ವಿಶ್ಲೇಷಣೆ
ಪ್ರೊ.ಆರ್.ಜಿ.ಹೆಗಡೆ
ತಾನು ಹೇಗಿರಬೇಕು? ದೇಶದ ಮುಂದಿರುವ ಗಂಭೀರ ವಿಷಯಗಳಿಗೆ ಸಂಬಂಧಿಸಿ ತನ್ನ ನಿಲುವುಗಳೇನು? ಎಂಬ ವಿಚಾರದಲ್ಲಿ ಕಾಂಗ್ರೆಸ್‌ಗಿದ್ದ ಇಬ್ಬಂದಿತನ ಖರ್ಗೆಯವರ ಆಯ್ಕೆಯಿಂದಾಗಿ ದೂರವಾದಂತಿದೆ. ಆ ಗೊಂದಲದಿಂದ ಅದು ಹೊರಬಂದು ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡಂತಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ Z u ಂi ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಎದುರುಬದುರಾಗಿ ನಿಂತಿದ್ದು, ಅದರಲ್ಲಿ ಖರ್ಗೆ ಗೆದ್ದಿದ್ದು ಈಗ ಇತಿಹಾಸ. ಖರ್ಗೆಯವರ ಗೆಲುವು ಹಲವು ವಿಷಯಗಳನ್ನು ಹೇಳಿದೆ. ಒಂದು- ಸೋನಿಯಾ ಪರ
ವ್ಯಕ್ತಿಯೊಬ್ಬರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಎರಡು- ಪಕ್ಷದ ಮೇಲೆ ಸೋನಿಯಾ ಬಲವಾದ ಹಿಡಿತ ಹೊಂದಿದ್ದಾರೆ.
ವಿಷಯ ಇಷ್ಟೇ ಆಗಿದ್ದರೆ ಖರ್ಗೆ ಗೆಲುವು ಕಾಂಗ್ರೆಸ್ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಾಗುತ್ತಿರಲಿಲ್ಲ, ‘ಗೇಮ್ ಚೇಂಜರ್’ ಆಗುತ್ತಿರಲಿಲ್ಲ. ಪಕ್ಷದ ಭವಿಷ್ಯವನ್ನೇ ನಿರ್ಣಯಿಸಬಲ್ಲ ಮೌಲ್ಯ ಅದಕ್ಕೆ ಬಂದಿರುವುದಕ್ಕೆ ಬೇರೆಯದೇ ಕಾರಣವಿದೆ. ಅದೆಂದರೆ, ಪರಸ್ಪರ ವಿರುದ್ಧವೆನಿಸುವ ವ್ಯಕ್ತಿತ್ವಗಳ ಈ ಇಬ್ಬರು ನಾಯಕರು ಪಕ್ಷದೊಳಗೆ ನಿರಂತರ ಸಂಘರ್ಷದಲ್ಲಿದ್ದ ಎರಡು ಐಡಿಯಾಲಜಿಗಳ ರೂಪಕವಾಗಿ ನಿಂತಿದ್ದು, ಸಂಕೇತವಾಗಿ ಹೋಗಿದ್ದು.
ಖರ್ಗೆಯವರು ಭಾರಿ ಬಹುಮತದಿಂದ ಗೆದ್ದಿರುವುದು ಹೇಳುತ್ತಿರುವುದೆಂದರೆ, ಪಕ್ಷವೀಗ ಹೊಯ್ದಾಟವನ್ನು ಬಿಟ್ಟು ತನ್ನ ಐಡೆಂಟಿಟಿಯನ್ನು ಹುಡುಕಿಕೊಂಡಿದೆ. ತಾಕಲಾಟವನ್ನು, ಗೊಂದಲವನ್ನು ಬದಿಗಿಟ್ಟು ತನ್ನ ಅಸ್ತಿತ್ವವನ್ನು ಸ್ಪಷ್ಟವಾಗಿ ಗುರುತಿಸಿಕೊಂಡಿದೆ ಅಂತ. ಅದು ಹೇಗೆ ಎಂಬುದನ್ನು ಗಮನಿಸುವುದರ ಭಾಗವಾಗಿ ಮೊದಲು ಖರ್ಗೆ-ತರೂರ್ ಅವರ ವ್ಯಕ್ತಿತ್ವ ಗಳನ್ನು, ಅವುಗಳ ನಡುವಿನ ವ್ಯತ್ಯಾಸಗಳನ್ನು ಮತ್ತು ಅವು ಏನನ್ನು ಪ್ರತಿನಿಧಿಸುತ್ತಿದ್ದವು ಎನ್ನುವುದನ್ನು ಗಮನಿಸಿಕೊಳ್ಳಬೇಕು.
ಇಬ್ಬರದೂ ಸಂಪೂರ್ಣ ವಿಭಿನ್ನವಾದ ವ್ಯಕ್ತಿತ್ವಗಳು. ಅವರು ಒಂದೇ ಪಕ್ಷದಲ್ಲಿದ್ದರೂ ಬಹುಶಃ ವಿರುದ್ಧ ನಂಬಿಕೆಗಳನ್ನು, ಜೀವನವಿಧಾನಗಳನ್ನು ಹೊಂದಿದವರು, ಪರಸ್ಪರ ವಿರುದ್ಧವಿರುವ ಐಡಿಯಾಲಜಿಗಳನ್ನು ಪ್ರತಿನಿಧಿಸುವವರು. ಅಪ್ಪಟ
ಮಣ್ಣಿನ ಮಗನಾಗಿರುವ ಖರ್ಗೆ, ಬಿಸಿಲ ನಾಡಾದ, ನೀರಿನ ಸಮಸ್ಯೆಯಿದ್ದ, ಬಡತನಕ್ಕೆ, ಹಿಂದುಳಿಯುವಿಕೆಗೆ ರೂಪಕವಾಗಿದ್ದ ಕಲಬುರ್ಗಿಯ ಕಪ್ಪುಮಣ್ಣಿನ ಹಿನ್ನೆಲೆಯಿಂದ ಬಂದವರು.
ಬಡ ಮನೆತನದಲ್ಲಿ ಹುಟ್ಟಿ ಕಷ್ಟ-ಕಾರ್ಪಣ್ಯಗಳನ್ನು ಕಂಡು ಅನುಭವಿಸುತ್ತ ಬೆಳೆದವರು, ಅದರ ನಡುವಿನಿಂದ ಮೇಲೆ ಬಂದವರು, ಹೋರಾಟದ ಹಿನ್ನೆಲೆಯವರು, ದಲಿತ ನಾಯಕರಾಗಿ ಎಲ್ಲರ ನಾಯಕರಾಗಿ ಬೆಳೆದವರು. ತರೂರ್ ಹಿನ್ನೆಲೆ ಇದಕ್ಕೆ
ಸಂಪೂರ್ಣ ವಿರುದ್ಧವಾದದ್ದು. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಅವರು ಅಂತಾರಾಷ್ಟ್ರೀಯ ನೆಲೆಯಲ್ಲಿ ಶಿಕ್ಷಣ ಮುಗಿಸಿ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಿದವರು. ಸಮಾಜದ ಉನ್ನತ ವರ್ಗಕ್ಕೆ ಸೇರಿದವರು, ಫ್ಯಾಷನಬಲ್ ವಾತಾವರಣದಿಂದ
ಬಂದವರು, ಮೇಧಾವಿ, ಒಳ್ಳೆಯ ಮಾತುಗಾರ, ಜಾಗತಿಕ ಖ್ಯಾತಿಯ ಬರಹಗಾರ, ಅಪಾರ ಓದಿನ ಹಿನ್ನೆಲೆಯ ವಿದ್ವಾಂಸ.
ಮತ್ತಷ್ಟು ವ್ಯತ್ಯಾಸಗಳನ್ನು ಗಮನಿಸುವುದಾದರೆ, ರಾಜಕೀಯದಲ್ಲಿ ಸುಮಾರು ೫೦ ವರ್ಷಗಳ ಕಾಲವನ್ನು ಕಳೆದಿರುವ ಖರ್ಗೆ, ದೇಶದ ತಳಮಟ್ಟದ ರಾಜಕೀಯದಿಂದ ಹಿಡಿದು ದೆಹಲಿಯ ರಾಜಕೀಯದವರೆಗಿನ ಅಪಾರವಾದ-ಆಳವಾದ ಅನುಭವ ಹೊಂದಿದವರು. ೯ ಬಾರಿ ವಿಧಾನಸಭೆಗೆ ಮತ್ತು ೨ ಬಾರಿ ಲೋಕಸಭೆಗೆ ಹೀಗೆ ೧೧ ಬಾರಿ ಚುನಾವಣೆಗಳನ್ನು ಗೆದ್ದವರು. ಕರ್ನಾಟಕದಲ್ಲಿ ರಾಜ್ಯ ಮಂತ್ರಿಮಂಡಳದ ಸದಸ್ಯರಾಗಿ ದೊಡ್ಡ ದೊಡ್ಡ ಖಾತೆಗಳನ್ನು ನಿರ್ವಹಿಸಿರುವ ಅವರು ನಂತರ ಕೇಂದ್ರ ಸಚಿವರಾಗಿ ಕಾರ್ಮಿಕ ಮತ್ತು ರೈಲ್ವೆ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು.
ಪಕ್ಷದಲ್ಲಿಯೂ ಹಿರಿಯ ಹುದ್ದೆಗಳಲ್ಲಿ ಕೆಲಸ ಮಾಡಿದವರು. ಆದರೆ ತರೂರ್ ಹಾಗಲ್ಲ, ಅವರ ಅನುಭವದ ರೀತಿಯೇ ಬೇರೆ. ಅವರು ಜಾಗತಿಕವಾಗಿ ಅಡ್ಡಾಡಿ ಸಮಾವೇಶಗಳಲ್ಲಿ, ವಿಚಾರ ಸಂಕಿರಣಗಳಲ್ಲಿ, ಬುದ್ಧಿಜೀವಿಗಳ ಗೋಷ್ಠಿಗಳಲ್ಲಿ ಭಾಗವಹಿಸಿ ಅನುಭವ ದಕ್ಕಿಸಿಕೊಂಡವರು. ಜಾಗತಿಕವಾಗಿ ‘ಹೈ-ಪ್ರೊಫೈಲ್’ ಹೊಂದಿರುವವರು.
ಕೇಂದ್ರದಲ್ಲಿ ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿ ಕೆಲಸ ಮಾಡಿದವರು. ಖರ್ಗೆಯವರು ರಾಜಕೀಯದ ಮೆಟ್ಟಿಲುಗಳನ್ನು ಕೆಳಹಂತದಿಂದ ಹತ್ತುತ್ತ ಬಂದರೆ, ತರೂರ್ ದಿಢೀರಾಗಿ ಎಲ್ಲಿಂದಲೋ ಬಂದು ತಿರುವನಂತಪುರಂ (ನಗರ) ಕ್ಷೇತ್ರದಿಂದ ಲೋಕ ಸಭೆಗೆ ಆಯ್ಕೆಯಾದವರು. ಹೀಗಾಗಿ ಕೆಳಗಿನ ಹಂತದ ರಾಜಕೀಯವನ್ನು ತರೂರ್ ನೋಡಿಲ್ಲ ಎಂದೇ ಹೇಳಬೇಕು. ಖರ್ಗೆಯವರಿಗೆ ದೇಶದ ಗ್ರಾಮೀಣ ಪ್ರದೇಶಗಳ ಸ್ಥಿತಿಯ, ಬಡತನದ ಅರಿವಿದೆ.
ತರೂರ್‌ರಿಗೆ ಇದು ಇಲ್ಲ, ಜತೆಗೆ ಅವರಿಗೆ ಖರ್ಗೆಯವರಂತೆ ದೇಶದ ರಾಜಕೀಯ ಒಳಸುಳಿಗಳು ಮತ್ತು ರಸ್ತೆಬದಿಯ ರಾಜಕೀಯದ
ಅರಿವಿರಲಿಕ್ಕಿಲ್ಲ. ವಯೋಮಾನದ ದೃಷ್ಟಿಯಿಂದ ನೋಡಿದರೆ ಖರ್ಗೆ ಹಿರಿಯರು, ತರೂರ್ ಇನ್ನೂ ಚಿಕ್ಕವರು. ಖರ್ಗೆ ತಮ್ಮ ಮಾತುಗಳನ್ನು ಅಳೆದು-ತೂಗಿ ಆಡುವವರು. ತರೂರ್ ಹಾಗಲ್ಲ, ಹಲವು ಕಾರಣಗಳಿಂದಾಗಿ ವಿವಾದಗಳ ಕೇಂದ್ರದಲ್ಲಿರುವವರು ಅವರು. ತರೂರ್ ಆಧುನಿಕ ಮಧ್ಯಮವರ್ಗದ ಸಮಾಜವನ್ನು, ಯುವಜನತೆ ಯನ್ನು ಆಕರ್ಷಿಸಬಲ್ಲ ರಾಜಕಾರಣಿಯಾದರೆ,
ಖರ್ಗೆ ಬಡವರಿಗೆ, ಗ್ರಾಮೀಣರಿಗೆ ಪ್ರಿಯವಾಗುವ ವ್ಯಕ್ತಿತ್ವ ಹೊಂದಿದವರು ಮತ್ತು ಗಾಂಧಿ ಕುಟುಂಬದ ಪರಮಾಪ್ತರು.
ತರೂರ್ ಅಷ್ಟೊಂದು ಹತ್ತಿರದವರಾಗಿರಲಿಕ್ಕಿಲ್ಲ. ಹೀಗೆ ಖರ್ಗೆ ಮತ್ತು ತರೂರ್ ಸಂಪೂರ್ಣ ವಿರುದ್ಧವಾಗಿರುವ ವ್ಯಕ್ತಿತ್ವ ಮತ್ತು ತಾತ್ವಿಕ ಹಿನ್ನೆಲೆ ಹೊಂದಿರುವ ವ್ಯಕ್ತಿಗಳು. ಮಹತ್ವದ ವಿಷಯವೆಂದರೆ, ಮೇಲೆ ಹೇಳಿದ ಅಂಶಗಳು ಅವರ ನಡುವಿನ ಅಗಾಧ
ಐಡಿಯಾಲಜಿಕಲ್ ವ್ಯತ್ಯಾಸಗಳಿಗೆ ಮುನ್ನುಡಿಯಾಗಿರುವುದು. ಇವರಿಬ್ಬರ ನಡುವಿನ ವೈರುದ್ಧ್ಯಗಳು ಪಕ್ಷದ ಅಧ್ಯಕ್ಷೀಯ ಸ್ಪರ್ಧೆಯನ್ನು ಎರಡು ಬಲವಾದ ಐಡಿಯಾಲಜಿಗಳ ನಡುವಿನ ಸಂಘರ್ಷವನ್ನಾಗಿ ಪರಿವರ್ತಿಸಿದ್ದು, ರೂಪಕವನ್ನಾಗಿಸಿದ್ದು.
ಈ ಚುನಾವಣೆಯು ಪಕ್ಷದ ಭವಿಷ್ಯವನ್ನೇ ನಿರ್ಧರಿಸಿದಂತಿದೆ ಎಂಬುದಕ್ಕೆ ಹೇಳಬೇಕಿರುವ ಕಾರಣವಿದು. ತಾನು ಯಾವ ರೀತಿ
ಇರಬೇಕು? ದೇಶದ ಮುಂದಿರುವ ಹಲವು ಗಂಭೀರ ವಿಷಯಗಳಿಗೆ ಸಂಬಂಧಿಸಿ ತನ್ನ ನಿಲುವುಗಳೇನು? ಎಂಬ ವಿಚಾರದಲ್ಲಿ ಕಾಂಗ್ರೆಸ್ ಗಿದ್ದ ಇಬ್ಬಂದಿತನ ಈಗ ದೂರವಾದಂತಿದೆ. ಆ ಗೊಂದಲದಿಂದ ಅದು ಹೊರಬಂದು ತನ್ನ ಅಸ್ತಿತ್ವವನ್ನು ಗುರುತಿಸಿ ಕೊಂಡಂತಾಗಿದೆ.
ಖರ್ಗೆ ಮತ್ತು ತರೂರ್, ಕ್ರಮವಾಗಿ ಕಾಂಗ್ರೆಸ್ ಪಕ್ಷದ ‘ಹಳೆಯ’ ಮತ್ತು ‘ಹೊಸ’ ಸಂಸ್ಕೃತಿಗಳ ನೇತಾರರಾಗಿ, ಪ್ರತಿರೂಪವಾಗಿ ಕಾಣುತ್ತಾರೆ. ಇದು ಹೇಗೆಂಬುದನ್ನು ಗಮನಿಸೋಣ. ಬಡತನ ನಿರ್ಮೂಲನೆ, ಬಡವರ ಕಲ್ಯಾಣ, ದೀನ-ದಲಿತರ ಉದ್ಧಾರ, ಅಲ್ಪಸಂಖ್ಯಾತರ ಕಲ್ಯಾಣ ಮುಂತಾದ ಘೋಷಣೆಗಳನ್ನು ಒಳಗೊಂಡ ‘ಗರೀಬಿ ಹಟಾವೊ’ ಎಂಬ ಪರಿಕಲ್ಪನೆ ಕಾಂಗ್ರೆಸ್‌ನ ಹಳೆಯ ಸಂಸ್ಕೃತಿಯ ಪ್ರತಿನಿಧಿ.
ಜತೆಗೆ, ತಾನು ಸಮಾಜವಾದಿ, ಜಾತ್ಯತೀತ, ಮೀಸಲಾತಿವಾದಿ, ಅಹಿಂದವಾದಿ ಮತ್ತು ತಾನು ಬಡವರ, ದೀನ-ದಲಿತರ, ಹಳ್ಳಿ ಗಾಡಿನ ಜನರ ಮತ್ತು ಅಲ್ಪಸಂಖ್ಯಾತರ ಪಕ್ಷ ಎನ್ನುವ ಬ್ರ್ಯಾಂಡ್ ಸೃಷ್ಟಿಸಿಯೇ ಕಾಂಗ್ರೆಸ್ ಪಕ್ಷ ಈ ದೇಶವನ್ನು ಹಲವು ವರ್ಷ ಗಳವರೆಗೆ ಆಳಿದ್ದು. ಇಂದಿರಾ ಗಾಂಧಿಯವರಿಗೆ ಬೆಂಬಲವಾಗಿ ನಿಂತಿದ್ದು ಈ ರಾಜಕೀಯ ಚಿಂತನೆಗಳೇ.
ಪಕ್ಷದ ಅಸ್ತಿತ್ವವನ್ನು ನಿರ್ಣಯಿಸಿದ್ದೂ ಈ ಅಂಶಗಳೇ. ಇಂಥ ಅಸ್ಮಿತೆಯನ್ನು ಇತ್ತೀಚಿನ ವರ್ಷಗಳಲ್ಲಿ ಕಳೆದುಕೊಂಡಿದ್ದೇ ಪಕ್ಷದ ಸೋಲಿಗೆ ಕಾರಣ ಎಂಬುದು ಬಹುಶಃ ಒಂದು ವರ್ಗದ ಮನಸ್ಸಿನಲ್ಲಿತ್ತು. ತಮಗಿರಿವಿದ್ದೋ ಇಲ್ಲದೆಯೋ ಇಂಥ ವಾದದ ನೇತಾರರಾದ ಖರ್ಗೆ, ತಮ್ಮ ಸುದೀರ್ಘ ರಾಜಕೀಯ ಜೀವನದುದ್ದಕ್ಕೂ ಪ್ರತಿನಿಧಿಸಿದ್ದು ಈ ಸಂಸ್ಕೃತಿಯನ್ನೇ. ‘ಭಾರತ್ ಜೋಡೋ’ ಯಾತ್ರೆಯ ಭಾಗವಾಗಿ ನಡೆದ ಪಕ್ಷದ ಹೈದರಾಬಾದ್ ಸಭೆಯಲ್ಲಿ ಖರ್ಗೆಯವರು ಆಡಿದ ಮಾತುಗಳು ಈ ಅಭಿಪ್ರಾಯವನ್ನು
ಸಮರ್ಥಿಸುತ್ತವೆ.
ಕುತೂಹಲದ ಸಂಗತಿಯೆಂದರೆ, ಪಕ್ಷವು ೮೦ರ ದಶಕದಲ್ಲಿ ತನ್ನ ಈ ಅಸ್ಮಿತೆಯನ್ನು ಬಿಟ್ಟು ಬೇರೆಯದೇ ಆದ ಒಂದು ‘ಅಸ್ತಿತ್ವ’ ವನ್ನು ಪಡೆಯಲು ಯತ್ನಿಸಿತು ಮತ್ತು ಅದು ಅನಿವಾರ್ಯವೂ ಆಗಿತ್ತು. ಹಳೆಯ ಕಾಂಗ್ರೆಸ್ ರಾಜಕೀಯವನ್ನು, ಅಸ್ಮಿತೆಯನ್ನು ಮೆಚ್ಚದ ರಾಜೀವ್ ಗಾಂಧಿಯವರು ಪಕ್ಷಕ್ಕೆ ಹೊಸತೊಂದು ಚಹರೆಯನ್ನು ಕೊಟ್ಟರು. ರಾಜೀವರ ಈ ಪ್ರಕ್ರಿಯೆ ಯನ್ನು ವೇಗವಾಗಿ ಮತ್ತು ಸ್ಪಷ್ಟವಾಗಿ ಮುಂದಕ್ಕೊಯ್ದು ದೇಶವನ್ನು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ರಾಜಕೀಯಕ್ಕೆ ತೆರೆದವರು ಕಾಂಗ್ರೆಸ್‌ನ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಹಣಕಾಸು ಸಚಿವ ಮನಮೋಹನ್ ಸಿಂಗ್. ಈ ನೀತಿ ಗಳಿಂದಾಗಿ ಕಾಂಗ್ರೆಸ್‌ಗೆ ಬೇರೆಯದೇ ಆದ ಅಸ್ಮಿತೆ ದಕ್ಕಿಬಿಟ್ಟಿತು.
ಇದು ದೇಶದ ನಗರವಾಸಿಗಳಿಗೆ, ಯುವಕ-ಯುವತಿಯರಿಗೆ ಮೆಚ್ಚುಗೆಯಾಗಿ ಕಾಂಗ್ರೆಸ್ ಅನ್ನು ಬೆಂಬಲಿಸಿದರು. ಇಂಥ
ಉದಾರೀಕರಣ ರಾಜಕೀಯದ ಮುಖ ತರೂರ್. ಚುನಾವಣೆಯ ಸಂದರ್ಭದಲ್ಲಿ ಅವರು ಹೆಚ್ಚುಕಡಿಮೆ ಹೇಳಿದ್ದು ಇದನ್ನೇ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇಂಥದೊಂದು ‘ಸೈದ್ಧಾಂತಿಕ ಬದಲಾವಣೆ’ ಪಕ್ಷವನ್ನು ಕ್ರಮೇಣ ಸಂಕಟದಲ್ಲಿ ಸಿಲುಕಿಸಿತು.
ಉದಾರೀಕರಣ ನೀತಿಯನ್ನು ವಿರೋಧಿಸುವ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತಿತರ ಗುಂಪುಗಳು ಕಾಂಗ್ರೆಸ್‌ನ ಕೈಬಿಟ್ಟು ಪ್ರಾದೇಶಿಕ ಪಕ್ಷಗಳನ್ನು ಹುಡುಕಿಕೊಂಡು ಹೋಗುವುದಕ್ಕೆ ಈ ಬದಲಾವಣೆ ಕಾರಣವಾಯಿತು. ಕಾಂಗ್ರೆಸ್‌ಗೆ ಇದು ನಿಧಾನವಾಗಿ ಅರ್ಥವಾಯಿತು; ಹೀಗಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹಿಂದೆ ತಾವೇ ಹಣಕಾಸು ಸಚಿವರಾಗಿದ್ದಾಗ ಜಾರಿಗೆ ತಂದಿದ್ದ ಮುಕ್ತ ಆರ್ಥಿಕತೆಯನ್ನು ವೇಗವಾಗಿ ಮುಂದುವರಿಸಲೇ ಇಲ್ಲ.
ಅವರೂ ಹೆಚ್ಚುಕಡಿಮೆ ‘ಅಹಿಂದ’ ರಾಜಕೀಯಕ್ಕೆ ಮರಳಲೆತ್ನಿಸಿದರು. ಆಗ, ಉದಾರೀಕರಣದ ಹಿನ್ನೆಲೆಯಲ್ಲಿ ಮನಮೋಹನ್
ಸಿಂಗ್‌ರನ್ನು ದೇಶದ ಹೀರೋ ಎಂದೇ ಭಾವಿಸಿದ್ದ ಮಧ್ಯಮ ವರ್ಗಗಳು ಕಾಂಗ್ರೆಸ್‌ನ ಕೈಬಿಟ್ಟು ಬಿಜೆಪಿಯ ಜತೆಗೆ ನಿಂತುಬಿಟ್ಟವು. ಈ ಎಲ್ಲ ಬೆಳವಣಿಗೆಗಳಿಂದಾಗಿ ಕಾಂಗ್ರೆಸ್ ನಿರಂತರ ಸೋಲು ಅನುಭವಿಸುವಂತಾಯಿತು, ತನ್ನ ಇತಿಹಾಸದಲ್ಲೇ ಲೋಕಸಭೆ ಯಲ್ಲಿ ಕಡಿಮೆ ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಇದು ಸಂಭವಿಸಿದ್ದು ಕಾಂಗ್ರೆಸ್‌ನ ಹೊಯ್ದಾಟದ ನೀತಿಯಿಂದಾಗಿ; ತನ್ನ ಹೆಗ್ಗುರುತಾಗಿ ಇಟ್ಟುಕೊಳ್ಳಬೇಕಾದ್ದು ಗರೀಬಿ ಹಟಾವೊ ರಾಜಕೀಯವನ್ನೋ ಅಥವಾ ಜಾಗತೀಕರಣದ ರಾಜಕೀಯವನ್ನೋ ಎಂಬ ದ್ವಂದ್ವದಿಂದಾಗಿಯೇ ಪಕ್ಷ ಭಾರಿ ಹಿನ್ನಡೆ ಅನು ಭವಿಸಬೇಕಾಯಿತು. ಹೀಗಾಗಿ ಖರ್ಗೆ ಮತ್ತು ತರೂರ್ ಪೈಕಿ ಅಧ್ಯಕ್ಷರಾಗಿ ಯಾರು ಆಯ್ಕೆಯಾಗುತ್ತಾರೆ ಎನ್ನುವುದರ ಮೇಲೆಯೇ ಕಾಂಗ್ರೆಸ್ ಭವಿಷ್ಯದಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬ ನಿರ್ಧಾರ ಅಡಗಿತ್ತು.
ಖರ್ಗೆಯವರ ಗೆಲುವಿನೊಂದಿಗೆ ಪ್ರಾಯಶಃ ಅದು ತನ್ನ ಗೊಂದಲವನ್ನು ನಿವಾರಿಸಿಕೊಂಡಿದೆ. ಖರ್ಗೆಯವರು ಪಕ್ಷವನ್ನು ಬಹುತೇಕ ಅದರ ಹಿಂದಿನ ರಾಜಕೀಯ ಸಂಸ್ಕೃತಿಯೆಡೆಗೇ ಒಯ್ಯುವ ಸಾಧ್ಯತೆ ಹೆಚ್ಚು. ಹಾಗಾದಲ್ಲಿ ಅದು ತನ್ನ ಸಮಾಜವಾದಿ, ಜಾತ್ಯತೀತ, ಮೀಸಲಾತಿವಾದಿ ರಾಜಕೀಯದ ಅಸ್ಮಿತೆಯೆಡೆಗೆ ಮರಳುವುದು ಖರೆ. ಏಕೆಂದರೆ ಪಕ್ಷವನ್ನು ಸುಮಾರು ೫೦ ವರ್ಷ
ಅಽಕಾರದಲ್ಲಿಟ್ಟಿದ್ದು ಈ ಶೈಲಿಯ ರಾಜಕೀಯವೇ. ಈ ವಾದದ ಜತೆಗೆ ಕಾಂಗ್ರೆಸ್ ಗಟ್ಟಿಯಾಗಿ, ಬಲಶಾಲಿಯಾಗಿ ನಿಂತರೆ ಬಿಜೆಪಿಗೆ ಅದು ಸವಾಲಾಗಿ ಪರಿಣಮಿಸುವುದರಲ್ಲಿ ಅಚ್ಚರಿಯಿಲ್ಲ. ಪಕ್ಷಾಧ್ಯಕ್ಷರಾಗಿ ಖರ್ಗೆಯವರ ಆಯ್ಕೆಗೆ ಒಂದು ಮೌಲ್ಯ ಸಿಕ್ಕಿರುವುದೂ ಈ ಕಾರಣಕ್ಕೇ ಎನ್ನಬೇಕು.