ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಅಯೋಧ್ಯೆೆಯಲ್ಲಿ ಆ.5 ರಂದು ನಡೆಯುವ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಪ್ರತಿ ಮನೆ ಮನೆಯಲ್ಲಿಯೂ ತಳಿರು ತೋರಣಗಳನ್ನು ಕಟ್ಟಿ, ಶ್ರೀರಾಮ ವಿಜಯ ಸಂಕಲ್ಪದೊಂದಿಗೆ ಹಬ್ಬದಂತೆ ಆಚರಣೆ ಮಾಡಬೇಕು ಎಂದು ಅಖಿಲ ಭಾರತ ವಿಶ್ವ ಹಿಂದು ಪರಿಷದ್‌ನ ಉಪಾಧ್ಯಕ್ಷೆ ಡಾ. ವಿಜಯಲಕ್ಷ್ಮಿ ದೇಶಮಾನೆ ತಿಳಿಸಿದ್ದಾರೆ.
ನಗರದ ಶಂಕರಪುರ ವಿಶ್ವ ಹಿಂದು ಪರಿಷದ್ ವತಿಯಿಂದ ಸೋಮವಾರದಂದು ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವವೇ ಶ್ರೀರಾಮ ಮಂದಿರ ನಿರ್ಮಾಣದ ಕುರಿತು ಕುತೂಹಲದಿಂದ ಕಾಯುತ್ತಿದ್ದ ದಿನ ಆ.5 (ಬುಧವಾರ) ಈಗ ಆಗಮಿಸಿದೆ. ಹಿಂದೂಗಳ ಪವಿತ್ರ ಆರಾಧ್ಯದೈವ ಶ್ರೀರಾಮನ ಜನ್ಮ ಸ್ಥಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜರುಗುತ್ತಿದೆ. ಸಾವಿರಾರು ವರ್ಷಗಳಿಂದ ಕಾಯುತ್ತಿದ್ದ, ಈ ದಿನವನ್ನು ದೊಡ್ಡ ಹಬ್ಬವನ್ನಾಗಿ ಪ್ರತಿ ಮನೆಯಲ್ಲಿಯೂ ಆಚರಣೆ ಮಾಡಬೇಕು. ಈ ಆಚರಣೆಯಲ್ಲಿ ಕೆಲವು ಕ್ರಮಗಳನ್ನು ಅನುಸರಿಸಬೇಕು ಎಂದು ಮನವಿ ಮಾಡಿದರು.
ಕನ್ನಡ ನಾಡಿನ ಎಲ್ಲ ಜನರು ಬೆಳಗ್ಗೆ ಸೂರ್ಯೋದಯ ಕಾಲದಲ್ಲಿ ಎದ್ದು ಮನೆ ಮುಂದೆ ರಂಗೋಲಿ ಹಾಕಿ ತಳಿರು ತೋರಣಗಳಿಂದ ಮನೆ ಸಿಂಗಾರ ಮಾಡಬೇಕು. ಮನೆ ಮೇಲೊಂದು ಭಾಗದಲ್ಲಿ ಧ್ವಜ ಹರಿಸಬೇಕು. ಬೆಳಗ್ಗೆ 9.30ಕ್ಕೆ ಕುಟುಂಬ ಸಮೇತರಾಗಿ ಶ್ರೀರಾಮ ಮಂದಿರ ನಿರ್ಮಾಣ ಸುಗಮವಾಗಿ ನೆರವೇರಲು ಸಂಕಲ್ಪ ಮಾಡಿ 108 ಬಾರಿ ಶ್ರೀರಾಮ, ಜೈ ರಾಮ, ಜೈ ಜೈ ರಾಮ ಎಂಬ ವಿಜಯ ಮಹಾಮಂತ್ರ ಪಠಿಸಬೇಕು ಮತ್ತು ಭಜನೆ ಮಾಡಬೇಕು. ಬೆಳಗ್ಗೆೆ 11.30 ರಿಂದ 12.30ರವರೆಗೆ ಜರುಗುವ ಭೂಮಿಪೂಜೆ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ವೀಕ್ಷಣೆ ಮಾಡಿ, ನಂತರ ಎಲ್ಲರಿಗೂ ಸಿಹಿ ವಿತರಣೆ ಮಾಡಬೇಕು. ಸಂಜೆ 6.30ಕ್ಕೆ ಮನೆಮುಂದೆ ದೀಪ ಬೆಳಗಿಸುವ ಮೂಲಕ ಸಂಭ್ರಮಾಚರಣೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷದ್‌ನ ಅಧ್ಯಕ್ಷ ಮುನಿರಾಜು, ಅಖಿಲ ಭಾರತ ವಿಶ್ವ ಹಿಂದು ಪರಿಷದ್‌ನ ಉಪಾಧ್ಯಕ್ಷೆ ಡಾ.
ವಿಜಯಲಕ್ಷ್ಮಿ ದೇಶಮಾನೆ ಇದ್ದರು.