ಕರಾವಳಿಯ ಭಾಗದ ಜನಜೀವನದಲ್ಲಿ ಬೆರೆತು ಹೋಗಿರುವ ಯಕ್ಷಗಾನ, ನೋಡಿದಷ್ಟು, ಎಣಿಕೆ ಮಾಡಿದಷ್ಟು ಸುಲಭ ಸಿದ್ಧಿಯಲ್ಲ. ಅದೊಂದು ಸುದೀರ್ಘ ತಪ್ಪಸ್ಸು. ಇಲ್ಲಿನ ಒಳ-ಹೊರವುಗಳ ಬಗ್ಗೆ ವಿಶ್ವವಾಣಿ ಉಪಸಂಪಾದಕ, ಯಕ್ಷಗಾನ ಕಲಾವಿದ ಪವನ್ ಕುಮಾರ್ ಆಚಾರ್ಯ ಆರಾಮದ ಓದುಗರ ಜತೆ ಹಂಚಿಕೊಂಡಿದ್ದಾರೆ.
ಚೌಕಿ ಎಂದರೆ ಕಲಾವಿದರ ಪಾಲಿಗೆ ತವರು ಮನೆಯಂಥ ಭಾವ. ಯಕ್ಷಗಾನ ವೇಷಧಾರಿಗಳು ಬಣ್ಣ ಹಚ್ಚಲು, ವೇಷ ಕಟ್ಟಿಕೊಳ್ಳಲು ಬಳಸುವ ಸ್ಥಳವೇ ಚೌಕಿ. ಚೌಕಿಗೆ ಬಣ್ಣದ ಮನೆ ಎಂದೂ ಹೆಸರಿದೆ. ಚೌಕಿಯು ಕಲಾವಿದರ ಪಾಲಿಗೆ ಪವಿತ್ರ ಸ್ಥಳ. ಏಕೆಂದರೆ, ಚೌಕಿಯಲ್ಲೇ ಆಯಾ ಮೇಳದ ದೇವರನ್ನು ಕೂರಿಸುತ್ತಾರೆ. ಆದ್ದರಿಂದ ಚೌಕಿಯು ಸಾಕ್ಷಾತ್ ದೇವರಮನೆ.
ಪಕ್ಕದಲ್ಲೇ ಬಿಡಾರ
ರಾತ್ರಿ ಹೊತ್ತು ಆಟ ನಡೆಯಲು, ಚೌಕಿ ಕೆಲಸಗಾರರು ಬೆಳಗ್ಗೆಯೇ ಆಟದ ಸ್ಥಳಕ್ಕೆ ತಲುಪಿರುತ್ತಾರೆ. ‘ಬಾಕಿ ಬೇಲೆ ಬಕ್ಕ ತೂಕ ಝಸ್ಟ್ ಚೌಕಿ ಬಿಡಾರ ಬುಡ್ಪಾಲ’ ಅಂತ ಯಾರಾದರೂ ಹೇಳುತ್ತಿರು ತ್ತಾರೆ. ಅಂದರೆ ಮೊದಲು ಚೌಕಿ ಬಿಡಿಸಿ ದೇವರನ್ನು ಸ್ಥಾಪಿಸಿದ ಬಳಿಕವೇ ಯಕ್ಷ ಗಾನದ ಕೆಲಸಗಳು ಪ್ರಾರಂಭವಾಗುತ್ತದೆ. ಜತೆಗೆ ಕಲಾವಿದರಿಗೆ ಬೆಳಗ್ಗೆ ವಿಶ್ರಾಂತಿಗಾಗಿ ಬಿಡಾರವನ್ನು ಪಕ್ಕದಲ್ಲೇ ನಿರ್ಮಿಸುತ್ತಾರೆ. ಈಗೆಲ್ಲಾ ಬಿಡಾರಗಳು ಕಡಿಮೆಯಾಗಿ ವ್ಯವಸ್ಥಿತ ಕೊಠಡಿಗಳನ್ನು ನೀಡುತ್ತಾರೆ.
ದಿನವೂ ಹೊಸ ಸ್ಥಳ
ಯಕ್ಷಗಾನವು ಬಯಲಾಟವಾಗಿಯೇ ಬೆಳೆದು ಬಂದ ಕಲೆ. ಯಕ್ಷಗಾನ ಪ್ರದರ್ಶನಗಳು ದಿನವೂ ಬೇರೆ ಬೇರೆ ಸ್ಥಳಗಳಲ್ಲಿ ಇರುತ್ತದೆ. ಕೆಲವೊಮ್ಮೆ ಒಂದೇ ಸ್ಥಳದಲ್ಲಿ ಸಪ್ತಾಹಗಳ ರೂಢಿಯೂ ಇದೆ. ಆದರೆ, ಸ್ಥಳ ಬದಲಾವಣೆ ಕಾರಣದಿಂದ ರಂಗಸ್ಥಳ ವನ್ನು ಚೌಕಿಯನ್ನು ತಾತ್ಕಾಲಿಕವಾಗಿಯೇ ಕಟ್ಟಬೇಕಾಗುತ್ತದೆ. ರಂಗಸ್ಥಳ, ಚೌಕಿ ಕಟ್ಟಲು-ಬಿಚ್ಚಲು ಅನೂಕೂಲವಾಗುವಂತೆ ಮತ್ತು ಇನ್ನೊಂದೆಡೆ ಕೊಂಡೊಯ್ಯಲು ಸಾಧ್ಯವಾಗುವಂತೆ ವಿನ್ಯಾಸ ಮಾಡಿದ್ದರೂ ಇದು ತಾತ್ಕಾಲಿಕವಾಗಿರುತ್ತದೆ.
ಸೇರಿದೆ ಹೊಸತನ
1960ರ ಮೊದಲು ರಂಗಸ್ಥಳದಲ್ಲಿ ಹಿಮ್ಮೇಳದವರ ಹಿಂದೆ ಈಗಿನಂತೆ ಇಳಿಬಿಡುವ ಪರದೆಗಳಿರಲಿಲ್ಲ. ಆ ಕಾರಣದಿಂದ ಚೌಕಿ ಮತ್ತು ರಂಗ
ಸ್ಥಳದ ಮಧ್ಯೆ ಸಾಕಷ್ಟು ಅಂತರ ಬೇಕಿತ್ತು. ಜಾಗ ಹೆಚ್ಚಿದಲ್ಲಿ ದೂರ ಮಾಡುವ ಸಾಧ್ಯತೆ ಇದ್ದರೂ ಕಲಾವಿದರ ಅನುಕೂಲಕ್ಕೆ ಹತ್ತಿರವೇ ಮಾಡುವುದು ರೂಢಿಯಾಗಿಬಿಟ್ಟಿದೆ.
ಚೌಕಿ ಅಂದು-ಇಂದು
ಚೌಕಿಯ ಅಳತೆ ಸರಿ ಸುಮಾರು ೨೫ ಕೋಲು ಉದ್ದ (೬೨ ಅಡಿ) ೧೦ ಕೋಲು ಅಗಲ (೨೫ ಅಡಿ) ಎಂಬ ನಿರ್ಣಯವಿದೆ. ಕಲಾವಿದರ ಸಂಖ್ಯೆ ಮತ್ತು ಪ್ರದರ್ಶನದ ಅನುಕೂಲತೆಯ ದೃಷ್ಟಿಯಿಂದ ಚೌಕಿಯ ಅಳತೆ ಕೆಲವೊಮ್ಮ ವ್ಯತ್ಯಾಸವಾಗಬಹುದು. ಹಿಂದಿನ ಕಾಲದಲ್ಲಿ ತೆಂಗಿನ ಗರಿಯ ತಟ್ಟಿಯಿಂದ ಚೌಕಿ ನಿರ್ಮಾಣವಾಗುತಿತ್ತು. ಈಗೆಲ್ಲ ಮರುಬಳಕೆ ಮಾಡಬಲ್ಲ ಬಟ್ಟೆಗಳಿಂದ ರಚಿತವಾದ ಡೇರೆಯ ಚೌಕಿಗಳಿವೆ.
ದೀಪದ ಅಲಂಕಾರ!
ಚೌಕಿಯ ಒಳಭಾಗದಲ್ಲಿ ಕಲಾವಿದರಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಬೈಹುಲ್ಲಿನ ಹಾಸು ಹಾಗು ಅದರ ಮೇಲೆ ಹುಲ್ಲಿನಿಂದಲೇ ಹೆಣೆದ ಅಂಕಣಚಾಪೆ ಇರುತ್ತಿತ್ತು. ಇತ್ತೀಚೆಗೆ ಅದರ ಬದಲಾಗಿ ಪ್ಲಾಸ್ಟಿಕ್ ಟಾರ್ಪಲ್ ಅಥವಾ ಪ್ಲಾಸ್ಟಿಕ್ ಚಾಪೆ, ಬಟ್ಟೆ ಬಳಕೆ ಬಂದಿದೆ. ಚೌಕಿಯ ಮೂರು ಬದಿಗಳು ಮುಚ್ಚಿಕೊಂಡಿದ್ದು ಒಂದು ಬದಿ ಮಾತ್ರ ತೆರೆದಿರುತ್ತದೆ. ಚೌಕಿಯ ರಚನೆಗಾಗಿ ಅಲ್ಲಲ್ಲಿ ಕಂಬಗಳನ್ನು ನೆಡುತ್ತಾರೆ. ಈ ಕಂಬಗಳ ಮಧ್ಯೆ ಬಿದಿರು ಅಥವಾ ಹಗ್ಗದಿಂದಲೋ ವೇಷ ಭೂಷಣ ಮತ್ತು ಬಟ್ಟೆ ಬರೆ ನೇತು ಹಾಕಿ ಜೋಡಿಸಿ ಇಡುತ್ತಾರೆ.
ಸಾಲು ಬೆಳಕಿಗೆ ಮುಖವೊಡ್ಡಿ ಇಬ್ಬದಿಗಳಲ್ಲಿ ಕಲಾವಿದರು ಮುಖಾಮುಖಿಯಾಗಿ ಬಣ್ಣ ಹಚ್ಚಲು ಕುಳಿತುಕೊಳ್ಳುತ್ತಾರೆ. ಪೂರ್ವಕಾಲದಲ್ಲಿ ಬೆಳಕಿಗಾಗಿ
ಹೊನ್ನೆಣ್ಣೆಯ ಕಾಲು ದೀಪ ಬಳಸುತ್ತಿದ್ದರು. ಇಂದು ವಿದ್ಯುತ್ ದೀಪಗಳ ಬಳಕೆ ಇದೆ.
ಬಣ್ಣದ ಲೋಕ
ಪಾತ್ರದಾರಿಗಳಿಗೆ ಅನುಕೂಲವಾಗುವಂತೆ ಅವರವರ ಕುಳಿತುಕೊಳ್ಳುವ ಸ್ಥಾನದ ಹಿಂದೆ ಆಭರಣ ಹಾಗೂ ಇತರ ವಸ್ತುಗಳನ್ನು ಇಡಲು ದೊಡ್ಡ ದೊಡ್ಡ ಪೆಟ್ಟಿಗೆ ಇರಿಸುತ್ತಾರೆ. ಅದಕ್ಕೆ ಬೀಗ ಹಾಕಿ ಇಡುವ ಕ್ರಮವೂ ಇದೆ. ಇದರ ಜತೆಗೆ ಜವುಳಿ ಗಂಟುಗಳನ್ನೂ ಸಾಲಾಗಿ ಇಡುತ್ತಾರೆ. ಮುಖಕ್ಕೆ ಬಣ್ಣ
ಹಚ್ಚಲು ಪಾತ್ರದಾರಿಗಳ ಮುಂದೆ ಬಗೆ ಬಗೆಯ ಬಣ್ಣಗಳನ್ನು ಇಡಲಾಗುತ್ತದೆ. ತೆಂಗಿನೆಣ್ಣೆ, ನೀರಿನ ತಟ್ಟೆ, ತೆಂಗಿನ ಗರಿ, ಕಾಡಿಗೆ, ಸ್ಪಾಂಜ್ ಹೀಗೆ ಹತ್ತು ಹಲವು ಸಾಮಾಗ್ರಿಗಳೂ ಅದರೊಂದಿಗೆ ಇರುತ್ತದೆ.
ಆಟ-ವಿಶ್ರಾಂತಿ
ಗಣಪತಿ ಪೆಟ್ಟಿಗೆಯ ಹಿಂಭಾಗದಲ್ಲಿ ಹಿಮ್ಮೇಳದವರ ವಿಶ್ರಾಂತಿಗಾಗಿ ವ್ಯವಸ್ಥೆ ಮಾಡಿರುತ್ತಾರೆ. ರಂಗಸ್ಥಳದ ಹಿಂಭಾಗದಲ್ಲಿ ಆಯುಧಗಳ ಕಟ್ಟು,
ನೀರು ಇತ್ಯಾದಿ ವ್ಯವಸ್ಥೆ ಇರುತ್ತದೆ. ಕಲಾವಿದರಿಗೆ ಕುಳಿತು ವಿಶ್ರಾಂತಿ ಪಡೆಯಲು ವ್ಯವಸ್ಥೆ ಇರುತ್ತದೆ. ಈಗಿನ ಕಾಲದಲ್ಲಿ ಫೋನ್, ಕುರ್ಚಿ ಬಳಕೆಯಿದೆ. ರಂಗಸ್ಥಳದ ಹಿಂದಿನ ಭಾಗವನ್ನು ಅಡ್ಡ ಚೌಕಿ ಎಂದೂ ಕರೆಯುತ್ತಾರೆ. ತೆಂಕು ತಿಟ್ಟಿನಲ್ಲಿ ಹಾಸ್ಯಗಾರರು ಕುಳಿತುಕೊಳ್ಳುವ ಸ್ಥಾನಕ್ಕೆ ಅಡ್ಡ ಚೌಕಿ ಎನ್ನುತ್ತಾರೆ.
ಚೌಕಿಯಲ್ಲಿ ಕಲಾವಿದರ ಸ್ಥಾನ
ತೆಂಕು ತಿಟ್ಟಿನ ಕ್ರಮದಂತೆ ದೇವರ ಪೆಟ್ಟಿಗೆಯ ಎಡಭಾಗದಲ್ಲಿ ಭಾಗವತರು ಕುಳಿತುಕೊಳ್ಳುತ್ತಾರೆ.
೧. ಒಂದನೇ ಬಣ್ಣದ ವೇಷ (ರಾವಣ, ಮೈರಾವಣ, ತಾರಕಾಸುರ, ಪುರುಷಾ ಮೃಗ ಇತ್ಯಾದಿ)
೨. ಎರಡನೇ ಬಣ್ಣದ ವೇಷ (ಬಕಾಸುರ, ಶೂರ್ಪಣಕಿ ಇತ್ಯಾದಿ)
೩. ಪೀಠಿಕೆ ವೇಷ (ದೇವೇಂದ್ರ, ಅರ್ಜುನ, ರಾಮ ಇತ್ಯಾದಿ)
೪. ಎದುರು ವೇಷ (ಇಂದ್ರಜಿತು, ರಕ್ತ ಬೀಜ, ಕರ್ಣ ಇತ್ಯಾದಿ)
೫. ಸೀ ವೇಷ (ದ್ರೌಪದಿ, ಮಾಲಿಸಿ, ರತಿ ಇತ್ಯಾದಿ)
೬. ಎರಡನೇ ಸೀ ವೇಷ (ಸಖೀ ಪಾತ್ರಗಳು)
೭. ಪೋಷಕ ವೇಷಗಳು (ಧರ್ಮರಾಯ, ಮಯೂರ ಧ್ವಜ ಇತ್ಯಾದಿ)
೮. ಪುಂಡು ವೇಷ (ಕೃಷ್ಣ, ಮನ್ಮಥ, ಅಭಿಮನ್ಯು ಇತ್ಯಾದಿ)
೯. ಎರಡನೇ ಪುಂಡು ವೇಷ (ವೃಷ ಕೇತು, ದೃಷ್ಟಧ್ಯುಮ್ನ ಇತ್ಯಾದಿ)
೧೦. ನಿತ್ಯವೇಷ (ಬಾಲ ಗೋಪಾಲರು)
೧೧. ಹಾಸ್ಯಗಾರ
ತೆಂಕು ತಿಟ್ಟಿನಲ್ಲಿ ಪ್ರಸಂಗಕ್ಕೆ ಅನುಗುಣವಾಗಿ ಪಾತ್ರಗಳಿಗೆ ಪ್ರಾಧಾನ್ಯತೆ ಬರುತ್ತದೆ. ಉದಾಹರಣೆಗೆ ಅಶ್ವಮೇಧ ಪ್ರಸಂಗದಲ್ಲಿ ಅರ್ಜುನನ ಪಾತ್ರ ಪ್ರಧಾನವಾದರೆ ಗಧಾಯುದ್ದ ಪ್ರಸಂಗದಲ್ಲಿ ಪೋಷಕ ಪಾತ್ರವಾಗಿ ಬಿಡುತ್ತದೆ. ಎರಡೂ ಪ್ರಸಂಗದಲ್ಲಿ ರಾಜ ವೇಷವಾಗಿದ್ದರೆ ಗುರುದಕ್ಷಿಣೆ ಪ್ರಸಂಗದಲ್ಲಿ ಅರ್ಜುನ ಪಕಡಿ ವೇಷ ಮಾಡುವುದು ಕಾಣಬಹುದು. ಹೀಗೆ ಪ್ರಸಂಗಕ್ಕೆ ಅನುಗುಣವಾಗಿ ಪಾತ್ರದ ಪ್ರಧಾನ್ಯತೆ, ಸ್ವರೂಪ ಬದಲಾಗುತ್ತಲೇ ಇರುತ್ತದೆ.
ಹಾಸ್ಯಗಾರರಿಗೆ ಹಲವು ಪಾತ್ರಗಳನ್ನು ನಿರ್ವಹಿಸಬೇಕಾದುದರಿಂದ ಬೇಗ ಬೇಗನೆ ಉಡುಗೆ ತೊಡುಗೆಗಳನ್ನು ಬದಲಿಸಿಕೊಂಡು ರಂಗಸ್ಥಳಕ್ಕೆ
ಹೋಗುವುದಕ್ಕೆ ಚೌಕಿಯ ತಲೆ ಭಾಗದಲ್ಲಿ ಅಡ್ಡಸಾಲು ಮೀಸಲಾಗಿದೆ. ಹಾಗೆಯೇ ಸೂಕ್ಷ್ಮ ಮುಖವರ್ಣಿಕೆ ಮತ್ತು ದೀರ್ಘಕಾಲ ವೇಷ ತಯಾರಿಯಲ್ಲಿ ತೊಡಗಿಕೊಳ್ಳುವ ಬಣ್ಣದ ವೇಷದವರಿಗೆ ಚೌಕಿ ಮನೆಯಲ್ಲಿ ಅಗ್ರಸ್ಥಾನ.
ಗಜಮುಖನೇ ನಿನಗೆ ವಂದನೆ
ಚೌಕಿಯ ಮುಖ್ಯ ಭಾಗದಲ್ಲಿ ಗಣಪತಿ ಪೆಟ್ಟಿಗೆ ಇರುತ್ತದೆ. ಯಕ್ಷಗಾನದಲ್ಲಿ ಹೆಚ್ಚಾಗಿ ಗಣಪತಿ ದೇವರನ್ನು ಆರಾಧನೆ ಮಾಡುವುದು ಪರಂಪರೆ. ಕ್ಷೇತ್ರ ದೇವತೆ ಇದ್ದರೂ ಗಣಪತಿಗೆ ಪ್ರಮುಖ ಸ್ಥಾನವಿರುತ್ತದೆ. ಗಣಪತಿಗೆ ಪ್ರತ್ಯೇಕವಾಗಿ ಸ್ವಸ್ತಿಕವನ್ನಿಟ್ಟು ಪೂಜಿಸುತ್ತಾರೆ. ಆನೆ ಮುಖದ ಮುಖವಾಡ ವನ್ನೋ ಕಿರೀಟವನ್ನೋ ಅಥವಾ ವಿಷ್ಣುವಿನ ಸುದರ್ಶನ ಚಕ್ರವನ್ನಿಟ್ಟು ಪೂಜೆ ಮಾಡುತ್ತಾರೆ.