Saturday, 26th October 2024

ಮಾರುಕಟ್ಟೆ ಮತ್ತು ತಾಲೂಕು ಆಫೀಸ್ ಬಳಿ ಇಂದಿರಮ್ಮ ಅನ್ನ ಕುಟೀರ ಸೇವೆ ನಡೆಯಲಿದೆ : ಗಂಗರೇಕಾಲುವೆ ನಾರಾಯಣಸ್ವಾಮಿ

ಹಸಿದವರ ಹೊಟ್ಟೆ ತುಂಬಿಸುವ ಇಂದಿರಮ್ಮ ಅನ್ನಪೂರ್ಣ ಕುಟೀರಕ್ಕೂ ರಾಜಕೀಯ ಸಲ್ಲ

ಚಿಕ್ಕಬಳ್ಳಾಪುರ: ಹಸಿದವರಿಗೆ ಅನ್ನ ನೀಡುವ ಕಾರ್ಯಕ್ಕೂ ಕೂಡ ತಾಲೂಕು ಅಡಳಿತವನ್ನು ಬಳಸಿಕೊಂಡು ತೊಂದರೆ ಕೊಡಲು ಮುಂದಾಗುವವರನ್ನು ಭಗವಂತ ಕ್ಷಮಿಸುವುದಿಲ್ಲ,ಅವರ ಕಾರ್ಯವನ್ನು ಮೆಚ್ಚುವುದಿಲ್ಲ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಗಂಗರೇಕಾಲುವೆ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆ ಹೊರಾವರಣದಲ್ಲಿ ಪ್ರದೇಶ ಕಾಂಗ್ರೆಸ್ ಪಕ್ಷದ ಎಲ್ಲಾ ವಿಭಾಗಗಳ ಮುಖಂಡರ ಸಹಕಾರದಿಂದ ಪ್ರಾರಂಭಿಸಿರುವ ” ಇಂದಿರಮ್ಮ ಅನ್ನಪೂರ್ಣ ಕುಟೀರ ” ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಉಳಿವವನೇ ಭೂಮಿ ಒಡೆಯ ಎನ್ನುವ ಶಾಸನ ಜಾರಿಗೊಳಿಸಿ ರೈತಾಪಿ ವರ್ಗದ ಮೊಗದಲ್ಲಿ ಹರ್ಷವನ್ನು ಚೆಲ್ಲಿದ ಮಾಜಿ ಪ್ರಧಾನಿ ಇಂದಿರಾಗಾ0ಧಿ ಹೆಸರಿನಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ತೆರೆದಿರುವ ” ಇಂದಿರಮ್ಮ ಅನ್ನ ಕುಟೀರ” ಕಾರ್ಯಕ್ರಮಕ್ಕೆ ಅನುಮತಿ ಪಡೆದಿಲ್ಲ ಎಂಬ ನೆಪವೊಡ್ಡಿ ಪೊಲೀಸ್ ಅಧಿಕಾರಿಗಳ ಮೂಲಕ ಅಡ್ಡಿಪಡಿಸಲು ಮುಂದಾಗಿರುವುದು ರಾಜಕೀಯ ಪ್ರೇರಿತವಾಗಿದೆ.

ಮಾರುಕಟ್ಟೆಗೆ ಹೂವು ಹಣ್ಣು ತರಕಾರಿ ಹೊತ್ತು ಬರುವ ರೈತಾಪಿಗೆ, ಬಡವರಿಗೆ,ಹಸಿದವರಿಗೆ ಅನ್ನ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್ ಮುಚ್ಚುವ ಮೂಲಕ ತೊಂದರೆ ಕೊಟ್ಟಿರುವ ಪುಣ್ಯಾತ್ಮರಿಗೆ ಭಗವಂತ ಒಳ್ಳೆಯದು ಮಾಡಲಿ. ಚಿಕ್ಕಬಳ್ಳಾಪುರದಲ್ಲಿ ನಾನು ಹತ್ತಾರು ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು ಬಂದಿದ್ದೇನೆ. ಹಸಿದವರಿಗೆ ಅನ್ನ ನೀಡಲು ಯಾರ ಅನುಮತಿ ಕೇಳಬೇಕು.ಬಿಜೆಪಿ ಪಕ್ಷದವರು ಬೇಕಾದ ಹಾಗೆ ಹುಟ್ಟು ಹಬ್ಬ, ಹಬ್ಬ ಹರಿದಿನಗಳಲ್ಲಿ ಬೀದಿ ಬೀದಿಗಳಲ್ಲಿ ಅನ್ನದಾನ ಮಾಡುತ್ತಾರೆ. ಆಗೆಲ್ಲಾ ಅವರು ಅನುಮತಿ ಪಡೆದುಕೊಂಡೇ ಮಾಡಿದ್ದಾರಾ? ಎಂದು ಪ್ರಶ್ನಿಸಿದ ಅವರು ಅಧಿಕಾರ ಎಂದಿಗೂ ಶಾಶ್ವತವಲ್ಲ.ಜನಸೇವೆ ಮಾತ್ರ ಉಳಿಯಲಿದೆ.ಜನಸೇವೆ ಮಾಡಲು ಒಳ್ಳೆಯ ಮನಸ್ಸಿರಬೇಕೇ ವಿನಃ ಸಣ್ಣತನದ ಲೆಕ್ಕಾಚಾರ ಗಳಿರಬಾರದು ಎಂದರು.

ನಗರದಲ್ಲಿ ಕಾಂಗ್ರೆಸ್ ವತಿಯಿಂದ ಪ್ರಾರಂಭಿಸಿರುವ ” ಇಂದಿರಮ್ಮ ಅನ್ನ ಕುಟೀರ”ದ ಮೂಲಕ ಸೋಮವಾರದಿಂದ ನಿರಂತರ ವಾಗಿ ಬೆಳಿಗ್ಗೆ ೭ ರಿಂದ ೯-೩೦ ಗಂಟೆವರೆಗೆ ಎಪಿಎಂಸಿ ಮಾರುಕಟ್ಟೆ ಬಳಿ ಉಚಿತವಾಗಿ ತಿಂಡಿ ನೀಡಿದರೆ, ಮಧ್ಯಾಹ್ನ ೧೨ ರಿಂದ ೩ ಗಂಟೆವರೆಗೆ ತಾಲೂಕು ಕಚೇರಿ ಎದುರು ಊಟವನ್ನು ಉಚಿತವಾಗಿ ನೀಡಲಾಗುತ್ತದೆ. ಈ ಕಾರ್ಯ ನಿರಂತರವಾಗಿ ನಡೆಯಲಿದೆ.ಈ ಕಾರ್ಯಕ್ಕೆ ಪ್ರೇರಣೆಯೆಂದರೆ ನಂದಿ ಆಂಜಿನಪ್ಪ ೨೦೧೨-೧೩ರ ಚುನಾವಣೆ ಸಮಯದಲ್ಲಿ ಪರಿಚಯಿಸಿದ ಉಚಿತವಾಗಿ ಅಕ್ಕಿ ನೀಡುವ ಕಾರ್ಯಕ್ರಮ.ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದಲ್ಲಿ ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದ್ದು ಇತಿಹಾಸ ಎಂದು ಸ್ಮರಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಮಾತನಾಡಿ ನಮ್ಮ ಪಕ್ಷದ ಮುಖಂಡ ನಾರಾಯಣಸ್ವಾಮಿ ಸಾಮಾಜಿಕ ಸೇವೆಗಳಿಗೆ ಹೆಸರುವಾಸಿಯಾದವರು. ಇವರು ಒಳ್ಳೆಯ ಮನಸ್ಸಿನಿಂದ ಸರಕಾರ ಮಾಡಬೇಕಾದ ಕೆಲಸವನ್ನು ತಾವು ಮಾಡಲು ಮುಂದೆ ಬಂದಾಗ ಪ್ರೋತ್ಸಾಹ ನೀಡಬೇಕೇ ವಿನಃ ಕಾನೂನುಗಳ ಹೆಸರಿನಲ್ಲಿ ತಡೆಯೊಡ್ಡಬಾರದು. ಹಾಗಾಗಿದ್ದೇ ಆದರೆ ಅದೊಂದು ಕೀಳು ಮಟ್ಟದ ರಾಜಕೀಯವಾಗುತ್ತದೆ.ಕಾರ್ಯಕ್ರಮಕ್ಕೆ ತಡೆಯೊಡ್ಡಲು ಬಂದ ಪೊಲೀಸರಿಗೆ ತಿಳಿಹೇಳಿ ಕಳಿಸಲಾಗಿದೆ.

ಜಿಲ್ಲಾಡಳಿತಕ್ಕೆ ಜನಪರ ಕಾಳಜಿ ಇದ್ದಿದೇ ಆದಲ್ಲಿ ಮುಚ್ಚಿರುವ ಇಂದಿರಾ ಕ್ಯಾಂಟೀನ್ ತೆರೆದು ಬಡವರಿಗೆ ಅನ್ನ ನೀಡುವ ಕೆಲಸ ಮಾಡಲಿ.ಇಂದಿರಮ್ಮ ಅನ್ನ ಕುಟೀರಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಹಿರಿಯ ಮುಖಂಡ ನಂದಿ ಆಂಜಿನಪ್ಪ ಮಾತನಾಡಿ ಲಕ್ಷಾಂತರ ಜನರನ್ನು ಸಮಾವೇಶಗಳ ಹೆಸರಿನಲ್ಲಿ ಮಾಡುವ ಅನ್ನದಾನ ಅಲ್ಲ. ಕಾರ್ತಿಕ ಸೋಮವಾರದ ದಿನ ಅನ್ನ ನೀಡುವ ಕೆಲಸ ಮಾಡಿದರೆ ನಿರ್ವಿಘ್ನವಾಗಿ ನಡೆಯಲಿದೆ ಎಂದು ಪ್ರಾರಂಭಿಸಿ ದ್ದೇವೆ. ಅನುಮತಿ ಪಡೆದೇ ಮಾಡಬೇಕು ಎನ್ನುವುದಾದರೆ ಇದಕ್ಕೆ ಚಾಲನೆ ನೀಡಿದ ನಂತರ ಜಿಲ್ಲಾಡಳಿತದ ಬಳಿ ಅನುಮತಿ ಪಡೆಯುತ್ತೇವೆ.ಆದರೆ ಅನ್ನ ನೀಡುವ ಕೆಲಸಕ್ಕೆ ಹೀಗೆ ಹೇಳುವುದು ಎಷ್ಟು ಸರಿ ಎಂಬುದನ್ನು ಸಂಬ0ಧಪಟ್ಟವರು ಅರಿಯಲಿ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಅನಸೂಯಮ್ಮ, ಮಮತಾಮೂರ್ತಿ,ಕೆ,ಎನ್,ರಘು,ಕೆಪಿಸಿಸಿ ಸದಸ್ಯ ಮುನೇಗೌಡ, ಅಡ್ಡಗಲ್ ಶ್ರೀಧರ್,ಬ್ಲಾಕ್ ಕಾಂಗ್ರೆಸ್ ಜಯರಾಮ್,ಪ್ರಧಾನ ಕಾರ್ಯದರ್ಶಿ ಸುರೇಶ್,ಡೈರಿ ಗೋಪಿ, ಹನುಮಂತಪ್ಪ,ರಾಮಕೃಷ್ಣಪ್ಪ,ಮತ್ತಿತರರು ಇದ್ದರು.