಿಂಗಾಯಿತ ರಾದರೆ, ಲಿಂಗಾಯಿತರು. ವಾಲ್ಮೀಕಿಗಳಾದರೆ, ವಾಲ್ಮೀಕಿಗಳು. ಮುಸ್ಲಿಮರಾದರೆ, ಮುಸ್ಲಿಮರು. ಕ್ರೈಸ್ತರಾದರೆ, ಕ್ರೈಸ್ತರು ಪ್ರತಿಭಟಿಸುವಂಥ ಪರಿಪಾಠ ಈಗ ಬೆಳೆದು ನಿಂತಿದೆ. ಇದೆಂಥ ಅಘೋಷಿತ ಮನಸ್ಥಿತಿ, ಯಾವ ಸಮುದಾಯದ ಹೆಣ್ಣಾದರೇನು, ಹೆಣ್ಣು ಹೆಣ್ಣಲ್ಲವೇ? ಯಾವುದೇ ಹೆಣ್ಣು ಮಗುವಿನ ಮೇಲೆ ದೌರ್ಜನ್ಯವಾದರೂ ಮಿಡಿಯಬೇಕಿದ್ದ, ಸಿಡಿಯಬೇಕಿದ್ದ ಭಾರತೀಯನ ಅಂತಃಕರಣ ಇಂದು ಸತ್ತು ಮಲಗಿದೆ.

ಅತ್ಯಾಚಾರದಲ್ಲೂ ಜಾತಿ ಹುಡುಕುವ ರೋಗಗ್ರಸ್ತ. ಮನಸ್ಥಿತಿಗಳಿರುವ ಇಂಥ ಕಾಲಮಾನದಲ್ಲಿ ಬದುಕುತ್ತಿರುವ ನಾವು, ಹಿಂದೆ ಬಾಳಿ ಬದುಕಿ ಹೋದ ಆದರ್ಶ ಪುರುಷರ, ಮಹನೀಯರ, ಆದರ್ಶ ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಇಂದು ಅಳವಡಿಸಿಕೊಳ್ಳುವ ಜರೂರಿದೆ.ಅಂಥ ಆದರ್ಶ ಪುರುಷರಲ್ಲಿ ಪ್ರಮುಖ ವ್ಯಕ್ತಿಯಾಗಿ ಗಂಡುಗಲಿ ಕುಮಾರರಾಮ ಕಾಣಸಿಗು ತ್ತಾನೆ. ಪರನಾರಿ ಸಹೋದರ ಗಂಡುಗಲಿ ಕುಮಾರರಾಮನ ಚರಿತ್ರೆಯನ್ನು ನಾವೆಲ್ಲರೂ ತುರ್ತಾಗಿ ಓದಬೇಕಾಗಿದೆ.

ಅವನ ಗುಣ, ನಡತೆ, ಸ್ವಭಾವಗಳನ್ನು ಒಮ್ಮೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಈ ಮೇಲೆ ಹೇಳಿದ ಕ್ರೈಂ ಪ್ರಕರಣಗಳು ಸಾಧ್ಯವಾದಷ್ಟು ಕಡಿಮೆ ಆಗಬೇಕೆಂದರೆ ತುರ್ತು ಕುಮಾರರಾಮನ ಜೀವನ ಚರಿತ್ರೆಯನ್ನು ತಾಯಂದಿರು ತಮ್ಮ ಮಕ್ಕಳಿಗೆ ಕಥೆ ರೂಪದದರೂ ಸರಿ ಹೇಳಬೇಕಿದೆ. ಅಪ್ಪಂದಿರು ಪುಸ್ತಕ ತಂದಾದರೂ ಸರಿ ಮಕ್ಕಳಿಗೆ ಓದಿಸಬೇಕಿದೆ. ಇಂದು ಜಗತ್ತು ಮುಂದುವರೆದಿದೆ, ಇಲ್ಲಿ ಬರೀ ಯಂತ್ರ – ತಂತ್ರಗಳೆ ಮಾತಾಡುತ್ತಿವೆ. ಇಂಥ ಆದರ್ಶ ವ್ಯಕ್ತಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನಾವುಗಳು ಇಂದು ಯಾವ ಯಾವುದೋ ಅಡ್ಡ ಮಾರ್ಗದಲ್ಲಿ ಹೊರಟಿದ್ದೇವೆ.

ಜೀವನವೆಂದರೆ ವಾಟ್ಸಾಪ್, -ಸ್ಬುಕ್ ಎಂದು ತಿಳಿದು, ಅದರ ಸಮಯ ವ್ಯರ್ಥ ಮಾಡುತ್ತಿದ್ದೇವೆ. ಮನೆಯೇ ಮೊದಲ ಪಾಠಶಾಲೆ, ಮೊದಲು ಮಕ್ಕಳಿಗೆ ಮನೆಯ ತಂದೆ – ತಾಯಿಗಳು ಇಂಥ ಹೆಣ್ಣನ್ನು ಗೌರವಿಸಿದ ಮಹಾನ್ ಪುರುಷರ ಆದರ್ಶಗಳನ್ನು ಮಕ್ಕಳ ಮನಸ್ಸಲ್ಲಿ ತುಂಬಬೇಕು. ಆ ಮಕ್ಕಳು ಅವರ ಆದರ್ಶಗಳನ್ನೇ ಮೈಗೂಡಿಸಿಕೊಂಡು ಬೆಳೆಯಬೇಕು. ಆಗ ಸಮಾಜದಲ್ಲಿ ನಡೆಯುವ ಅತ್ಯಾಚಾರದಂಥ ಕ್ರೌರ್ಯಗಳು ತಾವಾಗಿಯೇ ಮರೆಯಾಗಬಹುದು ಅಲ್ಲವೇ..?

Leave a Reply

Your email address will not be published. Required fields are marked *

error: Content is protected !!