ಪ್ರಸಾರ
ಡಾ.ಎ.ಎಸ್.ಬಾಲಸುಬ್ರಮಣ್ಯ
ಬಿಬಿಸಿಗೆ ನೂರರ ಸಂಭ್ರಮ. ಬಿಬಿಸಿ ಎಂಬ ಮೂರಕ್ಷರಗಳು ಕಿವಿಗೆ ಬಿದ್ದ ಕ್ಷಣ ಕೇಳುಗರು ರೋಮಾಂಚನಗೊಳ್ಳುತ್ತಿದ್ದರು. ಬಿಬಿಸಿಯಲ್ಲಿ ಸುದ್ದಿ ಪ್ರಸಾರವಾಯಿತೆಂದರೆ ಅದು ಸತ್ಯ. ಎರಡನೇ ಮಾತೇ ಇಲ್ಲ. ಇಡೀ ಜಗತ್ತಿನಲ್ಲಿ, ವಿಶೇಷವಾಗಿ ಯುರೋಪ್, ಏಷ್ಯಾ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಬಹುಕಾಲ ಸುದ್ದಿಗೆ ಅತ್ಯಂತ ನಿಖರವಾದ ಮಾಹಿತಿ ಮೂಲವೆಂದರೆ ಬಿಬಿಸಿ ರೇಡಿಯೋ.
ರಾಜಕೀಯ ಅಸ್ಥಿರತೆ, ಭಿನ್ನಾಭಿಪ್ರಾಯಗಳು, ಅಧಿಕಾರಕ್ಕಾಗಿ ಕಿತ್ತಾಟಗಳಿದ್ದ ಬಹುತೇಕ ದೇಶದ ಜನರು ವಿಶ್ವಾಸಾರ್ಹ ಸುದ್ದಿ ಕೇಳಲು ಚಹಾ ಅಂಗಡಿ ಬಳಿ ಸೇರುತ್ತಿದ್ದ ಉದಾಹರಣೆ ಗಳಿವೆ. ದೇಶ ಪುಟ್ಟದಾದರೂ, ಜಗತ್ತಿನ ಬಹುಭಾಗವನ್ನು ಆಳಿದ ಕೀರ್ತಿ ಇಂಗ್ಲೆಂಡಿನದು. ಆದರೆ ಬಿಬಿಸಿ ತನ್ನ ಅಧಿಕಾರಯುತ ಪ್ರಭಾವವನ್ನು ಈಗಲೂ ಮುನ್ನಡೆಸಿದೆ. ಟೆಲಿಗ್ರಾಫ್ ಮತ್ತು ಟೆಲಿಫೋನ್ ನಂತರ, ತಂತಿರಹಿತ (ನಿಸ್ತಂತು) ಸಂದೇಶ ಕಳುಹಿಸುವ ತಂತ್ರeನ ಸಂವಹನ ಕ್ಷೇತ್ರದಲ್ಲಿ ಹೊಸ ಮೈಲಿಗಯಿತು.
ಬ್ರಿಟಿಷ್ ವಿಜ್ಞಾನಿ ಆಲಿವರ್ ಲಾಜ್ 1894ರಲ್ಲಿ ತನ್ನ ಪ್ರಯೋಗಾಲಯದಲ್ಲಿ ಪ್ರದರ್ಶಿಸಿದ್ದ ತಂತಿರಹಿತ ಪ್ರಸಾರವನ್ನು ಪ್ರಾಯೋಗಿಕವಾಗಿ ಸಾಕಾರಗೊಳಿಸಿದ ಇಟಲಿಯ ವಿಜ್ಞಾನಿ ಮತ್ತು ಉದ್ಯಮಿ ಮಾರ್ಕೋನಿ ಹಲವರ ಜತೆಗೂಡಿ ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಂಪನಿಯನ್ನು ಲಂಡನ್ನಲ್ಲಿ 18 ಅಕ್ಟೋಬರ್ 1922ರಲ್ಲಿ ರಚಿಸಿದರು. ಬಿಬಿಸಿಯಿಂದ ದೈನಂದಿನ ಸುದ್ದಿ ಪ್ರಸಾರವು ನವೆಂಬರ್ 14, 1922ರಂದು ಮಂಗಳವಾರ ಸಂಜೆ ೬ ಘಂಟೆಗೆ ಆರಂಭವಾಯ್ತು.
ಮೊದಲು ಪ್ರಮುಖ ಸುದ್ದಿಗಳು ನಂತರ ಹವಾಮಾನ ವರದಿ ಓದಲಾಯ್ತು. ಕೇಳುಗರು ಸುದ್ದಿಯನ್ನು ಬೇಕಾದರೆ ಬರೆದುಕೊಳ್ಳಲಿ ಎಂದು ಎರಡನೇ ಬಾರಿ ನಿಧಾನವಾಗಿ ಓದಲಾಯಿತು. ಪತ್ರಕರ್ತನಾಗಿದ್ದ ಆರ್ಥರ್ ಬರೋಸ್ ಮೊದಲ ದಿನದ ಸುದ್ದಿಯನ್ನು ಓದಿದ ಅದೃಷ್ಟವಂತ. ಈ ಮಹತ್ತರ ‘ಪ್ರಸಾರ’ದ ಪ್ರಾಮುಖ್ಯತೆಯನ್ನು ಪತ್ರಿಕೆಗಳೂ ಸೇರಿದಂತೆ ಯಾರೂ ಗಂಭೀರವಾಗಿ ಪರಿ ಗಣಿಸಲಿಲ್ಲ. ಏಕೆಂದರೆ ಕೇಳಿದವರ ಸಂಖ್ಯೆಯೂ ಕಡಿಮೆಯಿತ್ತು ಮತ್ತು ರೇಡಿಯೋ ಧ್ವನಿ ಕೂಡ ಸ್ಪಷ್ಟವಾಗಿರಲಿಲ್ಲ. ಸ್ವಲ್ಪವೇ ಸಮಯದ ನಂತರ ಪ್ರಸಾರ ನಿಂತಿತು. ಆದರೆ ಸಂವಹನದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಕ್ಷಣವಾಯಿತು.
ಅತ್ಯಂತ ಪ್ರಭಾವಿ ಮಾಧ್ಯಮ ಬಾನುಲಿಯ ಕಾರ್ಯಕ್ರಮ ರೂಪುರೇಷೆಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಮೂವರು ಪ್ರಮುಖರೆಂದರೆ ಜಾನ್ ರೀತ್, ಪತ್ರಕರ್ತ ಮತ್ತು ಮಾರ್ಕೋನಿ ಕಂಪನಿಯ ಮ್ಯಾನೇಜರ್ ಆರ್ಥರ್ ಬರೋಸ್ ಮತ್ತು ಅವರ ಡೆಪ್ಯೂಟಿ, ಸೆಸಿಲ್ ಲೆವಿಸ್. ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಅನೇಕರು ಬಾನುಲಿ ಮಾಧ್ಯಮವನ್ನು ದುರುಪಯೋಗ ಪಡಿಸಿಕೊಂಡು ಸುಳ್ಳುಸುದ್ದಿ ಪ್ರಸರಿಸುತ್ತಿದ್ದರು. ಇದರಿಂದ ಭಯಗೊಂಡಿದ್ದ ಇವರು ಇಂತಹ ಸರಳ ಮತ್ತು
ಅತ್ಯಂತ ಪ್ರಭಾವಿ ಮಾಧ್ಯಮದ ಪ್ರಯೋಜನ ಜನರಿಗೆ ದೊರೆಯಬೇಕೆನ್ನುವ ಪರಂಪರೆಗೆ ಮುನ್ನುಡಿ ಬರೆದರು.
ಸ್ಕಾಟ್ಲೆಂಡಿನ ಜಾನ್ ರೀತ್ ತನ್ನ 33ನೇ ವಯಸ್ಸಿನ ಬಿಬಿಸಿಯ ಜನರಲ್ ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡು ಈ ಸಂಸ್ಥೆಯ ಬೃಹತ್ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ. ಈತನಿಗೆ ಹೆಗಲು ಕೊಟ್ಟು ನಿಂತ ಚೀಫ್ ಎಂಜಿನಿಯರ್ ಪೀಟರ್ ಎಕರ್ಸ್ಲೇ, ಬಾನುಲಿ ಪ್ರಸಾರ ಇಡೀ ದೇಶವನ್ನು ತಲಪುವಂತೆ ಮಾಡಿದ. ಅವರಿಬ್ಬರ ಮುಂದೆ ಯಾವುದೇ ಮಾರ್ಗದರ್ಶಿ ಸೂತ್ರ ಗಳು ಇರಲಿಲ್ಲ. ಆದರೆ ಅವರು ಜಾಣತನದಿಂದ ಮತ್ತು ಅನೇಕ ಪ್ರಯೋಗಗಳ ಮೂಲಕ ಬಾನುಲಿ ಪ್ರಸಾರದಲ್ಲಿ ಏನಿರಬೇಕೆಂದು ಆಲೋಚಿಸಿ, ಬಾನುಲಿ ಕೇಂದ್ರಕ್ಕೆ ಸಾಂಸ್ಥಿಕ ರೂಪ ನೀಡುವುದರ ಜತೆಗೆ ಕೇಳುಗರ ನಾಡಿಮಿಡಿತ ಅರಿತು ಕಾರ್ಯಕ್ರಮಗಳನ್ನು ರೂಪಿಸಿದರು.
ಹಲವಾರು ಅಸ್ಪಷ್ಟತೆ ಹಾಗೂ ಗೊಂದಲಗಳ ನಡುವೆ ಇಂತಹ ಶಕ್ತಿಯುತ ಖಾಸಗಿ ಮಾಧ್ಯಮವನ್ನು ಜನತೆಯ ಸಾಂಸ್ಕೃತಿಕ ಸಂಪನ್ಮೂಲವಾಗಿ ಪರಿವರ್ತಿಸಲು ಇವರು ಪಣತೊಟ್ಟರು. ಇಂತಹ ಸರಳ ಮತ್ತು ತ್ವರಿತ ಮಾಧ್ಯಮದಿಂದ ಪ್ರತಿಯೊಬ್ಬರೂ ಪ್ರಯೋಜನ ಪಡೆಯುತ್ತಾರೆ ಎಂಬ ಆಶಾಭಾವನೆಯಿಂದ ಕೆಲಸ ಮಾಡಿ ಸಾರ್ವಜನಿಕ ಪ್ರಸಾರ ವ್ಯವಸ್ಥೆಗೆ ಮಾದರಿಯಾದರು.
ಅದು ಸತ್ಯವೂ ಆಯಿತು. ಅಂದಿಗೂ ಇಂದಿಗೂ ಬಿಬಿಸಿ ಜಗತ್ತಿಗೆ ಒಂದು ಆದರ್ಶ ಸಾರ್ವಜನಿಕ ಪ್ರಸಾರ ಸಂಸ್ಥೆಯಾಗಿ ಕೆಲಸ ನಿರ್ವಹಿಸುತ್ತಿದೆ.
ಜಾನ್ ರೀತ್ 16 ವರ್ಷಗಳ ಕಾಲ ನೇತೃತ್ವ ವಹಿಸಿ ಸಂಸ್ಥೆಯನ್ನು ಮುನ್ನಡೆಸಿದರು. ಸಾರ್ವಜನಿಕ ಬಾನುಲಿ ಪ್ರಸಾರದ ಸೇವೆಯ ಪರಿಕಲ್ಪನೆಯನ್ನು ಯಶಸ್ವಿಯಾಗಿ ರೂಪಿಸಿದ ಬಿಬಿಸಿ ಮಾದರಿ, ಭಾರತವೂ ಸೇರಿದಂತೆ ಹಲವಾರು ದೇಶಗಳಲ್ಲಿ ಅನುಸರಣೆ ಗೊಂಡಿತು. ಸಂಸದೀಯ ಸಮಿತಿಯ ಶಿಫಾರಸಿನ ಮೇರೆಗೆ 1927ರಲ್ಲಿ ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ಎಂಬ ಸಾರ್ವಜನಿಕ ನಿಗಮ ಸ್ಥಾಪಿಸಲಾಯಿತು. ಈ ನಿಗಮ ಅಂತಿಮವಾಗಿ ಸಂಸತ್ತಿಗೆ ಉತ್ತರದಾಯಿತ್ವ ಹೊಂದಿತ್ತು. ಆದರೆ ವಾಸ್ತವಿಕ ವಾಗಿ ತನ್ನ ದಿನನಿತ್ಯದ ಪ್ರಸಾರ ಚಟುವಟಿಕೆಗಳಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆದಿತ್ತು.
ಸುದೀರ್ಘ ವರ್ಷಗಳ ನಂತರ 2007ರಲ್ಲಿ ಬಿಬಿಸಿ ಆಡಳಿತವನ್ನು ಬಿಬಿಸಿ ಟ್ರಸ್ಟ್ಗೆ ವರ್ಗಾಯಿಸಲಾಗಿದೆ. ಬಿಬಿಸಿ ಟ್ರಸ್ಟ್ನ 12 ಸ್ವತಂತ್ರ ಸದಸ್ಯರನ್ನು ಹಾಗೂ ಮುಖ್ಯಸ್ಥರನ್ನು ಬ್ರಿಟಿಷ್ ರಾಜರು ನೇಮಿಸುತ್ತಾರೆ. ಈ ಹೊಸ ಬಾನುಲಿ ತಂತ್ರಜ್ಞಾನ ಬಳಕೆಗೆ ಬಂದಾಗ ಎಡೆ ಇದರ ದುರುಪಯೋಗವಾಗುತ್ತಿತ್ತು. ಒಂದೇ ಊರಿನಲ್ಲಿ ಹಲವಾರು ಖಾಸಗಿ ಬಾನುಲಿ ಕೇಂದ್ರಗಳು ಬಂದು ಅನಾರೋಗ್ಯಕರ ಸ್ಪರ್ಧೆ ಏರ್ಪಟ್ಟಿತ್ತು. ಇದನ್ನು ಗಮನಿಸಿ ಇಂಗ್ಲೆಂಡಿನಲ್ಲಿ ಬಿಬಿಸಿ ಸಂಸ್ಥೆಗೆ ಮಾತ್ರ ಬಾನುಲಿ ಪ್ರಸಾರದ ಅನುಮತಿ ನೀಡಲಾಯಿತು.
ಸುದ್ದಿಯ ಜತೆಗೆ ಕುಟುಂಬಸಮೇತ ಎಲ್ಲರೂ ಆಲಿಸಬಹುದಾದ ವೈವಿಧ್ಯಮಯ ಸಂಗೀತ, ನಾಟಕ, ಉಪನ್ಯಾಸ, ಪುಸ್ತಕ ಓದುವಿಕೆ, ವಿಡಂಬನೆ ಮುಂತಾದ ನೇರಪ್ರಸಾರದ ಕಾರ್ಯಕ್ರಮಗಳು ಶ್ರೋತೃಗಳ ಮನಗೆದ್ದವು. ಬಾನುಲಿ ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿತು. ಧ್ವನಿಮುದ್ರಣ ಸ್ಟುಡಿಯೋ ಕಲ್ಪನೆ ಇರದ ಆ ದಿನಗಳಲ್ಲಿ, ಲಭ್ಯವಿರುವ ಕೊಠಡಿಗಳ ದಪ್ಪನೆಯ ಪರದೆ ಗಳನ್ನು ಹಾಕಿ, ನೇರವಾಗಿ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುತ್ತಿತ್ತು.
ಬಾನುಲಿ ಶ್ರವ್ಯಮಾಧ್ಯಮ. ಇಲ್ಲಿ ಬಳಸುವ ಭಾಷೆ/ಬರವಣಿಗೆ ಹೇಗಿರಬೇಕೆಂಬ ಕಲ್ಪನೆಯೇ ಇರದ ಆ ದಿನಗಳಲ್ಲೂ, ಶಿಸ್ತು,
ಸಂಯಮ ಮತ್ತು ಸಮರ್ಪಣಾಭಾವದ ಸಿಬ್ಬಂದಿ, ಬಾನುಲಿ ಪ್ರಸಾರದ ರೂಪುರೇಷೆಗಳನ್ನು ಗುರುತಿಸುವಲ್ಲಿ ಯಶಸ್ವಿಯಾದರು. ಮಾಸಿಕ ಬಾನುಲಿ ಕಾರ್ಯಕ್ರಮಗಳ ಪಟ್ಟಿ ಸಿದ್ಧವಾಗತೊಡಗಿದವು. ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಲಾವಿದರು ಆರಂಭದಲ್ಲಿ ಈ ಮಾಧ್ಯಮದ ಜನಪ್ರಿಯತೆಯ ಬಗ್ಗೆ ಅಷ್ಟು ಉತ್ಸಾಹ ತೋರಲಿಲ್ಲ, ಆದರೆ ಕ್ರಮೇಣವಾಗಿ ಪ್ರಸಾರ ಇಡೀ ದೇಶವನ್ನೇ ವ್ಯಾಪಿಸಿತು. ಟ್ರಾನ್ಸ್ ಮಿಟರ್ ಇಲ್ಲವೇ ಟೆಲಿಫೋನ್ ತಂತಿ ಮೂಲಕ ಸಂಪರ್ಕ ಕಲ್ಪಿಸಿ ಎಡೆ ಬಾನುಲಿ ಕಾರ್ಯಕ್ರಮ ಗಳು ದೊರೆಯುವಂತಾಯ್ತು.
ಬಾನುಲಿ ಆಲಿಕೆ ದಿನನಿತ್ಯದ ಅಭ್ಯಾಸವಾಗತೊಡಗಿತು. ತಂತ್ರಜ್ಞಾನ ಮುಂದುವರಿದಂತೆ, ಬಾನುಲಿ ಸ್ಟುಡಿಯೋ, ಶಬ್ದಮುದ್ರಣ, ಶಬ್ದ ಪರಿಣಾಮಗಳು, ಕ್ರೀಡೆಗಳ ನೇರಪ್ರಸಾರ, ಬಾನುಲಿ ಕಾರ್ಯಕ್ರಮಗಳನ್ನು ಇನ್ನಷ್ಟು ಶ್ರೀಮಂತಗೊಳಿಸಿದವು. ಬಿಬಿಸಿಯ ಜಾಗತಿಕ ಬಾನುಲಿ ಪ್ರಸಾರ 1932ರಲ್ಲಿ 40ಕ್ಕೂ ಹೆಚ್ಚು ಪ್ರಮುಖ ಜಾಗತಿಕ ಭಾಷೆಗಳಲ್ಲಿ ಪ್ರಸಾರವಾಗಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿತು. ಇದು ಬ್ರಿಟಿಷ್ ವಿದೇಶಿನೀತಿಗೆ ಮತ್ತಷ್ಟು ಪೂರಕವಾಗಿ ನೆರವಾಯಿತು. ಐದನೇ ಕಿಂಗ್ ಜಾರ್ಜ್ ಅವರ ಉದ್ಘಾಟನಾ ಭಾಷಣದ ಮೂಲಕ ಜಾಗತಿಕ ಸೇವೆ ಆರಂಭವಾಯಿತು. ಬಾನುಲಿಯಲ್ಲಿ ಮಾತನಾಡಿದ ಮೊದಲ ರಾಜರಿವರು. ಅವರ ಧ್ವನಿಯನ್ನು ಮೊದಲ ಬಾರಿಗೆ ಲಕ್ಷಾಂತರ ಜನರು ಏಕಕಾಲದಲ್ಲಿ ಕೇಳಿ ರೋಮಾಂಚನಗೊಂಡರು.
ರಾಜಕೀಯ ಅಸ್ಥಿರತೆಗಳಿಂದ ಕೂಡಿದ್ದ ಜಗತ್ತಿನಲ್ಲಿ ಬಾನುಲಿಯು ನಾಗರಿಕತೆಗಳನ್ನು ಬೆಸೆಯುವ ಮಾಧ್ಯಮವಾಗಲಿದೆ ಎಂದು ಅನೇಕರು ವಾದಿಸಿದರು. ಅದರಲ್ಲಿ ಸತ್ಯಾಂಶವೂ ಇದೆ ಎಂದರೆ ತಪ್ಪಾಗದು. ಶ್ರೋತೃಗಳಿಗೆ ಹಿತಮಿತವಾದ ಮಾಹಿತಿ, ಶಿಕ್ಷಣ ಮತ್ತು ಮನರಂಜನೆ ನೀಡಿ, ಬಿಬಿಸಿ ಒಂದು ಮಾದರಿ ಮತ್ತು ಪ್ರಭಾವಿ ಜಾಗತಿಕ ಮಾಧ್ಯಮವಾಯಿತು. ಎರಡನೇ ವಿಶ್ವಯುದ್ಧ
ಕಾಲದಲ್ಲಿ ಬಿಬಿಸಿಯ ಪಾತ್ರವನ್ನು ವರ್ಣಿಸಲಸಾಧ್ಯ. ಯೋಧರಿಗೆ, ಯುರೋಪಿನ ಸಾರ್ವಜನಿಕರಿಗೆ ಮತ್ತು ಸಾಗರೋತ್ತರ ಮಿತ್ರರಿಗೆ ನಿಖರ ಮಾಹಿತಿ ಹಾಗೂ ಮನರಂಜನೆ ನೀಡುವಲ್ಲಿ ಮಹತ್ತರ ಪಾತ್ರವನ್ನು ಈ ಪ್ರಸಾರಸಂಸ್ಥೆ ನಿರ್ವಹಿಸಿತು.
1923ರಲ್ಲಿಯೇ ‘ರೇಡಿಯೋ ಟೈಮ್ಸ’ ಎಂಬ ನಿಯತಕಾಲಿಕೆ ಮುದ್ರಿಸಿ, ಬಾನುಲಿ ಕೇಂದ್ರದಿಂದ ಪ್ರಸಾರವಾಗುವ ಕಾರ್ಯಕ್ರಮ ಗಳ ಪಟ್ಟಿಯನ್ನು ಪ್ರಕಟಿಸಿತು. ಯುವ ಕಲಾವಿದರಿಗೆ ಬಾನುಲಿ ಕಾರ್ಯಕ್ರಮಗಳ ನಿರ್ವಹಣೆ, ಬೇಕಾದ ಪ್ರತಿಭೆ ಮತ್ತು ಕೌಶಲಗಳ ಕುರಿತು ಮಾರ್ಗದರ್ಶನ ನೀಡಿತು. ಬಿಬಿಸಿಯ ವೃತ್ತಿಪರತೆಗೆ ಇದು ಸಾಕ್ಷಿ ಯಾಗಿತ್ತು. ಆಗತಾನೆ ಬೆಳೆಯಲಾರಂಭಿಸಿದ್ದ ಬಾನುಲಿ ತಂತ್ರeನ ಕ್ಷೇತ್ರದ ಯಂತ್ರೋಪಕರಣ ಗಳ ಪ್ರಚುರಕ್ಕೆ ಈ ಪ್ರಕಟಣೆ ನೆರವಾಯಿತು.
ಬಾನುಲಿ (1922-1954) ಹಾಗೂ ಟಿವಿ ಪ್ರಸಾರಗಳಲ್ಲಿ (1936-1972) ಏಕಸ್ವಾಮ್ಯತೆಯನ್ನು ಬಿಬಿಸಿ ಹೊಂದಿತ್ತು. ರೇಡಿಯೋ ಸೆಟ್ ಹೊಂದಿದ್ದವರು ಸರಕಾರಕ್ಕೆ ವಾರ್ಷಿಕ ಶುಲ್ಕ ನೀಡಬೇಕಿತ್ತು. ಆರಂಭದಲ್ಲಿ ವಾರ್ಷಿಕವಾಗಿ ೧೦ ಶಿಲಿಂಗ್ ಶುಲ್ಕವಿತ್ತು. ಈ ಮೊತ್ತ ಆ ಸಮಯದಲ್ಲಿ ಕಾರ್ಮಿಕರ ಒಂದು ದಿನದ ವೇತನಕ್ಕೆ ಸಮನಾಗಿತ್ತು. 1923ರ ವೇಳೆಗೆ ೨ ಲಕ್ಷ ರೇಡಿಯೋ ಪರವಾನಗಿಗಳನ್ನು ನೀಡಲಾಗಿತ್ತು. ಇದು 1928ರ ಹೊತ್ತಿಗೆ ೨೫ ಲಕ್ಷ ಕ್ಕೆ ಏರಿತ್ತು. ಇಡೀ ದೇಶಕ್ಕೆ ಏಕಬಗೆಯ ಕಾರ್ಯಕ್ರಮಗಳ ಪ್ರಸಾರದ ಬದಲು, ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಿ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರ ಜತೆಗೆ ಬಾನುಲಿ ಸಂಕೇತಗಳು ಕೇಳುಗರಿಗೆ ಸ್ಪಷ್ಟವಾಗಿ ದೊರೆಯುವಂತೆ ಬಾನುಲಿ ಪ್ರಸಾರ ವ್ಯವಸ್ಥೆಯನ್ನು ಪುನರ್ರಚಿಸ ಲಾಯಿತು. ಇದರಿಂದ ಬಾನುಲಿ ಮತ್ತಷ್ಟು ಜನಸಾಮಾನ್ಯರಿಗೆ ಸನಿಹವಾಯ್ತು.
ಸಂವಹನ ತಂತ್ರಜ್ಞಾನದ ಅತೀವ ಬೆಳವಣಿಗೆಗಳನ್ನು ಗಮನಿಸಿ ಈ ನಿರ್ಬಂಧಗಳನ್ನು ನಂತರ ಸಡಿಲಿಸಲಾಯಿತು. ಆದರೆ ಟಿವಿ ಸೆಟ್ ಹೊಂದಿರುವವರು ಇಲ್ಲವೇ ಯಾವುದೇ ಸಾಧನದ ಮೂಲಕ ನೇರವಾಗಿ ಟಿವಿ ಪ್ರಸಾರವನ್ನು ವೀಕ್ಷಿಸುವರು ಇಂಗ್ಲೆಂಡಿನಲ್ಲಿ ಈಗಲೂ ವಾರ್ಷಿಕ ಶುಲ್ಕ ನೀಡಬೇಕಾಗಿದೆ. 22000 ಸಿಬ್ಬಂದಿಯನ್ನು ಹೊಂದಿರುವ ಬಿಬಿಸಿ ವಿಶ್ವದ ಅತಿದೊಡ್ಡ ಸಾರ್ವಜನಿಕ ಪ್ರಸಾರ ಸೇವಾ ಸಂಸ್ಥೆಯಾಗಿದೆ. 2020-21ರಲ್ಲಿ ಅದರ ಬಜೆಟ್ ೩.೮ ಶತಕೋಟಿ ಪೌಂಡ್ಗಳಾಗಿತ್ತು. ರೇಡಿಯೋ, ದೂರದರ್ಶನ
ಮತ್ತು ಡಿಜಿಟಲ್ ಸೇವೆಗಳ ಮೂಲಕ ಇದು ಮಾಹಿತಿ ಮತ್ತು ಮನರಂಜನೆ ಒದಗಿಸುತ್ತಿದೆ.
ನೂರು ವರ್ಷಗಳ ಇತಿಹಾಸ ಹೊಂದಿರುವ ಈ ಬೃಹತ್ ಸಾರ್ವಜನಿಕ ಪ್ರಸಾರಸಂಸ್ಥೆ ನವಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಂಡಿದೆ. ಉದಾಹರಣೆಗೆ 2012ರಲ್ಲಿ ಲಂಡನ್ ನಗರದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದ ಪ್ರಸಾರವು, ವಿಶ್ವದ ಮೊದಲ ಆಲ-ಡಿಜಿಟಲ್ ಗೇಮ್ಸ್ ಆಗಿತ್ತು. 24 ಏಕಕಾಲಿಕ ನೇರಪ್ರಸಾರ ವ್ಯವಸ್ಥೆಯ ಮೂಲಕ ಪ್ರೇಕ್ಷಕರು ಅತ್ಯುತ್ತಮ ಆಯ್ಕೆ ಗಳನ್ನು ಹೊಂದಿದ್ದರು.
ಶತಮಾನೋತ್ಸವ ಆಚರಣೆಗೆ ಬೃಹತ್ ಕಾರ್ಯಕ್ರಮಗಳನ್ನು ಬಿಬಿಸಿ ಆಯೋಜಿಸಿದೆ. ತನ್ನ ಸಂಗ್ರಹದಲ್ಲಿರುವ ಎಲ್ಲ ದಾಖಲೆಗಳು (ಅಂದಾಜು 27000 ಅಡಿ ಉದ್ದದ ದಾಖಲೆಗಳು) ಮತ್ತು 21000 ಮೈಕ್ರೋಫಿಲ್ಮ್ ರೀಲ್ಗಳು, ಬಿಬಿಸಿ ಪ್ರಕಟಣೆಗಳು, ಪೋಸ್ಟರ್ ಕಲಾಕೃತಿಗಳು ಮತ್ತು ಇತರೆ ದಾಖಲೆಗಳನ್ನು ಸಂಗ್ರಹಿಸಿದೆ. ಮುಂದಿನ ಜನಾಂಗಕ್ಕೆ ಇವು ಲಭ್ಯವಾಗುವಂತೆ ಕಾಯ್ದಿರಿಸ ಲಾಗುತ್ತಿದೆ. ಸಾರ್ವಜನಿಕ ಪ್ರಸಾರ ಸೇವೆಯನ್ನು ಪ್ರತಿನಿಧಿಸುವ ಬೃಹತ್ eನಭಂಡಾರ ಇದಾಗಲಿದೆ. ಬಿಬಿಸಿ ಬೃಹತ್ ಪ್ರಸಾರ ಜಾಲವನ್ನು ಸ್ಥಳೀಯವಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಹೊಂದಿದೆ. ೫೬ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಸ್ಥಳೀಯ ಬಾನುಲಿ ಕೇಂದ್ರಗಳ ಮೂಲಕ ಎಲ್ಲ ವಯೋಮಾನದವರಿಗೆ, ವಿವಿಧ ವರ್ಗದವರಿಗೆ ಬಾನುಲಿ ಕಾರ್ಯಕ್ರಮಗಳನ್ನು ತನ್ನ ದೇಶದಲ್ಲಿ ಬಿಬಿಸಿ ಪ್ರಸಾರಿಸುತ್ತಿದೆ. ಅಲ್ಲದೆ ಸ್ಥಳೀಯವಾಗಿ ೮ ಟಿವಿ ಚಾನೆಲ್ಗಳನ್ನು ಹೊಂದಿದೆ. ಜಾಗತಿಕವಾಗಿ ೧೦ ಬಾನುಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಒಟ್ಟಾರೆಯಾಗಿ ಜಗತ್ತಿನ ೪೦ ಪ್ರಮುಖ ಭಾಷೆಗಳಲ್ಲಿ ಟಿವಿ, ಬಾನುಲಿ ಮತ್ತು ಆನ್ಲೈನ್ ಸೇವೆಗಳು ಜನರಿಗೆ ಮಾಹಿತಿ, ಶಿಕ್ಷಣ ಮತ್ತು ಮನರಂಜನೆಯನ್ನು ನೀಡುತ್ತಿವೆ. ಖಾಸಗೀಕರಣದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಸೇರಿದಂತೆ ಜಾಗತಿಕವಾಗಿ ಬಾನುಲಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಸ್ಪರ್ಧೆ ತೀಕ್ಷವಾಗಿದೆ. ಆದರೂ ಕಾರ್ಯಕ್ರಮಗಳ ಗುಣಮಟ್ಟದಲ್ಲಿ ಬಿಬಿಸಿ ತನ್ನದೇ ಆದ ಛಾಪನ್ನು ಈಗಲೂ ಕಾಯ್ದುಕೊಂಡಿದೆ. ವಿಶ್ವಾಸಾರ್ಹತೆಯ ಸುದ್ದಿಗಾಗಿ ಈಗಲೂ ಬಿಬಿಸಿ ಜಾಲತಾಣ ಅಚ್ಚುಮೆಚ್ಚು.