ಅಪರ್ಣಾ ಎ.ಎಸ್. ಬೆಂಗಳೂರು
ಮುಂದಿನ ತಿಂಗಳೇ ಪ್ರಾಯೋಗಿಕ ಯೋಜನೆ ಆರಂಭ
೨೫೦ರಿಂದ ೨೮೦ ಕಿಮೀ ವ್ಯಾಪ್ತಿಯಲ್ಲಿ ಸಂಚರಿಸುವ ಸಾಧ್ಯತೆ
ಎಲೆಕ್ಟ್ರಿಕ್,ಬ್ಯಾಟರಿ ಚಾಲಿತ ಬಸ್ಗಳತ್ತ ಸಾರಿಗೆ ನಿಗಮ ಮುಖ
ಪ್ರಮುಖ ಡಿಪೋಗಳಲ್ಲಿ ಬಸ್ಗಳ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ
ರಾಜಧಾನಿ ಬೆಂಗಳೂರಲ್ಲಿ ಈಗಾಗಲೇ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ಗಳ ಸಂಚಾರ ಜೋರಾಗಿದ್ದು, ಇದೀಗ ಕೆಎಸ್ ಆರ್ಟಿಸಿ ವತಿಯಿಂದಲೂ ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗೆ ಇಳಿಸಲು ಸಿದ್ಧತೆ ಆರಂಭವಾಗಿದೆ.
ಎಲೆಕ್ಟ್ರಿಕ್ ಬಸ್ಗಳು ಭವಿಷ್ಯದ ಸಾರಿಗೆ ವ್ಯವಸ್ಥೆಗೆ ಪೂರಕ ಎನ್ನುವ ಕಾರಣಕ್ಕಾಗಿ ಕೆಎಸ್ಆರ್ಟಿಸಿ ಇದೀಗ ತನ್ನ ವ್ಯಾಪ್ತಿಯಲ್ಲಿ ೫೦ ಬಸ್ಗಳನ್ನು ರಸ್ತೆಗೆ ಇಳಿಸಲು ತೀರ್ಮಾ ನಿಸಿದೆ. ಡಿಸೆಂಬರ್ ತಿಂಗಳಾಂತ್ಯಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ವಿದ್ಯುತ್ ಚಾಲಿತ ಬಸ್ಗಳು ಆಗಮಿಸಲಿವೆ. ಈಗಾಗಲೇ ಈ ಕುರಿತಂತೆ ಮಾತುಕತೆಗಳು ಮುಗಿದಿದ್ದು, ತಿಂಗಳಾಂತ್ಯಕ್ಕೆ ೨೫ ಎಲೆಕ್ಟ್ರಿಕ್ ಬಸ್ಗಳು ನಗರಕ್ಕೆ ಬರಲಿವೆ. ಉಳಿದ ೨೫ ಬಸ್ ಗಳು ಜನವರಿಯಲ್ಲಿ ಆಗಮಿಸಲಿವೆ.
ಡಿಸೇಲ್ ಬಸ್ಗಳನ್ನು ಓಡಿಸುತ್ತಿದ್ದ ಕೆಎಸ್ಆರ್ಟಿಸಿ ಇದೀಗ ವಿದ್ಯುತ್ ಚಾಲಿತ ಬಸ್ಗಳತ್ತ ಮುಖ ಮಾಡುತ್ತಿದೆ. ಡೀಸೆಲ್ ಬಳಕೆ ದುಬಾರಿಯಾದ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಹಾಗೂ ಬ್ಯಾಟರಿ ಚಾಲಿತ ಬಸ್ಗಳತ್ತ ಸಾರಿಗೆ ನಿಗಮಗಳು ಮುಖ ಮಾಡುತ್ತಿವೆ. ಆರ್ಥಿಕ ಹೊರೆಯೊಂದಿಗೆ ಪರಿಸರ ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ವಿದ್ಯುತ್ ಮತ್ತು ಬ್ಯಾಟರಿ ಚಾಲಿತ ಬಸ್ಗಳ ಕುರಿತು ನಗರದ ಜನರಿಂದ ಉತ್ತಮ ಅಭಿಪ್ರಾಯ ಬರುತ್ತಿರುವ ಹಿನ್ನೆಲೆ ಕೆಎಸ್ಆರ್ಟಿಸಿ ಕೂಡ ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೫೦ ಬಸ್ಗಳ ಆಗಮನ: ಕೆಎಸ್ಆರ್ಟಿಸಿ ಒಟ್ಟು ೫೦ ಎಲೆಕ್ಟ್ರಿಕ್ ಬಸ್ಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತಿದ್ದು, ಈಗ ಬರಲಿರುವ ಬಸ್ಗಳು ಆರಂಭದಲ್ಲಿ ಬೆಂಗಳೂರಿನಿಂದ ೨೮೦ ಕಿ.ಮೀ. ವ್ಯಾಪ್ತಿಯ ನಗರಗಳಿಗೆ ಸಂಚಾರ ನಡೆಸಲಿದೆ. ಇಂದರಿಂದ ಒಂದು ಚಾರ್ಜಿಂಗ್ನಿಂದ ಎಷ್ಟು ಕಿ.ಮೀ. ಇದು ಕ್ರಮಿಸಲಿದೆ ಎಂದು ಪ್ರಾಯೋಗಿಕವಾಗಿ ತಿಳಿಯಲಿದೆ.
ಈ ಪ್ರಯೋಗ ಯಶಸ್ವಿಯಾದ ನಂತರ ಮುಂದಿನ ಹಂತಗಳಲ್ಲಿ ದೂರದ ಪ್ರದೇಶಗಳಿಗೂ ಸಂಚರಿಸಲು ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಎಲೆಕ್ಟ್ರಿಕ್ ಹಾಗೂ ಬ್ಯಾಟರಿ ಆಧಾರಿತ ಬಸ್ಗಳ ನಿರ್ವಹಣೆ ಸುಲಭವಾಗಿದೆ. ಇವುಗಳು ಪರಿಸರ ಸ್ನೇಹಿಯಾಗಿದ್ದು, ಕಾರ್ಯಾಚರಣೆ ವೆಚ್ಚವೂ ಡೀಸೆಲ್ಗೆ ಹೋಲಿಸಿದರೆ ಬಹಳ ಕಡಿಮೆ. ಮಾಲಿನ್ಯದ
ಪ್ರಮಾಣದಲ್ಲಿಯೂ ಗಣನೀಯ ಇಳಿಕೆಯಾಗಲಿದೆ.
ಹೀಗಾಗಿ ಬಸ್ ಖರೀದಿ ದರ ದುಬಾರಿಯಾದರೂ ಕೆಎಸ್ ಆರ್ಟಿಸಿ ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿಸಲು ಮುಂದಾಗಿದೆ. ಈಗ ನಿಗಮದ ಸಿಬ್ಬಂದಿಗೆ ಎಲೆಕ್ಟ್ರಿಕ್ ಬಸ್ ನಿರ್ವಹಣೆ ತರಬೇತಿ ನೀಡಲಾಗುತ್ತಿದ್ದು, ಪ್ರಮುಖ ಡಿಪೋಗಳಲ್ಲಿ ಬಸ್ಗಳ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಲಾಗುತ್ತಿದೆ. ನಂತರ ಸಂಬಂಧಿಸಿದ ಡಿಪೋಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಹಿರಿಯ
ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರದಿಂದ ಅನುದಾನ
ಅಂತರ್ ನಗರ ಸೇವೆಗೆ ವಿದ್ಯುತ್ ಅಥವಾ ಬ್ಯಾಟರಿ ಚಾಲಿತ ಬಸ್ಗಳನ್ನ ಖರೀದಿಸಲು ಕೇಂದ್ರ ಸರಕಾರ ಅನುದಾನ ನೀಡಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ೨೫ ಬಸ್ ಬರಲಿದ್ದು, ಬಳಿಕ ಹಂತ ಹಂತವಾಗಿ ಹೆಚ್ಚಿನ ಬಸ್ಗಳು ಸೇರ್ಪಡೆ ಆಗಲಿವೆ. ಒಂದು ಬಸ್ಗೆ ೬ ಗಂಟೆ ಜಾರ್ಜ್ ಮಾಡಿದರೆ ೨೮೦ ಕಿ.ಮೀ. ಸಂಚಾರ ಮಾಡುತ್ತದೆ. ಬಸ್ನಲ್ಲಿ ೩೦ ಆಸನಗಳಿದ್ದು, ಪ್ರತಿ ಕಿಲೋ
ಮೀಟರ್ಗೆ ೧.೨ ಕಿಲೋ ವ್ಯಾಟ್ ವಿದ್ಯುತ್ ಬಳಕೆಯಾಗುತ್ತದೆ.
*
ಒಟ್ಟು ೫೦ ಎಲೆಕ್ಟ್ರಿಕ್ ಬಸ್ಗಳನ್ನು ಕೆಎಸ್ಆರ್ ಟಿಸಿ ಪಡೆಯಲಿದ್ದು, ಇದರಲ್ಲಿ ೨೫ ಬಸ್ ಡಿಸೆಂಬರ್ ಅಂತ್ಯಕ್ಕೆ ಹಾಗೂ ಬಾಕಿ ೨೫ ಜನವರಿಯಲ್ಲಿ ಬರಲಿದೆ. ಈ ಬಸ್ಗಳು ಯಾವ ರೀತಿ ಎಲ್ಲೆಲ್ಲಿ ಸಂಚರಿಸಲಿವೆ ಎನ್ನುವ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ತಜ್ಞರೊಂದಿಗೆ ಚರ್ಚಿಸಿ, ೨೫೦ ಕಿಮೀ ಅಂತರದೊಳಗೆ ಬಸ್ಗಳನ್ನು ಬಿಡಲಾಗುವುದು. ಶೀಘ್ರವೇ ಈ ಬಗ್ಗೆ ಮಾರ್ಗಸೂಚಿ ಬಿಡುಗಡೆಯಾಗಲಿದೆ.
– ಅನ್ಬು ಕುಮಾರ್ ವ್ಯವಸ್ಥಾಪಕ ನಿರ್ದೇಶಕ, ಕೆಎಸ್ಆರ್ಟಿಸಿ