ಮಂಡ್ಯದ ಉಪವಿಭಾಗಾಧಿಕಾರಿ ಎಚ್.ಎಸ್.ಕೀರ್ತನಾ ಸಾಧನೆ
ಮಂಡ್ಯ: ಸ್ಟಾರ್ ಬಾಲನಟಿಯಾಗಿ(4ನೇ ವಯಸ್ಸಿನಿಂದಲೇ) ಸಿನಿಮಾರಂಗದಲ್ಲಿ ಮಿಂಚಿದ ಎಚ್.ಎಸ್.ಕೀರ್ತನಾ ಐ ಎ ಎಸ್ ಅಧಿಕಾರಿಯಾಗಿ ಮಂಡ್ಯದ ಉಪವಿಭಾಗಾಧಿಕಾರಿಗಳಾಗಿದ್ದಾರೆ.
ಸ್ಫೂರ್ತಿಯ ಚಿಲುಮೆಯಂತೆ ಚಿತ್ರರಂಗದ ಬಾಲನಟಿಯಾಗಿ ನಟಿಸಿದ್ದ ಎಚ್.ಎಸ್.ಕೀರ್ತನಾ ಅವರು ದೊರೆ, ಗಂಗಾ ಯಮುನಾ, ಕರ್ಪೂರದ ಗೊಂಬೆ, ಮುದ್ದಿನ ಅಳಿಯ, ಉಪೇಂದ್ರ, ಎ, ಹಬ್ಬ, ಲೇಡಿ ಕಮಿಷನರ್, ಸರ್ಕಲ್ ಇನ್‌ಸ್ಪೆಕ್ಟರ್ ಸೇರಿದಂತೆ ವಿಷ್ಣುವರ್ಧನ್, ಶಿವರಾಜ್‌ಕುವಾರ್, ಅಂಬರೀಶ್, ರಮೇಶ್, ಶಶಿಕುವಾರ್, ದೊಡ್ಡಣ್ಣ ಸೇರಿದಂತೆ ಎಲ್ಲ ಸ್ಟಾರ್ ನಟರೊಂದಿಗೆ ಸುವಾರು 32 ಚಿತ್ರಗಳಲ್ಲಿ ನಟಿಸಿದ್ದಾರೆ. ಮಾತ್ರವಲ್ಲ ಚಿಗುರು, ಜನನಿ, ಪುಟಾಣಿ ಏಜೆಂಟ್ ಸೇರಿದಂತೆ 48 ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಅತ್ಯುತ್ತಮ ಬಾಲನಟಿ ಪ್ರಶಸ್ತಿಯೊಂದಿಗೆ 2004 ರಲ್ಲಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದಿದ್ದ ಕೀರ್ತನಾ 2020 ರಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಸರ್ಕಾರದ ಪ್ರಮುಖ ಹುದ್ದೆಗೇರಿದರು.
ಮೊದಲಿಂದಲೂ ನನ್ನ ಸಾಮರ್ಥ್ಯದ ಬಗ್ಗೆ ವಿಶ್ವಾಸವಿತ್ತು. ನಾನು ಚಿತ್ರರಂಗದಲ್ಲಿ ಬಾಲನಟಿಯಾಗಿ ರಾಜ್ಯದ ಜನರ ಪ್ರೀತಿ ಯನ್ನು ಗಳಿಸಿದ್ದೆ. ಆದರೆ ಸಹಜವಾಗಿ ನಮ್ಮ ತಂದೆ ಶ್ರೀನಿವಾಸ್ ಅವರು ಇನ್ನು ಚಿತ್ರರಂಗ ಸಾಕು, ಓದಿನತ್ತ ಮುಖ ಮಾಡು ಏನಾದರೂ ಸಾಧನೆ ಮಾಡು ಎಂದು ಪ್ರೋತ್ಸಾಹಿಸಿದರು. ಅದರಂತೆ ನಿರಂತರ ಶ್ರಮ ಹಾಕಿದೆ. ಅದರ ಫಲವೇ ಇಂದು ಐಎಎಸ್ ಅಧಿಕಾರಿಯಾಗಿದ್ದೇನೆ. ನನಗೆ ಸಿಕ್ಕಿರುವ ಈ ಹುದ್ದೆಯನ್ನು ಶ್ರೀಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಲು ಹಾಗೂ ಕರ್ತವ್ಯದಲ್ಲಿ ಲೋಪಬಾರದ ರೀತಿ ಕಾರ್ಯನಿರ್ವಹಿಸುವುದು ನನ್ನ ಆದ್ಯತೆಯಾಗಿದೆ ಎಂದು ಮಂಡ್ಯ ಉಪ ವಿಭಾಗಾಧಿಕಾರಿ ಎಚ್.ಎಸ್.ಕೀರ್ತನಾ ಹೇಳುತ್ತಾರೆ.