ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಸಾಲಿನ ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕು ಗೆಲುವು ದಾಖಲಿಸಿದ್ದ ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಸೋಲು ಕಂಡಿದೆ.
ಜೈಪುರದಲ್ಲಿ ರಾಜಸ್ಥಾನ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 197 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್, ಪಂದ್ಯದ ಕೊನೆಯ ಇನಿಂಗ್ಸ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಮೊದಲ ಮೂರು ಓವರ್‌ಗಳಲ್ಲಿ ನಿಖರ ದಾಳಿ ಸಂಘಟಿಸಿದ ರಾಜಸ್ಥಾನದ ವೇಗದ ಬೌಲರ್ ಕುಲದೀಪ್ ಸೆನ್, ತಮ್ಮ ಅಂತಿಮ ಓವರ್‌ನಲ್ಲಿ 20 ರನ್ ಬಿಟ್ಟುಕೊಡುವ ಮೂಲಕ ದುಬಾರಿ ಎನಿಸಿದರು. ಆ ಮೂಲಕ ಹೀರೊದಿಂದ ವಿಲನ್ ಆದರು. ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಬಾರಿ ಆಡಿದ ಸೆನ್, ಸಾಯಿ ಸುದರ್ಶನ್ (35), ಮ್ಯಾಥ್ಯೂ ವೇಡ್ (4) ಹಾಗೂ ಅಭಿನವ್ ಮನೋಹರ್ (1) ವಿಕೆಟ್‌ಗಳನ್ನು ಗಳಿಸಿದರು. ಆದರೂ ಅಂತಿಮವಾಗಿ ನಾಲ್ಕು ಓವರ್‌ಗಳಲ್ಲಿ 41 ರನ್ ಬಿಟ್ಟುಕೊಟ್ಟರು.
ಮತ್ತೊಂದೆಡೆ ಟ್ರೆಂಟ್ ಬೌಲ್ಟ್‌ಗೆ ಕೇವಲ ಎರಡು ಓವರ್ ಮಾತ್ರ ನೀಡಿರುವುದು ನಾಯಕ ಸಂಜು ಸ್ಯಾಮ್ಸನ್ ಟೀಕೆಗೆ ಗುರಿಯಾಗಿದ್ದಾರೆ.
ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ರಶೀದ್ ಖಾನ್, ರಾಜಸ್ಥಾನಕ್ಕೆ ಬಲವಾದ ಪೆಟ್ಟು ನೀಡಿದರು. ಮೊದಲು ನಾಲ್ಕು ಓವರ್‌ನಲ್ಲಿ 18 ರನ್ ಮಾತ್ರ ಬಿಟ್ಟುಕೊಟ್ಟಿದ್ದ ರಶೀದ್, ಜೋಸ್ ಬಟ್ಲರ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಬಳಿಕ ನಿರ್ಣಾಯಕ ಹಂತದಲ್ಲಿ ಬ್ಯಾಟ್ ಬೀಸಿದ ರಶೀದ್, ಕೇವಲ 11 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿ (4 ಬೌಂಡರಿ) ತಂಡಕ್ಕೆ ಗೆಲುವು ಒದಗಿಸಿಕೊಟ್ಟರು.
ಸಾಯಿ ಸುದರ್ಶನ್ (35), ರಾಹುಲ್ ತೆವಾಟಿಯಾ (22) ಹಾಗೂ ಶಾರೂಕ್ ಖಾನ್ (14) ಸಹ ಉಪಯುಕ್ತ ಕಾಣಿಕೆ ನೀಡಿದರು.