Saturday, 23rd November 2024

ಹಣ ಅಕ್ರಮ ವರ್ಗಾವಣೆ ಪ್ರಕರಣ: ರಾವುತ್’ಗೆ ಜಾಮೀನು ಮಂಜೂರು

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಶಿವಸೇನಾ ಸಂಸದ ಸಂಜಯ್ ರಾವುತ್ ಅವರಿಗೆ ಮುಂಬೈನ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

₹1,034 ಕೋಟಿಯ ಪತ್ರಾ ಚಾಲ್ ಭೂಮಿ ಅಭಿವೃದ್ಧಿ ಹಗರಣಕ್ಕೆ ಸಂಬಂಧಿಸಿ ರಾವುತ್ ಅವರನ್ನು ಜಾರಿ ನಿರ್ದೆಶನಾಲಯ ಬಂಧಿಸಿತ್ತು.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ರಾವುತ್ ಅರ್ಜಿಯ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾ ಲಯದ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ, ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು.

‘ರಾವುತ್ ಅವರಿಗೆ ಜಾಮೀನು ಸಿಕ್ಕಿರುವುದನ್ನು ಸ್ವಾಗತಿಸುತ್ತೇನೆ. ಅವರು, ಅತ್ಯಂತ ಧೈರ್ಯ ಮತ್ತು ಹೋರಾಟದ ಮನೋಭಾವ ವನ್ನು ಪ್ರದರ್ಶಿಸಿದ್ಧಾರೆ’ಎಂದು ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಹೇಳಿದ್ದಾರೆ. ಮುಂಬೈನ ಆರ್ಥರ್ ಜೈಲ್‌ನಲ್ಲಿರುವ ಸಂಜಯ್ ರಾವುತ್, ಜಾಮೀನು ಪ್ರತಿ ತಲುಪಿದ ಬಳಿಕ ಬಿಡುಗಡೆ ಆಗಲಿದ್ದಾರೆ.

ಜುಲೈ 31ರಂದು ಇ.ಡಿ. ರಾವುತ್ ಅವರ ನಿವಾಸ ಮೈತ್ರಿ ಬಂಗಲೆ ಮೇಲೆ ದಾಳಿ ನಡೆಸಿತ್ತು. ವಿಚಾರಣೆ ಬಳಿಕ ಮಧ್ಯರಾತ್ರಿ ಅವರನ್ನು ಬಂಧಿಸಿತ್ತು.

4 ಬಾರಿ ಸಂಸದ ಸಂಜಯ್ ರಾವುತ್, ಸಾಮ್ನಾ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ.