Monday, 20th May 2024

ವಿಷ್ಣುವರ್ಧನ್‌ ತಪ್ಪು ಮಾಡದೇ ಇದ್ದರೂ, ಹುಡುಕಿ ಬರೆಯುವ ಪತ್ರಕರ್ತರಿದ್ದರು !

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 174

ಆಪ್ತ ಗೆಳೆಯ, ಹಿರಿಯ ಸಿನಿಮಾ ಪತ್ರಕರ್ತ ಮೈಸೂರಿನ ಕೆ.ಜೆ.ಕುಮಾರ್ ನೆನಪುಗಳು

ಬೆಂಗಳೂರು: ವಿಷ್ಣುವರ್ಧನ್‌ಗೆ ಯಶಸ್ಸು ಇದ್ದರೂ ವಿವಾದಗಳು ಸುತ್ತಿಕೊಂಡಿದ್ದವು. ಗಂಧದಗುಡಿ ವಿವಾದದಿಂದ ವಿಷ್ಣು ನಿರಾಳರಾಗಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಮೈಸೂರಿನಲ್ಲಿದ್ದಾಗ ಹೋಟೆಲ್‌ಗಳಿಗೆ ಕಲ್ಲುಗಳು ಬಿದ್ದವು, ಮೈಸೂರಿನಿಂದ ಹೊರಟರೆ ೩ ಕಾರು ಚೇಂಜ್ ಮಾಡುತ್ತಿದ್ದರು. ಆಗ ಬೆಂಬಲಕ್ಕೆ ನಿಂತಿದ್ದೇ ಅಂಬರೀಶ್. ಬಹಿರಂಗ ಸಭೆಗಳಲ್ಲಿ ಅಂಬರೀಶ್ ಇಲ್ಲದೇ ವಿಷ್ಣು ಕಾಲಿಡುತ್ತಿರಲಿಲ್ಲ ಎಂದು ವಿಷ್ಣುವರ್ಧನ್ ಅವಕ ಆಪ್ತ ಗೆಳೆಯ, ಹಿರಿಯ ಸಿನಿಮಾ ಪತ್ರಕರ್ತ ಮೈಸೂರಿನ ಕೆ.ಜೆ.ಕುಮಾರ್ ನೆನಪಿಸಿಕೊಂಡರು.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಚಂದನವನದ ಯಜಮಾನನ ನೆನಪು’ ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಜತೆ ತಾವು ಒಡನಾಡಿದ ದಿನಗಳನ್ನು ಭಾವಪರವಶರಾಗಿ ಹೀಗೆ ಮೆಲುಕು ಹಾಕಿದ್ದು ಹೀಗೆ….

ನನ್ನ ಮತ್ತು ವಿಷ್ಣು ಪರಿಚಯ ವಂಶವೃಕ್ಷದಿಂದ ಆರಂಭವಾಗಿ, ಸ್ನೇಹದ ನಂಟು ಬೆಳೆದಿದ್ದು ನಾಗರ ಹಾವು ಮುಹೂರ್ತದಿಂದ. ಅವರ ಮದುವೆ ದಿನ ಅಶೋಕದಲ್ಲಿ ತಂಗಲು ನನಗೆ ರೂಂ ಮಾಡಿ ಕೊಟ್ಟಿದ್ದರೆಂದರೆ ನನ್ನ ಮೇಲೆ ಅವರಿಗಿದ್ದ ಆತ್ಮೀಯತೆಯನ್ನು ತೋರಿಸುತ್ತದೆ. ಪ್ರಾಮಾಣಿಕರು ಮತ್ತು ತನಗೆ ಹೊಂದುವವರನ್ನು ಮಾತ್ರ ಸ್ನೇಹಿತರನ್ನಾಗಿ ಇಟ್ಟುಕೊಂಡಿದ್ದ ವಿಷ್ಣುವರ್ದನ್‌ಗೆ ಮೈಸೂರಿನಲ್ಲಿ ಇತರ ಗೆಳೆಯರೆಂದರೆ, ಶ್ರೀಕಂಠದತ್ತ ಒಡೆಯರ್ ಮತ್ತು ಕಿಂಗ್ಸ್‌ಕೋರ್ಟ್ ವಿವೇಕ್.

ಆರಂಭದಿಂದಲೂ ವಿಷ್ಣುವರ್ದನ್‌ರಲ್ಲಿ ಅದ್ಧೂರಿತನ ಕಾಣಲೇ ಇಲ್ಲ. ತುಂಬಾ ಸರಳ ಊಟ. ನೀರ್‌ದೋಸೆ, ಮೊಸರನ್ನ ಇಷ್ಟಪಡುತ್ತಿದ್ದರು. ಚಿಕ್ಕ ವಯಸ್ಸಿನಿಂದಲೂ ತಿಂಡಿಪೋತನಾಗಿದ್ದು, ಮೈಸೂರು ಬಹಳ ಇಷ್ಟದ ಊರು. ಅವರ ತಾಯಿ ಆಸೆಯಂತೆ ಮೈಸೂರಿನಲ್ಲೊಂದು ಮನೆ ಮಾಡಿ ಅದನ್ನು ಪೂರ್ಣಗೊಳಿಸುವ ಮುನ್ನವೇ ಬದುಕು ಮುಗಿಸಿದರು. ಅವರು ಸಾಯುವ ಹಿಂದಿನ ದಿನ ಒಂದೂವರೆ ಗಂಟೆ ಜತೆಗೆ ಕಳೆದಿದ್ದೆವು. ನಾನು ಮೈಸೂರಿನಲ್ಲೇ ಇರುತ್ತೇನೆ, ಇಲ್ಲಿ ಬಂದಾಗ ವಾಕ್ ಮಾಡೋಣ ಎಂದೆಲ್ಲಾ ಹೇಳಿದ್ದರು. ವಿಕ್ರಂ ಆಸ್ಪತ್ರೆಯಿಂದ ೨೦೦ ಅಡಿ ದೂರದ ಮನೆಯಲ್ಲಿದ್ದ ನಾನೇ ಮೊದಲು ಮುಖ ನೋಡಿದ್ದು, ದೇಹವನ್ನು ವ್ಯಾನ್‌ಗೆ ಹತ್ತಿಸಿದೆ ಎಂದು ಭಾವುಕರಾದರು.

ವಿಷ್ಣುವರ್ದನ್‌ಗಾಗಿ ೨೦ ಸಿನಿಮಾ ಮಾಡಿದ ಒಬ್ಬನೇ ನಿರ್ಮಾಪಕರಿದ್ದಾರೆ, ಅಸಿಸ್ಟೆಂಟ್ ಡೈರೆಕ್ಟರ್‌ಗಳಿಗೇ ಇವರು ಅವಕಾಶ ಕೊಟ್ಟಿದ್ದರು. ಮೈಸೂರಿನ ಎಷ್ಟು ಜನಕ್ಕೆ ಕೆಲಸ ಕೊಟ್ಟಿ ದ್ದರು ಎಂಬುದನ್ನು ಗಮನಿಸುತ್ತಿದ್ದರು, ಶೂಟಿಂಗ್ ಸ್ಪಾಟ್‌ನಲ್ಲೇ ಚೇರ್ ಹಾಕಿ ಕೂರು ತ್ತಿದ್ದರು. ಎಲ್ಲರಿಗೂ ನೀಡುವ ಊಟವನ್ನೇ ಮಾಡುತ್ತಿದ್ದರು. ಆದರೆ, ಇಂದಿನ ನಟರು ನಿರ್ಮಾಪಕರ ಖರ್ಚಿನಲ್ಲಿ ತಾವೇ ಒಬ್ಬ ಕುಕ್ ಕರೆತರುತ್ತಾರೆ. ಅವರ ಮೇಕಪ್ ಮ್ಯಾನ್, ಡ್ರೈವರ್ ಬಣ್ಣ ಹಾಕಿದಂದಿನಿಂದಲೂ ಸಾಯುವ ಕ್ಷಣದವರೆಗೂ ಇದ್ದರು. ಇಂದಿನ ನಟರ ವರ್ತನೆಗಳು ಸರಿಯಾಗದೇ ಬಿಟ್ಟುಹೋಗುತ್ತಾರೆ ಎಂದು ಹೋಲಿಕೆ ಮಾಡಿದರು.

ಗೋಕಾಕ್ ಚಳವಳಲಿಯಲ್ಲಿ ಭಾಗವಹಿಸಲೇ ಇಲ್ಲ ಆರಂಭದಲ್ಲಿ ವಿಷ್ಣುವನ್ನು ಒಂಟಿಯಾಗಿಸುವ ಪ್ರಯತ್ನಗಳು ಬಹಳಷ್ಟು ನಡೆದವು. ಆರಂಭದಲ್ಲಿ
ವಿಷ್ಣು ಗೋಕಾಕ್ ಚಳವಳಲಿಯಲ್ಲಿ ಭಾಗವಹಿಸಲೇ ಇಲ್ಲ. ಇದನ್ನು ಖಂಡಿಸಿ ಮೈಸೂರಿನಲ್ಲಿ ನನ್ನ ನೇತೃತ್ವದಲ್ಲಿ ಹೋರಾಟವೂ ನಡೆಯಿತು.
ಸಿನಿಮಾದಲ್ಲಿ ಗುಂಪುಗಾರಿಕೆ ಇದ್ದಂತೆ, ಪತ್ರಕರ್ತರಲ್ಲಿಯೂ ಗುಂಪುಗಾರಿಕೆ ಇತ್ತು. ವಿಷ್ಣು ತಪ್ಪು ಇಲ್ಲದೇ ಇದ್ದರೂ, ಹುಡುಕಿ ಬರೆಯುವ ಪತ್ರಕರ್ತರಿದ್ದು,
ವಿಷ್ಣು ಬಳಿ ಆ ಪಟ್ಟಿ ಇತ್ತು. ಹಾಗಾಗಿ, ತನಗೆ ಯಾರು ಸರಿ ಕಾಣುತ್ತಾರೋ ಅಂತಹ ಪತ್ರಕರ್ತರ ಮುಂದೆ ವಿಷ್ಣು ಇಡೀ ಬದುಕನ್ನು ಬಿಚ್ಚಿಟ್ಟಿದ್ದರು.
ಇಲ್ಲದಿದ್ದರೆ, ಗಂಧದಗುಡಿ ಘಟನೆಯನ್ನು ನೋಡದೆಯೇ ಅಷ್ಟೊಂದು ವೈಭವವಾಗಿ ಬರೆದಿದ್ದು ಯಾರು? ನೋಡಿದವರು ನಿರಾಕರಿಸಬೇಕಿತ್ತಲ್ಲವೇ? ಅದನ್ನು ಯಾರೂ ಮಾಡಲೇ ಇಲ್ಲ ಎಂದು ಕೆ.ಜೆ. ಕುಮಾರ್ ಆಕ್ರೋಶಭರಿತರಾಗಿ ಹೇಳಿದರು.

ತಂದೆ ನಿಧನವಾಗಿದ್ದರು ನಟನೆ
ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ನಟಿಸುವಾಗ ತಂದೆಯ ನಿಧನದ ವಾರ್ತೆ ಗೊತ್ತಾಗಿಯೂ ನಟನೆ ಮುಂದುವರಿಸಿದರು. ಆಗ ಚಿತ್ರತಂಡದ ಒತ್ತಾಯದ ಮೇರೆಗೆ ಅಂತ್ಯಕ್ರಿಯೆಗೆ ಹೋದರು ಎಂದು ನಿರೂಪಕಿ ರೂಪಾ ಗುರುರಾಜ್ ಹೇಳಿದರು.

ಕೊಡುಗೈ ದಾನಿ
ವಿಷ್ಣು ಮದುವೆ, ವಿದ್ಯಾಭ್ಯಾಸ, ವಿಕಲಚೇತನರಿಗೆ ಸ್ವಂತ ಚೆಕ್ ನೀಡಿದ ಉದಾಹರಣೆಗಳಿವೆ. ನಾನು ಅವರ ಜತೆ ಮಂಗಳೂರಿಗೆ ಹೋಗಿದ್ದಾಗ ಹುಡುಗಿಯೊಬ್ಬಳು ನಮಸ್ಕಾರ ಮಾಡಿ, ನೀವು ಕೊಟ್ಟ ಹಣದಿಂದ ನಾನು ಮದುವೆಯಾಗಿ, ಮಗುವೂ ಆಗಿದೆ ಎಂದು ಹೇಳಿದ್ದನ್ನು ನೋಡಿದ್ದೆ ಎಂದು ಕೆ.ಜೆ. ಕುಮಾರ್ ಹೇಳಿದರು.

***

ವಿಷ್ಣು ಮೂಲತಃ ತತ್ವಜ್ಞಾನಿ, ಬನ್ನಂಜೆ ಗೋವಿಂದಾಚಾರ್ಯರ ಪಕ್ಕಾ ಹಿಂಬಾಲಕ. ಕೊನೆಯ ಐದಾರು ವರ್ಷ ನಡೆ, ಊಟ, ನಡವಳಿಕೆಯಲ್ಲಿ ತತ್ವಜ್ಞಾನಿಯಾಗಿದ್ದರು. ಹೆಚ್ಚಾಗಿ ದೇವರು, ಬದುಕು ಹೀಗೇ ಇರಬೇಕು, ತಾನು ಒಳ್ಳೆಯವನಾಗಿ ಮತ್ತೊಬ್ಬರನ್ನು ಒಳ್ಳೆಯವರನ್ನಾಗಿಸುವ ಬಗ್ಗೆ
ಮಾತನಾಡುತ್ತಿದ್ದರು ಎಂಬುದನ್ನು ಕೆ.ಜೆ. ಕುಮಾರ್ ನೆನಪಿಸಿಕೊಂಡರು.

?ವಿಷ್ಣು ವಿಶೇಷತೆಗಳನ್ನು ಹೇಳಿದ ಗೆಳೆಯ ಕುಮಾರ್…
?ಗಂಧದಗುಡಿ ಬಿಟ್ಟರೆ ಯಾವುದೇ ವಿಷಯಗಳಲ್ಲಿಯೂ ಕಾಂಟ್ರವರ್ಸಿ ಆಗಿಲ್ಲ. ಒಬ್ಬೇ ಒಬ್ಬ ನಟಿ ಇವರ ಬಗ್ಗೆ ಟೀಕೆ ಮಾಡಿಲ್ಲ.
ಬಹಳಷ್ಟು ಹೀರೊಯಿನ್ಸ್ ಇವರೊಂದಿಗೆ ನಟಿಸಲು ಒದ್ದಾಡುತ್ತಿದ್ದರು.
?ಈಗಿನ ಕಾಲದಂತೆ ವಿಷ್ಣು ಬಾಡಿಗಾರ್ಡ್‌ಗಳನ್ನು ಇಟ್ಟುಕೊಂಡಿರಲಿಲ್ಲ.
?ಚಿಕ್ಕವರು, ದೊಡ್ಡವರು ಯಾರೇ ಬಂದರೂ ಎದ್ದು ನಿಂತು ಮಾತನಾಡುತ್ತಿದ್ದರು.
? ಅವರು ಮೂಡಿ ಏನಲ್ಲ. ಒಬ್ಬನ ವರ್ತನೆ ಸರಿಯಿಲ್ಲವಾದರೆ ವ್ಯಕ್ತ ಮಾಡದೇ, ಸುಮ್ಮನಾಗಿ ಬಿಡುತ್ತಿದ್ದರು.
? ನಾವಿಬ್ಬರೂ ಮೈಸೂರಿನ ಹೈವೆ ಹೋಟೆಲ್‌ನಿಂದ ಶಾಲಿಮಾರ್ ಗೆ ನಡೆದು ಹೋಗಿ ಸಿನಿಮಾ ನೋಡುತ್ತಿದ್ದೆವು.
? ವಿಷ್ಣು ಐಸೋಲೇಟೆಡ್ ಅಲ್ಲ.  ಫ್ರೆಂಡ್ಲಿ, ಸರಳವಾಗಿದ್ದರು, ನಗುವಿನಲ್ಲಿ ಆರ್ಟಿಫಿಷಿಯಲ್ ಇರಲಿಲ್ಲ.
? ನಾಗರಹಾವು ಸಿನಿಮಾದಲ್ಲಿ ಕ್ರಿಶ್ಚಿಯನ್ ಪಾತ್ರ ಮಾಡಿದ್ದ ಶುಭಾ ವಿಷ್ಣುಗೆ ಗೊತ್ತಿಲ್ಲದಂತೆ ಪ್ರೀತಿಸಿದ್ದಳು. ಪ್ರೀಮಿಯರ್ ಸ್ಟುಡಿಯೋದಲ್ಲಿ ಭಾಗ್ಯಜ್ಯೋತಿ ಸಿನಿಮಾ ಶೂಟಿಂಗ್ ಸಂದರ್ಭ ಇದು ನನಗೆ ತಿಳಿಯಿತು.
? ಭಾರತಿ ನಾಟ್ ಎನ್ ಆರ್ಡಿನರಿ ಸ್ಟಾರ್. ಆದರೆ, ನಾನು ನಿಮ್ಮನ್ನು ಮದುವೆಯಾದ ಮೇಲೆ ನೀವು ಮುಂದೆ, ನಿಮ್ಮ ಹೆಂಡತಿಯಾಗಿ ನಾನು ನಿಮ್ಮ ಹಿಂದೆ ಬರುತ್ತೇನೆ ಎಂದಿದ್ದರು.
?ವಿಷ್ಣು ಮುತ್ತಿನಹಾರದಲ್ಲಿ ತಲೆ ಬೋಳಿಸಿಕೊಂಡಿದ್ದರು. ಎಂದೂ ಡ್ಯೂಪ್ ಮಾಡುತ್ತಿರಲಿಲ್ಲ, ಅನುಭವಿಸಿ ಪಾತ್ರ ಮಾಡುತ್ತಿದ್ದುದ್ದೇ ವಿಷ್ಣು ಸ್ಟೈಲ್.
? ನಿರ್ಮಾಪಕ ದುಡ್ಡು ಕಡಿಮೆ ಕೊಟ್ಟರೂ ಸರಿ. ಆದರೆ, ಶೂಟಿಂಗ್ ಮೈಸೂರಿನಲ್ಲಿ ಆಗಬೇಕಿತ್ತು.
? ವಿಷ್ಣುಗೆ ಮರ್ಸಿಡಿಸ್ ಬೆಂಜ್ ಕಾರು ಇಷ್ಟ.
? ನಡಿಗೆ, ಕೈ ಕಡಗ, ನಗು ವಿಷ್ಣು ಸ್ಟೈಲ್ ಯಾರೂ ಪೈಪೋಟಿ ಮಾಡಲಿಕ್ಕಾಗಲ್ಲ.
? ವಿಷ್ಣು ದೊಡ್ಡ ಸ್ಟಾರ್ ಆದರೂ ರಜನಿ ಜತೆ ಸಹೋದರರ ಸವಾಲ್‌ನಲ್ಲಿ ನಟಿಸಿದರು.
? ವಿಷ್ಣುಗೆ ಇದ್ದಷ್ಟು ಮಹಿಳಾ ಅಭಿಮಾನಿಗಳನ್ನು ಯಾವ ನಟರೂ ಸಂಪಾದಿಸಿಲ್ಲ.
? ಬನ್ನಂಜೆ ಗೋವಿಂದಾಚಾರ್ಯರ ಪರಿಚಯವಾದ ನಂತರ ಬದುಕಿನ ಶೈಲಿಯೇ ಬದಲಾಗಿಬಿಟ್ಟಿತ್ತು. ಇನ್ ಸಾಕೋ, ಇನ್ ಸಾಕೋ ಎಂದು
ಹೇಳುತ್ತಿದ್ದುದ್ದು, ಅವರು ಸತ್ತ ನಂತರ ನನಗೆ ಅರ್ಥವಾಯಿತು.
? ಮದುವೆ ನಂತರ ಭಾರತಿಯನ್ನು ಬಿಟ್ಟು ಹೋಗುತ್ತಿರಲೇ ಇಲ್ಲ. ಬೆಂಗಳೂರು ಹೊರಗೆ ಶೂಟಿಂಗ್ ಇದ್ದರೆ ಭಾರತಿ ಜತೆಗಿರುತ್ತಿದ್ದರು.
? ನಿಯಮಾವಳಿಗಳಲ್ಲಿ ಅಂಬಿ- ವಿಷ್ಣು ಕಂಪೇರ್ ಮಾಡೋ ಆಗಿಲ್ಲ. ಟೈಮ್ ವಿಚಾರದಲ್ಲಿ ಇವರಿಬ್ಬರೂ ವಿರೋಧಿಗಳು.

ವಿಷ್ಣು ಏಕಪತ್ನೀ ವ್ರತಸ್ಥ, ಅಂಬಿ ಜತೆ ಏಳೆಂಟು ಜನ ಮದುವೆಯಾಗಲು ಕಾಯುತ್ತಿದ್ದುದ್ದನ್ನು ಆತನೇ ನನ್ನ ಬಳಿ ಹೇಳಿಕೊಂಡಿದ್ದಾನೆ.

error: Content is protected !!