Sunday, 15th December 2024

ಗೆಲ್ಲಲೇಬೇಕಾದ ಪಂದ್ಯಕ್ಕೆ ಲಕ್ನೋ- ಡೆಲ್ಲಿ ತಂಡ ಸಿದ್ದ

ನವದೆಹಲಿ:  ಕ್ನೋ ಮತ್ತು ಡೆಲ್ಲಿ ತಂಡಗಳು ಮಂಗಳವಾರ “ಕೋಟ್ಲಾ’ದಲ್ಲಿ ಮಸ್ಟ್‌ ವಿನ್‌ ಗೇಮ್‌ ಒಂದಕ್ಕೆ ಅಣಿಯಾಗಿವೆ.

ಟಿ20 ವಿಶ್ವಕಪ್‌ ತಂಡ ದಿಂದ ಬೇರ್ಪಟ್ಟ ಆಘಾತದ ನಡುವೆಯೇ ಹೈದರಾ ಬಾದ್‌ ವಿರುದ್ಧ ಅನುಭವಿಸಿದ 10 ವಿಕೆಟ್‌ ಸೋಲು ರಾಹುಲ್‌ ಪಾಲಿಗೆ ದೊಡ್ಡ ಗಂಡಾಂತರ ತಂದಿದೆ. ಮಾಲಕರು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾದ ಘಟನೆ ರಾಹುಲ್‌ ಅವರನ್ನು ಬಹಳಷ್ಟು ಕುಗ್ಗಿಸಿದೆ. ಇದನ್ನೆಲ್ಲ ಮೀರಿ ನಿಂತು ಮತ್ತೆ ಲಕ್ನೋವನ್ನು ಗೆಲುವಿನ ಹಳಿಗೆ ಏರಿಸುವ ಮಹತ್ತರ ಜವಾಬ್ದಾರಿ ರಾಹುಲ್‌ ಮುಂದಿದೆ.

ಡೆಲ್ಲಿ ಬಳಿಕ ಮುಂಬೈಯನ್ನು ಎದುರಿಸಲಿರುವ ಲಕ್ನೋ, ಇವೆರಡನ್ನೂ ಗೆದ್ದರೆ 4ನೇ ಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ಇದೆ. ಲಕ್ನೋ ಸದ್ಯ 12 ಪಂದ್ಯಗಳಿಂದ 12 ಅಂಕ ಗಳಿಸಿದ್ದು, 7ನೇ ಸ್ಥಾನದಲ್ಲಿದೆ. ಆದರೆ ರನ್‌ರೇಟ್‌ ಮೈನಸ್‌ನಲ್ಲಿದೆ.

ಕ್ವಿಂಟನ್‌ ಡಿ ಕಾಕ್‌ ಕಳಪೆ ಫಾರ್ಮ್ ಎನ್ನುವುದು ಲಕ್ನೋದ ಪವರ್‌ ಪ್ಲೇ ಆಟಕ್ಕೆ ಭಾರೀ ಹಿನ್ನಡೆಯಾಗಿದೆ. ವೇಗಿ ಮಾಯಾಂಕ್‌ ಯಾದವ್‌ ಬೇರ್ಪಟ್ಟದ್ದು ದೊಡ್ಡ ನಷ್ಟ.

ಒಂದು ದಿನದ ಹಿಂದಷ್ಟೇ ಆರ್‌ಸಿಬಿ ಕೈಯಲ್ಲಿ 47 ರನ್ನುಗಳಿಂದ ಆಘಾತ ಅನುಭವಿಸಿದ ಡೆಲ್ಲಿಯನ್ನು ಮರಳಿ ರಿಷಭ್‌ ಪಂತ್‌ ಮುನ್ನಡೆಸಲಿದ್ದಾರೆ.