Tuesday, 14th May 2024

ಹಣವಿಲ್ಲದೆ ಚುನಾವಣೆ ಸಾಧ್ಯವಿಲ್ಲವೇ ?

ದೇಶದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ ಶುಕ್ರವಾರ ಮುಕ್ತಾಯವಾಗಿದೆ. ಅಲ್ಲಲ್ಲಿ ಚಿಕ್ಕಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿಯೇ ನಡೆದಿದೆ. ನಿಜಕ್ಕೂ ಇದು ಪ್ರಜಾಪ್ರಭುತ್ವದ ಮತ್ತು ಚುನಾವಣೆ ಆಯೋಗದ ಗೆಲುವೇ ಸರಿ. ಈ ಸಲದ ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದ ಚುನಾವಣಾ ಆಯೋಗದ ಅಧಿಕಾರಿಗಳು ದೇಶದ ಇತಿಹಾಸದ ಕಂಡು ಕೇಳರಿಯದಷ್ಟು ಹಣವನ್ನು ಜಪ್ತಿ ಮಾಡಿದ್ದಾರೆ.

ಇದುವರೆಗೆ ದಾಖಲೆ ಇಲ್ಲದೆ ೪,೬೫೦ ಕೋಟಿ ರು. ಜಪ್ತಿ ಮಾಡಿರುವ ಕುರಿತು ಆಯೋಗ ಮಾಹಿತಿ ನೀಡಿದೆ. ಇದು ದೇಶದ ಲೋಕಸಭೆ ಚುನಾವಣೆಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೊತ್ತದ ಹಣದ ದಾಖಲೆ. ಅದರಲ್ಲೂ, ಮಾರ್ಚ್ ೧ರಿಂದ ಇದುವರೆಗೆ ಅಧಿಕಾರಿಗಳು ನಿತ್ಯ ಸರಾಸರಿ ೧೦೦ ಕೋಟಿ ರು. ಜಪ್ತಿ ಮಾಡಿದಂತಾಗಿದೆ. ಇದನ್ನು ಚುನಾವಣೆ ಆಯೋಗದ ಯಶಸ್ಸು ಎನ್ನಬೇಕೋ ಅಥವಾ ಪ್ರಜಾಪ್ರಭುತ್ವದ ವೈಫಲ್ಯವೆನ್ನಬೇಕೋ ತಿಳಿಯದಂತಾಗಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೆ ಚುನಾವಣೆಗಳಲ್ಲಿ ಹಣದ ಹೊಳೆ ಹರಿಯುವುದು, ಆಯೋಗದ ಅಧಿಕಾರಿಗಳು ಕೋಟ್ಯಂತರ ರು. ವಶಪಡಿಸಿಕೊಳ್ಳುವುದು ಸಾಮಾನ್ಯವಾಗಿದೆ. ಚುನಾವಣಾ ಸುಧಾರಣೆ, ಮತದಾರರ ಸಾಕ್ಷರತೆ ಹೆಚ್ಚಿದಂತೆ ಈ ಪ್ರಮಾಣ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ. ಹೆಚ್ಚಿನ ಕಡೆ ಹಾಕಲಾದ ಚೆಕ್‌ಪೋಸ್ಟ್‌ಗಳು, ಮಾಹಿತಿದಾರರು ಹಾಗೂ ಅಧಿಕಾರಿಗಳ ಹದ್ದಿನ ಕಣ್ಣಿನಿಂದಾಗಿ ಹಲವು ಪ್ರಕರಣಗಳು ಸಿಕ್ಕಿಬಿದ್ದಿವೆ. ಆದರೂ ಸಿಗದೇ ತಪ್ಪಿಸಿಕೊಳ್ಳುತ್ತಿರುವುದು ಇದರ ಹತ್ತು ಪಟ್ಟು, ನೂರು ಪಟ್ಟು ಇರಬಹುದು.

ಚುನಾವಣೆಗೆ ನಿಲ್ಲುವ ಒಬ್ಬ ಅಭ್ಯರ್ಥಿ ಪ್ರಚಾರಕ್ಕೆ ಎಷ್ಟು ಹಣ ವೆಚ್ಚ ಮಾಡಬಹುದು? ಇದಕ್ಕೆ ಮಿತಿಯನ್ನೂ ಚುನಾವಣಾ ಆಯೋಗವೇ ವಿಧಿಸಿದೆ. ಆದರೆ ಎಂದಾದರೂ ಈ ಮಿತಿ ಪಾಲನೆಯಾದದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾದದ್ದು ಇದೆಯೇ? ಇಲ್ಲವೇ ಇಲ್ಲ ಎನ್ನಬಹುದು. ಇದು ಹೀಗೇ ಮುಂದುವರಿ ದರೆ ಚುನಾವಣೆ ವ್ಯವಸ್ಥೆಯೇ ನೆಲಕಚ್ಚಲಿದೆ. ಚುನಾವಣೆ ಎಂದರೇ ಹಣ ಹಂಚಿಕೆ, ಅಕ್ರಮ ಎಂಬ ಚಿತ್ರಣ ಕಾಯಂ ಆಗಲಿದೆ. ಚುನಾವಣೆ ಅಕ್ರಮಗಳನ್ನು ತಡೆಯದಿದ್ದರೆ ಪ್ರಜಾಪ್ರಭುತ್ವ ಸಶಕ್ತವಾಗಿ ಉಳಿಯಲು ಸಾಧ್ಯವಿಲ್ಲ. ಮತದಾರರು ಕೂಡ ಈ ವಿಷಯದಲ್ಲಿ ಜಾಗೃತರಾಗಬೇಕು.

Leave a Reply

Your email address will not be published. Required fields are marked *

error: Content is protected !!