Saturday, 26th October 2024

ಪಕ್ಷಕ್ಕೆ ಬರುವವರನ್ನು ಆತ್ಮೀಯವಾಗಿ ಸ್ವಾಗತಿಸೋಣ

ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಮತ

ಚಿಕ್ಕಬಳ್ಳಾಪುರ : ಬಿಜೆಪಿ ಮಹಾ ಸಮುದ್ರದಂತೆ, ಯಾರೇ ಪಕ್ಷಕ್ಕೆ ಬಂದರೂ ಆತ್ಮೀಯವಾಗಿ ಬರಮಾಡಿಕೊಳ್ಳಬೇಕು, ಸಮಾನ ಗೌರವ ನೀಡುವ ಮೂಲಕ ಪಕ್ಷ ಬಲವರ್ಧನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕ ಮನವಿ ಮಾಡಿದರು.

ತಾಲೂಕಿನ ಗೊಲ್ಲಹಳ್ಳಿ ಗೇಟ್ ಬಳಿ ಭಾನುವಾರ ಆಯೋಜಿಸಿದ್ದ ಸ್ಥಳೀಯ ಮುಖಂಡರ ಸಭೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ ನಲ್ಲಗುಟ್ಟ ಪಾಳ್ಯ ಗ್ರಾಪಂ ಸದಸ್ಯೆ ಕಾಂತಮ್ಮ ತಿಪ್ಪಾರೆಡ್ಡಿ ಮತ್ತು ಅವರ ಬೆಂಬಲಿಗ ರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಹೊಸಬರು ಬಂದ ಕಾರಣಕ್ಕೆ ಹಳಬರು ಎದೆಗುಂದಬೇಕಿಲ್ಲ ಎಂದು ಕಾರ್ಯಕರ್ತರಿಗೆ ಕಿನಿಮಾತು ಹೇಳಿದರು.

ಬೇಧಭಾವ ಬೇಡ

ಪಕ್ಷದಲ್ಲಿ ಹಿರಿಯ, ಕಿರಿಯ ಎಂಬ ಯಾವುದೇ ಬೇಧವಿಲ್ಲ. ನದಿಯಲ್ಲಿ ಹಳೇ ನೀರು, ಹೊಸ ನೀರು ಬೆರೆತು ಒಟ್ಟಾಗಿ ಹರಿಯುವಂತೆ ವಲಸಿಗ ಮತ್ತು ಮೂಲ ಎಂಬ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಎಲ್ಲರೂ ಬೆರೆತು ನಡೆಯಬೇಕು. ಹರಿಯೋ ನದಿಯಲ್ಲಿ ನೀರೆಲ್ಲ ಒಂದೇ ಎಂಬ ಮಾತಿನಂತೆ ನಾವೆಲ್ಲ ಮುಂದೆ ಸಾಗೇಣ ಎಂದು ಸಚಿವರು ಕರೆ ನೀಡಿದರು.

ನಾವು ನೋಡಬೇಕಿರುವುದು ಅಭಿವೃದ್ಧಿ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರೂ ಕೈ ಜೋಡಿಸೋಣ. ಅಭಿವೃದ್ಧಿ ಪಥದಲ್ಲಿ ಕ್ಷೇತ್ರ ಉತ್ತಂಗ ತಲುಪಲು ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು.

ಪ್ರಧಾನಿ ಮೋದಿಯವರ ಮಾತು ಕೇಳಲು ಇದೊಂದು ಸದಾವಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸ ಬೇಕು, ಅಂಬೇಡ್ಕರ್ ಅವರು ಒಂದು ಜಾತಿಗೆ ಸೀಮಿತರಾದವರಲ್ಲ, ಅವರು ಈ ಸಮಾಜ ಮತ್ತು ದೇಶದ ಆಸ್ತಿ. ಅದೇ ರೀತಿಯಲ್ಲಿ ವಾಲ್ಮೀಕಿ ಅವರು ರಚನೆ ಮಾಡಿದ ರಾಮಾಯಣ ಒಂದು ಜಾತಿಗೆ ಸೀಮಿತವಾಗಿಲ್ಲ. ಮಾನವ ಕುಲಕ್ಕೆ ಸಮಾಜ ಸುಧಾರಣೆ ಬಯಸಿದ ಮಹನೀಯರೆಲ್ಲರೂ ಸಮಾಜದ ಆಸ್ತಿ ಎಂಬುದನ್ನು ಮರೆಯಬಾರದು ಎಂದರು.

ವಿಶ್ವ ಮಾನವರಾಗಬೇಕು

ಸಾವಿರಾರು ವರ್ಷಗಳ ಹಿಂದೆಯೇ ಇವರು ಸಮಾನತೆ ಸಾರಿದವರು, ಹಾಗಾಗಿಯೇ ಇವರು ಮಹನೀಯರಾಗಿದ್ದಾರೆ. ಇದೇ ಗುಂಪಿಗೆ ಸೇರಿದವರು ಕೆಂಪೇಗೌಡರು. ಅಲ್ಪ ಮಾನವನಾಗಿ ಹುಟ್ಟಿ, ವಿಶ್ವ ಮಾನವರಾಗಿ ಸಾಯಬೇಕು ಎಂದಿದ್ದಾರೆ ಕುವೆಂಪು. ಸಮಾಜಕ್ಕೆ ನಮ್ಮ ಕೊಡುಗೆ ನೀಡಿದಾಗ ಮಾತ್ರ ನಾವು ವಿಶ್ವ ಮಾನವರಾಗಲು ಸಾಧ್ಯ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು.

ನಿಸ್ವಾರ್ಥ ಸೇವೆಯ ಸಿದ್ಧಾಂತದಡಿ ಕೆರೆಗಳನ್ನು ಕಟ್ಟಿದರು ಕೆಂಪೇಗೌಡರು, ಆ ಕಾಲದಲ್ಲಿಯೇ ಪರಿಸರ ಸಂರಕ್ಷಣೆ ಮಾಡಿ ದವರು ಕೆಂಪೇಗೌಡರು. ಇಂತಹ ಮಹನೀಯರಿಗೆ ರಾಜ್ಯ ಸರ್ಕಾರ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುತ್ತಿರುವುದು ಹರ್ಷನೀಯ ಎಂದು ಹೇಳಿದರು.

ನಿಗಮದ ಮೊದಲ ನಿರ್ದೇಶಕರಾಗಿ ರಾಜಣ್ಣ

ಕೆಂಪೇಗೌಡರ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ನಿಗಮದ ಮೊದಲ ನಿರ್ದೇಶಕರಾಗಿ ಆವುಲಗುರ್ಕಿ ರಾಜಣ್ಣ ಅವರು ನೇಮಕವಾಗಿದ್ದಾರೆ. 56 ವರ್ಷಗಳ ಕಾಲ ಆಡಳಿತ ನಡೆಸಿದವರು ಕೇವಲ ಸ್ವಾರ್ಥಕ್ಕಾಗಿ ಅಧಿಕಾರ ಅನುಭವಿಸಿದರೆ, ಬಿಜೆಪಿ ಸರ್ಕಾರ ಎಲ್ಲರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಸಚಿವರು ಹೇಳಿದರು.

ವಿರೋಧಪಕ್ಷದವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ತಿರುಚುತ್ತಾರೆ ಎಂದು ಆರೋಪಿಸಿದರು. ಕಳೆದ 56 ವರ್ಷಗಳಿಂದ ಸುಳ್ಳು ಹೇಳುತ್ತಲೇ ಬಲಹೀನ ವರ್ಗಗಳ ಮತ ಪಡೆದಿದ್ದಾರೆ. ಆದರೆ ಅವರಿಗೆ ಮೀಸಲಾತಿ ನೀಡಲು ಸಾಧ್ಯ ವಾಗಲಿಲ್ಲ. 56 ವರ್ಷ ಅಧಿಕಾರ ನಡೆಸಿದವರು ನೀಡದ ಮೀಸಲಾತಿ ಬಿಜೆಪಿ ಸರ್ಕಾರ ನೀಡಿದೆ ಎಂದು ಹೇಳಿದರು.

ಉಪವಾಸ ಸತ್ಯಾಗ್ರಹದ ಮೂಲಕ ಮೀಸಲಾತಿಗಾಗಿ ಹೋರಾಟ ನಡೆಸಿದ ಶ್ರೀ ಪ್ರಸನ್ನಾನಂದ ಶ್ರೀಗಳಿಗೆ ಜಿಲ್ಲೆಯಲ್ಲಿ ಬೃಹತ್ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗುವುದು. ಇದೇ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲಾಗುವುದು. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಮೀಸಲಾತಿ ಸರಿಪಡಿಸಲು ಮುಖ್ಯಮಂತ್ರಿಗಳು ಶ್ರಮಿಸು ತ್ತಿದ್ದಾರೆ, ಮುಂದಿನ ದಿನಗಳಲ್ಲಿ ಈ ಭಾಗವನ್ನು ಕೈಗಾರಿಕಾ ಪ್ರದೇಶ ಮಾಡಲಾಗುವುದು ಇದಕ್ಕೆ ಅಗತ್ಯವಿರುವ ಭೂಮಿ ವಶಕ್ಕೆ ಪಡೆಯಲು ಎಲ್ಲರ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಮುನಿರಾಜು, ಜೆ.ಕೆ. ರೆಡ್ಡಿ, ಆವುಲಕೊಂಡರಾಯಪ್ಪ, ರಾಜಣ್ಣ, ಮಿಲ್ಟನ್ ವೆಂಕಟೇಶ್, ರಾಮಣ್ಣ, ಮೂರ್ತಿ, ಜಾಲಪ್ಪ, ನರಸಿಂಹಯ್ಯ, ವೆಂಕಟರಮಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.