Sunday, 24th November 2024

ಅಭಿವೃದ್ದಿಗೆ ಕೂಡಿಕೆಯಾಗಲಿ ಹೂಡಿಕೆ

ಅಶ್ವತ್ಥಕಟ್ಟೆ

ranjith.hoskere@gmail.com

ಹೂಡಿಕೆಗೆ ಒಪ್ಪಂದವಾಗಿರುವ 9.8 ಲಕ್ಷ ಕೋಟಿ ರು.ಗಳ ಪೈಕಿ ಸುಮಾರು ಏಳು ಲಕ್ಷ ಕೋಟಿ ರು. ಅಧಿಕ ಮೊತ್ತದ ಹೂಡಿಕೆ ಒಪ್ಪಂದ, ಮಾತುಕತೆಗಳೆಲ್ಲ ವರ್ಷಗಳ ಹಿಂದೆಯೇ ಮುಗಿದಿತ್ತು. ಈ ಮೂರು ದಿನದ ಅವಧಿಯಲ್ಲಿ ಹೊಸದಾಗಿ ಸುಮಾರು ಎರಡು ಲಕ್ಷ ಕೋಟಿ ರು. ಹೂಡಿಕೆಗೆ ಒಪ್ಪಂದಗಾಳಗಿವೆ.

ಕರ್ನಾಟಕದಲ್ಲಿ ಅದಾನಿ ಸಂಸ್ಥೆಯಿಂದ ಒಂದು ಲಕ್ಷ ಕೋಟಿ ಹೂಡಿಕೆಯ ಭರವಸೆ… ವೇದಾಂತ ಸಂಸ್ಥೆಯಿಂದ 80 ಸಾವಿರ ಕೋಟಿ ರು. ಹೂಡಿಕೆ… ಒಟ್ಟಾರೆ 10 ಲಕ್ಷ ಕೋಟಿ ರು. ಹೂಡಿಕೆ.. ಕರ್ನಾಟಕ ದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿ…ಕಳೆದ ವಾರ ಬೆಂಗಳೂರಿನ ಅರಮನೆಯಲ್ಲಿ ಮೂರು ದಿನಗಳ ಕಾಲ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಸರ್ವೇ ಸಾಮಾನ್ಯವಾಗಿ ಕೇಳಿಬಂದ ಮಾತುಗಳು.

ಈ ಅಂಕಿ-ಅಂಶವನ್ನು ಅರಗಿಸಿಕೊಳ್ಳುವುದಕ್ಕೆ ಅನೇಕರು ಕೆಲ ಸಮಯ ಬೇಕಾಗುತ್ತದೆ. ಒಂದು ವೇಳೆ ಇಷ್ಟೂ ಹೂಡಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಿದರೆ, ಕರ್ನಾಟಕದಲ್ಲಿ ಕೈಗಾರಿಕಾ ವಲಯ ಮತ್ತೊಂದು ಸ್ತರಕ್ಕೆ ಹೋಗುವುದರಲ್ಲಿ ಅನುಮಾ ನವೇ ಇಲ್ಲ. ಆದರೆ ಇನ್ವೆಸ್ಟ್ ಕರ್ನಾಟಕದಲ್ಲಿ ‘ಹೂಡಿಕೆ’ ಬಗ್ಗೆ ಮಾತನಾಡಿರುವುದು ಅಸಲಿಯಾಗಿ ಜಾರಿಯಾಗುವುದೇ
ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಮೂಡುತ್ತದೆ.

ಹೌದು, ಕರ್ನಾಟಕದಲ್ಲಿ ಹೂಡಿಕೆದಾರರ ಸಮಾವೇಶ ನಡೆಯುತ್ತಿರುವುದು ಇದೇ ಮೊದಲಲ್ಲ. 2000ದಲ್ಲಿ ಎಸ್.ಎಂ ಕೃಷ್ಣ ಅವರು ಅಧಿಕೃತವಾಗಿ ಹೂಡಿಕೆದಾರರ ಸಮಾವೇಶ ಎಂದು ಘೋಷಿಸಿ ಸಮಾವೇಶವನ್ನು ಮಾಡಿದ್ದರು. ಅದಕ್ಕೂ ಮೊದಲು ಜೆ.ಎಚ್ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ 1996ರಲ್ಲಿ ಒಮ್ಮೆ ಆಗಿತ್ತು. ಆದರೆ ಈ ಹೆಸರಿನಲ್ಲಿ ಆಗಿರಲಿಲ್ಲ. ಅಂದಿನಿಂದ ಇಂದಿನವರೆಗೆ ವಿವಿಧ ಕಾಲಘಟ್ಟದಲ್ಲಿ, ವಿವಿಧ ಪಕ್ಷಗಳು ಅಧಿಕಾರದಲ್ಲಿರುವಾಗ ‘ಇನ್ವೆಸ್ಟ್ ಕರ್ನಾಟಕ’ವನ್ನು ಮಾಡಲಾಗಿದೆ. ಈ ಎಲ್ಲ ಹೂಡಿಕೆದಾರರ ಸಮಾವೇಶದಲ್ಲಿಯೂ ಕೋಟಿ ಕೋಟಿ ಲೆಕ್ಕದಲ್ಲಿ ಹೂಡಿಕೆಯಾಗಿರುವ ಘೋಷಣೆಗಳಾಗಿವೆ. ಆದರೆ ಬಹುತೇಕ ಹೂಡಿಕೆದಾರರ ಒಪ್ಪಂದಗಳು ಒಂದಿಲ್ಲೊಂದು ಕಾರಣಕ್ಕೆ ಅರ್ಧಕ್ಕೆ ನಿಂತಿರುವುದೇ ಹೆಚ್ಚು ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ.

ಇದೇ ವಿಷಯವನ್ನು ಇನ್ವೆಸ್ಟ್ ಕರ್ನಾಟಕದ ಸಮಾರೋಪ ಸಮಾರಂಭದಲ್ಲಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸ್ತಾಪಿಸಿದರು. ಅವರೇ ಹೇಳುವಂತೆ, ಅನೇಕ ಸಂಸ್ಥೆಗಳು ಸಮಾವೇಶದಲ್ಲಿ ಭಾಗವಹಿಸುತ್ತವೆ. ಹೂಡಿಕೆಗೆ ಒಪ್ಪಂದ ವನ್ನು ಮಾಡಿಕೊಳ್ಳುತ್ತವೆ. ಆದರೆ ವರ್ಷಾನುಗಟ್ಟಲೆಯಾದರೂ ಅದು ಕಾರ್ಯರೂಪಕ್ಕೆ ಬರುವುದಿಲ್ಲ. ಇಲ್ಲಿಗೆ ನಿಲ್ಲಿಸಿದೇ, ಈ ಹಿಂದಿನ ಸರಕಾರಗಳಲ್ಲಿ ನಡೆದ ಸಮಾವೇಶಗಳು ಎಷ್ಟು? ಎಷ್ಟು ಹೂಡಿಕೆಯಾಯಿತು? ಅದರಿಂದ ಬಂದ ಹೂಡಿಕೆ ಪ್ರಮಾಣ ವೆಷ್ಟು? ಎಷ್ಟು ಪರ್ಸೆಂಟ್ ಯಶಸ್ವಿಯಾಯಿತು ಎನ್ನುವ ಬಗ್ಗೆ ವಿವರಣೆಯನ್ನು ನೀಡಿದರು.

ಮುಖ್ಯಮಂತ್ರಿಗಳೇ ನೀಡಿರುವ ಅಂಕಿ-ಅಂಶವನ್ನು ನೋಡುವುದಾದರೆ, 2000ದಲ್ಲಿ ನಡೆದ ಮೊದಲ ಜಾಗತಿಕ ಹೂಡಿಕೆ ದಾರರ ಸಮಾವೇಶದಲ್ಲಿ, 27 ಸಾವಿರ ಕೋಟಿ ರು. ಹೂಡಿಕೆಯ ಭರವಸೆ ಸಿಕ್ಕಿತ್ತು. ಆದರೆ ಕಾರ್ಯಗತಗೊಂಡಿದ್ದು ಮಾತ್ರ ಶೇ.44ರಷ್ಟು ಬಂಡವಾಳ ಹೂಡಿಕೆ. ಇದಾದ ಬಳಿಕ 2010ರಲ್ಲಿ 3,94,768 ಕೋಟಿ ಭರವಸೆ ಸಿಕ್ಕು, ಅದರಲ್ಲಿ ಶೇ.14 ರಷ್ಟು ಮಾತ್ರ ಸಾಕಾರವಾಯಿತು. 2012ರಲ್ಲಿ 677,158 ಕೋಟಿ ಬಂಡವಾಳ ಭರವಸೆಯಲ್ಲಿ ಕೇವಲ ಶೇ.8ರಷ್ಟು ಈಡೇರಿದೆ.

ಇನ್ನು 2016ರಲ್ಲಿ 305000 ಕೋಟಿ ರು. ಹೂಡಿಕೆಯ ಭರವಸೆಯಲ್ಲಿ ಅಂತಿಮಗೊಂಡಿದ್ದು ಮಾತ್ರ ಶೇ.15ರಷ್ಟು. ಅಂದರೆ ಎಸ್.ಎಂ ಕೃಷ್ಣ ಅವಧಿಯಲ್ಲಿ ಆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಸಿಕ್ಕ ಭರವಸೆಗಳೇ ಹೆಚ್ಚು ಕಾರ್ಯ ಗತಗೊಂಡಿರುವುದು. ಇದೀಗ ಸುಮಾರು 9.8 ಲಕ್ಷ ಕೋಟಿ ರು. ಹೂಡಿಕೆಗಳಿಗೆ ಒಪ್ಪಂದಗಳಾಗಿವೆ ಎಂದು ಕೈಗಾರಿಕೆ ಇಲಾಖೆ ಹೇಳುತ್ತಿತ್ತು. ಇದರಲ್ಲಿ ಎಷ್ಟು ಕಾರ್ಯಗತಗೊಳ್ಳಲಿವೆ ಎನ್ನುವುದನ್ನು ಕಾದುನೋಡಬೇಕಿದೆ.

ಹಾಗೇ ನೋಡಿದರೆ ಕರ್ನಾಟಕದಂತ ಕೈಗಾರಿಕ ಸ್ನೇಹಿ ರಾಜ್ಯದಲ್ಲಿ ಹೂಡಿಕೆದಾರರು ಬರುವುದು ದೊಡ್ಡ ವಿಷಯವೇನಲ್ಲ. ಇಲ್ಲಿ ಯಾವುದೇ ಸರಕಾರ ಅಧಿಕಾರದಲ್ಲಿದ್ದರೂ, ಕೋಮು ಗಲಭೆ, ಪ್ರತಿಭಟನೆ, ಗಲಾಟೆಯ ಪ್ರಮಾಣ ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ. ಸಾರಿಗೆ ವ್ಯವಸ್ಥೆಯೂ ಉತ್ತಮ ಸ್ಥಿತಿಯಲ್ಲಿದೆ. ಐಟಿ-ಬಿಟಿ, ರಕ್ಷಣಾ, ಏರೋನಾಟಿಕ್ಸ್, ಫಾರ್ಮಾ ಕ್ಷೇತ್ರಗಳಿಗೆ ಬೆಂಗಳೂರು ಹೇಳಿಮಾಡಿಸಿದ ಜಾಗ. ಇದರೊಂದಿಗೆ ಇತರ ರಾಜ್ಯಗಳಿಗೆ ಹೋಲಿಸಿದರೆ, ಉತ್ತಮ ಮಾನವ
ಸಂಪನ್ಮೂಲ ಹಾಗೂ ಸ್ಥಳಗಳಿವೆ.

ಆದ್ದರಿಂದ ಯಾವುದೇ ಹೂಡಿಕೆದಾರ ಕರ್ನಾಟಕಕ್ಕೆ ಬರಲು, ಹೂಡಿಕೆ ಮಾಡಲು ಉತ್ಸುಕತೆ ತೋರುತ್ತಾನೆ. ಇತ್ತೀಚಿಗೆ ನವೀಕರಿಸಬಹುದಾದ ಇಂಧನದ ವಿಷಯದಲ್ಲಿಯೂ ಕರ್ನಾಟಕಕ್ಕೆ ಹೆಚ್ಚಿನ ಒತ್ತು ಸಿಗುತ್ತಿರುವುದು ಈ ಕ್ಷೇತ್ರದ ಸಂಸ್ಥೆಗಳು ಕರ್ನಾಟಕದತ್ತ ಬರಲು ಹೆಚ್ಚು ಉತ್ಸಾಹ ತೋರುತ್ತಾರೆ. ಇಷ್ಟೆಲ್ಲ ಅನುಕೂಲತೆಗಳಿರುವಾಗ ಆಗುವ ಸಮಸ್ಯೆಗಳಾದರೂ ಏನು
ಎನ್ನುವ ಪ್ರಶ್ನೆಗೆ ‘ಸರಕಾರ ವ್ಯವಸ್ಥೆ’ ಎನ್ನುವುದು ಸ್ಪಷ್ಟ. ಹೌದು, ಇದು ಬಿಜೆಪಿ ಅಥವಾ ಕಾಂಗ್ರೆಸ್ ಸರಕಾರದ ಸಮಸ್ಯೆಯಲ್ಲ. ಯಾವುದೇ ಸರಕಾರಗಳು ಬಂದರೂ, ಈ ಸಮಸ್ಯೆಗಳು ಇದ್ದೇ ಇರುತ್ತವೆ.

ಪ್ರಮುಖವಾಗಿ ಒಪ್ಪಂದ ಮಾಡಿಕೊಳ್ಳುವಾಗ ಬಹುತೇಕ ಸಂಸ್ಥೆಗಳಿಗೆ ‘ಯಾವುದೇ ತೊಡಕಾಗದಂತೆ’ ನೋಡಿಕೊಳ್ಳುವ ಭರವಸೆಗಳನ್ನು ಸರಕಾರಗಳು ಹೇಳುತ್ತವೆ. ಆದರೆ ಒಪ್ಪಂದದ ಬಳಿಕದ ಪ್ರಕ್ರಿಯೆಗೆ ಹತ್ತು ಹಲವು ತೊಡಕು, ಭೂ ಸ್ವಾಧೀನ
ಪ್ರಕ್ರಿಯೆಗೆ ಇರುವ ಸಮಸ್ಯೆಗಳು ಎದುರಾಗುತ್ತದೆ. ಉದಾಹರಣೆಗೆ ಬಳ್ಳಾರಿಯಲ್ಲಿ ಜಿಂದಾಲ್ ಸಂಸ್ಥೆಗೆ ಸಾವಿರಾರು ಎಕರೆ ಯನ್ನು ಸರಕಾರ ಕೆಲ ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ನೀಡಿ, ಬಳಿಕ ಆ ಭೂಮಿಯನ್ನು ಅದೇ ಸಂಸ್ಥೆಗೆ ನೀಡುವ ಒಪ್ಪಂದವನ್ನು ಮಾಡಿಕೊಂಡಿತ್ತು.

ಕುಮಾರಸ್ವಾಮಿ ಅವರ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಈ ಭೂಮಿಯನ್ನು ಜಿಂದಾಲ್ ಸಂಸ್ಥೆಗೆ ಪರಾಭಾರೆ ಮಾಡುವ ಸಮಯದಲ್ಲಿ ಪ್ರತಿಪಕ್ಷ ಬಿಜೆಪಿ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಆದರೆ ಲಕ್ಷಾಂತರ ಕೋಟಿ ಹೂಡಿಕೆ ಮಾಡಿರುವ ಸಂಸ್ಥೆಗೆ ಭೂಮಿ ಪರಾಭಾರೆಯಾಗದಿದ್ದಾಗ ಅವರಿಗೆ ಹತ್ತು ಹಲವು ಸಮಸ್ಯೆಗಳಾಗುತ್ತವೆ. ಹೋಗಲಿ ಆ ಭೂಮಿಯನ್ನು ವಾಪಸು ಸರಕಾರಕ್ಕೆ ತೆಗೆದುಕೊಳ್ಳಲು ಸಾಧ್ಯವೇ ಎಂದು ನೋಡಿದರೆ ಅದೂ ಸಾಧ್ಯವಿಲ್ಲ.

ಆದರೆ ರಾಜಕೀಯ ಹಿತಾಸಕ್ತಿಗೆ ಈ ರೀತಿಯ ವಿರೋಧದಿಂದ ಹಲವು ಕೈಗಾರಿಕೋದ್ಯಮಿಗಳಿಗೆ ‘ಭಾರಿ’ ಸಮಸ್ಯೆಯಾಗುತ್ತದೆ.
ಇದೊಂದು ಉದಾಹರಣೆ. ಇದೇ ರೀತಿ ಹಲವು ಸಂಸ್ಥೆಗಳಿಗೆ ಹಲವು ಹಂತದಲ್ಲಿ ಸಮಸ್ಯೆಯಾಗಿ ಒಪ್ಪಂದವನ್ನೇ ಪೂರ್ಣಗೊಳಿ ಸದೇ ಹಾಗೇ ಬಿಟ್ಟಿವೆ ಎನ್ನುವುದು ಕೈಗಾರಿಕೋದ್ಯಮಿಗಳ ಮಾತಾಗಿದೆ. ಅಧಿಕಾರಿಗಳ ಮಟ್ಟದಲ್ಲಿ ಹಾಗೂ ಸರಕಾರದ ಹಂತದಲ್ಲಿ ಆಗುವ ಹಲವಾರು ‘ಹಿತಾಸಕ್ತಿ’ ಸಂಘರ್ಷದಿಂದ ರಾಜ್ಯಕ್ಕೆ ಬರುವ ಕೈಗಾರಿಕೋದ್ಯಮಿಗಳು ‘ಮತ್ತೊಮ್ಮೆ
ಯೋಚಿಸುವಂತಾಗುತ್ತದೆ’.

ಈ ಎಲ್ಲ ಸಮಸ್ಯೆಗಳನ್ನು ನೋಡಿಯೇ ಈ ಬಾರಿ ಬಿಜೆಪಿ ಸರಕಾರ, ದಾವೋಸ್‌ನಿಂದ ಇಲ್ಲಿಯವರೆಗೆ ಹೂಡಿಕೆ ಮಾಡಲು ಸಿದ್ಧತೆ ಮಾಡಿಕೊಂಡಿರುವ ಎಲ್ಲ ಉದ್ಯಮಿಗಳಿಗೆ ಬೇಕಿರುವ ಅಗತ್ಯ ಸೌಲಭ್ಯದ ಬಗ್ಗೆ ನೋಡಿ, ಭೂಮಿಯನ್ನು ಸಿದ್ಧಪಡಿಸಿ ಕೊಂಡಿದೆ. ಮಾಹಿತಿಯ ಪ್ರಕಾರ, ಈ ಬಾರಿ ಹೂಡಿಕೆಗೆ ಒಪ್ಪಂದವಾಗಿರುವ 9.8 ಲಕ್ಷ ಕೋಟಿ ರು.ಗಳ ಪೈಕಿ ಸುಮಾರು ಏಳು ಲಕ್ಷ ಕೋಟಿ ರು. ಅಧಿಕ ಮೊತ್ತದ ಹೂಡಿಕೆ ಒಪ್ಪಂದ, ಮಾತುಕತೆಗಳೆಲ್ಲ ವರ್ಷಗಳ ಹಿಂದೆಯೇ ಮುಗಿದಿತ್ತು.

ಈ ಮೂರು ದಿನದ ಅವಧಿಯಲ್ಲಿ ಹೊಸದಾಗಿ ಸುಮಾರು ಎರಡು ಲಕ್ಷ ಕೋಟಿ ರು. ಹೂಡಿಕೆಗೆ ಒಪ್ಪಂದಗಾಳಗಿವೆ. ಆದ್ದರಿಂದ ಏಳು ಲಕ್ಷ ಕೋಟಿ ರು. ಹೂಡಿಕೆಗೆ ಈಗಾಗಲೇ ಭೂಮಿ ಮಂಜೂರು ಮಾಡಿ ಮುಂದಿನ ಮೂರು ತಿಂಗಳಲ್ಲಿ ಅನುಷ್ಠಾನವಾಗು ವಂತೆ ನೋಡಿಕೊಳ್ಳುವ ಭರವಸೆಯನ್ನು ಸರಕಾರ ನೀಡಿದೆ. ಇದರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕೈಗಾರಿಕೋದ್ಯಮಿ ಗಳಿಗೆ ಎದುರಾಗಬಹುದಾದ ಎಲ್ಲ ಸಮಸ್ಯೆಗೆ ‘ನೋಡಲ್ ಅಧಿಕಾರಿ’ಯನ್ನು ನೇಮಿಸುವ ಲೆಕ್ಕಾಚಾರದಲ್ಲಿ ಸರಕಾರಯಿದೆ.

ಈಗಾಗಲೇ ಐಟಿ-ಬಿಟಿಯಲ್ಲಿ ಭಾರಿ ಪ್ರಗತಿ ಸಾಧಿಸಿರುವ ಕರ್ನಾಟಕದಲ್ಲಿ ಈ ಎಲ್ಲ ‘ಚಾಲೆಂಜ್ ’ಗಳಿದ್ದರೂ ಕೈಗಾರಿಕೋ ದ್ಯಮಿಗಳು ಬರುವುದು ಅವರ ಅನಿವಾರ್ಯತೆಗೆ. ಆದರೆ ಇತ್ತೀಚಿನ ವರ್ಷದಲ್ಲಿ ನೆರೆರಾಜ್ಯಗಳು ಕರ್ನಾಟಕದ ಕೈಗಾರಿಕೋ ದ್ಯಮಿಗಳಿಗೆ ರತ್ನಗಂಬಳಿ ಹಾಸುತ್ತಿರುವುದರಿಂದ, ಕರ್ನಾಟಕ ಈ ವಿಷಯದಲ್ಲಿ ಎಚ್ಚರವಹಿಸಬೇಕಿರುವುದು ಅತ್ಯಗತ್ಯ. ಏಕೆಂದರೆ, ಯಾವುದೇ ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳು ಅತ್ಯವಶ್ಯ ಎನ್ನುವುದು ಎಲ್ಲ ರಾಜ್ಯ ಸರಕಾರಗಳಿಗೆ ತಿಳಿದಿರುವ ವಿಷಯ. ಅದಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಿ ಈ ರೀತಿ ಹೂಡಿಕೆದಾರರ ಸಮಾವೇಶವನ್ನು ಮಾಡಲಾಗುತ್ತದೆ.

ಆದರೆ ಈ ಎಲ್ಲದರ ಬಳಿಕ ಆಗಬೇಕಾಗಿರುವ ಅಂತಿಮ ಘಟ್ಟದಲ್ಲಿಯೇ ರಾಜ್ಯ ಸರಕಾರ ವಿಫಲವಾಗುತ್ತಿದೆ ಎನ್ನುವ ಭಾವನೆ
ಬಹುತೇಕರಲ್ಲಿದೆ. ಇದನ್ನು ತೊಡೆದು ಹಾಕಿ ಹೂಡಿಕೆದಾರರ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ. ಕರ್ನಾಟಕ ದಂತ ರಾಜ್ಯದಲ್ಲಿ ಹೂಡಿಕೆ ಮಾಡುವುದಕ್ಕೆ ಯಾವ ಕಂಪನಿಗಳು ಹಿಂದೆ ಸರಿಯುವುದಿಲ್ಲ. ಆದರೆ ಅಧಿಕಾರಿಗಳ ಮಟ್ಟದಲ್ಲಿ ಅಥವಾ ಸರಕಾರದ ಮಟ್ಟದಲ್ಲಿ ಆಗುವ ತೊಡಕುಗಳಿಂದ ಹೂಡಿಕೆ ಪ್ರಮಾಣ ತಗ್ಗಬಹುದಷ್ಟೇ. ಇದನ್ನು ಸರಿಪಡಿಸಿಕೊಳ್ಳುವ ಕೆಲಸ ವನ್ನು ಪ್ರತಿಹಂತದಲ್ಲಿ ಆಗಲೇಬೇಕಾಗಿದೆ.