Wednesday, 30th October 2024

ಜಯದೇವ ಆಸ್ಪತ್ರೆ ಗಾಜು ಪುಡಿಪುಡಿ, ಪೀಠೋಪಕರಣ ಚಿಲ್ಲಾಪಿಲ್ಲಿ

ಬೆಂಗಳೂರು:
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅನ್ಸರ್ ಪಾಷ ಎಂಬುವರು ಸಾವನ್ನಪ್ಪಿದ್ದರಿಂದಾಗಿ ಆಕ್ರೋಶಗೊಂಡ ಸಂಬಂಧಿಕರು, ಜಯದೇವ ಆಸ್ಪತ್ರೆಯ ಗಾಜುಗಳನ್ನು ಒಡೆದು ಹಾಕಿದ್ದಾರೆ. ಪೀಠೋಪಕರಣಗಳನ್ನು ಚಿಲ್ಲಾಪಿಲ್ಲಿ ಮಾಡಿದ್ದಾರೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ತಿಲಕ್‌ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೂಳಿಸಿದ್ದಾರೆ. ‘ಅನ್ಸರ್ ಪಾಷ ಅವರಲ್ಲಿ ಆಗಾಗ ಎದೆನೋವು ಕಾಣಿಸಿಕೊಳ್ಳುತ್ತಿತ್ತು. ಹಲವು ಬಾರಿ ಅವರು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಭಾನುವಾರ ಸಂಜೆ ಪುನಃ ಎದೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.
 ಚಿಕಿತ್ಸೆಗೆ ಸ್ಪಂದಿಸದೇ ಅನ್ಸರ್ ಪಾಷ ಸಾವನ್ನಪ್ಪಿದ್ದರು. ಅದರಿಂದ ಆಕ್ರೋಶಗೊಂಡ ಸಂಬಂಧಿಕರು, ‘ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ಅನ್ಸರ್ ಪಾಷ ಸಾವನ್ನಪ್ಪಿದ್ದಾರೆ’ ಎಂದು ಆಸ್ಪತ್ರೆಯಲ್ಲೇ ಕೂಗಾಡಿದ್ದರು. ಬಾಗಿಲು ಹಾಗೂ ಕೊಠಡಿಗೆ ಅಳವಡಿಸಿದ್ದ ಗಾಜುಗಳನ್ನು ಒಡೆದು ಹಾಕಿದ್ದರು. ಕುರ್ಚಿ, ಟೇಬಲ್‌ಗಳನ್ನು ಎತ್ತಿ ಬಿಸಾಡಿದ್ದರು’ ಎಂದೂ ಹೇಳಿದರು.
‘ಠಾಣೆಗೆ ಮಾಹಿತಿ ಬರುತ್ತಿದ್ದಂತೆ ಆಸ್ಪತ್ರೆಗೆ ಹೋಗಿ ಸಂಬಂಧಿಕರನ್ನು ಹೊರಗೆ ಕಳುಹಿಸಲಾಯಿತು. ಈ ಸಂದರ್ಭದಲ್ಲೂ ಸಂಬಂಧಿಕರು ಬ್ಯಾರಿಕೇಡ್‌ಗಳಿಗೆ ಒದ್ದು ಬೀಳಿಸಿದ್ದರು’ ಎಂದೂ ತಿಳಿಸಿದರು. ದೂರು ನೀಡಲು ಹೇಳಿದ್ದೇವೆ: ‘ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ಅನ್ಸರ್ ಪಾಷ ಸಾವನ್ನಪ್ಪಿರುವ ಬಗ್ಗೆ ಲಿಖಿತವಾಗಿ ದೂರು ನೀಡುವಂತೆ ಸಂಬಂಧಿಕರಿಗೆ ಹೇಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಆಸ್ಪತ್ರೆಯಲ್ಲಿ ನಡೆದ ಗಲಾಟೆ ಬಗ್ಗೆಯೂ ದೂರು ನೀಡುವಂತೆ ವೈದ್ಯರಿಗೆ ಹೇಳಿದ್ದೇನೆ. ತಡರಾತ್ರಿಯವರೆಗೂ ಯಾರೊಬ್ಬರು ದೂರು ನೀಡಿಲ್ಲ’ ಎಂದೂ ತಿಳಿಸಿದರು.