Saturday, 26th October 2024

ಚಿಕ್ಕಬಳ್ಳಾಪುರದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಕರು ಸಿ.ವಿ.ವೆಂಕಟರಾಯಪ್ಪ

ಕಸಾಪ ವತಿಯಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ನವೀನ್‌ಕಿರಣ್ ಹೇಳಿಕೆ

ಚಿಕ್ಕಬಳ್ಳಾಪುರ : ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಿ.ವಿ.ವೆಂಕಟರಾಯಪ್ಪ ಮತ್ತು ಕಮಲಮ್ಮ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದತ್ತಿಯ ದಾನಿ ಕೆ.ವಿ. ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಚಿಕ್ಕಬಳ್ಳಾಪುರಲ್ಲಿ ಮೊಟ್ಟ ಮೊದಲು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ ಕೀರ್ತಿ ನಮ್ಮ ತಾತ ಸಿ.ವಿ.ವೆಂಕಟ ರಾಯಪ್ಪನವರಿಗೆ ಸಲ್ಲುತ್ತದೆ. ದೂರದೃಷ್ಟಿಯ ಚಿಂತನೆಯುಳ್ಳ ಅವರು ಈ ಭಾಗದ ಪ್ರಗತಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಮಹನೀಯರ ನೆನಪಿನಲ್ಲಿ ದತ್ತಿನಿ ಸ್ಥಾಪಿಸಿ ಅವರ ಹೆಸರಿನಲ್ಲಿ ಪ್ರತಿವರ್ಷ ಸಾಹಿತ್ಯ ಪರಿಷತ್ತಿನಿಂದ ಕಾರ್ಯಕ್ರಮ ನಡೆಸುವುದು ಮನಸಿಗೆ ನೆಮ್ಮದಿ ನೀಡುತ್ತದೆ.ಇಲ್ಲಿ ಪ್ರಧಾನ ಭಾಷೆಯಾಗಿ ತೆಲುಗು ಇದ್ದರೂ ಎಂದು ಭಾಷಾ ಸಾಮರಸ್ಯಕ್ಕೆ ದಕ್ಕೆ ಆಗಿಲ್ಲ.ಕಳೆದ ಹದಿನೈದು ಇಪ್ಪತ್ತು ವರ್ಷಗಳಲ್ಲಿ ಇಲ್ಲಿನ ಜನ ಕನ್ನಡ ಭಾಷೆಯತ್ತ ವಾಲುತ್ತಿರುವುದು ಸಂತೋಷದ ಸಂಗತಿ. ತಾಯಿಭಾಷೆಯನ್ನು ಪ್ರೀತಿಸಿ ಅನ್ಯಭಾಷೆಗಳನ್ನು ಗೌರವಿಸುವುದರಲ್ಲಿ ಕನ್ನಡಿಗರ ಔದಾರ್ಯತೆ ಅಡಗಿದೆ.ಅದು ದೌರ್ಬಲ್ಯವಾಗದಂತೆ ಕನ್ನಡಿಗರು ಎಚ್ಚರ ವಹಿಸಬೇಕೆಂದರು.

ದತ್ತಿ ಉಪನ್ಯಾಸ ನೀಡಿ ಮಾತನಾಡಿದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಜಗದೀಶ್ ಶಿಕ್ಷಣವೆಂದರೆ ಸ್ವಾಮಿ ವಿವೇಕಾನಂದರು ಹೇಳುವಂತೆ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಜಾಗೃತ ಗೊಳಿಸಿ ಅದನ್ನು ಸಮಾಜಕ್ಕೆ ಸಲ್ಲುವಂತೆ ಶ್ರಮಿಸುವುದೇ ನಿಜವಾದ ಶಿಕ್ಷಣವಾಗಿದೆ.ವಿದ್ಯಾರ್ಥಿಗಳು ಕುವೆಂಪು ಮಾಸ್ತಿ,ಬೇಂದ್ರೆ,ಗೋಕಾಕ್, ಅನಂತಮೂರ್ತಿ,ಕಂಬಾರರ ಪುಸ್ತಕಗಳನ್ನು ಓದುವುದರ ಮೂಲಕ ತಮ್ಮ ಬೌದ್ದಿಕ ದಾಹವನ್ನು ನೀಗಿಸಿಕೊಳ್ಳಬೇಕು. ವೈಚಾರಿಕ ನೆಲೆಯಲ್ಲಿ ಅಧ್ಯಯನ ಶೀಲರಾಗಿ ಸಮಾಜದ ಮೌಢ್ಯವನ್ನು ತೊಲಗಿಸಿ ,ಜಾತಿ ಧರ್ಮಗಳ ಸಂಕೋಲೆಗಳನ್ನು ಕಳಚುವಂತೆ ಮಾಡಿದಾಗ ಮಾತ್ರ ವಿಧ್ಯೆಗೆ ಸಾರ್ಥಕತೆ ಸಿಗಲು ಸಾಧ್ಯ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪನವರು, ಸಿ.ವಿ.ವೆಂಕಟರಾಯಪ್ಪನವರು ಚಿಕ್ಕಬಳ್ಳಾಪುರ ದ ಶಿಕ್ಷಣ ರಂಗದ ಪಿತಾಮಹ ರೆಂದೇ ಜನರು ಪ್ರೀತಿಯಿಂದ ಗುರುತಿಸುವಂತಹದು ಅವರ ಸಾಧನೆಗೆ ಸಾಕ್ಷಿ. ಅವರ ಸತಿ ಕಮಲಮ್ಮನವರು ತಮ್ಮ ಮನೆಗೆ ಬಂದವರನ್ನು ಅತ್ಯಂತ ಪ್ರೀತ್ಯಾದರದಿಂದ ಸತ್ಕರಿಸುವ ಶ್ರೇಷ್ಟ ವ್ಯಕ್ತಿತ್ವವುಳ್ಳವರಾಗಿದ್ದರು.ಇಂತಹ ಮಹನೀಯರ ನೆನಪಿನಲ್ಲಿ ದತ್ತಿನಿ ಸ್ಥಾಪಿಸಿ,ಸಾಹಿತ್ಯ ಪೋಷಣೆಗೆ ಸಹಕರಿಸುತ್ತಿರುವ ಕೆ.ವಿ.ನವೀನ್ ಕಿರಣ್ ನವೀನ್ ಉದಾರತೆ ಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಕಸಾಪ.ತಾಲ್ಲೂಕು ಘಟಕದ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ಡಾ.ರಾಜ್‌ಕುಮಾರ್ ಸಂಘದ ಅಧ್ಯಕ್ಷ ಮಹೇಶ್,ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಪಿ.ಎನ್.ಶೇಖರ್,ಜಿಲ್ಲಾ ಕಸಾಪದ ಕೋಶಾದ್ಯಕ್ಷ ಚನ್ನಮಲ್ಲಿಕಾರ್ಜುನ,ಕಾರ್ಯದರ್ಶಿ ಎಸ್.ಎನ್.ಅಮೃತಕುಮಾರ್,ಸಂಘಟನಾ ಕಾರ್ಯದರ್ಶಿ ಟಿ.ವಿ ಚಂದ್ರಶೇಖರ್ ಮಹಂತೇಶ್,ಪ್ರೇಮಲೀಲಾ ವೆಂಕಟೇಶ್ ಸರಸಮ್ಮ ಅಣ್ಣಮ್ಮ, ಬೋಧಕರಾದ ನರೇಂದ್ರಬಾಬು, ರವಿಕುಮಾರ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.