Sunday, 19th May 2024

ವಿಜಯನಗರ ಸಾಮ್ರಾಜ್ಯ ಮಾದರಿಯಲ್ಲಿ ಡಿಸಿ ಕಚೇರಿ

82 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಡಿಸಿ, ಎಸ್‌ಪಿ, ಜಿಪಂ ಕಚೇರಿ

ಸದ್ಯ ಹಳೆಯ ಕಟ್ಟಡದಲ್ಲಿ ಡಿಸಿ ಕಚೇರಿ ತೆರೆಯಲು ನಿರ್ಧಾರ

ಮಾರ್ಚ್ 2ನೇ ವಾರದಲ್ಲಿ ಹೊಸ ಡಿಸಿ ಆಗಮನ ನಿರೀಕ್ಷೆ

ವಿಶೇಷ ವರದಿ: ಅನಂತ ಪದ್ಮನಾಭ ರಾವ್

ಹೊಸಪೇಟೆ: ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ವಿಜಯನಗರ ಸಾಮ್ರಾಜ್ಯದ ಮಾದರಿಯಲ್ಲಿ ನಿರ್ಮಾಣವಾಗಲಿದೆ. ಈಗಾಗಲೇ ಈ ಕುರಿತು ನೀಲನಕ್ಷೆ ತಯಾರಿಸಲಾಗುತ್ತಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

ನಗರದ ಡ್ಯಾಂ ರಸ್ತೆಯಲ್ಲಿ ಟಿಎಸ್‌ಪಿ ಹಳೆಯ ಕಟ್ಟಡದ ಸುತ್ತಮುತ್ತ ಈಗಾಗಲೇ ಸ್ವಚ್ಛಗೊಳಿಸಲಾಗಿದೆ. ಕಟ್ಟಡ ಸ್ವಚ್ಛತೆ ಸೇರಿ ದಂತೆ ಇತರ ಅಗತ್ಯ ದುರಸ್ತಿ ಕಾರ್ಯಕ್ಕೆ ಒಂದೆರೆಡು ದಿನಗಳಲ್ಲಿ ಚಾಲನೆ ದೊರೆಯುವ ಸಾಧ್ಯತೆ ಇದೆ.

ನೂತನ ಜಿಲ್ಲಾ ಭವನ: ನಗರದ ಟಿಎಸ್‌ಪಿಯು (ತುಂಗಭದ್ರಾ ಸ್ಟೀಲ್ ಪ್ರಾಡೆಕ್ಟ್‌ ಲಿಮಿಟೆಡ್) ಕರ್ನಾಟಕ ಗೃಹ ಮಂಡಳಿಗೆ 82 ಎಕರೆ ಭೂಮಿಯನ್ನು ಪರಾಭಾರೆ ಮಾಡಿತ್ತು. ಈಗ ಕಂದಾಯ ವ್ಯಾಪ್ತಿಗೆ ಒಳಪಡುತ್ತಿದೆ. ಈ ಸ್ಥಳದಲ್ಲಿ ನೂತನ ಜಿಲ್ಲೆಯ ಕಚೇರಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ವಿಜಯನಗರ ಕಾಲದ ಪರಂಪರೆ ಅಚ್ಚಳಿಯದೆ ಉಳಿಸುವ ಕಾರ್ಯವಾಗಲಿದೆ. ಅಲ್ಲದೆ 82 ಎಕೆರೆಯಲ್ಲಿ ಜಿಲ್ಲಾಡಳಿತ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ, ಮೆಡಿಕಲ್
ಕಾಲೇಜ್, ಆಸ್ಪತ್ರೆ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ.

ಕೊರತೆಯಿಲ್ಲ: ಕೆಎಂಇಆರ್‌ಸಿ ಅನುದಾನ 17 ಸಾವಿರ ಕೋಟಿ ರು. ಇದೆ. ಗಣಿಗಾರಿಕೆಯ ಪ್ರದೇಶಗಳನ್ನು ಅಭಿವೃದ್ಧಿ ಮಾಡಲು
ಅನುದಾನ ನಿಗದಿ ಮಾಡಲಾಗಿದೆ. ಅದಕ್ಕೆ ಬಡ್ಡಿ 3 ಸಾವಿರ ಕೋಟಿಯಷ್ಟು ಬೆಳೆದಿದೆ. ಈ ಹಣವನ್ನು ಉಪಯೋಗಿಸಲು ಉದ್ದೇಶಿಸಲಾಗಿದೆ.

ಎಷ್ಟು ದೂರ: ಕೇಂದ್ರ ಬಸ್ ನಿಲ್ದಾಣದಿಂದ ಸುಮಾರು 4 ಕಿ.ಮೀ., ರೈಲ್ವೇ ನಿಲ್ದಾಣದಿಂದ 5 ಕಿ.ಮೀ., ಅಮರಾವತಿ ಸರಕಾರಿ ಅತಿಥಿ ಗೃಹದಿಂದ ಹಾಗೂ ತುಂಗಭದ್ರಾ ಡ್ಯಾಂನಿಂದ ಕೇವಲ 3 ಕಿ.ಮೀ. ಅಂತರದಲ್ಲಿದೆ. ಕೂಡ್ಲಿಗಿಯಿಂದ 47 ಕಿ.ಮೀ ಅಂತರ  ವಿದ್ದು ಹಗರಿ ಬೊಮ್ಮನಹಳ್ಳಿಯಿಂದ 38 ಕಿ.ಮೀ ಹಾಗೂ ಕೊಟ್ಟೂರು 60 ಕಿ.ಮೀ ದೂರದಲ್ಲಿದ್ದು ಹರಪನಹಳ್ಳಿಯಿಂದ 80 ಕಿ.ಮೀ ಮತ್ತು ಹೂವಿನಹಡಗಲಿಯಿಂದ 72 ಕಿ.ಮೀ ಅಂತರದಲ್ಲಿದೆ.

ಏನು, ಎತ್ತ: ವಿಜಯನಗರ ಜಿಲ್ಲೆಗೆ ಒಟ್ಟು 18 ಹೋಬಳಿಗಳು ಒಳಪಡಲಿದ್ದು, ಜಿಲ್ಲೆಗೆ ಹೊಸಪೇಟೆ, ಕೊಟ್ಟೂರು, ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ, ಹರಪನಹಳ್ಳಿ, ಹೂವಿನಹಡಗಲಿ ತಾಲೂಕುಗಳು ಸೇರಿವೆ. 13,92,750 ಎಕೆರೆಯಷ್ಟು ನೂತನ ವಿಜಯನಗರ ಜಿಲ್ಲೆ ಭೌಗೋಳಿಕ ವ್ಯಾಪ್ತಿ ಹೊಂದಿದೆ.

ಕೋಟ್ಸ್‌

ಪ್ರಸ್ತುತ ಹೊಸಪೇಟೆ ನಗರದ ಕರ್ನಾಟಕ ಗೃಹ ಮಂಡಳಿ ಪ್ರದೇಶದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ವಿಜಯನಗರ ಜಿಲ್ಲಾ ಕಚೇರಿ ಪ್ರಾರಂಭ ಮಾಡಲಾಗುವುದು. ಈಗಾಗಲೇ ಸ್ವಚ್ಛತೆ ಕಾರ್ಯ ಒಂದು ಹಂತಕ್ಕೆ ಮುಗಿದಿದೆ. ಮಾರ್ಚ್ ತಿಂಗಳಿನಲ್ಲಿ ವಿಜಯನಗರ ಜಿಲ್ಲೆಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ನೇಮಕ ಆಗಲಿದ್ದಾರೆ.
-ಆನಂದ್ ಸಿಂಗ್ ಸಚಿವ

Leave a Reply

Your email address will not be published. Required fields are marked *

error: Content is protected !!