ಯಶೋ ಬೆಳಗು
yashomathy@gmaul.com
ವಾಟ್ಸಾಪ್ಗಳಲ್ಲಿ ಜನರು ‘ಅಷ್ಟು ಸಾವಿರ ಕೋಟಿ ಆಸ್ತಿ ಮಾಡಿದ್ದೀನಿ, ಅಷ್ಟು ಲಕ್ಷ ಟ್ಯಾಕ್ಸ್ ಕಟ್ತೀನಿ ಅಂತೆಲ್ಲ ರವಿ ಸರ್ ಹೇಳ್ತಿದ್ರಲ್ಲ? ನಿಮ್ಮ ಜೀವನಕ್ಕೆ ಏನೂ ಮಾಡಿಟ್ಟೇ ಇಲ್ವಾ?’ ಎನ್ನುವ ಪ್ರಶ್ನೆಗಳಲ್ಲಿ ತಿವಿದಾಗ, ‘ಯಾರಲ್ಲೂ ದೇಹಿ ಅನ್ನದೆ ನಾವು ಗೌರವದಿಂದ ಬದುಕು ನಡೆಸುವಷ್ಟು ನಮ್ಮ ಪಾಲಿಗಿಟ್ಟಿದ್ದಾರೆ’ ಎಂದುತ್ತರಿಸುತ್ತಿದ್ದೆ.
ನವೆಂಬರ್ 25 ಮಗನ ಜನ್ಮದಿನ. ನವೆಂಬರ್ 13 ರವಿ ನೆನಪಿನ ಪುಟಗಳಲ್ಲಿ ಸೇರಿಹೋದ ದಿನ. ನೆನಪಾದಾಗಲೆಲ್ಲ ದುಃಖ ಅನ್ನುವುದು ಸಾಗರದ ಅಲೆಗಳಂತೆ ಭೋರ್ಗರೆಯುತ್ತಲೇ ಇರುತ್ತದೆ. ‘ಅಮ್ಮಾ, I hate myself.. ನಾನು ಹುಟ್ಟಿದ ತಿಂಗಳೇ ಅಪ್ಪನನ್ನು ಕಳೆದು ಕೊಂಡೆ’ ಎನ್ನುತ್ತ ಮಗ ಅಳು ನುಂಗಿಕೊಳ್ಳುತ್ತಾನೆ.
ದುಃಖ, ನೋವು ನನಗೂ ಇದೆ. ಆದರೆ ನನಗಿಂತ ಹೆಚ್ಚಿಗೆ ಬಾಳಿ ಬದುಕಬೇಕಾದವನು ಅವನು. ಅವನ ಮುಂದೆ ನಿಸ್ಸಹಾಯಕ ಳಾಗಿ ಕಾಣಿಸಿಕೊಳ್ಳಬಾರದು. ಈಗ ಎಲ್ಲದಕ್ಕೂ ಅವನು ನನ್ನೆಡೆಗೇ ನೋಡುತ್ತಾನೆ. ಹೆಚ್ಚೆಂದರೆ ಇನ್ನೊಂದಾರು ವರ್ಷ!
ಅಲ್ಲೀ ತನಕ ಅವನನ್ನು ಮಾನಸಿಕವಾಗಿ ಗಟ್ಟಿಗೊಳಿಸಿಬಿಟ್ಟರೆ ಮುಂದೆ ತಂತಾನೇ ಅರಳಿ ನಿಂತು ಆಶ್ರಯವಾಗುತ್ತಾನೆ ಅಂದುಕೊಂಡೆ ನಾದರೂ, ಅದಕ್ಕೆ ಅಗತ್ಯವಾದ ಹಣಕಾಸಿನ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ? ವಾಟ್ಸಾಪ್ಗಳಲ್ಲಿ, ಮೆಸೆಂಜರುಗಳಲ್ಲಿ ಜನರು ‘ಅಷ್ಟು ಸಾವಿರ ಕೋಟಿ ಆಸ್ತಿ ಮಾಡಿದ್ದೀನಿ, ಅಷ್ಟು ಲಕ್ಷ ಟ್ಯಾಕ್ಸ್ ಕಟ್ತೀನಿ ಅಂತೆಲ್ಲ ರವಿ ಸರ್ ಹೇಳ್ತಿದ್ರಲ್ಲ? ನಿಮ್ಮ ಜೀವನಕ್ಕೆ ಏನೂ ಮಾಡಿಟ್ಟೇ ಇಲ್ವಾ?’ ಎನ್ನುವ ಪ್ರಶ್ನೆಗಳಲ್ಲಿ ತಿವಿಯುತ್ತಿದ್ದರೆ, ‘ಯಾರ ಮುಂದೆಯೂ ದೇಹಿ ಅನ್ನುವಂತೆ ಮಾಡದೆ ನಾವು ಗೌರವದಿಂದ ಬದುಕು ನಡೆಸುವಷ್ಟು ನಮ್ಮ ಪಾಲಿಗಿಟ್ಟಿದ್ದಾರೆ’ ಎನ್ನುವ ಉತ್ತರ ಕೊಟ್ಟೆನಾದರೂ, ಎತ್ತರಕ್ಕೆ ಜಿಗಿದ ಕನಸುಗಳು ನನಸಾಗದೆ ಪಾತಾಳಕ್ಕೆ ಕುಸಿದುಹೋಗಿದ್ದವು.
ಏನಾದರೂ ಮಾಡೋಣವೆಂದರೆ ಕೊರೋನಾ ಒಂದಿಂಚೂ ಅಲುಗಾಡದಂತೆ ಕಟ್ಟಿಹಾಕಿ ಕೂರಿಸಿಬಿಟ್ಟಿತ್ತು. ಖರ್ಚುಗಳು ಬೆಟ್ಟ-ಗುಡ್ಡಗಳಂತೆ ಎದ್ದೆದ್ದು ಬಂದವು. ಸಣ್ಣ-ಪುಟ್ಟ ವಿಷಯಗಳಿಗೂ ಅಕ್ಕಪಕ್ಕದವರು ಕಿರಿಕಿರಿ ಮಾಡಲಾರಂಭಿಸಿದರು. ಸಾಲು ಸಾಲಾಗಿ ರವಿಯಿಂದ ಸಹಾಯ ಪಡೆದ ಜನರೆಲ್ಲ ಅದೆಲ್ಲಿ ಮಾಯವಾಗಿ ಹೋದರೋ? ಅಷ್ಟರಲ್ಲಿ ಸಾಂತ್ವನದ ಮಾತಾಡಿ ಹೋಗಲು ಬಂದ ಗೆಳತಿ ಚಂದ್ರ ವಸುದೇವಾಚಾರ್ ಅವರ ಬಳಿ, ‘ನಮ್ಮ ಮನೆಯನ್ನು ಷೂಟಿಂಗ್ಗೆ ಕೊಟ್ಟರೆ ಹೇಗೆ? ಒಂದು ಆದಾಯದ ಮೂಲ ದೊರೆಯುತ್ತದಲ್ಲ?’ ಎಂದು ಕೇಳಿದಾಗ, ಅವರೂ ಖುಷಿಯಿಂದಲೇ, ‘ಕೊಡುವ ಹಾಗಿದ್ದರೆ ನನಗೇ ಕೊಡಿ, ಅದನ್ನು ನಾನೇ ನಿರ್ವಹಿಸಿಕೊಂಡು ಹೋಗುತ್ತೇನೆ.
ನಿಮಗೆ ಯಾವ ತೊಂದರೆಯೂ ಆಗದಂತೆ ತಿಂಗಳಿಗಿಷ್ಟು ಹಣ ಬಾಡಿಗೆಯಂತೆ ಕೊಡುತ್ತೇನೆ’ ಎಂದಾಗ ತಲೆಯ ಮೇಲಿದ್ದ ದೊಡ್ಡಭಾರ ಇಳಿದಂತಾಗಿತ್ತು. ಅದರ ಜತೆಗೆ ಕೊಟ್ಟ ಡಿಪಾಸಿಟ್ ಹಣದಿಂದ ೨ನೇ ಅಂತಸ್ತಿನಲ್ಲೊಂದು ಪುಟ್ಟ ಕಿಚನ್ ಮತ್ತು ಓಪನ್ ಟೆರೇಸಿಗೆ ರೂಫ್ ಮಾಡಿಸಿ ನಾವು ಅಲ್ಲಿರಲು ಆರಂಭಿಸಿ, ಉಳಿದ ಮನೆಯನ್ನು ಷೂಟಿಂಗಿಗೆ ಕೊಟ್ಟೆ.
ಆರಂಭದಲ್ಲಿ ನಮ್ಮ ನಡುವೆಯಿದ್ದ ಹೊಂದಾಣಿಕೆಯಿಂದ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ನಡುವೆ ಅವರು ತಂದಿಟ್ಟ ಮ್ಯಾನೇಜರ್ನಿಂದಾಗಿ ನಮ್ಮ ನಡುವಿನ ಸೇತುವೆ ಮುರಿದು, ಆ ಮ್ಯಾನೇಜರ್ ಮೂಲಕ ಮಾತಾಡಲು ಆರಂಭಿಸಿದೆವು. ಮನೆಯೊಳಗೆ ಯಾವ ಚಿತ್ರದ ಯುನಿಟ್ ಬಂದಿದೆ? ಯಾವ ಚಿತ್ರದ ಚಿತ್ರೀಕರಣ ನಡೆಯುತ್ತಿದೆ? ಎಂಬುದರ ಮಾಹಿತಿಯೇ ಇಲ್ಲದಂತಾಯ್ತು. ಒಂಥರಾ, ಸಂತೆಯಲ್ಲಿ ಅನಾಥರಾಗಿ ಕುಳಿತ ಅನುಭವ. ಸಾಲದ್ದಕ್ಕೆ, ಬರುತ್ತಿದ್ದ ಲೈಟ್ಬಾಯ್ಗಳು ಲೈಟಿಂಗಿ ಗೆಂದು ಇಟ್ಟ ಪವರ್ ಬಾಕ್ಸ್ನಲ್ಲಿ wrong connection Pæãoár reverse earthing ಆಗಿ ಫ್ರಿಜ್ಜು, ಟಿವಿ, ನಲ್ಲಿ, ಕಿಟಕಿ, ಬಾಗಿಲುಗಳೆಲ್ಲ ಮುಟ್ಟಿದರೆ ಶಾಕ್ ಹೊಡೆಯಲು ಶುರುವಾಯ್ತ.
ರಾತ್ರಿ ಊಟ ಮುಗಿಸಿ ಕೈತೊಳೆಯಲು ಹೋದ ಮಗನಲ್ಲಿ ಮುಟ್ಟಿದಾಗ ಸರಿಯಾಗಿ ಶಾಕ್ ಹೊಡೆದಿದೆ. ಅವನು ಹೆದರಿ ಬಂದು ಕುಳಿತು ದೊಡ್ಡದನಿಯಲ್ಲಿ ಅಳಲು ಶುರುಮಾಡಿದ. ‘ಅಮ್ಮಾ, ಇನ್ನೂ ಎಷ್ಟು ದಿನ ಹೀಗೆ? ನಂಗಿಲ್ಲಿರೋಕೇ ಭಯ ಆಗ್ತಿದೆ. ಪ್ಲೀಸ್ ಸ್ಟಾಪ್ ದ ಷೂಟಿಂಗ್’ ಎನ್ನುತ್ತ ಮಲಗಲೂ ಭಯವಾಗಿ ಅಳುತ್ತಲೇ ಇದ್ದ. ‘ಆಗಲಿ ಪುಟ್ಟಾ, ಹಾಗೇ ಮಾಡೋಣ. ಈಗ ಒಂದು
ವರ್ಷದ ಕಾಂಟ್ರಾಕ್ಟ್ ಆಗಿಹೋಗಿದೆ. ಅವರೂ ಇದಕ್ಕೆ ಸಾಕಷ್ಟು ಇನ್ವೆಸ್ಟ್ ಮಾಡಿರುತ್ತಾರೆ. ಕೂಡಲೇ ಬೇಡ ಅಂದ್ರೆ ಕಷ್ಟ ವಾಗುತ್ತೆ.
ಜತೆಗೆ ಅವರಿಗೆ ಡಿಪಾಸಿಟ್ ಹಣವನ್ನು ಹಿಂದಿರುಗಿಸಬೇಕಾಗುತ್ತದೆ. ಅದನ್ನಾಗಲೇ ಕಿಚನ್ನಿಗೆ, ರೂಫಿಗೆ ಅಂತ ಖರ್ಚುಮಾಡಾಗಿದೆ. ಅದೇನಾಗಿದೆ ಸಮಸ್ಯೆ ಸರಿಮಾಡಿಸೋಣ’ ಎನ್ನುತ್ತ ಬೆಳಗ್ಗೆಯೇ ನಮ್ಮ ಎಲೆಕ್ಟ್ರಿಷಿಯನ್ ರಘುಗೆ ಫೋನ್ ಮಾಡಿ ತಿಳಿಸಿದೆ. ಅವರು ಕಳಿಸಿಕೊಟ್ಟ ಪರಿಣತರು ಇಡೀ ಮನೆಯನ್ನು ಶೋಧಿಸಿ ಸಮಸ್ಯೆಯನ್ನು ಕಂಡುಹಿಡಿದು ಅದಕ್ಕೊಂದು ಪರಿಹಾರವನ್ನು
ಮಾಡಿ ಕೊಟ್ಟು ಹೋದರು.
‘ಅಬ್ಬ! ಸದ್ಯ ಸಮಸ್ಯೆ ಬಗೆಹರಿಯಿತಲ್ಲ’ ಎಂದು ನಿಟ್ಟುಸಿರಾಗುವಷ್ಟರಲ್ಲೇ ಕೊರೋನಾದ 2ನೇ ಅಲೆ ಎಲ್ಲರನ್ನೂ ಕಂಗೆಡಿಸಿ ಬಿಟ್ಟಿತು. ಅದರ ಹೊಡೆತ ಚಿತ್ರರಂಗದ ಮೇಲೂ ಸಾಕಷ್ಟಾಯಿತು. ಸಮಸ್ಯೆಯ ನಿಯಂತ್ರಣಕ್ಕೆ ಸರಕಾರವು ಅನಿವಾರ್ಯವಾಗಿ ತಿಂಗಳುಗಟ್ಟಲೆ ದಿಗ್ಬಂಧನ ಹೇರಲೇಬೇಕಾದಂಥ ಪರಿಸ್ಥಿತಿ ಎದುರಾಯಿತು. ‘ನೀವು ಅನುಮತಿಸಿದರೆ, ಧಾರಾವಾಹಿಯ ತಂಡ ವೊಂದು ಒಂದು ತಿಂಗಳ ಕಾಲ ಮನೆಯಲ್ಲೇ ಉಳಿದುಕೊಂಡು ಅಗತ್ಯದ ಭಾಗವನ್ನು ಷೂಟ್ ಮಾಡಿಕೊಳ್ಳುತ್ತದಂತೆ’ ಎಂದು ಕೇಳಿದಕ್ಕೆ ನಾನು ‘ಸಾಧ್ಯವಿಲ್ಲ’ ಎಂದಾಗ ಅವರು ಬೇರೆ ಮನೆಯನ್ನು ಹುಡುಕಿಕೊಂಡರು.
ಇದರಿಂದಾಗಿ ನಮಗೆ ತಿಂಗಳಿಗೆ ಹತ್ತತ್ತಿರ ಎರಡೂವರೆ ಲಕ್ಷ ರುಪಾಯಿಯ ನಷ್ಟವಾಯಿತು ಎಂದು ಪೇಚಾಡಿದರು. ಮಾಡಿಕೊಂಡ ಅಗ್ರಿಮೆಂಟಿನಲ್ಲಿ, ಸರಕಾರವೇ ಹೊರಗೆ ಓಡಾಡದಂತೆ ನಿರ್ಬಂಧ ಹೇರಿದರೆ ಅಷ್ಟು ದಿನಗಳ ಬಾಡಿಗೆ ಕೊಡುವ ಅವಶ್ಯಕತೆಯಿಲ್ಲ ಎಂಬ ಕರಾರಿನಂತೆ ೨ ತಿಂಗಳು ಬಾಡಿಗೆಯೇ ಬರಲಿಲ್ಲ. ಆದರೆ ಈ ಬಾರಿ ಬ್ಯಾಂಕಿನವರು ಯಾವುದೇ ಮುಲಾಜಿಲ್ಲದೆ ಸಾಲದ ವಸೂಲಿ ಮಾಡುತ್ತಿದ್ದರು. ಕೈಲಿದ್ದ ಹಣವೆಲ್ಲ ಖಾಲಿಯಾಗಿ ಹೋಗುತ್ತಿತ್ತು. ಇದರ ನಡುವೆ, ಇದ್ದ ನಮ್ಮ ಸೆಕ್ಯುರಿಟಿ ಗಾರ್ಡ್
ಮೀಡಿಯೇಟರ್ ಆಗಿ ಕಮಿಷನ್ ರುಚಿಗೆ ಪಳಗಿಬಿಟ್ಟ.
ಕೆಲಸದಲ್ಲಿ ಆಸಕ್ತಿ ಕಡಿಮೆಯಾಯ್ತು. ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಎಂದು ನಿರ್ಧರಿತವಾದ ಷೂಟಿಂಗ್ ಕೆಲವೊಮ್ಮೆ ನಮ್ಮ ಗಮನಕ್ಕೆ ಬಾರದೆಯೇ ರಾತ್ರಿಯಿಡೀ ನಡೆಯಲಾರಂಭವಾಯ್ತು. ಬಂದವರು ಅಲ್ಲಲ್ಲಿ ಎಸೆಯುವ ಕಾಫಿಲೋಟಗಳು, ಉಗಿಯುವ ಪಾನ್ ಪರಾಗ್ಗಳು, ಗೋಡೆಗಳಿಗೆ ಹೊಡೆಯುವ ಮೊಳೆಗಳು, ಎಳೆದಾಡುವ ಫರ್ನೀಚರ್ಗಳು, ಒಡೆದುಹಾಕಿದ ಲೈಟುಗಳು, ಗ್ಲಾಸ್ ಡೋರುಗಳು, ಮುರಿದುಹಾಕಿದ ಟೈಲ್ಸ್, ಚೇರು-ಟೇಬಲ್ಲುಗಳು, ಮೆತ್ತಿದ ಸೆಲ್ಲೋಟೇಪುಗಳು, ಕುಡಿದು ಮಾಡಿದ ಗಲಾಟೆಗಳು ಮನೆ
ಯನ್ನು ಸಾರ್ವಜನಿಕ ಶೌಚಾಲಯಕ್ಕಿಂತ ಕಡೆ ಮಾಡಿಬಿಟ್ಟವು.
ಎಲ್ಲವನ್ನೂ ಸುಮ್ಮನೇ ಸಹಿಸಿಕೊಂಡೆ. ಆರೇಳು ತಿಂಗಳು ಕಳೆಯುವುದರೊಳಗೆ, ‘ನಿಮ್ಮ ಮನೆಯ ಪಕ್ಕದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯ ಸಪ್ಪಳ, ಜತೆಗೆ ನಿಮ್ಮ ನಾಯಿಗಳ ಬೊಗಳುವಿಕೆಯಿಂದ ಷೂಟಿಂಗಿಗೆ ಬಹಳ ತೊಂದರೆಯಾಗುತ್ತಿದೆ. ಹೀಗಾಗಿ ಯಾರೂ ಬರಲೊಪ್ಪುತ್ತಿಲ್ಲ. ಹೀಗೇ ಮುಂದುವರಿದರೆ ನನಗೆ ತುಂಬ ನಷ್ಟವಾಗುತ್ತೆ. ಹೇಗಿದ್ದರೂ ಡಿಸೆಂಬರ್ಗೆ ಒಂದು ವರ್ಷದ ಕಾಂಟ್ರಾಕ್ಟ್ ಮುಗಿಯುತ್ತದೆ. ನೀವು ಡಿಪಾಸಿಟ್ ಹಣವನ್ನು ಆಗಲೇ ಹಿಂದಿರುಗಿಸಿ ತೊಂದರೆಯಿಲ್ಲ. ಆದರೆ ಬಾಡಿಗೆ ಹಣವನ್ನು ಕೊಡುವುದು ನನಗೆ ಕಷ್ಟವಾಗುತ್ತದೆ.
ಹೇಗಿದ್ದರೂ ಎಲ್ಲವೂ ಅರೇಂಜ್ ಆಗಿದೆ. ನಿಮಗೆ ಹೆಚ್ಚಿನ ಇನ್ವೆಸ್ಟ್ಮೆಂಟ್ ಏನೂ ಬರೋಲ್ಲ. ಅದನ್ನು ನೀವೇ ಮುಂದು ವರಿಸಿಕೊಂಡು ಹೋಗಬಹುದು. ಜತೆಗೆ ನಾನಿದ್ದೇ ಇರುತ್ತೇನೆ’ ಎಂದರು. ನನಗೂ ಅದು ಒಪ್ಪಿಗೆಯಾಯಿತು. ‘ಆಗಲಿ’ ಎಂದೆ.
ವ್ಯವಹಾರದ ನಡುವೆ ಸ್ನೇಹ ಬಾಡದೆ ಇರಲಿ ಎನ್ನುತ್ತ ಪರಸ್ಪರ ವಿಶ್ವಾಸದಿಂದಲೇ ವ್ಯವಹಾರದಿಂದ ದೂರ ಸರಿದೆವು. ನಂತರ ಶುರುವಾಗಿದ್ದೇ ಬೇರೆ ಕಥೆ. ಇದ್ದ ಮ್ಯಾನೇಜರ್ಗೆ ತಿಂಗಳ ಸಂಬಳ ಕೊಡಲೇಬೇಕು. ನನಗೆ ಇಂಡಸ್ಟ್ರಿಯ ಪರಿಚಯವಿಲ್ಲ. ಆತ ‘ಮೇಡಂ, ಯಾವುದಕ್ಕೂ ನೀವು ನೇರವಾಗಿ ಯಾರ ಹತ್ತಿರವೂ ಮಾತಾಡಬೇಡಿ.
ಯಾವುದೇ ಕಾರಣಕ್ಕೂ ಕೆಳಗಿಳಿದು ಬರಬೇಡಿ. ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ. ನಿಮ್ಮ ನಂಬಿಕೆಗೆ ದ್ರೋಹ ಮಾಡಲ್ಲ.
ನನ್ನನ್ನು ನಂಬಿ’ ಎಂದಾಗ, ಅಷ್ಟು ತಿಂಗಳಿನಿಂದ ನೋಡಿದ್ದೆನಲ್ಲಾ, ಅವನ ವರ್ತನೆಯಲ್ಲಿ ಯಾವುದೇ ರೀತಿಯ ಅಸಭ್ಯತೆ ಕಾಣದಿದ್ದುದರಿಂದ ನಿಶ್ಚಿಂತಳಾದೆ. ಆದರೆ ನಿಧಾನಕ್ಕೆ ವ್ಯವಹಾರ ತಿಳಿಯಲಾರಂಭಿಸಿತು. ಪ್ರಶ್ನೆ ಮಾಡಲು ಶುರುಮಾಡಿದೆ. ಆದರೆ ನಾನೇ ಹೋಗಿ ವ್ಯವಹಾರ ಮಾಡುವುದು ಕಷ್ಟ. ಹೀಗಾಗಿ ನನ್ನ ತಂಗಿಯ ಗಂಡನನ್ನು ಮ್ಯಾನೇಜರ್ ಮಾಡಿದೆ. ಇದರಿಂದ
ಅಸಮಾಧಾನಗೊಂಡು ಎಲ್ಲ ವ್ಯವಹಾರ ಮೂಲಗಳನ್ನೂ ಬ್ಲಾಕ್ ಮಾಡಿಬಿಟ್ಟರು. ಆರು ತಿಂಗಳಾಗುವಷ್ಟರಲ್ಲೇ ಸಾಕೆನಿಸಿ ಹೋಯ್ತು. ಒಂದು ದೀರ್ಘ ನಿಟ್ಟುಸಿರು ಬಿಟ್ಟು, ‘ಇನ್ನು ಸಾಕಿದು. ಇದರಿಂದ ಅದೆಷ್ಟೇ ಲಾಭ ಬಂದರೂ ನನಗದು ಬೇಡ.
ನನಗೆ ಮೊದಲಿನಂತೆ ನನ್ನ ಮನೆ ಬೇಕು, ನೆಮ್ಮದಿ-ಸ್ವಾತಂತ್ರ್ಯ ಬೇಕು. ನನ್ನ ಅಕಾಡೆಮಿಯನ್ನು ಮತ್ತೆ ಆರಂಭಿಸುತ್ತೇನೆ. ರವಿ ಹೇಳಿದ್ದರಲ್ಲ? ‘ಯಶಸ್ವಿ’ ಇಲ್ಲಿಗೇ ನಿಲ್ಲಬಾರದು, ಇದು ಇನ್ನೂ ಎತ್ತರಕ್ಕೆ ಬೆಳೆಯಬೇಕು ಅಂತ, ಅದನ್ನು ಪೂರ್ಣಗೊಳಿಸುತ್ತೇನೆ’ ಎಂದು ನಿರ್ಧರಿಸಿ, ಇದ್ದ ವಡವೆಗಳನ್ನು ಮಾರಿ, ಅವರು ಕೊಟ್ಟಿದ್ದ ಡಿಪಾಸಿಟ್ ಹಣವನ್ನು ಹಿಂದಿರುಗಿಸಿದೆ. ಹಾಳಾಗಿಹೋಗಿದ್ದ
ಮನೆಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು 4-5 ತಿಂಗಳೇ ಹಿಡಿಯಿತು.
ಇನ್ನೂ ರಿಪೇರಿ ಕೆಲಸ ಆಗಾಗ ನಡೆಯುತ್ತಲೇ ಇರುತ್ತದೆ. ಆದರೂ ಮನಸ್ಸಿಗೆ ಖುಷಿಯಿದೆ, ನೆಮ್ಮದಿಯಿದೆ. ಅವರು ಮತ್ತೆ ಬಂದು, ‘ತಿಂಗಳಿಗೆ 1 ಲಕ್ಷ ರೂಪಾಯಿ ಕೊಡುತ್ತಾರಂತೆ, ಮನೆಯನ್ನು ಮತ್ತೆ ಷೂಟಿಂಗಿಗೆ ಕೊಡ್ತೀಯಾ? ಒಂದು ವರ್ಷವಾಗುವಷ್ಟರಲ್ಲಿ ನಿನ್ನ ಸಮಸ್ಯೆಗಳೆಲ್ಲ ಬಗೆಹರಿದ ಮೇಲೆ ನಿನ್ನ ಮನೆ ನಿನಗೆ ವಾಪಸ್ ಸಿಗುತ್ತದೆ, ಯೋಚಿಸಿ ನೋಡು’ ಅಂದಾಗ, ‘ಬೇಡವೇ ಬೇಡ.
ಯಶಸ್ವಿಯೇ ಜತೆಗಿರಲಿ’ ಎನ್ನುತ್ತ ದೃಢವಾಗಿ ತಿಳಿಸಿದೆ.
‘ಯಶಸ್ವಿ’ಯ ಮರುಹುಟ್ಟಿಗೀಗ ಭರ್ತಿ ಆರು ತಿಂಗಳು. ಈಗ ಮೇಲಿನ 2ನೇ ಮಹಡಿಯಲ್ಲಿ ಶಶಿಕಲಾ ವಸದ್ ಬಾಡಿಗೆಗೆ ಬಂದಿ ದ್ದಾರೆ. ಮನೆಯನ್ನು ನನಗಿಂತ ಚೆಂದಗಿಟ್ಟುಕೊಂಡಿದ್ದಾರೆ. ನಡುನಡುವೆ ಸಾಹಿತ್ಯಲೋಕದ ಚರ್ಚೆಗಳಾಗುತ್ತಿರುತ್ತವೆ. ಮಕ್ಕಳಿಗೆ ಕನ್ನಡದ ಅಭಿಮಾನದ ಪಾಠ. ಸಂಜೆಯಾಯಿತೆಂದರೆ ಮಕ್ಕಳ ಕಲರವ. ನಗುವೇ ನಗವು ನಲಿವೇ ಜಗವು ಜೀವನ ಸೊಬಗಿನ ಹೂವು….