Saturday, 23rd November 2024

ಮೊರ್ಬಿ ಪಟ್ಟಣಕ್ಕೆ ಇಂದು ಪ್ರಧಾನಿ ಮೋದಿ ಭೇಟಿ

ಮೊರ್ಬಿ: ತೂಗುಸೇತುವೆ ದುರಂತ ಸಂಭವಿಸಿದ ಗುಜರಾತ್‌ನ ಮೊರ್ಬಿ ಪಟ್ಟಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ನೀಡಲಿದ್ದಾರೆ.

ಮಧ್ಯಾಹ್ನ 1ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೊರ್ಬಿಗೆ ಭೇಟಿ ನೀಡಲಿದ್ದಾರೆ ಎಂದು ಗುಜರಾತ್‌ ಮುಖ್ಯಮಂತ್ರಿ ಕಚೇರಿ ಟ್ವೀಟ್‌ ಮಾಡಿದೆ.

ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ ಭಾನುವಾರ ಸಂಜೆ ಮುರಿದು ಬಿದ್ದಿತ್ತು. ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ ಸಂಜೆಯ ವೇಳೆಗೆ 136ಕ್ಕೆ ಏರಿಕೆಯಾಗಿದೆ. ನಾಪತ್ತೆಯಾಗಿರುವವರ ಶೋಧಕಾರ್ಯ ಮುಂದುವರಿದಿದೆ.

ಈ ಸಂಬಂಧ ಮೊರ್ಬಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ರಾಜ್ಯ ಸರ್ಕಾರವೂ ತನಿಖಾ ತಂಡವನ್ನು ರಚಿಸಿದೆ.

ಈವರೆಗೆ ಒಟ್ಟು 136 ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಮೃತರಲ್ಲಿ 50 ಮಕ್ಕಳು ಮತ್ತು 40 ಮಹಿಳೆಯರು ಸೇರಿದ್ದಾರೆ. ಒಟ್ಟು 170 ಜನರನ್ನು ರಕ್ಷಿಸಲಾಗಿದೆ. ಅವರಿಗೆ ಮೊರ್ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡ ಹಲವರು ಮನೆಗೆ ಮರಳಿದ್ದಾರೆ. ಅವಘಡದಲ್ಲಿ ಇನ್ನೂ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೊರ್ಬಿ ಜಿಲ್ಲಾಡಳಿತ ಮಾಹಿತಿ ನೀಡಿದೆ.