ಹಿಂದಿರುಗಿ ನೋಡಿದಾಗ
ಅಂಗರಚನಾ ವಿಜ್ಞಾನದ ತ್ರಿಮೂರ್ತಿಗಳು ಎಂದು ಪ್ರಸಿದ್ಧರಾದವರು ಬಾರ್ಥಲೊಮಿಯೊ ಯುಸ್ಟಾಷಿ, ಆಂಡ್ರಿಯಸ್ ವೆಸಾಲಿ ಯಸ್ ಮತ್ತು ಗೇಬ್ರಿಯಲ್ ಫ್ಯಾಲೋಪಿಯೊ. ಈ ಪೈಕಿ ಗೇಬ್ರಿಯಲ್ ಫ್ಯಾಲೋಪಿಯೊ (1523-1562) 16ನೇ ಶತಮಾನದ ಇಟಲಿ ಯಲ್ಲಿ ಬಾಳಿದ ಪ್ರತಿಭಾವಂತ.
ಜನನ ಇಟಲಿಯ ಮೊಡೇನಾದಲ್ಲಿ. ತಂದೆ ಜೆರೋನೀಮೋ, ತಾಯಿ ಕ್ಯಾಥರೀನ ಫ್ಯಾಲೋಪಿಯೊ. ಬಾಲ್ಯದಲ್ಲಿ ಗ್ರೀಕ್ -ರೋಮನ್ ಭಾಷೆಯಲ್ಲಿ ಪಾಂಡಿತ್ಯ ಪಡೆದು, ಆ ಭಾಷೆಗಳ ಸಾಹಿತ್ಯವನ್ನು ಕಲಿತ. ಆದರೆ ತಂದೆಯ ಹಠಾತ್ ಸಾವಿನಿಂದಾಗಿ ಅವನ ವಿದ್ಯಾಭ್ಯಾಸ ಮೊಟಕಾಯಿತು. ಹಣಕಾಸಿನ ತೊಂದರೆ ತೀವ್ರವಾಗಿ ಚರ್ಚನ್ನು ಸೇರಿ 1542ರಲ್ಲಿ ಪಾದ್ರಿಯಾದ. ಆರ್ಥಿಕಸ್ಥಿತಿ ಸ್ವಲ್ಪ ಸುಧಾರಿಸಿತು. ಕೂಡಲೇ ವೈದ್ಯಕೀಯ ಶಿಕ್ಷಣಕ್ಕೆ ಸೇರಿದ. ಮೊಡೇನಾದಲ್ಲಿ ನಿಕೋಲೊ ಮಶೆಲ್ಲರ ಮಾರ್ಗದರ್ಶನದಲ್ಲಿ ಶವ ವಿಚ್ಛೇದನದ ಕೌಶಲ ಕಲಿತ.
ನಂತರ ಪಡುವ ವಿಶ್ವವಿದ್ಯಾಲಯದಲ್ಲಿ ಜಿಯೋವನ್ನಿ ಬ್ಯಾಟಿಸ್ಟ ಡಿ ಮೊಂಟೆ ಮತ್ತು ಮ್ಯಾಟಿಯೋ ರಿಯಾಲ್ಡೊ ಕೊಲೊಂಬೊ ಬಳಿ ಶಿಕ್ಷಣ ಮುಂದುವರಿಸಿದ. 1548ರಲ್ಲಿ ಫೆರಾರಕ್ಕೆ ತೆರಳಿ ಅಲ್ಲಿ ಆಂಟೋನಿಯೊ ಮುಸ ಬ್ರಾಸೋವೋಲ ಮತ್ತು ಜಿಯಾಂಬ್ಯಾ ಟಿಸ್ಟ ಕೆನಾನೋ ಬಳಿ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದ.
1548-1551ರವರೆಗೆ ಪೀಸ ವಿಶ್ವವಿದ್ಯಾಲಯದಲ್ಲಿ ಅಂಗರಚನಾ ವಿಜ್ಞಾನದಲ್ಲಿ ಪ್ರಾಚಾರ್ಯನಾಗಿ ಕೆಲಸ ಮಾಡಿದ ಫ್ಯಾಲೋ ಪಿಯೊ, ಜೀವಂತ ಮನುಷ್ಯರ ಛೇದನ ನಡೆಸಿದ ಆಪಾದನೆಗೆ ತುತ್ತಾದ. ಹೀಗಾಗಿ ಆತ ಪೀಸ ವಿವಿಯನ್ನು ತೊರೆದು ಫ್ಲಾರೆನ್ಸ್ ನಗರಕ್ಕೆ ಬಂದು ಅಲ್ಲಿದ್ದ ಪ್ರಾಣಿ ಸಂಗ್ರಹಾಲಯದಲ್ಲಿ ಕೆಲಸ ಮಾಡಿದ. ಈ ಅವಧಿಯಲ್ಲಿ ಅವನು ಮೃತ ಸಿಂಹ ವೊಂದರ ಶರೀರಛೇದನ ಮಾಡಿ, ‘ಸಿಂಹದ ಮೂಳೆಗಳು ಘನವಾಗಿರುತ್ತವೆ. ಅವುಗಳಲ್ಲಿ ಅಸ್ಥಿಮಜ್ಜೆಯಿರುವುದಿಲ್ಲ’ ಎಂಬ ಅರಿಸ್ಟಾಟಲ್ ಹೇಳಿಕೆಯನ್ನು ತಪ್ಪೆಂದು ನಿರೂಪಿಸಿದ.
ಪಡುವ ವಿ.ವಿ.ಯಲ್ಲಿ ಮ್ಯಾಟಿಯೊ ರಿಯಾಲ್ಡೊ ಕೊಲೊಂಬೊ ನಿವೃತ್ತನಾದ ಮೇಲೆ ಆ ಸ್ಥಾನಕ್ಕೆ ಫ್ಯಾಲೋಪಿಯೊ ಆಯ್ಕೆ ಯಾದ. ಅತ್ಯಲ್ಪ ಕಾಲದಲ್ಲಿ ಫ್ಯಾಲೋಪಿಯೊ ನಡೆಸುತ್ತಿದ್ದ ಛೇದನ ಹಾಗೂ ಉಪನ್ಯಾಸಗಳು ಯುರೋಪಿನಲ್ಲಿ ಪ್ರಸಿದ್ಧವಾದವು. ದೂರದ ಊರುಗಳ ವಿದ್ಯಾರ್ಥಿಗಳು ಅವನ ಬಳಿ ಅಂಗರಚನಾ ವಿಜ್ಞಾನವನ್ನು ಕಲಿಯಲಾರಂಭಿಸಿದರು. ಕ್ಷಯಕ್ಕೆ ತುತ್ತಾಗಿ ಅಕಾಲ ಸಾವನ್ನಪ್ಪುವವರಿಗೂ ಫ್ಯಾಲೋಪಿಯೊ ಪ್ರಾಚಾರ್ಯನಾಗೇ ಮುಂದುವರಿದ.
ಅಂಗರಚನಾ ವಿಜ್ಞಾನದಲ್ಲಿ ಪ್ರತ್ಯಾಕ್ಷಾನುಭವಕ್ಕೆ ಫ್ಯಾಲೋಪಿಯೊ ಆದ್ಯತೆ ನೀಡಿದ. ಗ್ಯಾಲನ್ ಮತ್ತು ವೆಸಾಲಿಯಸ್ ಹೇಳಿದ ರೆಂದ ಮಾತ್ರಕ್ಕೆ ಅವನು ಒಪ್ಪುತ್ತಿರಲಿಲ್ಲ. ಪ್ರತಿ ಅಂಶವನ್ನೂ ಸ್ವಯಂ ಅಧ್ಯಯನ ಮಾಡುತ್ತಿದ್ದ. ಭ್ರೂಣ ವಿಜ್ಞಾನಕ್ಕೆ ಶ್ರೀಕಾರ ಹಾಕಿದ ಫ್ಯಾಲೋಪಿಯೊ, ಮನುಷ್ಯನ ಭ್ರೂಣಾವಸ್ಥೆಯಿಂದ ಆರಂಭಿಸಿ, ನವಜಾತ ಶಿಶು, ಎಲ್ಲ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರ ಕಳೇಬರವನ್ನು ಛೇದಿಸಿ, ಅವನ್ನು ವಯಸ್ಕರ ದೇಹದೊಡನೆ ಹೋಲಿಸಿ ತುಲನಾತ್ಮಕ ಅಧ್ಯಯನ ನಡೆಸಿದ.
ಈ ಅಧ್ಯಯನ ವಿಧಾನ ಹೈರೋನಿಮಸ್ ಫ್ಯಾಬ್ರೀಶಿಯಸ್ ಅಬ್ ಅಕ್ವಾಪೆಂಡೆಂಟ್ ಎಂಬ ವಿದ್ಯಾರ್ಥಿಯನ್ನು ಅತೀವವಾಗಿ ಪ್ರಭಾವಿಸಿತು. ಅವನು ಫ್ಯಾಲೋಪಿಯೊ ಹಾಕಿಕೊಟ್ಟ ಮಾರ್ಗದಲ್ಲೇ ನಡೆದು, ಮಾನವ ಭ್ರೂಣ ಅಭಿವರ್ಧನೆಯ ಬಗ್ಗೆ ವಿಸ್ತೃತ
ಅಧ್ಯಯನ ನಡೆಸಿ ಮಾನವ ಭ್ರೂಣವಿಜ್ಞಾನದ ಪಿತಾಮಹ ಎಂಬ ಅಭಿದಾನಕ್ಕೆ ಪಾತ್ರನಾದ. 1561ರಲ್ಲಿ ‘ಅಬ್ಸರ್ವೇಷನಿಸ್ ಅನಟಾಮಿಕೆ’ ಪುಸ್ತಕವನ್ನು ಫ್ಯಾಲೋಪಿಯೊ ಪ್ರಕಟಿಸಿದ.
ವಾಸ್ತವದಲ್ಲಿ ಇದು ಪಠ್ಯ ಪುಸ್ತಕದ ಸ್ವರೂಪದಲ್ಲಿರದೆ ಟಿಪ್ಪಣಿಗಳಿಂದ ಕೂಡಿತ್ತು. ಫ್ಯಾಲೋಪಿಯೊ ಅಂಗರಚನಾ ಅಧ್ಯಯನ ನಡೆಸುವಾಗ ಗ್ಯಾಲನ್ ಮತ್ತು ವೆಸಾಲಿಯಸ್ ಬರಹಗಳನ್ನು ಮುಂದಿಟ್ಟುಕೊಂಡು, ಆ ಬರಹಗಳ ಸತ್ಯಾಸತ್ಯತೆಯನ್ನು ತುಲನಾ ತ್ಮಕವಾಗಿ ವಿಮರ್ಶಿಸಿದ. ಗ್ಯಾಲನ್ ಮಾಡಿದ್ದ ತಪ್ಪುಗಳನ್ನೆಲ್ಲ ಗುರುತಿಸಿದ. ಹಾಗೆಯೇ ವೆಸಾಲಿಯಸ್ ತನ್ನ ಗ್ರಂಥದಲ್ಲಿ ಮಾಡಿರ ಬಹುದಾದ ತಪ್ಪುಗಳನ್ನು ಮತ್ತು ಆತ ಕೈಬಿಟ್ಟಿದ್ದ ಬಹುಮುಖ್ಯ ವಿವರಗಳನ್ನೆಲ್ಲ ಸಂಗ್ರಹಿಸಿ ಟಿಪ್ಪಣಿ ಬರೆದ.
ಫ್ಯಾಲೋಪಿಯೊ ಟಿಪ್ಪಣಿಗಳು ಎಷ್ಟು ನಿಖರವಾಗಿದ್ದವೆಂದರೆ, ಸ್ವಯಂ ವೆಸಾಲಿಯಸ್ ಈ ಪುಸ್ತಕವನ್ನು ವಿಶದವಾಗಿ ಅಧ್ಯಯನ ಮಾಡಿದ. ಫ್ಯಾಲೋಪಿಯೊ ತನಗಿಂತಲೂ ಹೆಚ್ಚಿನ ಹೊಸ ಅಂಗಗಳನ್ನು ಗುರುತಿಸಿ ಹೆಸರಿಸಿರುವುದನ್ನು ನೋಡಿದ, ಅವನ ಅಧ್ಯಯನವು ತನ್ನದಕ್ಕಿಂತ ನಿಖರವಾಗಿರುವುದನ್ನು ಮನಗಂಡ. ತನ್ನ ತಪ್ಪುಗಳನ್ನೂ, ಕೈಬಿಟ್ಟ ಮಾಹಿತಿಯನ್ನೂ ನಿಖರವಾಗಿ ಗುರುತಿಸಿದ ಫ್ಯಾಲೋಪಿಯೊನ ತೀಕ್ಷ್ಣಮತಿಯನ್ನು ಹೊಗಳಿ ೧೫೬೪ರಲ್ಲಿ ‘ಎಕ್ಸಾಮೆನ್ ಆನ್ ಫ್ಯಾಲೋಪಿಯೊ’ ಎನ್ನುವ ಪುಸ್ತಕ ಬರೆದ. ಆದರೆ ಅದನ್ನು ನೋಡಲು ಫ್ಯಾಲೋಪಿಯೊ ಬದುಕಿರಲಿಲ್ಲ.
ಅನಟಾಮಿಕೆ ಕೃತಿಯಲ್ಲಿ ಫ್ಯಾಲೋಪಿಯೊ ಗುರುತು ಹಿಡಿದ ಮಾನವ ಶರೀರದ ಹೊಸ ಅಂಗಗಳ ವಿವರಗಳಲ್ಲಿ ಕೆಲವನ್ನು
ಗಮನಿಸೋಣ. ಫ್ಯಾಲೋಪಿಯೊ ಪ್ರಧಾನವಾಗಿ ಮನುಷ್ಯನ ಶರೀರ ರಚನೆಯನ್ನು ಅದುವರೆಗೂ ಯಾರೂ ನಡೆಸದಷ್ಟು ಆಳವಾಗಿ ಅಧ್ಯಯನ ಮಾಡಿದ. ನವಜಾತ ಶಿಶುವಿನಲ್ಲಿ ಮೂಳೆಗಳು ಬಲಿತಿರುವುದಿಲ್ಲ. ಅವು ಕಾಲಕ್ರಮೇಣ ಬಲಿಯಲಾ ರಂಭಿಸುತ್ತವೆ. ಹಾಗಾಗಿ ಹಿಂದಲೆಯ ಮೂಳೆ, ಎದೆಮೂಳೆ ಹಾಗೂ ಅನಾಮಿಕಾಸ್ಥಿಗಳಲ್ಲಿ ನಡೆಯುವ ಅಸ್ಥೀಭವನ (ಆಸಿಫಿ ಕೇಶನ್) ಪ್ರಕ್ರಿಯೆಯನ್ನು ಮೊದಲ ಬಾರಿಗೆ ಗಮನಿಸಿ ವಿವರಿಸಿದ.
ನವಜಾತ ಶಿಶುವಿನಲ್ಲಿ ಮೃದ್ವಸ್ಥಿಗಳ ರೂಪದಲ್ಲಿರುವ ಎಳೇ ಮೂಳೆಗಳಲ್ಲಿ ಖನಿಜಗಳ ಸಂಗ್ರಹ ಆರಂಭವಾಗಿ, ಮೂಳೆಗಳು ಕ್ರಮೇಣ ಬಲಿಯಲಾರಂಭಿಸುತ್ತವೆ. ಈ ಪ್ರಕ್ರಿಯೆಯೇ ಅಸ್ಥೀಭವನ. ಶಿಶುಗಳಲ್ಲಿ ಹಲ್ಲುಗಳು ಬೆಳೆಯುವ ಬಗ್ಗೆ ಅತ್ಯಂತ ನಿಖರ ಹಾಗೂ ಆಳ ಅಧ್ಯಯನವನ್ನು ನಡೆಸಿದ ಫ್ಯಾಲೋಪಿಯೊ, ದವಡೆಗಳಲ್ಲಿ ದಂತಾಂಕುರ ಬೆಳೆದು ಹಾಲುಹಲ್ಲುಗಳಾಗುವ ಪರಿ
ಹಾಗೂ ಹಾಲು ಹಲ್ಲುಗಳು ಉದುರಿ, ಅವುಗಳ ಸ್ಥಳದಲ್ಲಿ ಶಾಶ್ವತ ಹಲ್ಲುಗಳು ಬೆಳೆಯುವ ಸೊಗಸನ್ನು ವಿವರಿಸಿದ.
ಅದುವರೆಗೂ ಹಲ್ಲು ಮತ್ತು ಮೂಳೆಗಳು ಒಂದೇ ಮೂಲದಿಂದ ಹುಟ್ಟುತ್ತವೆ ಎಂದು ವಿಜ್ಞಾನ ನಂಬಿತ್ತು. ಅವು ಭಿನ್ನ ಮೂಲ ದಿಂದ ಹುಟ್ಟುತ್ತವೆ ಎಂಬುದನ್ನು ಫ್ಯಾಲೋಪಿಯೊ ತೋರಿಸಿದ. ಮನುಷ್ಯನ ಮುಖದಲ್ಲಿರುವ ಬೆಣೆರೂಪಿ ಮೂಳೆ (ಸೀನಾಯ್ಡ್), ಜಾಲರಿ ಮೂಳೆ (ಎಥ್ಮಾಯ್ಡ್), ಅಶ್ರು ಮೂಳೆ (ಲ್ಯಾಕ್ರೈಮಲ್ ಬೋನ್) ಹಾಗೂ ಅಶ್ರು ಕಾಲುವೆಯನ್ನು (ಲ್ಯಾಕ್ರೈಮಲ್ ಕೆನಾಲ್) ಗುರುತಿಸಿದ.
ಮಿದುಳಿನಿಂದ ಹೊರಡುವ ೩, ೪, ೫, ೮, ೯, ೧೧, ೧೨ನೆಯ ಕಪಾಲ ನರಗಳನ್ನು ಗುರುತಿಸಿದ. ಮುಖದ ನರದ ವಿವರಣೆ ನೀಡಿ, ಅದು ಸಾಗುವ ನಳಿಕೆಯನ್ನು ವಿವರಿಸಿ, ‘ಬೆಲ್ಸ್ ಪಾಲ್ಸಿ’ ತಲೆದೋರಲು ಈ ನರದ ಅನಾರೋಗ್ಯವೇ ಕಾರಣವೆಂದ. ಕಣ್ಣುರೆಪ್ಪೆಯ ಚಲನೆಯನ್ನು ನಿಯಂತ್ರಿಸುವ ಸ್ನಾಯುವನ್ನು ಗುರುತಿಸುವುದರ ಜತೆಗೆ ತಲೆ ಮತ್ತು ಕುತ್ತಿಗೆಯ ಸ್ನಾಯು, ಕಿವಿ ಮತ್ತು ದವಡೆಯ ಸ್ನಾಯು, ಮೃದು ಮತ್ತು ಗಡಸು ತಾಲುವಿನ ಸ್ನಾಯು, ಪಕ್ಕೆಲುಬುಗಳ ನಡುವಿನ ಸ್ನಾಯು, ಉದರದಲ್ಲಿರುವ ಪಿರಮಿಡಾಲಿಸ್ ಇತ್ಯಾದಿ ಸ್ನಾಯುಗಳ ಉಗಮಸ್ಥಾನ, ಗಮನಸ್ಥಾನ ಹಾಗೂ ಕಾರ್ಯಾದಿಗಳನ್ನು ಗುರುತಿಸಿದ.
ಸಣ್ಣಕರುಳಿನಲ್ಲಿರುವ ಹೀರುಲೋಮಗಳನ್ನು ವರ್ಣಿಸಿದ. ಸಣ್ಣಕರುಳು ಹಾಗೂ ದೊಡ್ಡಕರುಳಗಳ ಸಂಧಿಸ್ಥಾನದಲ್ಲಿರುವ ಐಲಿಯೋಸೀಕಲ್ ಕವಾಟದ ಪ್ರಾಮುಖವನ್ನು ತಿಳಿಸಿಕೊಟ್ಟ. ಇದನ್ನು ‘ಫ್ಯಾಲೋಪಿಯನ್ ಐಲಿಯೊ-ಸೀಕಲ್ ವಾಲ್ವ್’ ಎಂದೂ ಕರೆಯುವುದುಂಟು. ಶ್ರವಣಾಂಗಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿದ ಫ್ಯಾಲೋಪಿಯೊ, ಕಿವಿಯಲ್ಲಿರುವ ಅಂಡ ಗವಾಕ್ಷಿ, ದುಂಡುಗವಾಕ್ಷಿ, ಅರೆಚಂದ್ರನಳಿಕೆ, ಕಾಕ್ಲಿಯ, ಸ್ಕೇಲಾ ವೆಸ್ಟಿಬ್ಯುಲೈ, ಸ್ಕೇಲಾ ಟಿಂಪಾನಿ, ಟಿಂಪ್ಯಾನಮ್ ಮುಂತಾದ ಭಾಗಗಳನ್ನು
ಪ್ರತ್ಯೇಕವಾಗಿ ಗುರುತಿಸಿದ.
ಮೂತ್ರಾಶಯದಲ್ಲಿ ೩ ಪದರಗಳಿವೆ ಹಾಗೂ ಉಂಗುರಸ್ನಾಯುವು ಮೂತ್ರವಿಸರ್ಜನೆಯನ್ನು ನಿಯಂತ್ರಿಸುತ್ತದೆ ಎನ್ನುವ ವಿವರ ಗಳನ್ನು ಮೊದಲ ಬಾರಿಗೆ ಗುರುತಿಸಿದ. ಮಹಿಳೆಯರಲ್ಲಿ ಭಗಾಂಕುರವೆಂಬ (ಕ್ಲೈಟೋರಿಸ್) ಅಂಗವಿರುವುದನ್ನು ಮೊದಲ
ಬಾರಿಗೆ ಕೊಲಂಬೊ ಗುರುತಿಸಿದನಾದರೂ, ಫ್ಯಾಲೋಪಿಯೊ ಅದರ ಸಂಪೂರ್ಣ ವಿವರ ನೀಡಿ, ಅದು ಪುರುಷನ ಶಿಶ್ನಕ್ಕೆ ಸಮನಾದ ಅಂಗವೆಂದ.
ಅದುವರೆಗೂ ಯೋನಿಗೆ ಒಂದು ಹೆಸರಿರಲಿಲ್ಲ. ಹಾಗಾಗಿ ಯೋನಿಗೆ ವೆಜೈನ ಎಂದು ನಾಮಕರಣ ಮಾಡಿದ. ಯೋನಿಪೊರೆ ಯನ್ನು ವರ್ಣಿಸಿದ. ಅಂಡಾಶಯ ಮತ್ತು ಗರ್ಭನಾಳಗಳನ್ನು ವಿಸ್ತೃತವಾಗಿ ವರ್ಣಿಸಿದ. ಇಂದು ಗರ್ಭನಾಳವನ್ನು ‘ಫ್ಯಾಲೋಪಿ ಯನ್ ನಾಳ’ ಎಂದು ಕರೆದು ಆತನಿಗೆ ಗೌರವ ಸಲ್ಲಿಸಿದ್ದೇವೆ. ಮಾಸು ಎನ್ನುವ ರಚನೆಯನ್ನು ಫ್ಯಾಲೋಪಿಯೊ ಗುರುತಿಸಿ, ಅದಕ್ಕೆ ಪ್ಲಾಸೆಂಟ ಎಂದು ನಾಮಕರಣ ಮಾಡಿದ.
ಸಂಭೋಗದ ವೇಳೆ ಶಿಶ್ನವು ಗರ್ಭಕೊರಳ ಮೂಲಕ ಗರ್ಭಾಶಯದೊಳಗೆ ಪ್ರವೇಶಿಸಿ, ವೀರ್ಯವನ್ನು ಸ್ಖಲಿಸುತ್ತದೆ ಎಂದು ಅಂದಿನ ದಿನಗಳಲ್ಲಿ ನಂಬಿದ್ದರು. ಆದರೆ ಶಿಶ್ನವು ಗರ್ಭಕೊರಳ ಬಾಯಿಯವರೆಗೆ ಮಾತ್ರ ತಲುಪಬಲ್ಲುದು ಎಂದು ಫ್ಯಾಲೋ ಪಿಯೊ ವಿವರಿಸಿದ. ಫ್ಯಾಲೋಪಿಯೊ ವೃತ್ತಿನಿರತ ನಾಗಿದ್ದ ಅವಧಿಯಲ್ಲಿ ‘ಸಿಫಿಲಿಸ್’ ಎಂಬ ಲೈಂಗಿಕ ರೋಗ ಯೂರೋಪಿನಲ್ಲಿ ವ್ಯಾಪಿಸಿತ್ತು. ಆಗ ‘ಡಿ ಮಾರ್ಬೋ ಗ್ಯಾಲಿಕೊ’ ಎಂಬ ಪುಸ್ತಕ ಪ್ರಕಟವಾಯಿತು.
‘ಫ್ರೆಂಚರ ರೋಗ’ ಎಂದು ಇದರರ್ಥ. ಈ ಲೈಂಗಿಕ ರೋಗವನ್ನು ತಡೆಗಟ್ಟಲು ಲಿನನ್ನಿಂದ ಒಂದು ಕಾಂಡಮ್ ರೂಪಿಸಿದ
ಫ್ಯಾಲೋಪಿಯೊ, ಅದನ್ನು ರಾಸಾಯನಿಕ ದ್ರಾವಣದಲ್ಲಿ ಮುಳುಗಿಸಿ ಒಣಗಿಸುತ್ತಿದ್ದ. ಈ ಒಣಗಿದ ಕಾಂಡಮ್ಮನ್ನು ಶಿಶ್ನಾಗ್ರದ ಮೇಲೆ ಧರಿಸುತ್ತಿದ್ದರು. ಇದು ಒಂದು ಪಟ್ಟಿಯ ಸಹಾಯದಿಂದ ಸ್ವಸ್ಥಾನದಲ್ಲಿರುತ್ತಿತ್ತು. ಈ ಕಾಂಡಮ್ ಜನಪ್ರಿಯವಾಯಿತು. ಪ್ಯಾಲೋಪಿಯೊ, ಈ ಕಾಂಡಮ್ಮಿನ ಪರಿಣಾಮವನ್ನು ಕುರಿತು 1100 ಪುರುಷರ ಮೇಲೆ ಈ ಕಾಂಡಮ್ ಪ್ರಯೋಗ ನಡೆಸಿದ. ಒಬ್ಬರಿಗೂ ಸಿಫಿಲಿಸ್ ಅಂಟಿಕೊಳ್ಳಲಿಲ್ಲ!
ಕೂಡಲೇ ಯುರೋಪಿನಲ್ಲಿ ಕಾಂಡಮ್ ಬಳಕೆ ಜನಪ್ರಿಯವಾಯಿತು (ಕಾಂಡಮ್ ಕಂಡುಹಿಡಿದ ಕೀರ್ತಿ ಇಮ್ಮಡಿ ಚಾರ್ಲ್ಸ್ ರಾಜನ ವೈದ್ಯನಾಗಿದ್ದ ಅರ್ಲ್ ಆಫ್ ಕಾಂಡಮ್ ಹೆಸರಿನಲ್ಲಿದೆ. ಕೆಲವು ದಾಖಲೆಗಳು ಈ ಹೆಸರಿನವ ಇರಲೇ ಇಲ್ಲ ಎನ್ನುತ್ತವೆ). ಫ್ಯಾಲೋ ಪಿಯೊ, ಸಿಫಿಲಿಸ್ ಕಾಯಿಲೆಯ ೨ನೇ ಹಂತದಲ್ಲಿ ಕಂಡುಬರುವ ಚರ್ಮಗುಬುಟುಗಳು ಮತ್ತು ಸಿಫಿಲಿಸ್ ಇಲ್ಲದೇ ಬರುವ ಚರ್ಮಗುಬುಟುಗಳ ನಡುವಿನ ವ್ಯತ್ಯಾಸವನ್ನು ಗಮನಿಸಿ ಇವನ್ನು ಪಾದರಸ ಸಂಯುಕ್ತಗಳಿಂದ ಗುಣಪಡಿಸಿದ. ಈ ಹಿನ್ನೆಲೆ ಯಲ್ಲಿ ಫ್ಯಾಲೋಪಿಯೊ ತನ್ನ ಕಾಲದ ಮಹಾನ್ ಲೈಂಗಿಕ ತಜ್ಞ ಎಂದೂ ಹೆಸರಾಗಿದ್ದ.
ತನ್ನ ಕಾಲದ ಮಹಾನ್ ಅಂಗರಚನಾ ವಿಜ್ಞಾನಿಯಾಗಿದ್ದ ಗೇಬ್ರಿಯಲ್ ಫ್ಯಾಲೋಪಿಯಸ್, ತಲೆ, ತಲೆಯ ಸ್ನಾಯುಗಳು, ಮಿದುಳು, ಮಿದುಳಿನ ನರಗಳಿಗೆ ಸಂಬಂಧಿಸಿ ಮಾಡಿದ ಅಧ್ಯಯನ ಹಾಗೂ ಸೀಜನನಾಂಗಗಳ ಬಗ್ಗೆ ಮೊದಲ ಬಾರಿಗೆ ನಡೆಸಿದ ಸಮಗ್ರ ಅಧ್ಯಯನದ ಕಾರಣ, ವೈದ್ಯವಿಜ್ಞಾನದ ಪ್ರಾತಃ ಸ್ಮರಣೀಯರಲ್ಲಿ ಒಬ್ಬನಾಗಿದ್ದಾನೆ. ಆದರೆ ದುರದೃಷ್ಟ ಮತ್ತು ಅವನ ಹಠಾತ್ ಸಾವು, ಅವನಿಗೆ ಸಲ್ಲಬೇಕಾದ ಸ್ಥಾನದಿಂದ ವಂಚಿತಗೊಳಿಸಿದವು ಎಂಬುದು ವಿಷಾದನೀಯ.