Sunday, 19th May 2024

ವಿಶೇಷ ಟ್ರ‍್ಯಾಪ್‌ ಕೇಜಿನ ನೆರವಿನಿಂದ ಚಿರತೆ ಸೆರೆ

ತುಮಕೂರು : ಕಳೆದ ಒಂದು ವರ್ಷದಿಂದಲೂ ಚಿರತೆ ಬಾಧಿತ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಒಂದು ಗಂಡು ಚಿರತೆಯನ್ನು ತಾಲ್ಲೂಕಿನ ಬನ್ನಿಕುಪ್ಪೆ ಪ್ಲಾಂಟೇಷನ್‌ನಲ್ಲಿ ನಿರ್ಮಾಣ ಮಾಡಲಾಗಿದ್ದ ವಿಶೇಷ ಟ್ರ‍್ಯಾಪ್ ಕೇಜಿನ ನೆರವಿನಿಂದ ಡಿಸೆಂಬರ್ 15ರ ರಾತ್ರಿ 9 ಗಂಟೆಗೆ ಸೆರೆ ಹಿಡಿಯಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.

ಹೆಬ್ಬೂರು, ಚಿಕ್ಕಮಳಲವಾಡಿ, ಮಣಿಕುಪ್ಪೆ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ 5 ಜನ ಚಿರತೆ ದಾಳಿಗೆ ಬಲಿಯಾಗಿದ್ದರಿಂದ ಚಿರತೆ ಬಾಧಿತ ಪ್ರದೇಶದಲ್ಲಿ ಒಟ್ಟು 46 ಕ್ಯಾಮೆರಾ ಟ್ರ‍್ಯಾಪ್‌ಗಳನ್ನು ಹಾಗೂ ಟ್ರ‍್ಯಾಪ್ ಕೇಜ್‌ಗಳನ್ನು ಅಳವಡಿಸಿ ಚಿರತೆಗಳ ಚಲನವಲನದ ಮೇಲೆ ನಿಗಾ ಇಡಲಾಗಿತ್ತು. ಸೆರೆಯಾಗಿರುವ ಚಿರತೆ ಕಳೆದ ಒಂದು ವರ್ಷದಿಂದಲೂ ಬಾಧಿತ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಬಗ್ಗೆ ಟ್ರ‍್ಯಾಪ್ ಕ್ಯಾಮರಾದಲ್ಲಿ ಸೆರೆಯಾಗುತ್ತಿತ್ತು.

ಟ್ರ‍್ಯಾಪ್ ಕೇಜಿಗೆ ಹೋಗದೆ ಇದ್ದುದರಿಂದ ಈ ಚಿರತೆಯನ್ನು ಸೆರೆ ಹಿಡಿಯುವುದು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆಹಿಡಿಯಲು ನಿರ್ಮಿಸಿದ್ದ 10×10 ಅಡಿ ಅಗಲದ ನೋಡಲು ಕೊಟ್ಟಿಗೆಯಂತೆ ಕಾಣುವ ವಿಶೇಷ ಟ್ರ‍್ಯಾಪ್ ಕೇಜ್‌ನಲ್ಲಿ ಕಳೆದ ರಾತ್ರಿ ಸೆರೆಯಾಗಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನದ ಅರವಳಿಕೆ ತಜ್ಞ ಡಾ.ರಮೇಶ್ ಅರವಳಿಕೆ ಮದ್ದು ನೀಡಿ ಚಿರತೆಯನ್ನು ಸಣ್ಣ ಕೇಜಿಗೆ ಹಾಕ ಲಾಯಿತು. ನಂತರ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು. ಈ ಪ್ರದೇಶದಲ್ಲಿ ಇನ್ನು ಎರಡು ಚಿರತೆಗಳು ಸಕ್ರಿಯವಾಗಿದ್ದು, ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರೆದಿದೆ. ಸಾರ್ವಜನಿಕರು ಅರಣ್ಯ ಇಲಾಖೆ ಯಿಂದ ಈಗಾಗಲೇ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!