Saturday, 26th October 2024

ಸಧೃಡ ಸಮಾಜ ನಿರ್ಮಾಣಕ್ಕೆ ಕಾನೂನು ಅಗತ್ಯ: ನ್ಯಾ.ರಾಜಶೇಖರ್

ಚಿಕ್ಕಬಳ್ಳಾಪುರ : ತಾಯಿ ಗರ್ಭದಲ್ಲಿ ಭ್ರೂಣ ಜನ್ಮ ತಾಳಿದ ದಿನದಿಂದ ಪ್ರಾರಂಭವಾಗಿ ಸಾವಿನ ನಂತರದ ದಿನಗಳಲ್ಲೂ ಕಾನೂನುಗಳು ಒಬ್ಬ ವ್ಯಕ್ತಿಯ ಮಾನ, ಪ್ರಾಣ, ಆಸ್ತಿಯನ್ನು ರಕ್ಷಣೆ ಮಾಡಿ ಕಾಪಾಡುತ್ತವೆ. ಅಂತಹ ಕಾನೂನುಗಳ ಸಾಮಾನ್ಯ ಜ್ಞಾನವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಗೌರವಾನ್ವಿತ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜಶೇಖರ್ ಅವರು ಸಾರ್ವಜನಿಕರಿಗೆ ಕರೆ ನೀಡಿದರು.

ಬುಧವಾರ ನಗರದ ಅಂಬೇಡ್ಕರ್ ಭವನದಲ್ಲಿ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ, ಚಿಕ್ಕಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ಕಾನೂನು ಸೇವೆಗಳ ದಿನಾ ಚರಣೆ” ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

೧೯೯೫ರ ನವೆಂಬರ್ ೦೯ ರಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಜಾರಿಗೆ ಬಂದ ನೆನಪಿಗಾಗಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಆಚರಿಸ ಲಾಗುತ್ತಿದೆ. ಇದರ ಜೊತೆಗೆ ತಾಲ್ಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಯೂ ಕಾನೂನು ಸೇವಾ ಸಮಿತಿ, ಪ್ರಾಧಿಕಾರಗಳು ಉಚಿತ ಕಾನೂನು ಅರಿವು-ನೆರವು ಮತ್ತು ಅದಾಲತ್ ಗಳ ಮೂಲಕ ಪ್ರಕರಣ ಗಳ ತ್ವರಿತ ಇತ್ಯರ್ಥ ಮಾಡುತ್ತಿರುವುದರ ಬಗ್ಗೆ ಜನರಿಗೆ ತಿಳಿಸಿಕೊಡಲು ಹಾಗೂ ಈ ಸೇವೆಗಳನ್ನು ದುರ್ಬಲ ವರ್ಗದವರು, ಆರ್ಥಿಕ ಚೈತನ್ಯ ಇಲ್ಲದವರು ಬಳಸಿಕೊಳ್ಳುವ ಸಲುವಾಗಿ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಾರ್ವುಜನಿಕರು ತಮ್ಮ ಸಮೀಪದಲ್ಲಿರುವ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ ಉಚಿತ ಕಾನೂನು ನೆರವು ಪಡೆಯಬೇಕೆಂದು ಮನವಿ ಮಾಡಿದರು.

ನ್ಯಾಯಾಧೀಶೆ ಲಾವಣ್ಯ ಅವರು ಮಾತನಾಡುತ್ತಾ, ನಮ್ಮ ದೇಶದಲ್ಲಿ ಶೇ.೭೦ ರಷ್ಟು ಜನರು ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಅವರಿಗೆ ಪ್ರಸ್ತುತವೂ ಕೂಡ ಕಾನೂನಿನ ಅರಿವಿಲ್ಲ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಅನಕ್ಷರಸ್ಥರು, ದುರ್ಬಲ ವರ್ಗದವರು ಸಹ ಉಚಿತ ಕಾನೂನಿನ ಅರಿವು ನೆರವು ಪಡೆಯುವಂತಾಗಬೇಕು. ಆ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಸಾಕಷ್ಟು ಅರಿವು ಕಾರ್ಯಕ್ರಮಗಳು, ಜನತಾ ನ್ಯಾಯಾಲಯ, ಲೋಕ್ ಅದಾಲತ್ ಗಳನ್ನು ಆಯೋಜಿಸುತ್ತಿದೆ. ರಾಷ್ಟ್ರೀಯ ಸೇವಾ ಪ್ರಾಧಿಕಾರ ಸ್ಥಾಪನೆಯಾಗಿ ೨೫ ವರ್ಷಗಳು ಕಳೆದರೂ ಕೂಡ ಎಲ್ಲರಿಗೂ ಉಚಿತ ಕಾನೂನಿನ ನೆರವು ಸಿಕ್ಕಿರುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಅಶಕ್ತರು, ದುರ್ಬಲರು, ಬಡವರಿಗೆ ಕಾನೂನಿನ ನೆರವು ದುಬಾರಿ ಎಂಬುದನ್ನು ಮನಗಂಡು ದೇಶದಲ್ಲಿ ಉಚಿತ ಕಾನೂನು ನೆರವು ಚಳುವಳಿ ೧೯೫೨ರಲ್ಲಿಯೇ ಪ್ರಾರಂಭವಾಯಿತು. ಅದರ ಫಲವಾಗಿ ೧೯೬೨ರಲ್ಲಿ ಕಾನೂನು ನೆರವು ಸಮಿತಿ ರಚಿಸಲಾಯಿತು. ೧೯೮೭ರಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಕಾಯ್ದೆ ರಚನೆಯಾಗಿ ೧೯೯೫ರ ನವೆಂಬರ್ ೦೯ ರಂದು ಜಾರಿಗೆ ಬಂತು. ದುಬಾರಿ ಹಣವನ್ನು ವಕೀಲರಿಗೆ ಕೊಟ್ಟು ನ್ಯಾಯ ಪಡೆಯುವುದು ಬಡವರಿಗೆ ಕಷ್ಟವಾಗಿತ್ತು. ಆದ್ದರಿಂದ ಕೋರ್ಟನಲ್ಲಿ ಗೆದ್ದವನು ಸೋತ, ಸೋತವನು ಸತ್ತ ಎಂಬ ಭಾವನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.

ಈ ಭಾವನೆಗಳನ್ನು ಹೋಗಲಾಡಿಸಲು ಪ್ರತಿ ತಾಲ್ಲೂಕು, ಜಿಲ್ಲೆ, ರಾಜ್ಯಗಳಲ್ಲಿ ಆಯಾ ಹಂತದಲ್ಲಿ ಕಾನೂನು ಸೇವಾ ಸಮಿತಿ, ಪ್ರಾಧಿಕಾರಗಳನ್ನು ರಾಷ್ಟ್ರೀಯ ಕಾನೂನು ಪ್ರಾಧಿಕಾರ ರಚನೆ ಮಾಡಿ ದೇಶದಾದ್ಯಂತ ಉಚಿತ ಕಾನೂನು ಅರಿವು ನೆರವು ಕಾರ್ಯಗಳನ್ನು ಸಮರೋಪಾದಿಯಲ್ಲಿ ನಡೆಸುತ್ತಿದೆ. ಜೊತೆಗೆ ಲೋಕ್ ಅದಾಲತ್, ಜನತಾ ನ್ಯಾಯಾಲಯಗಳ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುತ್ತಿದೆ. ಈ ಕಾನೂನುಗಳ ಬಗ್ಗೆ ಜನರು ಹೆಚ್ಚು ಜಾಗೃತಿಗೊಂಡು ಪ್ರಾಧಿಕಾರಗಳ ಸೇವೆಯನ್ನು ಉಪಯೋಗಿಸಿಕೊಳ್ಳಬೇಕು. ಅರಿವು ಮೂಡಿಸಿಕೊಂಡವರು ತಮ್ಮ ಅಕ್ಕಪಕ್ಕದವರಿಗೆ ತಿಳಿಸಬೇಕು. ಆ ಮೂಲಕ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶಗಳನ್ನು ಈಡೇರಿಸಲು ನೆರವಾಗಬೇಕೆಂದು ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನ್ಯಾಯವಾದಿ ಹರಿಹರ ಕುಮಾರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ವಿವಿಧ ಕಾಯ್ದೆಗಳ ಕುರಿತು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಕಾಂತ್ ಜೆ ಮಿಸ್ಕಿನ್,ಗೌರವಾನ್ವಿತ ನ್ಯಾಯಾಧೀಶರುಗಳಾದ ಶಿವಪ್ರಸಾದ್, ಸಿ.ವಿ.ಸನತ್, ವಿವೇಕಾ ನಂದ, ಬಾಳಪ್ಪ ಜರಗು, ಅರುಣ ಕುಮಾರಿ, ರೋಷನ್, ಮಾನಸ, ಶೃತಿ, ನ್ಯಾಯವಾದಿ ಜಿ.ಆರ್.ಹರಿಕುಮಾರ್, ಪೊಲೀಸ್ ಉಪಾಧೀಕ್ಷಕ ವಾಸುದೇವ, ವಿವಿಧ ಇಲಾಖೆಗಳ ಅಧಿಕಾರಿಗಳು, ವಕೀಲರು, ವಿದ್ಯಾರ್ಥಿಗಳು ಮುಂತಾದವರು ಹಾಜರಿದ್ದರು.