Sunday, 15th December 2024

೨ಎ ಒಳಮೀಸಲಾತಿಗೆ ಆಗ್ರಹಿಸಿ ಸವಿತಾ ಸಮಾಜ ಪ್ರತಿಭಟನೆ

ಚಿಕ್ಕಬಳ್ಳಾಪುರ: ಸವಿತಾ ಸಮಾಜಕ್ಕೆ ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಮುದಾಯದ ಮುಖಂಡರು ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸವಿತಾ ಸಮಾಜವನ್ನು ಪ್ರವರ್ಗ ೨ಎನಿಂದ ಪ್ರತ್ಯೇಕಿಸಿ ಒಳ ಮೀಸಲಾತಿ ನೀಡಬೇಕು ಅಥವಾ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಸರಕಾರವನ್ನು ಆಗ್ರಹಿಸಿದರು.

ಸವಿತಾ ಸಮಾಜವು ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ.ಕ್ಷೌರಿಕ ವೃತ್ತಿಯನ್ನು ನಂಬಿ ಜೀವನ ನಡೆಸುತ್ತಿದ್ದು ಸವಿತಾ ಸಮಾಜಕ್ಕೆ ನ್ಯಾಯ, ಸಮಾನತೆ ಕೊಡಿ ಎಂದು ಭಿತ್ತಿಫಲಕ ಹಿಡಿದು ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ವಿನೂತನವಾಗಿ ಕ್ಷೌರ ಮಾಡುವ ಮೂಲಕ ಪ್ರತಿಭಟನೆ ದಾಖಲಿಸಿದರು.

ಸವಿತಾ ಸಮಾಜವನ್ನು ಸರ್ಕಾರ ಮತ್ತು ಸಮಾಜ ಅಸ್ಪೃಷ್ಯರಿಗಿಂತಲೂ ಕಡೆಯಾಗಿ ಕಾಣಲಾಗುತ್ತಿದೆ. ಬೇರೆ ಸಮುದಾಯಗಳು ನಮ್ಮನ್ನು ಅತ್ಯಂತ ಕೀಳಾಗಿ ನೋಡುತ್ತಾರೆ. ಯಾವುದೇ ಜಾತಿ, ಧರ್ಮದ ತಾರತಮ್ಯವಿಲ್ಲದೆ ಎಲ್ಲರಿಗೂ ನಮ್ಮ ಸೇವೆ ನೀಡುತ್ತಿದ್ದೇವೆ ಎಂದರು.

ಗ್ರಾಮಾ0ತರ ಪ್ರದೇಶಗಳಲ್ಲಿ ನಮ್ಮ ಸಮಾಜಕ್ಕೆ ಸ್ವಲ್ಪವೂ ಗೌರವ ದೊರೆಯುತ್ತಿಲ್ಲ. ನಮ್ಮ ಸಮುದಾಯಕ್ಕೆ ನೋವು ತರುವ ಶಬ್ದಗಳನ್ನು ಬಳಸಿ ಜಾತಿನಿಂದನೆ ಮಾಡುತ್ತಾರೆ. ಹೀಗಿದ್ದರೂ ನೋವು ಸಹಿಸಿಕೊಂಡು ಬದುಕು ನಡೆಸುತ್ತಿದ್ದೇವೆ. ಅತಿ ಸಣ್ಣ, ತೀರಾ ಹಿಂದುಳಿದಿರುವ ಈ ತಳ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕು. ಇದರಿಂದ ಸಮುದಾಯದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಪ್ರತಿಭಟನಕಾರರು ತಿಳಿಸಿದರು.

ಸವಿತಾ ಸಮಾಜ ಮೀಸಲಾತಿ ಹೋರಾಟ ಸಮಿತಿ ಸಂಸ್ಥಾಪಕ ಎಂ.ಎಸ್.ಮುತ್ತುರಾಜ್, ರಾಜ್ಯಾಧ್ಯಕ್ಷ ನಾಗರಾಜ್, ಜಿಲ್ಲಾಧ್ಯಕ್ಷ ಶ್ರೀನಿವಾಸ್, ರಾಮಾಂಜಪ್ಪ, ಶಿವಕುಮಾರ್, ಮಂಜುನಾಥ್, ನಾಗೇಶ್, ನಟರಾಜ್, ಗಂಗಾಧರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.