Sunday, 24th November 2024

ಸಾಕಾಗಿದೆ ಷರಿಯಾ, ಈ ದೌರ್ಜನ್ಯ ಸರಿಯಾ…?

ಶಿಶಿರ ಕಾಲ

shishirh@gmail.com

ಇದೊಂದು ವಿಷಯದ ಮೇಲೆ ಬರೆಯಲೇಬೇಕು ಎಂದುಕೊಳ್ಳುತ್ತಲೇ ಕೆಲವು ವಾರ ಕಳೆದವು. ಪ್ರತೀ ವಾರ ಮುಂದೆ ಹಾಕುತ್ತ ಬಂದೆ. ವಿಷಯ ಇರಾನಿನಲ್ಲಾಗುತ್ತಿರುವ ಗಲಾಟೆ, ದಂಗೆಯ ಬಗ್ಗೆ. ಅದೇನು, ಅದರಿಂದ ನಮಗೇನು ಎನ್ನುವುದರ ಬಗ್ಗೆ. ಹೀಗೆ ಮುಂದೆ ಹಾಕಲು ಕಾರಣ ಕೂಡ ಇತ್ತು. ಇರಾನ್ ನಲ್ಲಿ ನಡೆಯುವ ಗಲಾಟೆಗಳೇ ಹಾಗೆ.

ಚಿಕ್ಕದಾಗಿ ಆಗೀಗ ಶುರುವಾಗುತ್ತಲೇ ಇರುತ್ತವೆ. ಇಂಥದ್ದೆಲ್ಲ ಗಲಾಟೆ ಚಿಕ್ಕದಿರುವಾಗಲೇ ದೇಶದ ಆಡಳಿತವೇ ಬದಲಾಗ ಬಹುದಾದ ಮಟ್ಟಕ್ಕೆ ಬೆಳೆಯಬಹುದು ಎಂದೆಲ್ಲ ಹೈಪು ಕುಟ್ಟುವ ಪಶ್ಚಿಮದ ಮೀಡಿಯಾಗಳು ಒಂದು ಕಡೆ. ಅನಂತರ ಇರಾನಿನ ಆಡಳಿತ ತಕ್ಷಣ ಅಂತಹ ಗಲಾಟೆಯನ್ನು ಅದು ಹೇಗೋ ಹತೋಟಿಗೆ ತಂದುಬಿಡುತ್ತದೆ. ಬೆಂಕಿಗೆ ನೀರು ಸುರಿದು ಕೊನೆಗೆ ಇಂಗಾಲ, ಸ್ವಲ್ಪ ಹೊಗೆಯಷ್ಟೇ ಉಳಿಯುತ್ತದೆಯಲ್ಲ ಹಾಗೆ.

ತೀರಾ ದೊಡ್ಡ ಗಲಾಟೆಯಂತೆ, ದಂಗೆಯಂತೆ ಎಂಬೆಲ್ಲ ಸುದ್ದಿಗಳು ಮಾಯ ವಾಗಿ ಮರೆತುಹೋಗಿಬಿಡುತ್ತವೆ. ಈ ಪಾಶ್ಚಾತ್ಯ ಮೀಡಿಯಾಗಳೂ ಹಾಗೆಯೇ. ಇರಾನಿನ ಮಟ್ಟಿಗೆ ಇವರದ್ದು ಎಲ್ಲದಕ್ಕಿಂತ ಜಾಸ್ತಿ, ಅತಿಯೆನಿಸುವಷ್ಟು ಬರೆಯುವ, ಇರುವೆ ಯನ್ನೇ ಡೈನಾಸಾರಸ್ ಎಂದೇ ತೋರಿಸುವ ಕೆಲಸ. ಇರಾನ್‌ನಲ್ಲಿ ಚಿಕ್ಕಪುಟ್ಟ ಬೇಲಿ ಗಲಾಟೆ ನಡೆದರೂ ಅದು ಮಹಾಕ್ರಾಂತಿ, ಇರಾನಿನ ಕೊನೆ ಎಂದೇ ತೋರಿಸುತ್ತಿರುತ್ತಾರೆ.

ಒಂದು ನೂರು ಮಂದಿ ಸೇರಿ ಯಾವುದೋ ಒಂದು ಜಾಥಾ ಹೊರಟರೆ ಅದು ಮಾರನೆಯ ದಿನವೇ ಎಲ್ಲ ಪಾಶ್ಚಾತ್ಯ
ಪತ್ರಿಕೆಗಳ ಮೊದಲ ಪುಟ ತುಂಬಿಕೊಳ್ಳುತ್ತವೆ. ದೊಡ್ಡ ವಿಷಯವೇ ಅಲ್ಲದ್ದು ಹೆಡ್‌ಲೈನ್ ಸರಕುಗಳಾಗುತ್ತವೆ, ಬ್ರೇಕಿಂಗ್ ನ್ಯೂಸ್ ಆಗುತ್ತವೆ. ಕೆಲವೊಮ್ಮೆ ಖುದ್ದು ಇರಾನಿಯನ್ನರಿಗೆ ವಿಷಯ ಇಷ್ಟು ದೊಡ್ಡದುಂಟು ಅಂತ ಗೊತ್ತಿರುವುದಿಲ್ಲ. ಇದಕ್ಕೆ ಒಂದು ಕಾರಣ ಅಲ್ಲಿನ ಮಾಧ್ಯಮದ ಮೇಲಿನ ನಿಯಂತ್ರಣ ಕೂಡ ಹೌದು. ಕೆಲವೊಂದು ದೇಶ ಗಳಿವೆ – ಉದಾಹರಣೆಗೆ ಉತ್ತರ ಕೊರಿಯಾ, ಇರಾನ್, ಚೀನಾ, ರಷ್ಯಾ ಮೊದಲಾದವುಗಳು.

ಅಲ್ಲಿನ ಸುದ್ದಿಗಳ ಸತ್ಯಾಸತ್ಯತೆ ತಿಳಿದುಕೊಳ್ಳುವುದೇ ಒಂದು ದೊಡ್ಡ ಸವಾಲು. ಅವರದ್ದು ಎಲ್ಲವೂ ಸರಕಾರೀ ನಿಯಂತ್ರಿತ ಮಾಧ್ಯಮ, ಅಥವಾ ಸರಕಾರದ್ದೊಂದೇ ಮಾಧ್ಯಮ. ಇನ್ನು ಪಾಶ್ಚಿಮಾತ್ಯ ಮೀಡಿಯಾಗಳದ್ದು ಈ ದೇಶಗಳು ಪರಮ ನೀಚ, ದರಿದ್ರ ದೇಶಗಳೆಂದೇ ತೋರಿಸುವ ಖಯಾಲಿ ಮತ್ತು ರಾಜಕೀಯ ಅವಶ್ಯಕತೆ. ಅದಕ್ಕೆ ಹೇಳಿದ್ದು, ಈ ದೇಶಗಳ ಸುದ್ದಿಯನ್ನು,
ಬೆಳವಣಿಗೆಯನ್ನು ಗ್ರಹಿಸುವುದು ಬಹಳ ಕಷ್ಟ. ಸುದ್ದಿಗಳಲ್ಲಿ, ಕಂಡದ್ದರಲ್ಲಿ ಅರ್ಧಕ್ಕರ್ಧ ಸುಳ್ಳೇ ತುಂಬಿರುತ್ತವೆ.

ಸತ್ಯವಿದ್ದರೂ ಬಿಂಬಿಸುವ ರೀತಿ ಬೇರೆ, ನೈಜ ಸ್ಥಿತಿಯೇ ಇನ್ನೊಂದಾಗಿರುತ್ತದೆ. ಮೀಡಿಯಾ ಸ್ವಾತಂತ್ರ್ಯ ಇಲ್ಲದಿದ್ದರೆ ಒಂದು ದೇಶದ ಕಥೆಯೇನಾಗುತ್ತದೆ ತಿಳಿಯಲು ಈ ನಾಲ್ಕು ದೇಶಗಳೇ ಸಾಕು. ಇದೆಲ್ಲದರ ನಡುವೆ ನಮ್ಮ ದೇಶ ಚಂದ, ಅಂದ, ಮುಕ್ತ ಎಂಬಿತ್ಯಾದಿಯಾಗಿ ಕಾಣಿಸುವಂತೆ ಈ ದೇಶಗಳು ಡಾಕ್ಯುಮೆಂಟರಿಯನ್ನು ಕೂಡ ಯೌಟ್ಯೂಬ್‌ಗೆ ಮಾಡಿ ಹಾಕುತ್ತವೆ. ಅದನ್ನು ಬಿಳಿಯರ, ಇಂಗ್ಲಿಷ್ ಬರುವ ಪಾಶ್ಚಿಮಾತ್ಯರನ್ನು ಹಿಡಿದೇ ಮಾಡಿಸುವುದು.

ಇದೆಲ್ಲ ಗಿಮಿಕ್ಕು ಸ್ವಲ್ಪ ಪ್ರವಾಸೋದ್ಯಮವನ್ನು ಸುಧಾರಿಸೋಣ ಎಂದು. ಆದರೆ ಅಂತಹ ವಿಡಿಯೋಗಳನ್ನು ನೂರು ಜನರೂ ನೋಡಿರುವುದಿಲ್ಲ. ಅಂಥದ್ದೊಂದು ಇರಾನಿನ ಬಗ್ಗೆ ಮಾಡಿದ ಡಾಕ್ಯುಮೆಂಟರಿಯನ್ನು ಸಹಜ ಕುತೂಹಲಕ್ಕೆ ನೋಡುತ್ತಿದ್ದೆ. ಅದರಲ್ಲಿ ಬೇಕಾದಷ್ಟು ವೈಭವೀಕರಣವಿದ್ದರೂ ಇರಾನ್ ಅಸಲಿಗೆ ಬಹಳ ಚಂದದ ದೇಶ. ಚಂದವೆಂದರೆ ಅಲ್ಲಿ ಕೂಡ ಇತಿಹಾಸ ಬಹಳ ಹಿಂದಕ್ಕೆ ಹೋಗುತ್ತದೆ. ಇರಾನ್ ತುಂಬೆಲ್ಲ ಅತ್ಯದ್ಭುತ ಪುರಾತನ ಕಟ್ಟಡಗಳಿರುವುದಂತೂ ಸುಳ್ಳಲ್ಲ.

ಅಲ್ಲಿನ ಪರ್ಷಿಯನ್ ಕಷನ್ ಮನೆಗಳು, ಶೇಕ್ ಅಲೆಸ್ಲಾಮ್ ಮನೆ ಹೀಗೆ ಟೊಬ್ಯಾಟಬೀ ಸಾಂಪ್ರದಾಯಿಕ ಕಟ್ಟಡಗಳು, ಪುರಾತನ ಹೂದೋಟಗಳು, ನಾಸಿರ್ ಅಲ್ಮೊಲ್ಕ್ ನ ಗುಲಾಬಿ ಅರಮನೆ ಹೀಗೆ. ಅಲ್ಲಿ ಪಾರಂಪರಿಕ ಕಟ್ಟಡಗಳು ಯಥೇಚ್ಛ. ಅಷ್ಟೇ ಆಸ್ಥೆಯಿಂದ ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಹೊರಗಿಂದ ಬಂದು ನೋಡಿದರೂ ಹೊರಜಗತ್ತಿಗೆ ಅಲ್ಲಿನ ವೈಭವ ಹೇಳುವವರಿಲ್ಲ. ಏಕೆಂದರೆ ಪಾಶ್ಚಾತ್ಯರಿಗೆ ಈ ದೇಶ ಕೆಲ ಕಾಲದಿಂದ ಅಪಥ್ಯ. ಹೊರಜಗತ್ತಿನ ಕಣ್ಣಿಗೆ ಇರಾನ್ ಮೊದಲು ಹೀಗಿರಲಿಲ್ಲ.

ಯಾವತ್ತೂ ಅಮೆರಿಕಾ ಮತ್ತೊಂದಿಷ್ಟು ಪಶ್ಚಿಮ ದೇಶಗಳ ವೈರುಧ್ಯ ಕಟ್ಟಿಕೊಂಡವೋ ಅವತ್ತಿಂದ ಪ್ರೊಪಗಾಂಡಾ ವರದಿಗಳು ಶುರುವಾದವು. ಈಗ ಹೆಚ್ಚು ಕಡಿಮೆ ಇರಾನ್ ಎಂದರೆ ಏನೆಂದೇ ಅಂದಾಜಿಸಲಾಗದಷ್ಟು ವರದಿಗಳು ಎಲ್ಲೆಡೆ ತುಂಬಿಕೊಂಡಿವೆ.
ಇರಲಿ ಬಿಡಿ. ಈಗ ವಿಷಯಕ್ಕೆ ಬರೋಣ. ಮೇಲ್ನೋಟಕ್ಕೆ ಆಗಿದ್ದು ಇಷ್ಟು. 22 ವಯಸ್ಸಿನ ಮ್ಹಾಸಾ ಅಮಿನಿ ಎನ್ನುವ ಲಕ್ಷಣದ ಇರಾನಿ ಹುಡುಗಿ. ಇರಾನಿನ ರಾಜಧಾನಿ ತೆಹ್ರಾನ್ ನವಳು. ಅದು ಸುಮಾರು 90 ಲಕ್ಷ ಮಂದಿಯ ನಗರ. ಉಪ ನಗರದ್ದೆಲ್ಲ ಜನಸಂಖ್ಯೆ ಸೇರಿಸಿದರೆ ಸುಮಾರು ಎರಡುವರೆ ಕೋಟಿ.

ಅಂಥಲ್ಲಿ ಸರಿಯಾಗಿ ಹಿಜಾಬು ಧರಿಸಿಲ್ಲ ಎನ್ನುವ ಕಾರಣಕ್ಕೆ ಅಲ್ಲಿನ ಮೊರಾಲಿಟಿ (ನೈತಿಕ) ಪೊಲೀಸ್ ಆಕೆಯನ್ನು ಬಂಧಿಸಿದ್ದಾರೆ, ಜೈಲಿಗೆ ಹಾಕಿದ್ದಾರೆ. ಸುದ್ದಿ ಎಲ್ಲೆಡೆ ಹರಡಿ ಇನ್ನೇನು ಗಲಾಟೆಯಾಗುತ್ತದೆ ಎನ್ನುವಾಗಲೇ ಆಕೆ ಪೊಲೀಸರ
ಬಂಧನದಲ್ಲೇ ಕೊನೆಯುಸಿರೆಳೆದಿದ್ದಾಳೆ. ಸತ್ತದ್ದು ನೈತಿಕ ಪೊಲೀಸರ ದೌರ್ಜನ್ಯ ಎಂದೇ ನಂಬಿರುವ ಅಲ್ಲಿನ ಜನರಲ್ಲಿ
ಬಹುತೇಕರು ದಂಗೆಯೆದ್ದರೆ, ಸರಕಾರ ಆಕೆ ಸತ್ತದ್ದು ಅನಾರೋಗ್ಯದಿಂದ ಎಂಬ ಸಮಜಾಯಿಷಿ ಕೊಟ್ಟಿದೆ. ಸತ್ಯ ಏನೆಂದು
ಯಾರಿಗೂ ಗೊತ್ತಿಲ್ಲ. ಸರಕಾರವನ್ನು ಜನರು ನಂಬುತ್ತಿಲ್ಲ.

ಒಟ್ಟಾರೆ ಇದರ ಘಟನೆ ಕಿಡಿ ಅಂತರ್ಗತವಾಗಿದ್ದ ಆಡಳಿತ ವಿರೋಧಿ ಇಂಧನಕ್ಕೆ ಹತ್ತಿದೆ. ಈ ಸುದ್ದಿ ಮೊದಲು ಟ್ವಿಟ್ಟರ್ ನಲ್ಲಿ
ಸುದ್ದಿಯಾಗಿದ್ದು. ತಕ್ಷಣ ಯಥೇಚ್ಛ ಹೆಣ್ಣುಮಕ್ಕಳು, ಅವರ ಜೊತೆ ಎಲ್ಲರೂ ರಸ್ತೆಗಿಳಿದಿದ್ದಾರೆ. ಹಿಜಾಬ್ ಸುಟ್ಟಿದ್ದಾರೆ, ರಸ್ತೆಯಲ್ಲಿ ಬಿಚ್ಚು ಮಂಡೆಯಲ್ಲಿ ಓಡಾಡಿದ್ದಾರೆ, ಕೆಲವು ಹೆಣ್ಮಕ್ಕಳು ಪಬ್ಲಿಕ್ ನಲ್ಲಿಯೇ ಕೂದಲು ಕತ್ತರಿಸಿಕೊಂಡಿದ್ದಾರೆ, ಇನ್ನು ಹಲವರು ದೇಶದ ತುಂಬೆಲ್ಲ ಇದ್ದ ಇರಾನಿನ ಸರ್ವಾಧಿಕಾರಿ, ಆಯತೊಲ್ಲಾ ಖೊಮೇನಿಯ ಕಟೌಟು ಗಳನ್ನು ಹರಿದು ಸುಟ್ಟಿದ್ದಾರೆ. ಆಯತೊಲ್ಲಾ ಎಂದರೆ ಅದು ಶಿಯಾ ಮುಸ್ಲಿಮರಲ್ಲಿ ಪರಮೋಚ್ಚ ಸ್ಥಾನ ಗುರುತಿಸುವ ಶಬ್ದ.

ಹಾಗಾಗಿ ಈಗಿನ ಆಯತೊಲ್ಲಾ ಖೊಮೇನಿಯ ಅಪ್ಪ, ಮೊದಲ ಪರಮಾಽಕಾರಿ ಕೂಡ ಆಯತೊಲ್ಲಾ ಖೊಮೇನಿಯೇ. ಆದರೆ ಅಸಲಿ ಹೆಸರು ಮಾತ್ರ ಬೇರೆ ಬೇರೆಯಾಗಿರುತ್ತದೆ. ಈಗಿನ ಅಲಿ ಖೊಮೇನಿ ಅಪ್ಪ ಋಹೊಲ್ಲಾಹ್ ತೀರಿಕೊಂಡ ಮಾರನೆಯ ದಿನವೇ ಅಽಕಾರಕ್ಕೆ ಬಂದವನು. 1989ರಿಂದ ಇಲ್ಲಿನ ವರೆಗೆ ಈತನೇ ಇರಾನಿನ ಪರಮೋಚ್ಚ ನಾಯಕ, ಮೊದಲ ಧಾರ್ಮಿಕ ಗುರು, ಪೂಜನೀಯ ಇತ್ಯಾದಿ. ಅಂಥವನ ವಿರುದ್ಧದ ಹಿಂದಿನ ಗಲಾಟೆಗಳು ಬೇಗನೆ ತಣ್ಣಗಾಗಿದ್ದವು. ಆದರೂ ಈ ಗಲಾಟೆ ಮಾತ್ರ ಮುಂದುವರಿಯುತ್ತಲೇ ಇದೆ. ಇನ್ನಷ್ಟು ದಂಗೆ, ಗೌಜಿ ಗದ್ದಲಗಳು ಇರಾನಿನಲ್ಲಿ ಎರಡು ತಿಂಗಳಿಂದ ನಡೆಯುತ್ತಿವೆ.

ಈ ಗದ್ದಲ ಎರಡು ಕಾರಣಕ್ಕೆ. ಮೊದಲನೆಯದು ಇಚ್ಛೆಯಂತೆ ಬದುಕುವ ಸ್ವಾತಂತ್ರ್ಯ, ಹೆಣ್ಣಿನ ಸಮಾನತೆ ಇತ್ಯಾದಿ. ಎರಡನೆಯದು ಈ ನೈತಿಕ ಪೊಲೀಸರ ದೌರ್ಜನ್ಯದಿಂದ ಮುಕ್ತಿ, ಮೇಲಾಗಿ ಈಗಿನ ಸರ್ವಾಧಿಕಾರಿಯ ಶೋಷಣೆಯ ಕೊನೆ. ಒಟ್ಟಾರೆ ಈಗ ಅಲ್ಲಿನ ಜನರಿಗೆ ಒಂದು ಕ್ರಾಂತಿಯಾಗಬೇಕು, ವ್ಯವಸ್ಥೆ ಬದಲಾಗಬೇಕು. ಬದುಕು ಸುಲಭವಾಗಬೇಕು. ಧರ್ಮಕ್ಕಿಂತ ಇಂದಿನ ದಿನಕ್ಕೆ ತಕ್ಕಂತೆ ಬದುಕುವ ಸ್ವಾತಂತ್ರ್ಯ ಬರಬೇಕು. ಇದನ್ನು ಸಹಜವಾಗಿ ವಿರೋಧಿಸುವ ಖಟ್ಟರ್‌ಗಳು ಇನ್ನೊಂದು ಕಡೆ. ಅವರದ್ದೇ ಅಧಿಕಾರ, ಮತ್ತು ನೈತಿಕ ಪೊಲೀಸ್‌ಗಿರಿ.

ಇಲ್ಲಿ ನೈತಿಕ ಪೊಲೀಸಿಂಗ್ ವ್ಯವಸ್ಥೆ ಯಾರೋ ಒಂದಿಷ್ಟು ಮಂದಿ ಕಟ್ಟಿಕೊಂಡ, ಧರ್ಮದ ಉಳಿವಿಗೆ ಹೋರಾಟ ಮಾಡಿಕೊಂಡಿ ರುವ, ಅಥವಾ ಧರ್ಮದ ಹೆಸರಿನಲ್ಲಿ ವಸೂಲಿಯ ಕೆಲಸ ಮಾಡುವ ಗುಂಪು, ಸಂಘ ಸಂಸ್ಥೆ ಅಲ್ಲ. ಇದು ಅಲ್ಲಿನ ಪೊಲೀಸ್ ವ್ಯವಸ್ಥೆಯದೇ ಒಂದು ಭಾಗ. ಅವರಿಗೆಲ್ಲ ಸರಕಾರೀ ಸಂಬಳ ಉಂಟು. ಅವರ ಕೆಲಸ ಸಾರ್ವಜನಿಕ ಸ್ಥಳದಲ್ಲಿ ಗಂಡು ಮತ್ತು ಹೆಣ್ಣು, ಇಬ್ಬರೂ ಅಲ್ಲಿನ ಷೆರಿಯಾ ಕಾನೂನಿನಂತೆ ಸರಿಯಾಗಿ ಮೈಕೈ ಮುಚ್ಚುವ, ಅಂಗಾಂಗದ ಅಚ್ಚು ಬಟ್ಟೆಯಲ್ಲಿ ಮೂಡದಷ್ಟು ಸಡಿಲ ಬಟ್ಟೆಯನ್ನು ತೊಡುವಂತೆ, ಹಿಜಾಬ್ ಸರಿಯಾಗಿ ಧರಿಸುವಂತೆ ನೋಡಿಕೊಳ್ಳುವುದು.

ಇದು ಗಂಡು ಹೆಣ್ಣು ಇಬ್ಬರಿಗೂ ಇದ್ದರೂ ಅಲ್ಲಿ ಈ ನೈತಿಕ ಪೊಲೀಸರು ಅತೀ ಹೆಚ್ಚು ಹಿಡಿಯುವುದು, ಸಾರ್ವಜನಿಕವಾಗಿ ಹಿಂಸಿಸುವುದು ಹೆಂಗಸರನ್ನೇ. ಇದೆಲ್ಲ ಶುರುವಾದದ್ದು ಇರಾನ್ ಇರಾಕ್ ಯುದ್ಧದ ನಂತರ. ಇರಾನ್ ಇನ್ನಷ್ಟು ಖಟ್ಟರ್ ಆದಂತೆ ಹೆಣ್ಣಿನ ಶೋಷಣೆ ಲೆಕ್ಕ ಮೀರುತ್ತ ಹೋಯಿತು. ಸತ್ಯವೇನೆಂದರೆ ಈ ಹಿಜಾಬು, ಬಟ್ಟೆಯ ಮೇಲೆ ನಿಗಾ, ಕಾನೂನು ಇವೆಲ್ಲ ಇರಾನಿನಲ್ಲಿ ಯಾವತ್ತೂ, ಬುಡಕಟ್ಟು ಜನಾಂಗವಿರುವಾಗಿ ನಿಂದ ನಡೆದುಕೊಂಡು ಬಂದದ್ದೇನಲ್ಲ.

ಬದಲಿಗೆ 1936 ರಲ್ಲಿಯೇ ಹಿಜಾಬು ಹೊಸ ಕಾಲಕ್ಕೆ ಹೊಂದಿಕೆಯಾಗುವುದಿಲ್ಲ, ಅದನ್ನು ಧರಿಸಬಾರದು ಎಂದು ಅಂದಿನ ದೊರೆ ಫರ್ಮಾನು ಹೊರಡಿಸಿದ್ದ. ಆಗೆಲ್ಲ ಹಿಜಾಬು ಧರಿಸಿದರೆ ಪೊಲೀಸರು ಥಳಿಸುತ್ತಿದ್ದರು. ಅದಾದ ೪೦ ವರ್ಷದ ನಂತರ ಮತ್ತೆ ಹಿಜಾಬು, ಷೆರಿಯಾವೇ ಜೀವನ, ಬದುಕು ಎಂದು ಬಂದಾಗಲೇ ಶುರುವಾಗಿದ್ದು ಇದೆಲ್ಲ ಶೋಷಣೆ. ಬಟ್ಟೆ ಸರಿಯಾಗಿಲ್ಲ, ಹಿಜಾಬು ಸರಿದಿದೆ ಮೊದಲಾದ ಘೋರ ಪಾಪಕ್ಕೆ 74 ಸಾರ್ವಜನಿಕ ಛಡಿ ಏಟು, ಮತ್ತೊಮ್ಮೆ ಮಾಡಿದರೆ ಜೈಲು ಇತ್ಯಾದಿ. ಅದೆಲ್ಲದರ ಜೊತೆ ಈ ಪೊಲೀಸರು ಶೋಷಿಸುವಾಗ ಅಲ್ಲೇ ನಿಂತ ಗಂಡಸರು ಹೆಣ್ಣಿನ ಮೇಲೆ ಆಸಿಡ್ ಎರಚುವುದು, ಚಾಕು ಇರಿಯುವುದು ಇತ್ಯಾದಿ ಮಾಡುತ್ತಾರೆ.

ನಮ್ಮಲ್ಲೆಲ್ಲ ಗಲಾಟೆಯಲ್ಲಿ ಸೇರಿದ ಜನರೂ ಸಿಕ್ಕಿದ್ದೇ ಚಾನ್ಸು ಎಂದು ಅಲ್ಲಿನವನಿಗೆ ಬಾರಿಸಿದಂತೆ. ಒಟ್ಟಾರೆ ಈ ನೈತಿಕ ಪೊಲೀಸ್ ವ್ಯವಸ್ಥೆ ಬರೀ ಶೋಷಣೆಗೇ ಇಳಿದುಬಿಟ್ಟಿದೆ. ಅದಕ್ಕೆ ಹೇಳುವವರು ಕೇಳುವವರು ಇಲ್ಲ, ಫ್ರೀ ಹ್ಯಾಂಡ್. ಇಲ್ಲಿ ರಿಲೀಜಿಯನ್ ಸ್ಯಾಡಿಸ್ಟ್‌ಗಳೇ ತುಂಬಿಕೊಂಡು ದೌರ್ಜನ್ಯ ಮಿತಿ ಮೀರಿದೆ. ಇರಾನಿನಲ್ಲಿ ಆಲ್ಕೋಹಾಲ್ ಕಾನೂನು ಬಾಹಿರ. ಮುಸ್ಲಿಮ ರಲ್ಲದವರು ತಮಗೆ ಬೇಕಾದಷ್ಟು- ಸ್ವಂತಕ್ಕೆ ಸಾರಾಯಿ ತಯಾರಿಸಿಕೊಳ್ಳಬಹುದು.

ಆದರೆ ಅದನ್ನು ಸಾರ್ವಜನಿಕವಾಗಿ ಮಾರುವಂತಿಲ್ಲ. ಪರ್ಶಿಯನ್ ಇತಿಹಾಸದಲ್ಲಿ ನೃತ್ಯಕ್ಕೆ ಅಷ್ಟೊಳ್ಳೆ ಸ್ಥಾನವಿದ್ದರೂ ಇಂದು ಸಾರ್ವಜನಿಕವಾಗಿ ನೃತ್ಯ ಮಾಡುವಂತೆ ಇಲ್ಲ. ಹೆಣ್ಮಕ್ಕಳು ಕೋಣೆಯೊಳಗೆ ತಮ್ಮಷ್ಟಕ್ಕೆ ತಾವೇ ಡ್ಯಾನ್ಸ್ ಮಾಡಿಕೊಳ್ಳ ಬಹುದು. ಜಿಮ್ಮಿನಲ್ಲಿ ಕುಣಿಯುವ ವ್ಯಾಯಾಮ ಜುಂಬಾ ಇಲ್ಲಿ ಕಾನೂನು ಬಾಹಿರ. ಸಂಗೀತವೂ ಬ್ಯಾನ್. ಮಾರ್ಜಾ (ಷೆರಿಯಾದ ಭಾಗ) ಓಕೆ ಎಂದ ಸಂಗೀತವಷ್ಟೇ ಕೇಳಬೇಕು. ಮನೆಯಲ್ಲಿ ನಾಯಿ ಸಾಕುವಂತಿಲ್ಲ, ಆದರೆ ಬೀದಿನಾಯಿಗಳು ಇವೆ. ಮೈಕೈ ಗೆ ಟ್ಯಾಟೂ ಹಾಕಿಸುವಂತಿಲ್ಲ.

ಇನ್ನು ಇಂಟರ್ನೆಟ್ಟಿಗೆ ಲೆಕ್ಕವಿಲ್ಲದಷ್ಟು ನಿರ್ಬಂಧಗಳು. ಯಾವುದು ಮೀರಿದರೂ ವಿಪರೀತ ಶಿಕ್ಷೆ. ಏನೇನು ನಿಷೇಽಸಲ್ಪ
ಟ್ಟಿದೆಯೋ ಅವೆಲ್ಲವೂ ಬಾಹ್ಯ ಜಗತ್ತಿನಲ್ಲಿ ಟ್ರೆಂಡ್, ಹೊಸತನ, ಆಧುನಿಕತೆ. ಹೀಗಾಗಿ ಇವೆಲ್ಲ ಸಹಜವಾಗಿ ಜನರಲ್ಲಿ ತಡೆದು
ಕೊಳ್ಳಲಾರದಷ್ಟು ಕಿರಿಕಿರಿಯನ್ನುಂಟುಮಾಡಿದೆ. ಈಗ ಇರಾನಿನ ಜನ ಇತ್ತೀಚಿಗೆ ನೋಡದಷ್ಟು ಪ್ರಮಾಣದಲ್ಲಿ ಷೆರಿಯಾ
ಆಡಳಿತದ ವಿರುದ್ಧ ದಂಗೆಯೆದ್ದಿದ್ದಾರೆ. ಹೆಣ್ಣು ಗಂಡೆನ್ನದೇ ಎಲ್ಲರೂ ಸಾಗರೋಪಾದಿಯಾಗಿ ಬೀದಿಗಿಳಿದ್ದಾರೆ.

ಇದೆಲ್ಲದರ ನಡುವೆ ಈಗ ಕೆಲವು ದಿನಗಳ ಹಿಂದೆ ಇರಾನ್ ಈ ರೀತಿ ಕಳೆದೆರಡು ತಿಂಗಳಿಂದ ದಂಗೆಯೆದ್ದವರಲ್ಲಿ ಮುಂದಾಳತ್ವ ವಹಿಸಿದ ಸುಮಾರು 15000 ಮಂದಿಯನ್ನು ಗಲ್ಲಿಗೇರಿಸಿದೆ ಎನ್ನುವ ಸುದ್ಧಿ ಹರಡಿದೆ. ಸಹಜವಾಗಿ ಇದು ನಿಜವೆಂದು
ಪಾಶ್ಚಾತ್ಯ ಮಾಧ್ಯಮಗಳು, ಅದೆಲ್ಲ ಸುಳ್ಳು, ಇಲ್ಲಿ ಗಲಾಟೆಯೇ ಆಗುತ್ತಿಲ್ಲ ಎಂದು ಇರಾನಿ ಸರಕಾರ, ಆಯತೊಲ್ಲಾ.
ಇರಾನನ್ನು ನಾವು ಭಾರತೀಯರು ಪಾಶ್ಚಾತ್ಯರು ತೋರಿಸಿದಂತೆ ನೋಡಬೇಕಿಲ್ಲ. ಭಾರತ ಮೋದಿ ಸರಕಾರದ ನಂತರ
ತನ್ನದೇ ಸ್ವತಂತ್ರ ನಿಲುವು, ಪಾರ್ಟಿ ಹೊಂದಿದೆ.

ಇರಾನಿನಿಂದ ತೊಂದರೆಗಿಂತ ಭಾರತಕ್ಕೆ ಸಹಾಯವಾಗಿದ್ದೇ ಜಾಸ್ತಿ. ವ್ಯಾವಹಾರಿಕ ಸಂಬಂಧಕ್ಕೆ ಬಹಳ ಹಿಂದಿನ ಇತಿಹಾಸ ವಿದೆ. ಇನ್ನು ಇರಾನ್ ರಷ್ಯಾಕ್ಕೆ ಯುದ್ಧದಲ್ಲಿ ಸಹಾಯ ನೀಡುತ್ತಿದೆ. ಬದಲಿಗೆ ರಷ್ಯಾ ದಿಂದ ಪರಮಾಣು ತಂತ್ರಜ್ಞಾನ ಬಯಸುತ್ತದೆ. ಇತ್ತ ಅಮೆರಿಕಾ ಇದ್ದಬದ್ದ ಹೇರಿಕೆಗಳನ್ನು ಇರಾನಿನ ಮೇಲೆ ವಿಧಿಸಿದೆ. ಅಮೆರಿಕಾ, ನ್ಯಾಟೋ ಹಿನ್ನೆಲೆಯಲ್ಲಿ ರಷ್ಯಾ ಉಕ್ರೇನಿನ ಮೇಲೆ ದಾಳಿ ಮಾಡುತ್ತಿದೆ. ರಷ್ಯಾದಿಂದ ಭಾರತ ಹಣದುಬ್ಬರ ತಗ್ಗಿಸಲು ಅಗ್ಗದಲ್ಲಿ ಪೆಟ್ರೋಲ್ ಖರೀದಿಸುತ್ತಿದೆ. ಇತ್ತ ಭಾರತದ ಸಂಬಂಧ ಅಮೆರಿಕಾದ ಜೊತೆಗೂ ಚೆನ್ನಾಗಿಯೇ ಇದೆ. ಸೌದಿ ಮತ್ತು ಅಮೆರಿಕಾಕ್ಕೆ ಇರಾನ್ ಈಗ ವೈರಿ.

ಇರಾನಿನ ಆಡಳಿತ ಥಿಯೊಕ್ರಸಿ. ಧಾರ್ಮಿಕ ಮುಖಂಡ ನಡೆಸುವ ಆಡಳಿತ. ಸೌದಿ, ಇರಾನ್, ವೆಟಿಕನ್ ಇಲ್ಲೆಲ್ಲ ರಿಲೀಜಿಯನ್ ಮುಖಂಡನೇ ಪರಮಾಽಕಾರಿ. ರೆಲಿಜಿಯನ್ ಕಟ್ಟಳೆಗಳೇ ಕಾನೂನು. ಈ ಕಾನೂನು, ಆಡಳಿತದಲ್ಲಿ ಆಧುನಿಕತೆಯ ಯಾವ ಆಚರಣೆಗೂ ಜಾಗವಿಲ್ಲ. ಇರಾನಿಯ ನ್ನರಿಗೆ ಸಾಕೆನಿಸಿದ್ದು ಇದೇ. ಬಲವಂತವಾಗಿ ರೆಲಿಜಿಯನ್ನಿನ ಹೆಸರಿನಲ್ಲಿ ಹೇರುವ ಆಡಳಿತ, ಬದುಕು ಮತ್ತು ಶೋಷಣೆ. ಇದನ್ನು ಸಡಿಲಿಸಲು ಅಲ್ಲಿನ ಖಟ್ಟರ್ ಷರಿಯಾ ಗಂಡಸರು, ಖೊಮೇನಿಯ ಅಹಂ ಒಪ್ಪುವುದಿಲ್ಲ. ಷರಿಯಾವನ್ನು ಸಡಿಲಿಸುವುದೆಂದರೆ ತನ್ನ, ಧರ್ಮದ, ದೇಶದ ಸ್ವಂತಿಕೆಯನ್ನು, ನಂಬಿಕೆಯನ್ನು ಕಳೆದು ಕೊಟ್ಟಂತೆ.

ಈ ಬಾರಿ ಮಾತ್ರ ಹೆಣ್ಮಕ್ಕಳು, ಗಂಡು ಮಕ್ಕಳು, ಯುವಕರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಕಾರ್ಮಿಕರು ಹೀಗೆ ಎಲ್ಲರೂ ಕ್ರಾಂತಿಗೆ ಧುಮುಕಿ ದ್ದಾರೆ. ದಂಗೆಯೆದ್ದವರೆಲ್ಲ ಹಿಂದಕ್ಕೆ ಬಾರದಷ್ಟು ಮುಂದುವರಿದಾಗಿದೆ. ಕೊನೆಯಲ್ಲಿ ಒಂದೋ ವ್ಯವಸ್ಥೆ, ಆಡಳಿತದ ಬದಲಾವಣೆ ಕಾಣಬಹುದು, ಇಲ್ಲವೇ ಗಲ್ಲು. ಖೊಮೇನಿಗೆ ಇದರ ನಿಯಂತ್ರಣ ಹೇಗೆ ಎನ್ನುವುದೇ ಪ್ರಶ್ನೆಯಾಗಿದೆ.
ಕೋಟಿ ಪ್ರಮಾಣದಲ್ಲಿ, ನಗರಗಳಲ್ಲಿ, ಊರೂರಲ್ಲಿ ದಂಗೆ ಯೆದ್ದವರನ್ನೆಲ್ಲ ಕೊಂದುಬಿಡುವಂತೆಯೂ ಇಲ್ಲ. ಬದಲಾವಣೆ
ಆಗಬಹುದೇ? ಗೊತ್ತಿಲ್ಲ. ಕಾಲಕ್ಕೆ ಇನ್ನಷ್ಟು ಕಾಯಬೇಕಿದೆ.