Saturday, 27th April 2024

ನಾಳೆಯಿಂದ ಭಾರತ-ಬಾಂಗ್ಲಾದೇಶ ಮೊದಲ ಟೆಸ್ಟ್ ಆರಂಭ

ಚಿತ್ತಗಾಂಗ್: ಚಟ್ಟೋಗ್ರಾಮ್‌ನಲ್ಲಿ ಡಿಸೆಂಬರ್ 14ರಂದು ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಿಂದ ಟೀಂ ಇಂಡಿಯಾ ಕಾಯಂ ನಾಯಕ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ.

ರೋಹಿತ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸಲಿದ್ದು, ಚೇತೇಶ್ವರ ಪೂಜಾರ ಅವರಿಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.

ರೋಹಿತ್ ಶರ್ಮಾ ಇಲ್ಲದ ಕಾರಣ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರು ಹಂಗಾಮಿ ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯಲು ಸಿದ್ಧರಾಗಿದ್ದಾರೆ. ಶುಭಮನ್ ಗಿಲ್ ಅವರು ತಮ್ಮ 11 ಪಂದ್ಯಗಳ ಟೆಸ್ಟ್ ಕ್ರಿಕೆಟ್‌ನಲ್ಲಿ ಅಸ್ಥಿರ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 91 ಮತ್ತು ನಾಲ್ಕು ಅರ್ಧ ಶತಕ ಗಳೊಂದಿಗೆ 30.47 ಸರಾಸರಿಯನ್ನು ಹೊಂದಿದ್ದಾರೆ.ಎರಡನೇ ಪಂದ್ಯದ ವೇಳೆಗೆ ರೋಹಿತ್ ಶರ್ಮಾ ಹಿಂದಿರುಗಿದರೆ, ಅವರ ಜೊತೆ ಇನ್ನಿಂಗ್ಸ್ ತೆರೆಯಲು ಕೆಎಲ್ ರಾಹುಲ್‌ಗೆ ಸವಾಲೊಡ್ಡಬೇಕಾದರೆ ದೊಡ್ಡ ಮೊತ್ತ ಗಳಿಸಬೇಕಿದೆ.

ಫಿಟ್‌ನೆಸ್ ಸಮಸ್ಯೆಯಿಂದಾಗಿ ಮೂರು ಪಂದ್ಯಗಳ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದ ನಂತರ ರಿಷಭ್ ಪಂತ್ ಮೊದಲ ಟೆಸ್ಟ್‌ ಪಂದ್ಯಕ್ಕೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸುವ ನಿರೀಕ್ಷೆಯಿದೆ.ಆಲ್‌ರೌಂಡರ್ ರವೀಂದ್ರ ಜಡೇಜಾ ಚೇತರಿಕೆ ಕಾಣದಿರುವುದರಿಂದ ಉತ್ತರಪ್ರದೇಶದ ಸೌರಭ್ ಕುಮಾರ್ ಚೊಚ್ಚಲ ಪಂದ್ಯವನ್ನು ಆಡಬಹುದದಾಗಿದೆ. ಬೌಲಿಂಗ್ ವಿಭಾಗದಲ್ಲಿ ಸೌರಾಷ್ಟ್ರ ನಾಯಕ ಜಯದೇವ್ ಉನದ್ಕತ್ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. 2010 ರಲ್ಲಿ ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು.

ಜಯದೇವ್ ಉನದ್ಕತ್ ಹೊರತಾಗಿ ವೇಗದ ದಾಳಿಯಲ್ಲಿ ಮೊಹಮ್ಮದ್ ಸಿರಾಜ್ ಅವಕಾಶ ಪಡೆಯುವ ನಿರೀಕ್ಷೆಯಿದೆ. ಅನುಭವಿ ವೇಗಿ ಉಮೇಶ್ ಯಾದವ್ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸ್ಪಿನ್ ವಿಭಾಗವನ್ನು ಬಲಪಡಿಸಲು ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೊತೆ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರು ಸ್ಥಾನ ಪಡೆಯುವ ನಿರೀಕ್ಷೆ ಇದೆ.

error: Content is protected !!