Monday, 20th May 2024

ಜನರಿಗೆ ಬೇಕಿದೆ ಸುಶಾಸನ

ಲೋಕಸಭೆ ಚುನಾವಣೆಗೆ ಸಂಬಂಧಿಸಿ ಕರ್ನಾಟಕದಲ್ಲಿ ೨ನೇ ಹಂತದ ಮತದಾನ ಸಂಪನ್ನಗೊಂಡಿದೆ. ರಾಜ್ಯದ ದಕ್ಷಿಣ ಭಾಗಕ್ಕೆ ಹೋಲಿಸಿದಾಗ ಉತ್ತರ ಕರ್ನಾಟಕ ಭಾಗದಲ್ಲಿ ಮತದಾನದ ಪ್ರಮಾಣ ತೃಪ್ತಿಕರವಾಗಿತ್ತು ಮತ್ತು ಬಹುತೇಕ ಕಡೆ ಶಾಂತಿಯುತವಾಗಿತ್ತು ಎಂಬುದು ಲಭ್ಯ ಮಾಹಿತಿ.

ಇದೇ ರೀತಿಯಲ್ಲಿ ದೇಶದ ಮಿಕ್ಕ ಕಡೆಗಳಲ್ಲೂ ಇನ್ನುಳಿದ ಹಂತಗಳ ಮತದಾನ ಕಾರ್ಯ ಸುಸೂತ್ರವಾಗಿ ನಡೆಯಲಿ ಎಂಬುದು ಸಹೃದಯಿಗಳ ಹಾರೈಕೆ. ಎಲ್ಲ ಹಂತಗಳೂ ಮುಗಿದು ಜೂನ್ ೪ರ ವೇಳೆಗೆ ದೆಹಲಿ ಗದ್ದುಗೆಯ ಹಕ್ಕುದಾರರು ಯಾರು ಎಂಬುದು ನಿಕ್ಕಿಯಾಗಲಿದೆ. ಅವರು ಜನಾನುರಾಗಿಗಳಾಗಿ ರಲಿ, ಅವರಿಂದ ಸುಶಾಸನ ಹೊಮ್ಮಲಿ ಎಂಬುದೇ ಎಲ್ಲರ ಬಯಕೆ ಮತ್ತು ನಿರೀಕ್ಷೆ.

ಕಾರಣ, ದೇಶಾದ್ಯಂತ ಎಂಥದೇ ದುರ್ಭರ ಸಮಸ್ಯೆ ಮಡುಗಟ್ಟಿರಲಿ, ತೀವ್ರ ಸವಾಲೇ ಎದುರಾಗಲಿ, ಅಧಿಕಾರ ಸೂತ್ರ ಹಿಡಿದಿರುವವರು ದಕ್ಷರೂ ಪ್ರಾಮಾ ಣಿಕರೂ ಆಗಿದ್ದರೆ ಹಾಗೂ ಜನರ ಹಿತರಕ್ಷಣೆಯೇ ಅವರ ಮೂಲಮಂತ್ರವಾಗಿದ್ದರೆ, ಸವಾಲು-ಸಮಸ್ಯೆಗಳನ್ನು ಪರಿಹರಿಸುವುದು ಕಷ್ಟವೇನೂ ಆಗುವು ದಿಲ್ಲ ಮತ್ತು ಆಗಬಾರದು ಕೂಡ. ನಮ್ಮ ಜನರೂ ಅಷ್ಟೇ, ಅವರ ಆಕಾಂಕ್ಷೆಗಳೇನೂ ಆಕಾಶದಲ್ಲೇ ಗಿರಕಿ ಹೊಡೆಯುವಂಥವಲ್ಲ; ತೀರಾ ಅನಿವಾರ್ಯ ಎನಿಸಿರುವಂಥ ಬಾಬತ್ತುಗಳು ತಮ್ಮ ಕೈಗೆಟುಕುವಂತಾಗಬೇಕು ಎಂದು ದೇಶದ ಶ್ರೀಸಾಮಾನ್ಯರು ಬಯಸುತ್ತಾರಷ್ಟೇ.

ಭಾರತವು ೫ ಟ್ರಿಲಿಯನ್ ಡಾಲರ್ ಆರ್ಥಿಕತೆಯ ಹಣೆಪಟ್ಟಿಯನ್ನು ಲಗತ್ತಿಸಿಕೊಂಡಿತೇ? ಅಧ್ಯಯನಕ್ಕೆಂದು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಸುವಲ್ಲಿ ಯಶಸ್ವಿಯಾಯಿತೇ? ಎಂಬ ಪ್ರಶ್ನೆಗಳಿಗಿಂತ ‘ನಮ್ಮ ಸದ್ಯದ ದೈನಂದಿನ ಅಗತ್ಯಗಳು ನೆರವೇರಿ, ಮಕ್ಕಳ ಭವಿಷ್ಯಕ್ಕೆಂದು ಕೊಂಚ ಮಟ್ಟಿಗಿನ
ಆಸರೆ ದಕ್ಕಿದರೆ ಸಾಕು’ ಎಂಬಂಥ ಬಯಕೆಗಳ ಸುತ್ತಲೇ ಅವರ ಚಿತ್ತ ಸುತ್ತುತ್ತಿರುತ್ತದೆ. ಇಂಥ ಸರಳ ಅಗತ್ಯಗಳ ಈಡೇರಿಕೆಯೆಡೆಗೆ ಆಳುಗರು ಮೊದಲು
ಗಮನ ಹರಿಸಿದರೆ, ಶ್ರೀಸಾಮಾನ್ಯರ ಹರಕೆ-ಹಾರೈಕೆ ಯಾವಾಗಲೂ ಅವರ ಜತೆಗಿರುತ್ತವೆ.

ಹಾಗೆಂದ ಮಾತ್ರಕ್ಕೆ ೫ ಟ್ರಿಲಿಯನ್ ಡಾಲರ್ ಆರ್ಥಿಕತೆಯ ಹಣೆಪಟ್ಟಿ ದಕ್ಕಿಸಿಕೊಳ್ಳುವಿಕೆ ಮತ್ತು ಬಾಹ್ಯಾಕಾಶ ಕ್ಷೇತ್ರಕ್ಕೆ ಲಗ್ಗೆಯಂಥ ಸಾಧನಾಪಥದಿಂದ ಹಿಂದಡಿ ಇಡಬೇಕೆಂಬುದು ಈ ಮಾತಿನ ಅರ್ಥವಲ್ಲ. ಯಾವ ವಲಯಕ್ಕೆ ಆದ್ಯತೆ ನೀಡಬೇಕೆಂಬುದನ್ನು ಆಳುಗರು ಅರಿಯಲಿ ಎಂಬುದಷ್ಟೇ ಇಲ್ಲಿನ ಆಶಯ.

Leave a Reply

Your email address will not be published. Required fields are marked *

error: Content is protected !!