Saturday, 26th October 2024

ಸರಕಾರ ಒಕ್ಕಲಿಗರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಲಿ :ನಂಜಾವಧೂತ ಸ್ವಾಮೀಜಿ

ಸಂಘವು ಸಮುದಾಯದ ಅಭಿವೃದ್ದಿಗೆ ಪೂರಕವಾದ ಯೋಜನೆಗಳನ್ನು ರೂಪಿಸಲಿ

ಕೆಂಪೇಗೌಡರ ಹೆಸರನ್ನು ಬ್ರಾಂಡ್ ಮಾಡಿ ಶಿಕ್ಷಣ ಸಂಸ್ಥೆಗಳಿಗೆ ಇಡಲಿ

ಚಿಕ್ಕಬಳ್ಳಾಪುರ: ಒಕ್ಕಲಿಗರ ಸಂಘವು ಸಮುದಾಯದ ಅಭಿವೃದ್ಧಿಗೆ ಪೂರಕ ವಾದ ಯೋಜನೆಗಳನ್ನು ಜಾರಿಗೆ ತಂದು ಘನತೆ ಯನ್ನು ಹೆಚ್ಚಿಸುವ ಕೆಲಸ ಮಾಡಬೇಕೇ ವಿನಃ ಮನೆಯ ಒಳಗಿನ ಲೋಪ ದೋಷಗಳನ್ನು ಮಾಧ್ಯಮದ ಮುಂದೆ ತಂದು ಬಹಿರಂಗಗೊಳಿಸುವ ಮೂಲಕ ಇತರೆ ಸಮುದಾಯದ ಸಂಘಗಳು ಆಡಿಕೊಳ್ಳುವಂತೆ ಮಾಡಬೇಡಿ ಎಂದು ಪಟ್ಟನಾಯಕನ ಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತಸ್ವಾಮೀಜಿ ಹೇಳಿದರು.

ನಗರದ ಜಿಲ್ಲಾ ಕೇಂದ್ರದಲ್ಲಿ ಒಕ್ಕಲಿಗರ ಸಂಘದಿ0ದ ನಿರ್ಮಿಸಿರುವ ೩೦೦ ವಿದ್ಯಾರ್ಥಿನಿಯರು ಉಳಿದುಕೊಳ್ಳಬಹುದಾದ ನೂತನ ವಸತಿ ನಿಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತ ಹಾಸ್ಟೆಲ್ ನಿರ್ಮಾಣವಾಗಿದೆ. ಇದು ನಮಗೆ ಸಂತೋಷಕೊಡುವ ವಿಷಯ. ಈ ಭಾಗದಲ್ಲಿ ಒಕ್ಕಲಿಗ ಸಂಘದಿ0ದ ವಿದ್ಯಾ ಸಂಸ್ಥೆ ಯಾವುದೂ ಇಲ್ಲವಾದ್ದರಿಂದ ಕೆಂಪೇಗೌಡರ ಹೆಸರನ್ನೇ ಬ್ರಾಂಡ್ ಮಾಡಿ ಅಂತರ ರಾಷ್ಟ್ರೀಯ ಮಟ್ಟದ ಶಾಲೆ ನಿರ್ಮಿಸಿ ಸಂಘದ ಮೂಲಕ ಜಿಲ್ಲೆಗೆ ಕೊಡುಗೆ ನೀಡಬೇಕು. ಎಂದು ಸಲಹೆ ನೀಡಿದರು.

ಕೆ.ಎಚ್.ರಾಮಯ್ಯ,ಅವರ ಸೇವೆಯನ್ನು ಮರೆಯಬಾರದು.ಇತಿಹಾಸದಲ್ಲಿ ದಾಖಲಾದಂತೆ ಜನಾನುರಾಗಿ ಆಡಳಿತಗಾರ ಕೆಂಪೇಗೌಡರು ಎಂದೂ ಕೂಡ ಒಕ್ಕಲಿಗರ ಪೇಟೆ ಎಂದು ಮಾಡಲಿಲ್ಲ.ಬದಲಿಗೆ ಶ್ರಮಜೀವಿ ಸಮುದಾಯಗಳ ಏಳಿಗೆ ಬಯಸಿ ಅಕ್ಕಿಪೇಟೆ, ಬಳೆ ಪೇಟೆ, ಗಾಣಿಗರ ಪೇಟೆ, ತಿಗಳರ ಪೇಟೆ, ತರಗು ಪೇಟೆ,ಚಿಕ್ಕಪೇಟೆ ಹೀಗೆ ಎಲ್ಲ ಸಮುದಾಯಗಳನ್ನು ಪ್ರತಿನಿಧಿಸುವ ಮಾರುಕಟ್ಟೆ ಗಳನ್ನು ಮಾಡಿದರು.

ಕೆಂಪೇಗೌಡರು ನಾಲ್ಕು ವಿಷಯಗಳಿಗೆ ಪ್ರಾಮುಖ್ಯವನ್ನು ಕೊಟ್ಟರು. ವ್ಯವಸಾಯಕ್ಕೆ, ರೈತರ ಬಳೆಗಳಿಗೆ ವೈಜ್ಞಾನಿಕ ಬೆಲೆ ಒದಗಿಸಲು ಮಾರುಕಟ್ಟೆ ನಿರ್ಮಾಣದಿಂದಾಗಿ ಶೋಷಿತ ಸಮುದಾಯಗಳು ತಯಾರಿಸುವ ಉತ್ಪನ್ನ ಗಳನ್ನು ಮಹಾನಗರಕ್ಕೆ ತಂದು ಉತ್ತಮ ದರಕ್ಕೆ ಮಾರಾಟ ಮಾಡಲು ಮಾರುಕಟ್ಟೆ ಒದಗಿಸುವುದು, ಉತ್ತಮ ಗಾಳಿ ಬೆಳಕಿಗೆ ಉದ್ಯಾನಗಳನ್ನು ನಿರ್ಮಿಸುವುದು,ಕೆರೆಗಳ ನಿರ್ಮಾಣ ಈ ನಾಲ್ಕು ಪ್ರಮುಖ ವಿಷಯಗಳಿಗೆ ಆಧ್ಯತೆ ನೀಡಿದ್ದರು ಎಂದರು.

ಸ್ಮಾರ್ಟ್ಸಿಟಿ
ಕೆ0ಪೇಗೌಡರು ೫೦೦ ವರ್ಷಗಳ ಹಿಂದೆಯೇ ಬೆಂಗಳೂರನ್ನು ಸ್ಮಾರ್ಟ್ಸಿಟಿ ಮಾಡಿದರು. ಬೆಂಗಳೂರಿಗೆ ಐಟಿ ಬಿಟಿ ತಂದವರು, ಮೂಲಸೌಕರ್ಯ ಅಭಿವೃದ್ಧಿಪಡಿಸಿದ್ದು, ಮೇಲ್ಸೇ ತುವೆ ತಂದಿದ್ದು ದೇವೇಗೌಡರು. ಅದನ್ನು ಯಶಸ್ವಿಯಾಗಿ ಮುಂದುವರಿಸಿದ್ದು ಎಸ್.ಎಂ.ಕೃಷ್ಣ. ಇದನ್ನು ಸಮುದಾಯ ಯಾವತ್ತೂ ಮರೆಯಬಾರದು. ಅಂತಹ ನಾಯಕತ್ವದ ಗುಣಧರ್ಮ ಸಮುದಾಯದ ರಕ್ತದಲ್ಲಿ ಇದೆ. ಅದನ್ನು ಯಾರೂ ಹೇಳಿ ಕೊಡಬೇಕಾಗಿಲ್ಲ. ಎಲ್ಲರಿಗೂ ಕೊಟ್ಟು ಉಳಿದರೆ ನಾವು ತೆಗೆದುಕೊಂಡು ಹೋಗುವವರು. ಅಂತಹ ಶ್ರೇಷ್ಟ ಸಮುದಾಯದಲ್ಲಿ ನಾವು ಬಾಳುತ್ತಿದ್ದೇವೆ ಎಂದರು.

ಸರಿಯಾಗಿ ನಡೆಸಿಕೊಳ್ಳಿ
ಇಂತಹ ಸಮುದಾಯವನ್ನು ಸರ್ಕಾರ ಹೇಗೆ ನಡೆಸಿಕೊಳ್ಳಬೇಕು ಎನ್ನುವುದನ್ನು ಆಲೋಚಿ ಸಬೇಕು. ಮೂರರಿಂದ ನಾಲ್ಕು ಪರ್ಸೆಂಟ್ ಇರುವ ಜನರು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ್ದಾರೆ ಎಂದು ಶೇ ೧೦ ಮೀಸಲಾತಿ ಕೊಟ್ಟರು. ಇದು ತಪ್ಪಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಶೇ ೧೬ರಿಂದ ೧೮ರಷ್ಟಿರುವ ಈ ಸಮುದಾಯದ ಕಥೆ ಏನು.? ಸಮುದಾಯದ ಮಕ್ಕಳಿಗೆ ನ್ಯಾಯವನ್ನು ಯಾರು ಕೇಳುವವರು. ರಾಜ್ಯ ಮತ್ತು ರಾಷ್ಟ್ರಕ್ಕೆ ಬಹಳ ದೊಡ್ಡ ಮಟ್ಟದ ಕೊಡುಗೆಯನ್ನು ಇತಿಹಾಸ ಪೂರ್ವದಿಂದ ಈವರೆಗೆ ನೀಡುತ್ತಿದ್ದೇವೆ. ಒಕ್ಕಲಿಗರಿಗಾಗಿ ಯಾವುದೇ ಸರ್ಕಾರ ವಿಶೇಷ ಯೋಜನೆಯನ್ನು ಮಾಡಿಲ್ಲ.

ನಮ್ಮೆಲ್ಲರ ಒತ್ತಾಯದ ಮೇರೆಗೆ ಮತ್ತು ಅನಿವಾರ್ಯ ಕಾರಣದಿಂದ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ. ಅದನ್ನು ಸ್ವಾಗತಿಸುತ್ತೇವೆ. ಒಕ್ಕಲಿಗರ ಸಂಘಕ್ಕೆ ದೊಡ್ಡ ತೂಕವಿದೆ. ಒಕ್ಕಲಿಗರ ಸಂಘದ ನಿರ್ದೇಶಕರು ಪ್ರಾಮಾಣಿಕವಾಗಿ ಕೆಲಸ ಮಾಡದಿದ್ದರೆ ಒಕ್ಕಲಿಗರು ಕೊಡುವ ಹಸ್ತಮುದ್ರಿಕೆಗಳು ಬೆನ್ನಿನ ಮೇಲೆ ಇರುತ್ತವೆ ಎನ್ನುವ ಭಯದಿಂದ ಪ್ರಾಮಾಣಿಕವಾಗಿ ನೈತಿಕ ಪ್ರಜ್ಞೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ನ್ಯಾಯ ಬೇಕು ?
ಒಕ್ಕಲಿಗರ ಸಂಘದ ಅಧ್ಯಕ್ಷರಿಗೆ ಹೇಳುವೆ, ಆಯುರ್ವೇದ, ೧೫೦ ಎಂಬಿಬಿಎಸ್ ಸೀಟು, ವಿಶ್ವವಿದ್ಯಾಲಯ ಇಷ್ಟಕ್ಕೆ ಇಷ್ಟಕ್ಕೆ ಸೀಮತವಾಗುವಿರಾ? ಒಕ್ಕಲಿಗರ ಮಕ್ಕಳಿಗೆ ನ್ಯಾಯ ಒದಗಿಸಲು ಧ್ವನಿ ಎತ್ತುವಿರಾ ಎನ್ನುವ ಪ್ರಶ್ನೆ ಇದೆ. ಶೇ ೧೭ರಷ್ಟಿರುವ ಜನಸಂಖ್ಯೆಗೆ ಏನು ನ್ಯಾಯವನ್ನು ಕೊಟ್ಟಿದ್ದೀರಿ ಎಂದು ಎಲ್ಲ ರಾಜಕೀಯ ಪಕ್ಷಗಳನ್ನು ಕೇಳುವೆ. ಶೇ ೩ರಿಂದ ಶೇ ೪ರಷ್ಟಿರುವ ಜನರಿಗೆ ಶೇ ೧೦ರಷ್ಟು ಮೀಸಲಾತಿ ನೀಡಲಾಗಿದೆ. ಇದು ಆ ಜನಸಂಖ್ಯೆಗೆ ಮೂರು ಪಟ್ಟು ಜಾಸ್ತಿ. ಆದರೆ ನಮಗೆ ಏನು ಕೊಡುವಿರಿ ಎನ್ನುವುದಷ್ಟೇ ನಮ್ಮ ಪ್ರಶ್ನೆ.

ಸಮಬಾಳು ಸಮಪಾಲು ಬೇಡವೇ ?
ನಾವು ಆರ್ಥಿಕವಾಗಿ ಹಿಂದುಳಿದಿದ್ದೇವೆ. ಜನರಲ್ ಮೆರಿಟ್‌ನಲ್ಲಿ ಹೋಗಿ ಸ್ಪರ್ಧೆ ಮಾಡಲು ಸಾಧ್ಯವೇ? ಔದ್ಯೋಗಿಕವಾಗಿಯೂ ಹಿಂದುಳಿದಿದ್ದೇವೆ. ಸಾಮಾಜಿಕ ಆರ್ಥಿಕವಾಗಿ ಹಿಂದುಳಿದಿದ್ದೇವೆ. ಶೈಕ್ಷಣಿಕವಾಗಿ ಸಾಲ ಮಾಡಿ ಹೊಲಗಳನ್ನು ಅಡವಿಟ್ಟು ಓದಿಸಿದರೂ ಈ ಮೀಸಲಾತಿ ಪ್ರತಿಭೆಗೆ ತಡೆಯೊಡ್ಡುವ ಕೆಲಸವನ್ನು ಮಾಡುತ್ತಿದೆ. ಹಾಗಿದ್ದರೆ ನಾವು ಎಲ್ಲಿ ನ್ಯಾಯ ಕೇಳಬೇಕು. ಸಂವಿಧಾನದ ಹಕ್ಕುಗಳು ಒಕ್ಕಲಿಗರಿಗೆ ಇಲ್ಲವೆ? ಅಂಬೇಡ್ಕರ್ ಅವರು ಕಂಡ ಸಮಬಾಳು, ಸಮಪಾಲು ಆಶಯ ಈಡೇರಬಾರದೆ. ಶೇ ೧೭ರಷ್ಟಿರುವ ಜನರಿಗೆ ಶೇ ೧೨ರಿಂದ ೧೫ರಷ್ಟು ಮೀಸಲಾತಿ ಕೊಡಿಸಿ ಎಂದು ಸರ್ಕಾರವನ್ನು ಕೇಳುತ್ತಿದ್ದೇವೆ.

ನಾವು ರಾಜ್ಯದ ರಾಜಧಾನಿ ಕಡೆ ಹೊರಡುವ ಅವಕಾಶವನ್ನು ಸರ್ಕಾರಗಳು ಮಾಡಿಕೊಡಬಾರದು ಎನ್ನುವುದು ನಮ್ಮ ಮನವಿ. ಈಗಾಗಲೇ ಸ್ವಾತಂತ್ರ‍್ಯ ಪೂರ್ವದಲ್ಲಿ ನಾವು ಒಂದು ರೀತಿಯಲ್ಲಿ ಶೋಷಣೆ ಅನುಭವಿಸಿದ್ದೇವೆ. ಮುಂದಿನ ಪೀಳಿಗೆಯ ಒಕ್ಕಲು ಮಕ್ಕಳ ಕಥೆ ಏನು? ಒಕ್ಕಲು ಮಕ್ಕಳ ಉಳಿವಿಗಾಗಿ ಸಂಘ ಸಂಸ್ಥೆಗಳು ಮಠ ಮಾನ್ಯಗಳು ಧ್ವನಿ ಎತ್ತುವ ಸಂದರ್ಭ ಬಂದಿದೆ. ಇದಾಗಲಿ ಎಂದು ತಿಳಿಸಿದರು.

ಪ್ರಧಾನಿಗಳು ಬೆಂಗಳೂರಿಗೆ ಬರುತ್ತಿದ್ದಾರೆ.ಕೆಂಪೇಗೌಡರ ಆಶಯ ಬಹಳ ದೊಡ್ಡದು.ನಮ್ಮನ್ನು ಕೆರಳಿಸುವ ಬೀದಿಗೆ ಇಳಿಸುವ ಯಾವ ಪ್ರಯತ್ನಗಳು ಬೇಡ. ಈ ವೇದಿಕೆಯ ಮೂಲಕ ನಾನು ಕೇಳುವುದು ಸಂಸತ್ತಿನ ಮುಂದೆ ಅಶ್ವಾರೂಢ ಕೆಂಪೇಗೌಡರ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು. ಈಗಾಗಲೇ ಈ ವಿಚಾರವಾಗಿ ದೇವೇಗೌಡರು ಪತ್ರ ಬರೆದಿದ್ದಾರೆ. ನಮ್ಮ ಮಠದಿಂದಲೂ ಪತ್ರ ಬರೆಯಲಾಗುವುದು. ನವದೆಹಲಿಯ ಒಂದು ಮುಖ್ಯ ರಸ್ತೆಗೆ ನಾಡಪ್ರಭು ಕೆಂಪೇಗೌಡರ ರಸ್ತೆ ಎಂದು ಹೆಸರು ಇಡಬೇಕು.ಅವರಿಗೆ ಈ ಕೂಗು ಮುಟ್ಟಲಿ.ಬೇರೆ ರೀತಿಯ ಕೂಗು ಎದ್ದೇಳುವ ಮುನ್ನವೇ ಸಮಬಾಳು, ಸಮಪಾಲು ಎನ್ನುವ ಅಂಬೇಡ್ಕರ್ ಅವರ ಆಶಯ ಅನುಸರಿಸಿ ಎನ್ನುವುದು ನಮ್ಮ ಆಶಯವಾಗಿದೆ ಎಂದರು.

ರಾಷ್ಟ್ರಕ್ಕೆ ನಮ್ಮ ಸಮುದಾಯ ಸಲ್ಲಿಸಿರುವ ಸೇವೆ ಅವಿಸ್ಮರಣೀಯ. ದೇವೇಗೌಡರು ಎಸ್.ಎಂ.ಕೃಷ್ಣ ಅವರಂತಹ ಮಹನ್ ವ್ಯಕ್ತಿಗಳನ್ನು ಸಮರ್ಪಿಸಿದ್ದೇವೆ. ಅದು ದೊಡ್ಡದು. ಪ್ರಗತಿ ಪರ ಆಡಳಿತವನ್ನು ಮತ್ತು ಜಗತ್ತಿಗೆ ಮಾದರಿಯಾದ ಆಡಳಿತವನ್ನು ದೇಶಕ್ಕೆ ಕೊಟ್ಟಿರುವವರು ದೇವೇಗೌಡರು. ಎಸ್.ಎಂ.ಕೃಷ್ಣ ರಾಷ್ಟ್ರ ಗುರುತಿಸುವ ಆಡಳಿತ ನೀಡಿದರು.

ಮಹಾಸಂಗಮ ನಡೆಸಿ
ರಾಜ್ಯದ ಮೂಲೆ ಮೂಲೆಗಳಿಂದ ಒಕ್ಕಲಿಗರು ಒಂದೆಡೆ ಸೇರಬೇಕು ಇದಕ್ಕೆ ಒಕ್ಕಲಿಗರ ಸಂಘವೇ ಕರೆ ನೀಡಬೇಕು. ಹೀಗೆ ನಡೆಯುವ “ಒಕ್ಕಲಿಗರ ಮಹಾ ಸಂಗಮ” ಸರಕಾರಕ್ಕೆ ಎಚ್ಚರಿಕೆ ಗಂಟೆಯಾಗಲಿದೆ ಎಂದು ಹೇಳಿದ್ದೆ. ಅದಕ್ಕೆ ಇನ್ನೂ ದಿನ ನಿಗದಿಯಾಗಿಲ್ಲ. ಸಂಘ ಬಡತನದಲ್ಲಿ ಇಲ್ಲ. ಮನಸ್ಥಿತಿ ಬಡತನದಲ್ಲಿ ಇದೆ. ಐದಾರು ಕೋಟಿ ಹಣ ಖರ್ಚು ಮಾಡಿ ಮಹಾಸಂಗಮ ಕಾರ್ಯ ಕ್ರಮಕ್ಕೆ ದಿನ ನಿಗದಿಗೊಳಿಸಿ. ಬೆಂಗಳೂರಿನಲ್ಲಿ ಎಲ್ಲರೂ ಒಂದೇ ಕಡೆ ಸೇರೋಣ. ದೇಶಕ್ಕೆ ಒಂದು ಸಂದೇಶ ಹೋಗಬೇಕು. ಜನವರಿ ಮೊದಲ ವಾರದ ಒಳಗೆ ಈ ಕಾರ್ಯಕ್ರಮ ಆಗಬೇಕು. ಈ ಕಾರ್ಯಕ್ರಮದ ವಿಚಾರವಾಗಿ ಯಾವುದೇ ಭಿನ್ನಾಭಿಪ್ರಾಯ ಸಂಘದ ನಿರ್ದೇಶಕರಲ್ಲಿ ಬರಬಾರದು ಎಂದು ತಾಕೀತು ಮಾಡಿದರು.

ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ.ನಾರಾಯಣ ಸ್ವಾಮಿ ಮಾತನಾಡಿ ಕೋಲಾರದಲ್ಲಿ ಒಕ್ಕಲಿಗ ಸಂಘದಿ0ದ ನಿರ್ಮಾಣ ವಾಗುವ ಹಾಸ್ಟೆಲ್‌ಗೆ ೧ ಕೋಟಿ ಅನುದಾನ ನೀಡುವೆ ಎಂದು ಘೋಷಿಸಿದ್ದೇನೆ. ಈಗಾಗಲೇ ೨೫ ಲಕ್ಷ ಬಿಡುಗಡೆ ಸಹ ಮಾಡ ಲಾಗಿದೆ. ಚಿಕ್ಕಬಳ್ಳಾಪುರ ಒಕ್ಕಲಿಗ ಸಂಘಕ್ಕೂ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಜೀವನದಲ್ಲಿ ನಾವು ಈ ಮಟ್ಟಕ್ಕೆ ಬರಲು ಯಾರು ಕಾರಣವೊ ಅವರನ್ನು ಸ್ಮರಿಸಬೇಕು. ಪದವಿ ಎನ್ನುವುದು ಪೂರ್ವ ಜನ್ಮದ ಪುಣ್ಯ. ಅಧಿಕಾರ ಸಿಕ್ಕಾಗ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕು. ಆಗ ಸಮಾಜ ಸ್ಮರಿಸುತ್ತದೆ ಎಂದರು.

ಒಕ್ಕಲಿಗರ ಸಂಘವು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ನಾನು ಮೊದಲ ಬಾರಿ ವಿಧಾನ ಪರಿಷತ್ ಸದಸ್ಯನಾದಾಗ ದೂರಿದ್ದೆ. ಆದರೆ ಈಗ ಎರಡೂ ಜಿಲ್ಲೆಯಲ್ಲಿ ಸಂಘದಿ0ದ ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿವೆ. ಹಾಸ್ಟೆಲ್ ನಿರ್ಮಾಣ ಮಾಡಿರುವ ಸಂಘಕ್ಕೆ ಅನಂಧನೆಗಳು ಎಂದು ಹೇಳಿದರು.

ಸಹಮತ, ಸಹಭಾಳ್ವೆ, ವಿಶ್ವಾಸದರಿಂದ ಮುನ್ನಡೆದರೆ ಸಂಘಕ್ಕೆ ಒಳ್ಳೆಯದಾಗುತ್ತದೆ. ಸಂಘವು ಸಮುದಾಯದ ಮಕ್ಕಳ ಭವಿಷ್ಯವನ್ನು ಮತ್ತು ಸಮುದಾಯದ ಜನರ ಗೌರವವನ್ನು ಎತ್ತಿ ಹಿಡಿಯುವ ಕೆಲಸವನ್ನು ನಿರ್ವಂಚನೆಯಿಮದ ಸಂಘ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮಂಗಳನಾಥಸ್ವಾಮೀಜಿ, ರಾಜ್ಯ ಸಂಘದ ನಿರ್ದೇಶಕ ಯಲುವಹಳ್ಳಿ ರಮೇಶ್,ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ, ಕಿಮ್ಸ್ ಅಧ್ಯಕ್ಷ ಡಾ.ರಮೇಶ್,ಕೇಂದ್ರ ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಹಿತ ಸನ್ಮಾನಿಸಲಾಯಿತು.