Friday, 13th December 2024

‘ಭೂತೆರ ಕುಣಿತ’ದ ಕಲಾವಿದ ನರಸಪ್ಪಾರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೀದರ್‌: ತಾಲ್ಲೂಕಿನ ಮಾಳೆಗಾಂವ್‌ ಗ್ರಾಮದ ‘ಭೂತೆರ ಕುಣಿತ’ದ ಕಲಾವಿದ, ಲಿಂಗತ್ವ ಅಲ್ಪಸಂಖ್ಯಾತ ನರಸಪ್ಪಾ (65) ಅವರಿಗೆ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

ಜಾನಪದ ಕ್ಷೇತ್ರ ವಿಭಾಗದಲ್ಲಿ ನರಸಪ್ಪಾ ಅವರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ. 1958ರಲ್ಲಿ ಜೂನ್‌ 1ರಂದು ಜನಿಸಿರುವ ನರಸಪ್ಪಾ ಅವರು 40 ವರ್ಷಗಳಿಂದ ಕಲಾ ಸೇವೆ ಮಾಡುತ್ತಿದ್ದಾರೆ.

ತಲೆಯ ಮೇಲೆ ಕಲಶ ಹೊತ್ತುಕೊಂಡು ದೇವಿಯ ಆರಾಧನೆಯಲ್ಲಿ ಮೈಮರೆತು ಹೆಜ್ಜೆ ಹಾಕುತ್ತಾರೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶಗಳಲ್ಲೂ ಕಲೆಯ ಛಾಪು ಮೂಡಿಸಿದ್ದಾರೆ.

ಪ್ರಶಸ್ತಿ ಒಲಿದು ಬಂದ ವಿಷಯ ಕೇಳಿ ಅಚ್ಚರಿ ಪಟ್ಟ ಅವರು, ‘ನಮ್ಮಂತಹವರಿಗೂ ಸರ್ಕಾರ ಗುರುತಿಸಿದ್ದಕ್ಕೆ ಖುಷಿಯಾಗಿದೆ. ಇದನ್ನು ದೇವಿಯ ಆಶೀರ್ವಾದವೆಂದು ಸ್ವೀಕರಿಸುವೆ’ ಎಂದು ಬೀದರ್‌ನಿಂದ ಬೆಂಗಳೂರಿಗೆ ಸಾಮಾನ್ಯ ದರ್ಜೆಯ ರೈಲಿನಲ್ಲಿ ಪ್ರಯಾಣಿಸುತ್ತ ಮಂಗಳವಾರ ಮಾತನಾಡಿ ದರು.