Tuesday, 14th May 2024

ಪಾಠ ಕಲಿಯದ ಪಾಕಿಸ್ತಾನ

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಾಕಷ್ಟು ಬಾರಿ ಮುಖಭಂಗವಾಗಿದ್ದರೂ, ಜಾಗತಿಕ ಸಮುದಾಯದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೂ, ಅಷ್ಟೇಕೆ ರಾಜಕೀಯ ಕಿತ್ತಾಟಗಳಿಂದಾಗಿ ಸ್ವತಃ ಅರಾಜಕತೆಯ ಕೂಪವಾಗಿದ್ದರೂ ಪಾಕಿಸ್ತಾನಕ್ಕೆ ಇನ್ನೂ ಬುದ್ಧಿ ಬಂದಂತಿಲ್ಲ. ಭಾರತದ ಮೇಲೆ ವಕ್ರನೋಟ ಬೀರುವ ತನ್ನ ಚಾಳಿಯನ್ನು ಈ ‘ಮಗ್ಗುಲಮುಳ್ಳು’ ಇನ್ನೂ ಕೈಬಿಟ್ಟಂತಿಲ್ಲ.

ರಾಮೇಶ್ವರಂ ಕೆಫೆ ಸ್ಪೋಟದ ಹಿಂದೆ ಪಾಕಿಸ್ತಾನದ ಪಿತೂರಿಯೂ ಇದೆ ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಮಾತು ಹೇಳಬೇಕಾಗಿ ಬಂದಿದೆ. ಬೆಂಗಳೂರಿನ ವೈಟ್‌ಫೀಲ್ಡ್ ಬಡಾವಣೆಯ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಸಂಬಂಧದ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಗೆ, ಸೋಟದ ಆರೋಪಿಗಳು ಪಾಕಿಸ್ತಾನದ ಜತೆ ನಂಟುಹೊಂದಿರುವುದರ ಸುಳಿವು ಸಿಕ್ಕಿದೆ ಎನ್ನಲಾಗಿದೆ. ಒಂದೊಮ್ಮೆ ಇದು
ನಿಜವೆಂದು ಸಾಬೀತಾದಲ್ಲಿ, ಕೆಟ್ಟಮೇಲೂ ಬುದ್ಧಿ ಕಲಿಯದ ಪಾಕಿಸ್ತಾನದ ಚಾಳಿಗೆ ಮತ್ತೊಂದು ಪುರಾವೆ ಸಿಕ್ಕಂತಾಗುತ್ತದೆ. ಹತ್ತು ವರ್ಷಗಳಿಗೂ ಹಿಂದಿನ
ಪರಿಸ್ಥಿತಿಯನ್ನು ಒಮ್ಮೆ ನೆನಪಿಸಿಕೊಳ್ಳಿ.

ಗಡಿನಿಯಂತ್ರಣ ರೇಖೆಗುಂಟ ಇನ್ನಿಲ್ಲದಂತೆ ಕಿತಾಪತಿ ಮಾಡುವುದು, ಗಡಿಭಾಗದಲ್ಲಿ ಉಗ್ರರನ್ನು ಭಾರತದೊಳಗೆ ನುಸುಳಿಸಿ ವಿಧ್ವಂಸಕ ಕೃತ್ಯಗಳನ್ನು ನಡೆಸುವುದು, ಜಮ್ಮು-ಕಾಶ್ಮೀರದ ನಿರುದ್ಯೋಗಿ ಯುವಜನರ ಕೈಗೆ ಕಲ್ಲುಗಳನ್ನಿತ್ತು ವ್ಯವಸ್ಥೆಯ ಮೇಲೆ ಅದನ್ನು ತೂರುವಂತೆ ಚಿತಾವಣೆ ನೀಡುವುದು ಹೀಗೆ ವಿವಿಧ ನೆಲೆಗಟ್ಟಿನ ಕುತ್ಸಿತ ಕಾರ್ಯಗಳನ್ನು ನಡೆಸುವುದೇ ಪಾಕಿಸ್ತಾನದ ದಿನಚರಿಯಾಗಿಬಿಟ್ಟಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಇವೆಲ್ಲಕ್ಕೂ ಲಗಾಮು ಬಿದ್ದು, ಪಾಕಿಸ್ತಾನವು ಭಾರತದ ವಿರುದ್ಧ ಸೊಲ್ಲೆತ್ತದಂಥ ಪರಿಸ್ಥಿತಿ ರೂಪುಗೊಂಡಿತ್ತು.

ಇಷ್ಟಾಗಿಯೂ, ‘ಹೀನಸುಳಿ ಬೋಳಿಸಿದರೆ ಹೋದೀತೇ?’ ಎಂಬ ಮಾತಿನಂತೆ ಪಾಕಿಸ್ತಾನ ಮತ್ತೊಮ್ಮೆ ಬಾಲ ಬಿಚ್ಚುತ್ತಿರುವಂತೆ ಕಾಣುತ್ತಿದೆ. ಕೆಫೆ ಬಾಂಬ್ ಸ್ಪೋಟದ ಆರೋಪಿಗಳು ಉಗ್ರ ಸಂಘಟನೆಯೊಂದರ ಜತೆಗೂ ನಂಟು ಹೊಂದಿದ್ದ ಆತಂಕಕಾರಿ ಮಾಹಿತಿಯು ತನಿಖಾದಳಕ್ಕೆ ಲಭ್ಯವಾಗಿದೆ ಎನ್ನಲಾ ಗಿದೆ. ಇದು ನಿಜಕ್ಕೂ ನಿರ್ಲಕ್ಷಿಸುವ ಸಂಗತಿಯಲ್ಲ. ಸ್ಪೋಟದ ಆರೋಪಿಗಳು/ಸಂಚುಗಾರರು ದೇಶದ ಮಿಕ್ಕ ಕಡೆಗಳಲ್ಲೂ ಇಂಥ ಕುಕೃತ್ಯಗಳಿಗೆ ಯೋಜಿ ಸಿದ್ದಿರುವ ಸಾಧ್ಯತೆಯಿದೆ. ಅದು ಈಗ ಬಯಲಾಗಬೇಕು.

Leave a Reply

Your email address will not be published. Required fields are marked *

error: Content is protected !!