Sunday, 24th November 2024

ಒಂದು ಚಿಟಿಕೆ, ರುಚಿಗೆ ತಕ್ಕಷ್ಟು ವಿಷ !

ಶಿಶಿರ ಕಾಲ

shishirh@gmail.com

ಟೆಫ್ಲಾನ್‌ನಂಥ ರಾಸಾಯನಿಕ ದೇಹಕ್ಕೆ ಮಾರಕ ಎಂದು ತಿಳಿಯಲು ಅಮೆರಿಕದಂಥ ದೇಶಕ್ಕೇ ಬಹಳಷ್ಟು ವರ್ಷಗಳು ಹಿಡಿಯಿತು. ಭಾರತವು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ದೋಸೆ ಕಾವಲಿಯಿಂದ ಹಿಡಿದು ಅನ್ನದ ಕುಕ್ಕರ್‌ವರೆಗೆ ಸಾಂಪ್ರದಾಯಿಕ ಪಾತ್ರೆಗಳ ಬದಲಿಗೆ ನಾನ್‌ಸ್ಟಿಕ್ ಪಾತ್ರೆಗಳನ್ನೇ ಬಳಸುತ್ತಿರುವವರಿಗೆ ಇದು ಎಚ್ಚರಿಕೆಯ ಗಂಟೆ.

ಬಹಳಷ್ಟು ವೈಜ್ಞಾನಿಕ ಅವಿಷ್ಕಾರಗಳೇ ಹಾಗೆ. ಮಣ್ಣಿನಲ್ಲಿ ಗಣೇಶನನ್ನು ಮಾಡಲು ಹೋಗಿ ಹನುಮಂತನನ್ನು ಮಾಡಿ ನಿಂತಂತೆ. ಏನೋ ಒಂದು ಕಂಡುಹಿಡಿಯುವಾಗ ಇನ್ನೇನೋ ಒಂದು ನಡೆದು, ಆ ತಪ್ಪುಗಳೇ ಒಂದು ಅವಿಷ್ಕಾರವಾಗಿ ಮುಂದಿನ ದಿನಗಳಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತವೆ. ಮೆಗ್ನೆಟ್ರೋನ್ (ಶಕ್ತಿಯುತ ನಿರ್ವಾತ ನಳಿಗೆ ಹೊರಸೂಸುವ ಮೈಕ್ರೋ ತರಂಗ) ಮೇಲೆ ವಿಜ್ಞಾನಿ ಸ್ಪೆನ್ಸರ್ ಕೆಲಸ ಮಾಡುತ್ತಿದ್ದ. ಆಗ ತನ್ನ ಕಿಸೆಯಲ್ಲಿದ್ದ ಚಾಕಲೇಟ್ ಕರಗಿದ್ದನ್ನು ಗ್ರಹಿಸಿದ ಆತ ಮುಂದೆ ಅದೇ ತಂತ್ರಜ್ಞಾನ ಬಳಸಿ ನಾವು ಇಂದು ಮನೆ ಮನೆಯಲ್ಲಿ ಬಳಸುವ ಮೈಕ್ರೋ ವೇವ್ ಓವನ್ ಅನ್ನು ಕಂಡು ಹಿಡಿದ.

3M ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿ ಅತಿಶಕ್ತಿಯುತ ಅಂಟನ್ನು ಕಂಡಿಹಿಡಿಯುವ ಸಂದರ್ಭದಲ್ಲಿ ಹದವಾಗಿ ಅಂಟಿಕೊಳ್ಳುವ ಅಂಟನ್ನು ಅಕಸ್ಮಾತ್ ತಪ್ಪಿನಿಂದ ಕಂಡುಹಿಡಿದ. ಆ ತಂತ್ರಜ್ಞಾನವನ್ನೇ ನಾವಿಂದು ಹೆಚ್ಚಿನ ಕಡೆ ಬಳಸುವ ‘ಸ್ಟಿಕಿ ನೋಟ್ಸ್’ಗೆ ಮುಂದೆ ಬಳಸಲಾಯಿತು. ರಷ್ಯನ್ ವಿಜ್ಞಾನಿಯೊಬ್ಬ ಪ್ರಯೋಗದಲ್ಲಿ ನಿರತನಾಗಿರುವಾಗ ಅಕಸ್ಮಾತ್ ಆಗಿ
ಒಂದು ಕೆಮಿಕಲ್ ಬಾಯಿಗೆ ತಾಗಿದಾಗ ಅದು ಸಿಹಿಸಿಹಿಯಾಗಿತ್ತು.

ಅದೇ ನಾವಿಂದು ಎಡೆ ಬಳಸುವ ಸಕ್ಕರೆಯಲ್ಲದ ಕೃತಕಸಿಹಿ. ಔಷಽಯಾಗಿ ವ್ಯಾಪಕವಾಗಿ ಬಳಕೆಯಾಗುವ ಪೆನ್ಸಿಲಿನ್, ಎಕ್ಸ್ ರೇ, ಕ್ಷಣಮಾತ್ರದಲ್ಲಿ ಗಟ್ಟಿಯಾಗುವ ಕ್ವಿಕ್ ಅಂಟು, ಪೇಸ್ ಮೇಕರ್, ಶಾಂಪೇನ್, ಚ್ಯೂಯಿಂಗ್ ಗಮ, ಕೋಕಾಕೋಲಾ, ಡೈನಮೈಟ್, ಬೆಂಕಿಕಡ್ಡಿ, ವಯಾಗ್ರಾ, ಬ್ರಾಂಡಿ, ವ್ಯಾಸಲೀನ್, ಸೇಫ್ಟಿ ಪಿನ್, ಬಬಲ್ ರ‍್ಯಾಪ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವೆಲ್ಲ ಒಂದಿಂದು ತಪ್ಪಿನಿಂದಾಗಿ ಹುಟ್ಟಿದ ಆವಿಷ್ಕಾರಗಳೇ.

ಅದೇ ರೀತಿ ಆದ ಪ್ರಮಾದವೊಂದರಿಂದ ಹುಟ್ಟಿದ ಮಗದೊಂದು ಆವಿಷ್ಕಾರ PFAS ರಾಸಾಯನಿಕ ಮತ್ತು ಟೆಫ್ಲಾನ್. 1938ರಲ್ಲಿ ರಾಯ್ ಎನ್ನುವ ವಿಜ್ಞಾನಿ ಡ್ಯುಪೊಂಟ್ ಎಂಬ ಕಂಪನಿಯಲ್ಲಿ ಶೀತಲೀಕರಣ ದ್ರವ್ಯವನ್ನು (ಕೂಲಂಟ್) ಕಂಡು ಹಿಡಿಯಲು ಪ್ರಯೋಗಗಳನ್ನು ಮಾಡುತ್ತಿದ್ದ. ಆ ಸಮಯದಲ್ಲಿ ಅಕಸ್ಮಾತ್ತಾಗಿ ಟೆಫ್ಲಾನ್‌ನ ಅವಿಷ್ಕಾರವಾಯಿತು. ಟೆಫ್ಲಾನ್ ಗುಣ-ವಿಶೇಷಣಗಳಿಂದಾಗಿ ಮುಂದಿನ ದಿನಗಳಲ್ಲಿ, ಮನೆಗಳಲ್ಲಿ ಬಳಸುವ ಬಹುತೇಕ ವಸ್ತುಗಳ ತಯಾರಿಕೆಯಲ್ಲಿ ಈ ರಾಸಾಯನಿಕವನ್ನು ವ್ಯಾಪಕವಾಗಿ ಬಳಸುವಂತಾಯಿತು.

ಇಂದು ಈ ರಾಸಾಯನಿಕವನ್ನು ಮತ್ತು ಇದೇ ಕುಟುಂಬಕ್ಕೆ ಸೇರಿದ ಸುಮಾರು 4500 -ರಿನೇಟೆಡ್ ರಾಸಾಯನಿಕಗಳನ್ನು ನಾವು ಎಗ್ಗಿಲ್ಲದೆ ಬಳಸುತ್ತಿದ್ದೇವೆ. ಈ ವರ್ಗಕ್ಕೆ ಸೇರಿದ ರಾಸಾಯನಿಕ PFAS (per- and polyfluoroalkyl substances) ಮತ್ತು PFOA (Per Fluoro Octanoic Acid). ಈ PFAS ಎಂಬ ರಾಸಾಯನಿಕದ ಲೇಪನಕ್ಕೆ ಎಣ್ಣೆ ಮತ್ತು ನೀರು ಅಂಟುವುದಿಲ್ಲ. ಈ ಗುಣದಿಂದಾಗಿಯೇ 1960 ರಿಂದೀಚೆ ಇದನ್ನು ಛತ್ರಿ, ರೈನ್ ಕೋಟ್, ನಾನ್‌ಸ್ಟಿಕ್ ಅಡುಗೆ ಪಾತ್ರೆ, ಆಹಾರದ ಪ್ಯಾಕಿಂಗ್, ಅಗ್ನಿಶಾಮಕ ನೊರೆ, ಕಾರ್ಪೆಟ್, ಟೆಂಟ್ ಹೀಗೆ ಎಡೆಯಲ್ಲಿ ಲೆಕ್ಕಾಚಾರ ಮೀರಿ ಇಂದು
ಬಳಸಲಾಗುತ್ತಿದೆ.

2002ರಲ್ಲಿ ಫ್ರಾನ್ಸ್‌ನ ಸೇಂಟ್ ಗೋಬಿನ್ ಎಂಬ ಕಂಪನಿ ಅಮೆರಿಕದ ನ್ಯೂ ಹ್ಯಾಂಪ್‌ಶೈರ್ ರಾಜ್ಯದ ಮೆರ್ರಿಮಾಕ್ ಎಂಬ
ಪಟ್ಟಣದ ತನ್ನ ಕಾರ್ಖಾನೆಯಲ್ಲಿ ಜಲನಿರೋಧಕ ರೈನ್ ಕೋಟ್ ಮತ್ತು ಬಟ್ಟೆಗಳನ್ನು ತಯಾರಿಸಲು ಶುರುಮಾಡಿಕೊಂಡಿತು. ಈ ತಯಾರಿಕೆ ಆರಂಭವಾದ ಕೆಲವೇ ತಿಂಗಳಲ್ಲಿ ಕಾರ್ಖಾನೆಯ ಅಕ್ಕಪಕ್ಕದಲ್ಲಿನ ಬಹುತೇಕರಲ್ಲಿ ಬೇರೆ ರೋಗಲಕ್ಷಣಗಳು ಕಾಣಿಸಿಕೊಂಡವು. ಅಮೆರಿಕದ ಉಳಿದ ನಗರಗಳಿಗೆ ಹೋಲಿಸಿದರೆ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಮೆರ್ರಿಮಾಕ್‌ನಲ್ಲಿ ತುಂಬ ಜಾಸ್ತಿಯಿತ್ತು.

ನಗರದಲ್ಲಿ ಆದ ಬದಲಾವಣೆಯೊಂದೇ- ಈ ಸೇಂಟ್ ಗೋಬಿನ್ ಕಂಪನಿ ಈ ಜಲನಿರೋಧಕ ವಸ್ತುಗಳನ್ನು ತಯಾರಿಸಲು ಆರಂಭಿಸಿದ್ದು. ಜನರಲ್ಲಿ ಕಾಣಿಸಿಕೊಂಡ ಕ್ಯಾನ್ಸರ್, ಕಿಡ್ನಿ ಸಂಬಂಧಿತ ರೋಗಗಳು, ಮಕ್ಕಳ ಕುಂಠಿತ ಬೆಳವಣಿಗೆ ಹೀಗೆ ಒಂದೆರಡಲ್ಲ. ಅತಿ ವಿರಳವಾಗಿದ್ದ ಕ್ಯಾನ್ಸರ್ ಈ ನಗರದಲ್ಲಿ ಬಹಳಷ್ಟು ಮಕ್ಕಳಲ್ಲಿ ಕಾಣಿಸಿಕೊಂಡಿತು. ಊರಿನವರೆಲ್ಲರ ಅನುಮಾನ ಸಹಜವಾಗಿ ಈ ಸೇಂಟ್ ಗೋಬಿನ್ ಕಂಪನಿಯತ್ತ. ಈ ಕಂಪನಿ ಬಳಸುತ್ತಿದ್ದ PFAS ಮತ್ತು ಟೆಫ್ಲಾನ್ ರಾಸಾಯನಿಕವೇ ಇದಕ್ಕೆಲ್ಲ ಕಾರಣ ಎಂದು ಜನರು ಬೀದಿಗಿಳಿದು ಹೋರಾಟಕ್ಕೆ ಮುಂದಾದರು.

ಈ ಕಂಪನಿ ಅಲ್ಲಿನ ಬಹಳಷ್ಟು ಮಂದಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದರಿಂದ ಇದು ರಾಜಕೀಯ ಬಣ್ಣವನ್ನೂ ಪಡೆಯಿತು. ಆದರೆ ಅವಘಡವೊಂದು ಘಟಿಸಿಯಾಗಿತ್ತು. ಇತ್ತೀಚಿನ ಅಧ್ಯಯನದ ಪ್ರಕಾರ ಈ ರಾಸಾಯನಿಕ ಕ್ಯಾನ್ಸರ್ ಸೇರಿದಂತೆ ಹತ್ತಾರು ರೋಗಕ್ಕೆ ನೇರಕಾರಣ. ಇದಕ್ಕೆಲ್ಲ ನೇರವಾದ ಕಾರಣ ಈ PFAS ಎಂಬ ರಾಸಾಯನಿಕ ಪೆಡಂಭೂತ. ಈ ರೀತಿ ಬಹಳಷ್ಟು ಕಂಪನಿಗಳು ಈ ರಾಸಾಯನಿಕವನ್ನು ಬಳಸಿ ಅಮೆರಿಕದ ಉದ್ದಗಲಕ್ಕೂ ಹಲವಾರು ಉತ್ಪನ್ನಗಳನ್ನು ತಯಾರಿಸುತ್ತಿವೆ.

2002ರಲ್ಲಿ ನಡೆದ ಘಟನೆ ಬಹಳಷ್ಟು ಚರ್ಚೆಗೊಳಗಾದರೂ ಈ ಕಂಪನಿಗಳ ರಾಜಕೀಯ ತಾಕತ್ತಿನಿಂದಾಗಿ ಈ ರಾಸಾಯನಿಕದ ಮೇಲೆ ಇಲ್ಲಿನ ಸರಕಾರ ಅಷ್ಟಾಗಿ ನಿರ್ಬಂಧ ಹೇರಲಿಲ್ಲ. ಹೀಗಾಗಿ ಈ ರಾಸಾಯನಿಕಗಳ ಬಳಕೆ ಎಗ್ಗಿಲ್ಲದೆ ಮುಂದುವರಿಯಿತು. ಹಿಂದಿನ ವರ್ಷ PFASನ ಪರಿಣಾಮಗಳ ಮೇಲೆ ನಡೆದ ಕೆಲವು ಅಧ್ಯಯನಗಳು ಅಮೆರಿಕದ ಅರೋಗ್ಯ ಇಲಾಖೆಯ ಮುಂದೆ ಬಹಳಷ್ಟು ಸತ್ಯವನ್ನು ಪಟ್ಟಿಮಾಡಿಟ್ಟವು.

ಇದರಿಂದಾಗಿ ಇಲ್ಲಿನ ಸರಕಾರ ಈಗ ಎಚ್ಚೆತ್ತುಕೊಂಡಿದ್ದು, ಈ ರಾಸಾಯನಿಕಗಳ ಮೇಲೆ ಬಹಳಷ್ಟು ನಿರ್ಬಂಧಗಳನ್ನು
ಹೇರಲಾಗುತ್ತಿದೆ. ಆದರೆ ಈ ರಾಸಾಯನಿಕ ಈಗಾಗಲೇ ಎಲ್ಲಾ ಮೀರಿ ವಾತಾವರಣ ಸೇರಿ ಆಗಿದೆ. ಇಂದು ಸುಮಾರು 700
ಪ್ರದೇಶಗಳನ್ನು PFAS ಕಲುಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಅವುಗಳಲ್ಲಿ ಬಹಳಷ್ಟು ಪ್ರದೇಶಗಳು ಇಂದು ವಾಸ ಯೋಗ್ಯವಲ್ಲ ಎನ್ನಲಾಗುತ್ತಿದೆ. ಇಲ್ಲಿನ ಅರೋಗ್ಯ ಇಲಾಖೆಯ ವರದಿಯ ಪ್ರಕಾರ ಸುಮಾರು 110 ದಶಲಕ್ಷ ಅಮೆರಿಕನ್ನರು ಈ ರಾಸಾಯನಿಕಯುಕ್ತ ನೀರನ್ನು ಕುಡಿಯುತ್ತಿದ್ದು, ಈ ರಾಸಾಯನಿಕ ಇಂದು ಅಮೆರಿಕದ ‘ಎಲ್ಲರ’ ರಕ್ತದಲ್ಲಿಯೂ ಸೇರಿಕೊಂಡಿದೆ.

ಅರಿವಿಗೇ ಬಾರದೆ ಬಹಳಷ್ಟು ಜನರ ಕ್ಯಾನ್ಸರ್‌ಗೆ, ಲಿವರ್, ಕಿಡ್ನಿ ಸಂಬಂಧಿ ರೋಗಕ್ಕೆ ಅದು ಕಾರಣವಾಗುತ್ತಿದೆ. ಈ ರಾಸಾಯನಿಕದ ಇನ್ನೊಂದು ವಿಶೇಷತೆಯೆಂದರೆ ಇದನ್ನು ನಾಶಪಡಿಸಲು ಸಾಧ್ಯವೇ ಇಲ್ಲ. ಆ ಕಾರಣಕ್ಕೆ ಇದನ್ನು ‘ಟ್ಟಛಿqಛ್ಟಿ
eಛಿಞಜ್ಚಿZ’ ಎಂದು ಕರೆಯಲಾಗುತ್ತದೆ. ಈ ರಾಸಾಯನಿಕವು ನೀರಿಗೆ ಸೇರಿದರೆ ಅದನ್ನು ಬೇರ್ಪಡಿಸಲೂ ಅಸಾಧ್ಯ. ದೇಹವನ್ನು ಒಮ್ಮೆ ಹೊಕ್ಕರೆ ಇದು ಪ್ರೋಟೀನ್ ನೊಂದಿಗೆ ತನ್ನನ್ನು ಜೋಡಿಸಿಕೊಂಡು ಶಾಶ್ವತವಾಗಿ ದೇಹದಲ್ಲಿ
ಉಳಿದು ಬಿಡುತ್ತದೆ ಮತ್ತು ರೋಗಗಳಿಗೆ ಕಾರಣವಾಗುತ್ತದೆ.

ಇಂಥದೊಂದು ರಾಸಾಯನಿಕ ಇಷ್ಟು ಮಾರಕ ಎಂದು ತಿಳಿಯಲು ಅಮೆರಿಕದಂಥ ದೇಶಕ್ಕೇ 20 ವರ್ಷ ಬೇಕಾಯಿತು
ಎನ್ನುವುದು ದುರಂತ. ಈಗ ಈ ವರ್ಗದ ೩-೪ ರಾಸಾಯನಿಕಗಳ ಕಣ್ಣುಕಟ್ಟಲು ಅಮೆರಿಕ ಸರಕಾರ ಹತ್ತಾರು ನಿರ್ಬಂಧಗಳನ್ನು ಹೇರಿದಂತಿದೆ. ಆದರೆ ಅದೇ ವರ್ಗಕ್ಕೆ ಸೇರಿದ 4500ರಷ್ಟು ರಾಸಾಯನಿಕಗಳನ್ನು ಬಳಸಲು ಇಲ್ಲಿ ಇನ್ನೂ ಅನುಮತಿಯಿದೆ. ಆ ಎಲ್ಲ ರಾಸಾಯನಿಕಗಳ ಗುಣವಿಶೇಷ ಮತ್ತು ಮಾರಕತೆ ಹೆಚ್ಚು ಕಡಿಮೆ ಒಂದೇ.

ಹೀಗೆ ಈ ರಾಸಾಯನಿಕ ಸರ್ವವ್ಯಾಪಿಯಾಗಿ ಮನುಷ್ಯನ ಆರೋಗ್ಯವನ್ನು ಹದಗೆಡಿಸುತ್ತಿರುವುದು ಅಮೆರಿಕದಲ್ಲಿ ಮಾತ್ರವೇ ಅಲ್ಲ. ಇದು ಇಂದು ಪ್ರಪಂಚವ್ಯಾಪಿ. ಭಾರತ ಸೇರಿದಂತೆ ಬಹಳಷ್ಟು ದೇಶಗಳು ಈ ನಿಟ್ಟಿನಲ್ಲಿ ಇಂದಿಗೂ ಎಚ್ಚೆತ್ತುಕೊಂಡಿಲ್ಲ. ಭಾರತದಲ್ಲಿ ಸದ್ಯ ಈ PFAS ರಾಸಾಯನಿಕದ ಮೇಲೆ ಯಾವುದೇ ನಿರ್ಬಂಧವಿಲ್ಲ. ಬಹುರಾಷ್ಟ್ರೀಯ ಒಪ್ಪಂದದ ಪ್ರಕಾರ ಭಾರತ 2009ರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಇಂದಿನವರೆಗೆ ಯಾವುದೇ ಮುನ್ನೆಚ್ಚರಿಕೆ ಮತ್ತು ನಿರ್ಬಂಧ ವನ್ನು ಭಾರತ ಹೇರದಿರುವುದು ಮುಂದೆ ಸಂಭಾವ್ಯ ದುರಂತಕ್ಕೆ ಕಾರಣವಾಗಬಹುದು.

2008ರಲ್ಲಿ ಚಿದಂಬರಂ, ಕೊಲ್ಕತ್ತಾ ಮತ್ತು ಚೆನ್ನೈ ನಲ್ಲಿ ತಾಯಿಯ ಹಾಲಿನಲ್ಲಿ PFAS ಕಂಡುಬಂದಿರುವುದು
ವರದಿಯಾಗಿದೆ. 2016ರ ಅಧ್ಯಯನದ ಪ್ರಕಾರ ಗಂಗೆ, ತುಂಗಭದ್ರೆ, ಕೃಷ್ಣಾ ನದಿಗಳಲ್ಲಿ ಈ ರಾಸಾಯನಿಕ ಕಾಣಿಸಿ ಕೊಂಡಿದೆ. ಈ ನದಿಗಳಿಗೆ ಕಾರ್ಖಾನೆಗಳಿಂದ ಈ ರಾಸಾಯನಿಕವನ್ನು ಬಿಡಲಾಗುತ್ತಿದ್ದು ಅದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಗಂಗೆ ಹುಟ್ಟುವ ಜಾಗದಲ್ಲಿ ಈ ರಾಸಾಯನಿಕ ಕಾಣಿಸಿಕೊಂಡಿಲ್ಲ; ಆದರೆ ನದಿ ಹರಿದಂತೆ ಈ ರಾಸಾಯನಿಕದ ಪ್ರಮಾಣ ಏರುತ್ತಲೇ ಹೋಗುತ್ತದೆ. ನದೀತಟದಲ್ಲಿರುವ ಕಾರ್ಖಾನೆಗಳೇ ಇದಕ್ಕೆ ಕಾರಣ ಎಂದು ಅಂದಾಜಿಸಬಹುದು.

ಗಂಗೆಯ ನೀರು ಕುಡಿದವರೆಲ್ಲ ಈ ರಾಸಾಯನಿಕವನ್ನು ದೇಹದೊಳಗೆ ಬಿಟ್ಟುಕೊಂಡಿzರೆ ಎಂದೇ ಹೇಳಬಹುದು. ಈ
ರಾಸಾಯನಿಕದ ಪ್ರಮಾಣ ಎಷ್ಟರಮಟ್ಟಿಗೆ ನೀರನ್ನು ಕಲುಷಿತಗೊಳಿಸುತ್ತಿದೆ ಎಂಬುದರ ಬಗ್ಗೆ ಸರಕಾರ ನಿಗಾ ವಹಿಸುತ್ತಿಲ್ಲ. ಗಂಗಾ ನದಿಯ ಸಾಂಪಲ್‌ನಲ್ಲಿದ್ದ ಬಹುತೇಕ ಜಲಚರಗಳಲ್ಲಿ ಈ ರಾಸಾಯನಿಕ ಕಾಣಿಸಿಕೊಂಡಿದೆ. ಇದೇ ರೀತಿ ಮುಂದಿವರಿದರೆ ಭಾರತದ ಬಹುತೇಕ ನೀರಿನ ಆಗರಗಳಲ್ಲಿ ಈ ರಾಸಾಯನಿಕ ಶಾಶ್ವತವಾಗಿ ಸೇರಿಕೊಂಡು ಬಿಡಬಹುದು. ಅಮೆರಿಕಕ್ಕೆ ಹೋಲಿಸಿದರೆ, ಭಾರತದ ನೀರಿನ ಆಗರಗಳಲ್ಲಿ ಈ ರಾಸಾಯನಿಕ ಸೇರಿಕೊಂಡ ಪ್ರಮಾಣ ಕಡಿಮೆ.

ಹಾಗಂತ ಇಂದಿನ ವರಸೆಯನ್ನೇ ಮುಂದುವರಿಸಿಕೊಂಡು ಹೋದರೆ ಅಮೆರಿಕದ ಸ್ಥಿತಿ ಭಾರತದಲ್ಲಿ ನಿರ್ಮಾಣವಾಗುವ ಕಾಲ ದೂರವಿಲ್ಲ. ಈ ರಾಸಾಯನಿಕ ಸದ್ಯ ಭಾರತೀಯರ ದೇಹವನ್ನು ನೀರಿನ ಮೂಲಕ ಆ ಪ್ರಮಾಣದಲ್ಲಿ ಸೇರುತ್ತಿಲ್ಲ. ಬದಲಿಗೆ
ನಾವು ಬಳಸುವ ನಾನ್‌ಸ್ಟಿಕ್ ಪಾತ್ರೆಗಳಿಂದ ಗಣನೀಯ ಪ್ರಮಾಣದಲ್ಲಿ ನಮ್ಮ ದೇಹವನ್ನು ಸೇರುತ್ತಿದೆ. ಇಂದು ನಮ್ಮ
ಆಧುನಿಕ ಅಡುಗೆಮನೆಯಲ್ಲಿ ಸ್ಟೀಲ್ ಪಾತ್ರೆಗಳ ಬಳಕೆ ಕಡಿಮೆಯಾಗಿ ಬಹುತೇಕವಾಗಿ ನಾನ್‌ಸ್ಟಿಕ್ ಪಾತ್ರೆಗಳನ್ನು ಬಳಸುತ್ತಿದ್ದೇವೆ.

ದೋಸೆ ಕಾವಲಿಯಿಂದ ಹಿಡಿದು ಅನ್ನ ಮಾಡುವ ಕುಕ್ಕರ್‌ವರೆಗೆ ಎಲ್ಲವೂ ನಾನ್‌ಸ್ಟಿಕ್! ತೊಳೆಯಲು ಸುಲಭ ಮತ್ತು ಕಡಿಮೆ ಎಣ್ಣೆ ಬಳಸಿ ಆಹಾರ ತಯಾರಿಸಲು ಈ ನಾನ್‌ಸ್ಟಿಕ್ ಸಹಜವಾಗಿ ನಮ್ಮೆಲ್ಲರ ಅಚ್ಚುಮೆಚ್ಚು. ನಮಗೆ ಇದನ್ನು ಮಾರುವ ಕಂಪನಿಗಳು ಜಾಹೀರಾತು ಮಾಡಲು ಬಳಸುವುದು ಇದೇ ವಿಚಾರವನ್ನು. ಆದರೆ ಹೀಗೆ ತಿಂಡಿ- ತಿನಿಸು ತಯಾರಿಕೆ ಸುಲಭವಾಗಲಿ ಎಂದು ಬಳಸುತ್ತಿರುವ ಈ ಪಾತ್ರೆಗಳು ನಮಗರಿವಿಲ್ಲದಂತೆ ವಿಷಪ್ರಾಶನದಲ್ಲಿ ತೊಡಗಿವೆ.

ಎಲ್ಲ ನಾನ್‌ಸ್ಟಿಕ್ ಪಾತ್ರೆಗಳಿಗೆ ರಾಸಾಯನಿಕ ಲೇಪನ ಮಾಡಲಾಗುತ್ತದೆ. ಈ ಕಾರಣದಿಂದಲೇ ಪಾತ್ರೆಗಳಿಗೆ ಎಣ್ಣೆ
ಮತ್ತು ನೀರು ಅಂಟಿಕೊಳ್ಳುವುದಿಲ್ಲ. ಈ ಲೇಪನದ ತಯಾರಿಕೆಯಲ್ಲಿ ಮುಖ್ಯವಾಗಿ ಬಳಸುವ ರಾಸಾಯನಿಕವೇ ಟೆಫ್ಲಾನ್ ಮತ್ತು PFAS. ಈ ರಾಸಾಯನಿಕವನ್ನು ಒಂದು ಹಂತಕ್ಕಿಂತ ಹೆಚ್ಚಿಗೆ ಬಿಸಿಮಾಡಿದಾಗ ವಿಷಾನಿಲಗಳು ಬಿಡುಗಡೆ
ಯಾಗುತ್ತವೆ ಮತ್ತು ಅದರ ಜತೆ ವಿಷ ನಮ್ಮ ಆಹಾರವನ್ನು ಸೇರುತ್ತದೆ. ಸೌಟಿನಲ್ಲಿ ಗೀರಿದಾಗ ಅಥವಾ ಪಾತ್ರೆ ಹಳತಾ
ದಂತೆ ಈ ರಾಸಾಯನಿಕದ ಬಿಡುಗಡೆ ಇನ್ನಷ್ಟು ಹೆಚ್ಚುತ್ತದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದೇಹವನ್ನು ಸೇರುತ್ತವೆ.

ಚೀನಾ ಮೊದಲಾದ ದೇಶಗಳಲ್ಲಿ ತಯಾರಾಗಿ ಬರುವ ಅಗ್ಗದ ನಾನ್‌ಸ್ಟಿಕ್ ಪಾತ್ರೆಗಳು ಬಹು ಸುಲಭವಾಗಿ ಈ ರಾಸಾಯನಿ
ಕವನ್ನು ನಮಗೆ ಆಹಾರದ ಜತೆ ಪ್ರಾಶನ ಮಾಡಿಸುತ್ತಿವೆ. ಹೀಗೆ ದೇಹವನ್ನು ಸೇರಿದ ಈ ರಾಸಾಯನಿಕ ನಮ್ಮ ಕಿಡ್ನಿ, ರಕ್ತ,
ಯಕೃತ್ತು ಇವೇ ಮೊದಲಾದ ಅಂಗಗಳಲ್ಲಿ ಶಾಶ್ವತವಾಗಿ ನೆಲೆಸುತ್ತವೆ ಮತ್ತು ಅನಾರೋಗ್ಯಕ್ಕೆ ಕಾರಣವಾಗುತ್ತವೆ.

ನಮ್ಮಲ್ಲಿ ಬಹುತೇಕರಿಗೆ ಈ ರಾಸಾಯನಿಕದ ಅಡ್ಡಪರಿಣಾಮದ ಅರಿವಿಲ್ಲದಿರುವುದರಿಂದ ಈ ನಾನ್‌ಸ್ಟಿಕ್ ಪಾತ್ರೆಗಳನ್ನು ಸ್ಟೀಲ್ ಪಾತ್ರೆಗಳಂತೆ ಹಳೆಯದಾದ ಮೇಲೂ ಬಳಸುತ್ತೇವೆ. ಇದರಿಂದ ಕೂಡ ಈ ರಾಸಾಯನಿಕ ದೇಹದೊಳಗೆ
ಸೇರಿಕೊಳ್ಳುವ ಪ್ರಮಾಣ ಹೆಚ್ಚು. ಕಂಚಿನ, ತಾಮ್ರದ ಪಾತ್ರೆಗಳು, ಕಬ್ಬಿಣದ ದೋಸೆ ಕಾವಲಿ ಇವೆಲ್ಲ ಅಟ್ಟ ಸೇರಿ
ಬಹುಕಾಲ ವಾಗಿದೆ. ಹೊಸತು ಎಂದಾಕ್ಷಣ ಹಿಂದೆ ಮುಂದೆ ನೋಡದೆ ನಮ್ಮದಾಗಿಸಿಕೊಳ್ಳುವುದು ಇಂದಿನ ಫ್ಯಾಷನ್.
ಇಂಥ ಹೊಸತರಹದ ಅಡ್ಡಪರಿಣಾಮ ತೀರಾ ಕೈಮೀರಿ ಹೋದ ಮೇಲೆಯೇ ನಮ್ಮೆಲ್ಲರ ಮತ್ತು ಸರಕಾರದ ಅರಿವಿಗೆ
ಬರುವುದು ಇಂದಿನ ದುರಂತ.