Thursday, 12th December 2024

ಅನಂತಕುಮಾರ್ ಎಂಬ ಸ್ನೇಹಶೀಲ ರಾಜಕಾರಣಿ

ಸ್ಮರಣೆ

ಜಿ.ಎಂ.ಇನಾಂದಾರ್‌

2018 ರ ನವೆಂಬರ್ 12ರಂದು ನಮ್ಮನ್ನಗಲಿದ ಅನಂತಕುಮಾರ್ ಕರ್ನಾಟಕ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರು. ಕರ್ನಾಟಕದ ನೆಲ, ಜಲ, ಭಾಷೆಗಳ ಹಿತರಕ್ಷಣೆಗೆ ಸದಾ ಸನ್ನದ್ಧರಾಗಿದ್ದ ಅನಂತಕುಮಾರ್, ಕೇಂದ್ರ ಮತ್ತು ರಾಜ್ಯದ ನಡುವಿನ
ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಮೆಟ್ರೋ, ಸುವರ್ಣ ಚತುಷ್ಪಥ ಯೋಜನೆಯಲ್ಲಿ ಕರ್ನಾಟಕದ ಸೇರ್ಪಡೆ ಮತ್ತು ಆಲಮಟ್ಟಿ ಅಣೆಕಟ್ಟಿನ ಎತ್ತರದ ಹೆಚ್ಚಳ ಹೀಗೆ ಹತ್ತು ಹಲವು ಕೆಲಸ ಗಳನ್ನು ಅವರು ಕರ್ನಾಟಕಕ್ಕೆ ಮಾಡಿಕೊಟ್ಟಿದ್ದಾರೆ.

ಒಮ್ಮೆ ಕರ್ನಾಟಕಕ್ಕೆ ಕಾವೇರಿ ನೀರು ಬಿಡುಗಡೆಯ ಸಮಸ್ಯೆ ಎದುರಾದಾಗ ಅದನ್ನು ಚಾಣಾಕ್ಷತೆಯಿಂದ ನಿಭಾಯಿಸಿದ್ದಕ್ಕೆ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರವರು ದಿಲ್ಲಿಯ ಅನಂತಕುಮಾರರ ನಿವಾಸಕ್ಕೆ ತೆರಳಿ ‘ನೀವು ಕರ್ನಾಟಕದ ಆಪದ್ಬಾಂಧವ’ ಎಂದು ಹೇಳಿ ಧನ್ಯವಾದ ಸಲ್ಲಿಸಿದ್ದರು.

ನನ್ನ-ಅವರ ಸ್ನೇಹ ಸುಮಾರು 4 ದಶಕಕ್ಕೂ ಹಳೆಯದು. 1975ರ ತುರ್ತು ಪರಿಸ್ಥಿತಿ ವಿರೋಧಿಸಿ ನಾವಿಬ್ಬರೂ ಜೈಲು ಪಾಲಾ ದಾಗ, ಅಲ್ಲಿ ಶುರುವಾದ ಸ್ನೇಹ ಅವರ ಅಕಾಲಿಕ ನಿಧನದವರೆಗೂ ಮುಂದುವರಿದಿತ್ತು. ಯಾವಾಗಲೂ ದೊಡ್ಡ ಯೋಚನೆ- ಯೋಜನೆ ಗಳನ್ನೇ ಮಾಡುತ್ತಿದ್ದುದು ಅನಂತ ಕುಮಾರರ ಜಾಯಮಾನ. ಅವರ ಒತ್ತಾಯದ ಮೇರೆಗೆ ನಾನು 2001ರಲ್ಲಿ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಅವರ ಸಿಬ್ಬಂದಿ ವರ್ಗವನ್ನು ಸೇರಿದಾಗ ‘ಬೆಂಗಳೂರು ಮೆಟ್ರೋ’ ಎಂಬ ಸಿಂಗಲ್ ಪಾಯಿಂಟ್ ಅಜೆಂಡಾ ವನ್ನು ನನಗಿತ್ತ ಅವರು, ‘ನೀನು ಇದನ್ನು ಸತತವಾಗಿ ಫಾಲೋಅಪ್ ಮಾಡುತ್ತಿರು, ಮಿಕ್ಕಿದ್ದೆಲ್ಲ ಬೋನಸ್’ ಎಂದರು.

ಅವರ ಸತತ ಪ್ರಯತ್ನದ ಫಲವಾಗಿ ಯುಬಿ ಗ್ರೂಪ್ ಜತೆಗಿನ ಒಪ್ಪಂದಕ್ಕೆ ಮುಕ್ತಾಯ ಹಾಡಲಾಯಿತು, ನಂತರ ಕೇಂದ್ರ ಮತ್ತು
ರಾಜ್ಯಗಳ ಜಂಟಿ ಯೋಜನೆಯಾಗಿ ಮೆಟ್ರೋ ರೂಪುಗೊಂಡಿದ್ದು, ಇ. ಶ್ರೀಧರನ್ ಅವರನ್ನು ಕರೆತಂದು ಮೆಟ್ರೋವನ್ನು ಈಗಿನ ಸ್ಥಿತಿಗೆ ತರಲು ಬುನಾದಿ ಹಾಕಿದ್ದು ಈಗ ಇತಿಹಾಸ. ಕೇಂದ್ರ ಸಚಿವ ಖಾತೆಯ ನಿಭಾವಣೆ, ರಾಜ್ಯ ಬಿಜೆಪಿಯ ಜವಾಬ್ದಾರಿ ಮತ್ತು ಲೋಕಸಭಾ ಕ್ಷೇತ್ರದ ಸರಿದೂಗಿಸುವಿಕೆಗಳಲ್ಲಿ ಅವರ ಶ್ರಮ ಸದಾ ಇರುತ್ತಿತ್ತು. ಸಾಲದೆಂಬಂತೆ ಆಗಾಗ ಏನಾದರೊಂದು ಗಲಾಟೆ, ಸಮಸ್ಯೆ ಇದ್ದೇ ಇರುತ್ತಿತ್ತು.

ಇದನ್ನು ಚರ್ಚಿಸಿದಾಗ ಅನಂತಕುಮಾರ್ ನೀಡುತ್ತಿದ್ದ ‘Achieving specifics under chaos is leadership’ ಎಂಬ ಉತ್ತರ ಈಗಲೂ ನೆನಪಿನಲ್ಲಿದೆ. ಅನಂತಕುಮಾರ್ ಒಬ್ಬ ಆಹಾರಪ್ರಿಯ. ಒಳ್ಳೆಯ ವೈವಿಧ್ಯಮಯ ಆಹಾರ  ವರಿಗಿಷ್ಟವಾಗುತ್ತಿತ್ತು.
ನಾನು, ಅಚ್ಯುತ್ ಲಿಮಯೆ, ಅನಂತಕುಮಾರ್ ಪೈಪೋಟಿಯಿಂದ ಊಟ ಮಾಡುತ್ತಿದ್ದೆವು. ಅವರ ದೆಹಲಿ ಮನೆಯಲ್ಲಿ ಯಾವಾ ಗಲೂ ಊಟೋಪಚಾರದ ಸಮಾರಾಧನೆ ನಡೆದೇ ಇರುತ್ತಿತ್ತು. ಮೊದಲು ಅತಿಥಿಗಳಿಗೆ ಊಟ ಬಡಿಸಿ ಆದಮೇಲೆ ಕೊನೆಗೆ
ಅನಂತ ಕುಮಾರ್ ಅವರಿಗೆ ಬಡಿಸುವುದು ದೆಹಲಿ ಮನೆ ಯಲ್ಲಿ ಅನುಸರಣೆಯಾಗುತ್ತಿದ್ದ ಒಂದು ನಿಯಮ.

‘ಅತಿಥಿ ದೇವೋಭವ’ ಎಂಬುದು ಅವರ ನಂಬಿಕೆ. ಊಟ-ಉಪಾಹಾರದ ಹೊತ್ತಿನಲ್ಲಿ ಯಾರೇ ಬರಲಿ, ಆ ಹೊತ್ತಿಗೆ ಸಿದ್ಧವಾಗಿರುವ ದ್ಯ ಎಲ್ಲರಿಗೂ ಸಿಗುತ್ತಿತ್ತು. ಜತೆಜತೆಗೆ ಮಾತು, ಹರಟೆ, ನಗೆಚಟಾಕಿ. ಪಾರ್ಲಿಮೆಂಟ್ ನಡೆಯುತ್ತಿರುವಾಗ ಅವರ ಕಚೇರಿಯಲ್ಲಿ ೧೦-೨೦ ಜನರಿಗೆ ಯಾವಾಗಲೂ ಊಟ ಸಿದ್ಧವಿರುತ್ತಿತ್ತು. ಕರ್ನಾಟಕದ ಅನೇಕ ನಾಯಕರು ಆ ಸಮಯದಲ್ಲಿ ಬಂದು ಊಟ ಮಾಡಿ ತಮ್ಮ ಕೆಲಸಗಳನ್ನು ಮಾಡಿಸಿಕೊಂಡು ಹೋಗುತ್ತಿದ್ದುದು ರೂಢಿ.

ಅನಂತಕುಮಾರರು ನಾಗರಿಕ ವಿಮಾನಯಾನ ಖಾತೆಯನ್ನು ನಿಭಾಯಿಸುವಾಗ ಖ್ಯಾತ ಉದ್ಯಮಿಯೊಬ್ಬರು ಅವರಲ್ಲಿಗೆ ಬಂದಿದ್ದರು. ಅವರದು ಒಂದೇ ಬೇಡಿಕೆ- ‘ನಮ್ಮ ವಿಮಾನಗಳು ವಿವಿಧ ಸ್ಥಳಗಳಿಗೆ ಹೊರಟಾದ ಮೇಲೆ ಇಂಡಿಯನ್ ಏರ್‌ಲೈನ್ಸ್ ವಿಮಾನಗಳು ಹೊರಡಲಿ’ ಅಂತ. ಅದನ್ನು ಸ್ಪಷ್ಟವಾಗಿ ನಿರಾಕರಿಸಿದ ಅನಂತಕುಮಾರ್ ಅವರೊಂದಿಗೆ ಜಗಳವಾಡಿದ್ದಲ್ಲದೆ
ಕೊನೆವರೆಗೂ ಅವರ ಜತೆ ಮಾತನಾಡಲಿಲ್ಲ. ಅವರು ಈ ಖಾತೆಯನ್ನು ನಿಭಾಯಿಸುವಾಗ, ಅನೇಕ ವರ್ಷಗಳ ನಂತರ ಮೊದಲ ಬಾರಿಗೆ ಇಂಡಿಯನ್ ಏರ್‌ಲೈನ್ಸ್, ಏರ್ ಇಂಡಿಯಾ ಲಾಭದ ಮುಖ ನೋಡಿದ್ದವು.

ಅನಂತಕುಮಾರ್ ಕೇಂದ್ರ ರಸಗೊಬ್ಬರ ಖಾತೆ ವಹಿಸಿಕೊಂಡಾಗ ಔಷಧಿ ವಿಭಾಗವೂ ಅದರಡಿ ಬರುತ್ತಿತ್ತು. ಫಾರ್ಮಾ ಲಾಬಿಯ ನಿರಂತರ ಒತ್ತಡದ ಮಧ್ಯೆಯೂ ಅವರು ಜನಸಾಮಾನ್ಯರಿಗಾಗಿ ‘ಜನೌಷಧಿ’ ಮಳಿಗೆಗಳನ್ನು ದೇಶಾದ್ಯಂತ ಸ್ಥಾಪಿಸಿ, ‘ಜನರಿಕ್’
ಔಷಧಿಗಳಿಗೆ ಪ್ರೋತ್ಸಾಹಿಸಿದರು. ಅದರ ಫಲವಾಗಿ ಔಷಧಿಗಳು ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆ ಯಲ್ಲಿ ಸಿಗುವಂತಾಯಿತು.  ಲಾಭ ಮತ್ತು ಲಾಭಖೋರಿ ನಡುವಿನ ಸ್ಪಷ್ಟ ವ್ಯತ್ಯಾಸ ಅವರಿಗೆ ಗೊತ್ತಿತ್ತು. ಅಂತೆಯೇ, ಹೃದಯದ ಸ್ಟಂಟ್ ಮತ್ತು ಮೊಣಕಾಲು
ಇಂಪ್ಲಾಂಟ್ ಮಂಡಿಚಿಕಿತ್ಸೆ ಬೆಲೆಯನ್ನೂ ಅವರು ಗಣನೀಯವಾಗಿ ಇಳಿಸಿದರು.

ಅನಂತಕುಮಾರ್ ಯಾವಾಗಲೂ ಹಸನ್ಮುಖಿ, ಅವರಿದ್ದಲ್ಲಿ ಹರಟೆ, ನಗೆಚಟಾಕಿಗಳ ಸರಮಾಲೆಯೇ ಸಿಡಿಯುತ್ತಿತ್ತು. ದಿಲ್ಲಿಯ ಹಾಗೂ ಇತರ ರಾಜ್ಯಗಳ ಹಿರಿಯ ರಾಜಕಾರಣಿಗಳ ಜತೆ ಅವರಿಗೆ ಒಳ್ಳೆಯ ಸ್ನೇಹವಿತ್ತು. ರಾಜಕೀಯ ಭಿನ್ನಾಭಿಪ್ರಾಯಗಳು
ವೈಯಕ್ತಿಕ ದ್ವೇಷವಾಗಿ ಪರಿಣಮಿಸಲು ಅನಂತಕುಮಾರ್ ಎಂದೂ ಬಿಡುತ್ತಿರಲಿಲ್ಲ.

ಅಂತೆಯೇ, ವಿವಾದಾತ್ಮಕ ಜಿಎಸ್‌ಟಿ ಮಸೂದೆಯು ಸರ್ವಾನುಮತದಿಂದ ಅನುಮೋದನೆಯಾಗುವಂತೆ ಮಾಡುವಲ್ಲಿ ಅನಂತ ಕುಮಾರ್ ಯಶಸ್ವಿಯಾದರು. ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ಅನಂತಕುಮಾರ್ 2004ರಲ್ಲಿ ಕೇಂದ್ರ ಮಂತ್ರಿ ಮಂಡಲಕ್ಕೆ ರಾಜೀನಾಮೆಯಿತ್ತು ಪಕ್ಷವನ್ನು ಬಲಪಡಿಸಲು ಕರ್ನಾಟಕಕ್ಕೆ ಮರಳಿದರು. 10 ತಿಂಗಳ ಕಾಲ ಸತತ ಪ್ರವಾಸ ಮಾಡಿ ಆ ಹೊಣೆ ಯನ್ನು ನಿಭಾಯಿಸಿದರು.

ಜನತಾದಳದಲ್ಲಿದ್ದ ಅನೇಕ ನಾಯಕರು ಆ ಸಮಯದಲ್ಲಿ ಬಿಜೆಪಿ ಸೇರಿ ಅದರ ಬಲವರ್ಧನೆಗೆ ಕಾರಣರಾದರು. ಅಲ್ಲಿಯವರೆಗೆ ‘ಗೌಣ’ಪಕ್ಷವೆನಿಸಿದ್ದ ಬಿಜೆಪಿ ನಂತರದ ಚುನಾವಣೆಯಲ್ಲಿ 84 (79+5) ಶಾಸಕರ ವಿಜಯದೊಂದಿಗೆ ಬಹುದೊಡ್ಡ ಪಕ್ಷವಾಗಿ
ಹೊರಹೊಮ್ಮಿತು. 2009ರ ಲೋಕಸಭಾ ಚುನಾವಣೆಯಲ್ಲಿ, ಡೆಕ್ಕನ್ ಏವಿಯೇಷನ್ ಸಂಸ್ಥೆಯ ಕ್ಯಾಪ್ಟನ್ ಜಿ.ಆರ್. ಗೋಪಿ ನಾಥ್ ಅವರು ಅನಂತಕುಮಾರ್ ವಿರುದ್ಧ ಸ್ಪರ್ಧಿಸಿ ದ್ದರು. ಪ್ರೊ. ಕೆ.ಇ. ರಾಧಾಕೃಷ್ಣ ಕೂಡ ಸ್ಪರ್ಧೆಯಲ್ಲಿದ್ದರು.

ಇನೋಸಿಸ್ ಸಭಾಂಗಣದಲ್ಲಿ ಮೂವರು ಅಭ್ಯರ್ಥಿಗಳ ಸಂವಾದ ಏರ್ಪಡಿಸಲಾಗಿತ್ತು. ತಮ್ಮ ಎದುರಾಳಿಯ ಕುರಿತಾದ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ಹೇಳಬೇಕೆಂದು ಅಭ್ಯರ್ಥಿಗಳನ್ನು ಕೋರಲಾಗಿತ್ತು.

ಆಗ ಕ್ಯಾ.ಗೋಪಿನಾಥ್ ಹೇಳಿದ ಮಾತುಗಳಿವು: ‘ಅನಂತಕುಮಾರ್ ವಿಮಾನಯಾನ ಖಾತೆಯ ಸಚಿವರಾಗಿದ್ದಾಗ ನಾನು ಡೆಕ್ಕನ್ ಏವಿಯೇಷನ್ ಸ್ಥಾಪಿಸುವ -ಲ್ ಹಿಡಿದುಕೊಂಡು ಅವರ ವೈಯಾಲಿಕಾವಲ್ ಮನೆಗೆ ಹೋದೆ. ಏನನ್ನುತ್ತಾರೋ ಎಂಬ ಆತಂಕ ಮನದಲ್ಲಿ ತುಂಬಿತ್ತು. ಅದು ಪುಟ್ಟ ಮನೆಯ ೮*೧೦ ಕೊಠಡಿ. ಏನನ್ನು ಕೇಳುತ್ತಾರೋ ಎಂಬ ದುಗುಡದಿಂದಲೇ ಹೊರಗಡೆ ಕೋಣೆಯಲ್ಲಿ ಕುಳಿತಿದ್ದೆ. ಅವರು ನನ್ನ ಹತ್ತಿರ ಕೇಳೋದು ಬಿಡಿ, ಅವರ ಪತ್ನಿ ತೇಜಸ್ವಿನಿಯವರು ಕೊಟ್ಟ ಒಂದು ಕಪ್ ಚಹಾ ಕುಡಿದು ನನ್ನ ಇಡೀ ಯೋಜನೆಯನ್ನು ವಿವರಿಸಿ ಅನಂತಕುಮಾರರ ಒಪ್ಪಿಗೆ ಪಡೆದು ಹೊರಬಂದೆ’.

ಅದೇ ಸಭೆಯಲ್ಲಿ ಪ್ರೊ. ರಾಧಾಕೃಷ್ಣ ಹೇಳಿದ್ದು: ‘ಅನಂತಕುಮಾರ್ ಅವರಿಗೆ ಬಡವರ ಬಗ್ಗೆ ಕಳಕಳಿ ಇದೆ; ಅವರ ಅದಮ್ಯ ಚೇತನ ಸಂಸ್ಥೆಯ ಕೆಲಸ ನೋಡಿದ ಯಾರೂ ಇದನ್ನು ಗಮನಿಸಬಹುದು’. ಅನಂತಕುಮಾರ್ ಒಬ್ಬ ದೈವಭಕ್ತ. ಪೂಜೆ, ಭಗವದ್ಗೀತೆಯ ಕೆಲ ಶ್ಲೋಕ ಓದಿದ ನಂತರವೇ ದಿನದ ಆರಂಭ. ಪೂಜೆ ಮುಗಿದ ನಂತರ, ತಂದೆ-ತಾಯಿಯರ ಭಾವಚಿತ್ರಕ್ಕೆ ನಮಿಸಿಯೇ ಮುಂದಿನ ಕೆಲಸ.

ಯಾವುದಾದರೂ ಯೋಗ್ಯಸ್ಥಾನ, ಟಿಕೆಟ್ ಇತ್ಯಾದಿಗಳಿಗೆ ಹಲವು ಆಕಾಂಕ್ಷಿಗಳಿದ್ದು ಒಬ್ಬರ ಆಯ್ಕೆಯಾದಾಗ ಅವರು ಉದ್ಗರಿಸು ತ್ತಿದ್ದುದು, ‘ಕಷ್ಟಪಟ್ಟರೂ ಇಲ್ಲ, ಕಳವಳಿಸಿದರಿಲ್ಲ…. ಕಡುಜಾಣನಾದರೂ ಇಲ್ಲ, ಸೃಷ್ಟೀಶ ಕಾಗಿನೆಲೆಯಾದಿ ಕೇಶವರಾಯ ಕೊಟ್ಟವರಿಗೆ ಉಂಟು ಕೊಡದವರಿಗೆ ಇಲ್ಲ’ ಎಂಬ ಕನಕದಾಸರ ವಾಣಿ ಅನಂತಕುಮಾರ್ ಅವರಿಗೆ ಕರ್ನಾಟಕದ ಬಗ್ಗೆ ಹಾಗೂ ದೇಶದ ಬಗ್ಗೆ ಬಹುದೊಡ್ಡ ಕನಸುಗಳಿದ್ದವು. ಅವರ ಅಕಾಲಿಕ ನಿಧನ ಕರ್ನಾಟಕಕ್ಕೆ ಮತ್ತು ದೇಶಕ್ಕೆ ಬಹುದೊಡ್ಡ ನಷ್ಟ.