ಹಿಂದಿರುಗಿ ನೋಡಿದಾಗ
ಮಧ್ಯಯುಗದ ಯೂರೋಪ್ ಖಂಡದಲ್ಲಿದ್ದ ಬ್ರಿಟನ್, ಫ್ರಾನ್ಸ್, ಪೋರ್ಚುಗಲ್, ಸ್ಪೇನ್, ನೆದರ್ಲ್ಯಾಂಡ್ಸ್ ಮುಂತಾದ ದೇಶಗಳ ಜನರು ಜಗತ್ತಿನ ಪೀಡಕರಾಗಿ, ವ್ಯಾಪಾರದ ನೆಪದಲ್ಲಿ ಹಿಂಸೆಯ ಮೂಲಕ ಜಗತ್ತಿನ ಬಹುಭಾಗದ ದೇಶಗಳನ್ನು ಹಿಂಸಿಸಿ, ಅವರಲ್ಲಿದ್ದ ಅಪೂರ್ವ ಸಂಪತ್ತನ್ನು ಲೂಟಿ ಹೊಡೆದು, ತಾವು ಶ್ರೀಮಂತರಾದದ್ದು ಕರಾಳ ಇತಿಹಾಸ.
ಬ್ರಿಟಿಷರು ಪ್ರಧಾನವಾಗಿ ಭಾರತವನ್ನು ವಶಪಡಿಸಿಕೊಂಡು, ಇಲ್ಲಿದ್ದ ಸಂಪತ್ತನ್ನು ಅವ್ಯಾಹತವಾಗಿ 200 ವರ್ಷಗಳ ಕಾಲ ಲೂಟಿ ಹೊಡೆದರು. ಸ್ಪೇನ್ ದೇಶದ ಸ್ಪ್ಯಾನಿಶ್ ಜನರು ಜಗತ್ತಿನ ಪೂರ್ವಾರ್ಧದ ಕಡೆಗೆ ಹೋಗದೆ ಪಶ್ಚಿಮಾರ್ಧದ ಕಡೆಗೆ ಹೋಗಿ, ಅಲ್ಲಿರುವ ದೇಶಗಳನ್ನು ದೋಚಿ, ಅಲ್ಲಿದ್ದ ಸಂಸ್ಕೃತಿಗಳನ್ನು ನಾಶಪಡಿಸಿ, ಅನೂಹ್ಯ ಸಂಪತ್ತನ್ನು ಕೊಳ್ಳೆ ಹೊಡೆದರು. ಬದಲಿಯಾಗಿ ಸ್ಥಳೀಯರಿಗೆ ಸಿಫಿಲಸ್ ಮುಂತಾದ ಮಾರಕ ಲೈಂಗಿಕ ರೋಗಗಳನ್ನು ಉಚಿತವಾಗಿ ಹಂಚಿದರು.
ಸ್ಪ್ಯಾನಿಶ್ ಜನರು 1528ರಲ್ಲಿ ಇಂಕಾ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದರು. ಫ್ರಾನ್ಸಿಸ್ಕೋ ಪಿಜೆರೊ (1529- 1541) ಮತ್ತು ಡೀಗೊ ಡಿ ಅಲ್ಮಾಗ್ರೊ (1475-1538) ಈ ಸೈನ್ಯದ ನಾಯಕತ್ವ ವಹಿಸಿದರು. ಪಿಜೆರೊ, ಒಂದು ಗಂಟೆಯಲ್ಲಿ 2000 ನಿರಾಯುಧ ಪ್ರಜೆಗಳನ್ನು ಕೊಂದ. ಸ್ಪೇನ್ ಕಡೆ ಒಬ್ಬ ಸೈನಿಕನಿಗೆ ಮಾತ್ರ ಅಲ್ಪಸ್ವಲ್ಪ ಗಾಯವಾಗಿತ್ತು. ಅಷ್ಟೆ. ಇಂಕಾ ರಾಜಕುಮಾರ ಅತಾಹು ವಾಲ್ಪನನ್ನು ಬಂಧಿಸಿದ. ಅವನನ್ನು ಕೊಲ್ಲದೆ ಬಿಡಬೇಕಾದರೆ, ಕೋಣೆಯನ್ನು ತುಂಬುವಷ್ಟು ಚಿನ್ನವನ್ನು ಕೇಳಿದ. ಅದಕ್ಕೆ ಎರಡರಷ್ಟು ಬೆಳ್ಳಿಯನ್ನು ಕೊಡಬೇಕೆಂದ. ಅವರು ಕೊಟ್ಟರು. ಆದರೆ ಪಿಜೆರೊ ರಾಜಕುಮಾರನನ್ನು ಕೊಂದೇ ಬಿಟ್ಟ. ಚಿನ್ನಬೆಳ್ಳಿಗಳ ಗಟ್ಟಿಯನ್ನು ಹಡಗಿನಲ್ಲಿ ತುಂಬಿಕೊಂಡು ಸ್ಪೇನಿಗೆ ಹೊರಟ.
ಸ್ಪೇನಿನಲ್ಲಿ ಎಷ್ಟು ಚಿನ್ನವು ತುಂಬಿ ತುಳುಕಿತು ಎಂದರೆ, ಅವರು ಕೃಷಿ, ಹೈನುಗಾರಿಕೆ, ನೇಕಾರಿಕೆ ಇತ್ಯಾದಿ ದೈನಂದಿನ ಕೆಲಸಗಳನ್ನು ಮಾಡುವು ದನ್ನು ನಿಲ್ಲಿಸಿದರು. ಚಿನ್ನವನ್ನೇ ನೀಡಿ ಅನ್ನವನ್ನು ಕೊಳ್ಳಲಾರಂಭಿಸಿದರು. ಇಡೀ ಸ್ಪೇನ್ ದೇಶವೇ ಮಹಾನ್ ಸೋಮಾರಿ ದೇಶವಾಯಿತು. ಚಿನ್ನವು ಕ್ರಮೇಣ ಕರಗಿ ಯೂರೋಪ್, ರಷ್ಯಾ ಮತ್ತು ಚೀನದ ಪಾಲಾಗಲಾರಂಭಿಸಿತು. ಸ್ಪ್ಯಾನಿಶ್ ದುಷ್ಟರು ಇಂಕಾ ಸಾಮ್ರಾಜ್ಯವನ್ನು ಪ್ರವೇಶಿಸುವ ಮೊದಲು, ಕೋಕಾ ಮರವು ಇಂಕಾ ಜನರ ಪಾಲಿಗೆ ದೈವೀಕ, ದೈವದತ್ತ ಮರವಾಗಿತ್ತು.
ಜನಸಾಮಾನ್ಯರಿಗೆ ಕೋಕಾ ಎಲೆಗಳ ವಿತರಣೆ ಒಂದು ಕಟ್ಟುಪಾಡಿಗೆ ಒಳಪಟ್ಟಿತ್ತು. ಇಂಕಾ ಸಾಮ್ರಾಜ್ಯವನ್ನು ವಶಪಡಿಸಿಕೊಂಡ ಸ್ಪ್ಯಾನಿಶ್
ಖಳರು, ಕೋಕಾ ಎಲೆಯ ಮಹತ್ವವು ತಿಳಿಯುತ್ತಿದ್ದಂತೆಯೇ, ಕೋಕಾ ಮರಗಳನ್ನು ವಶಕ್ಕೆ ತೆಗೆದುಕೊಂಡರು. ಅದರ ಮೇಲಿದ್ದ ಕಟ್ಟುಪಾಡುಗಳನ್ನು ತೆಗೆದುಹಾಕಿದರು. ಇಂಕಾ ಜನರಿಗೆ ಕೋಕಾ ಎಲೆಯನ್ನು ಅವರು ಕೇಳಿದಷ್ಟು ಕೊಟ್ಟರು. ಬದಲಿಗೆ ಅವರು ಬಲವಂತವಾಗಿ ಚಿನ್ನ-ಬೆಳ್ಳಿಗಣಿಗಳಲ್ಲಿ
ದುಡಿಯಬೇಕಾಯಿತು. ಅನೇಕ ಸಲ ಇಂಕಾ ಪ್ರಜೆಗಳು ಕೋಕಾ ಎಲೆಯನ್ನು ತಿಂದು 48-ಗಂಟೆಗಳವರೆಗೆ ಗಣಿಗಳಲ್ಲಿ ಕೆಲಸವನ್ನು ಮಾಡಬೇಕಾ ಗಿತ್ತು.
ಕೋಕಾ ಹಸಿವು, ಬಾಯಾರಿಕೆ, ದಣಿವನ್ನು ಹಿಂಗಿಸುತ್ತಿದ್ದ ಕಾರಣ, ಅವರು ನಿರಂತರವಾಗಿ ಕೆಲಸವನ್ನು ಮಾಡಲೇಬೇಕಾದದ್ದು ಅನಿವಾರ್ಯ ವಾಯಿತು. ಅವರಿಗೆ ಸ್ವಲ್ಪವಾದರೂ ವಿಶ್ರಾಂತಿಯನ್ನು ಕೊಡಬೇಕು ಎನ್ನುವ ಕನಿಷ್ಠ ಕರುಣೆಯನ್ನು ತೋರದೆ ಅವರಿಂದ ಕೆಲಸವನ್ನು ತೆಗೆಸಿಕೊಂಡು, ಚಿನ್ನ-ಬೆಳ್ಳಿಯನ್ನು ಸ್ಪೇನಿಗೆ ಸಾಗಿಸಿದರು. 16ನೆಯ ಶತಮಾನದ ಹೊತ್ತಿಗೆ ಸ್ಪ್ಯಾನಿಶ್ ಜನರು ಕೋಕಾ ಮರದ ಬೀಜಗಳನ್ನು ಸ್ಪೇನ್ ದೇಶಕ್ಕೆ ತಂದರು. ಅಲ್ಲಿ ಬೀಜಗಳನ್ನು ನೆಟ್ಟರು, ಬೆಳೆಸಿದರು. ಅವುಗಳ ಲಾಭವನ್ನು ಪಡೆಯಲಾರಂಭಿಸಿದರು. ಕೋಕಾ ಯೂರೋಪಿನಾದ್ಯಂತ ಹರಡಿತು. ಆದರೆ ಯೂರೋಪಿಯನ್ನರಿಗೆ ಕೋಕಾ ಎಲೆಗಳ ಬಗ್ಗೆ ವೈಜ್ಞಾನಿಕ ಕುತೂಹಲವು ಬೆಳೆಯಲು ಸುಮಾರು ಮೂರು ಶತಮಾನಗಳೇ ಬೇಕಾದವು.
1863ರಲ್ಲಿ ಫ್ರೆಂಚ್ ರಸಾಯನಶಾಸ್ತ್ರಜ್ಞ ಏಂಜಲೊ ಮೇರಿಯಾನಿ (1838- 1914). ಇವನು ವಿನ್ ಮೇರಿಯಾನಿ ಎಂಬ ಹೆಸರಿನ
ಟಾನಿಕ್ ತಯಾರಿಸಿ ಬಿಡುಗಡೆ ಮಾಡಿದ. ಇದೊಂದು ವೈನ್ ಆಗಿತ್ತು. ಇದರಲ್ಲಿ ಕೋಕಾ ಎಲೆಗಳ ಸಾರವಿತ್ತು. ಪೋಪ್ ಲಿಯೊ-13 (1810-1903) ಅವರಿಗೆ ಈ ಪಾನೀಯವು ತುಂಬಾ ಇಷ್ಟವಾಯಿತು. ಅವರು ಈ ವೈನನ್ನು ಹರಸಿದರು. ಬಹಳ ಒಳ್ಳೆಯ ಮಾತುಗಳನ್ನಾಡಿದರು. ಈ ವೈನಿನ ಜಾಹೀರಾತಿನಲ್ಲಿ ತಮ್ಮ ಹೆಸರು ಮತ್ತು ಹೇಳಿಕೆಯನ್ನು ಬಳಸಿಕೊಳ್ಳಲು ಅನುಮತಿಯನ್ನಿತ್ತರು. ಏಂಜಲೊ ಮೇರಿ ಯಾನಿಯು ವಿನ್ ಮೇರಿಯಾನಿ ಎಂಬ ಟಾನಿಕ್ಕು ನಿದ್ರಾ ಹೀನತೆ, ನರದೌರ್ಬಲ್ಯ, ವಿಷಣ್ಣತೆ, ಲೈಂಗಿಕ ದೌರ್ಬಲ್ಯ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಮಾರಾಟ ಮಾಡಲಾರಂಭಿಸಿದ. ಕೊನೆಗೆ ಇದು – (ಇನ್ ಫ್ಲುಯೆಂಜ಼) ವನ್ನೂ ಗುಣಪಡಿಸುತ್ತದೆಯೆಂದ.
ವಿನ್ ಮೇರಿಯಾನಿ ಯೂರೋಪಿನಲ್ಲಿ ಪ್ರಖ್ಯಾತವಾಯಿತು. ಏಂಜಲೋ ಮೇರಿಯಾನಿಗೆ ಅಪಾರ ಹಣವನ್ನು ತಂದುಕೊಟ್ಟಿತು. ಇದನ್ನು ಅಮೆರಿಕದ ಜಾರ್ಜಿಯ ಪ್ರದೇಶದಲ್ಲಿದ್ದ ಜಾನ್ ಪೆಂಬರ್ಟನ್ (1831-1888) ಎಂಬ ಔಷಧಶಾಸ್ತ್ರಜ್ಞನ ಗಮನಕ್ಕೆ ಬಂದಿತು. ಇವನು 1885ರಲ್ಲಿ ಪೆಂಬರ್ಟನ್ ಫ್ರೆಂಚ್ ವೈನ್ ಕೋಲ ಎಂಬ ಹೆಸರಿನಲ್ಲಿ ತನ್ನದೇ ಆದ ಪೇಯವನ್ನು ಬಿಡುಗಡೆ ಮಾಡಿದ. ಇದು ಆಲ್ಕೋಹಾಲಿಕ್ ಪಾನೀಯವಾಗಿತ್ತು. ಹಾಗಾಗಿ ಶ್ರೀಸಾಮಾನ್ಯನಿಗೆಂದು ಆಲ್ಕೋಹಾಲ್ ರಹಿತ ಮತ್ತೊಂದು ಪಾನೀಯವನ್ನು ಸಿದ್ಧ ಪಡಿಸಿದ. ಅದಕ್ಕೆ ಕೋಕಾ-ಕೋಲ ಎಂದು ಹೆಸರಿಟ್ಟ.
ಕೋಕಾ-ಕೋಲಾದಲ್ಲಿ ಹೆಸರೇ ಸೂಚಿಸುವ ಹಾಗೆ ಎರಡು ವಸ್ತುಗಳು ಪ್ರಧಾನವಾಗಿದ್ದವು.
ಮೊದಲನೆಯದು ಕೋಕಾ ಎಲೆಗಳ ಸಾರ ಹಾಗೂ ಎರಡನೆಯದು ಆಫ್ರಿಕನ್ ಕೋಲಾ ಬೀಜಗಳ ಸಾರ. ಈ ಕೋಲಾ ಬೀಜಗಳಲ್ಲಿ 2% ಕೆಫೀನ್ ಇತ್ತು. ಹಾಗಾಗಿ ಈ ಎರಡು ಅದ್ಭುತ ವಸ್ತುಗಳ ಸಾರವಾದ ಕೋಕಾ- ಕೋಲಾ ಅತ್ಯಲ್ಪ ಕಾಲದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿತು. ತಯಾರಿಕರಿಗೆ ಅವರು ಊಹಿಸಲು ಸಾಧ್ಯವಾಗದಷ್ಟು ಹಣವನ್ನು ತಂದುಕೊಡಲಾರಂಭಿಸಿತು. 1906. ಅಮೆರಿಕದಲ್ಲಿ ಪರಿಶುದ್ಧ ಆಹಾರ ಮತ್ತು ಔಷಧಗಳ ಕಾಯಿದೆ (ಪ್ಯೂರ್ ಫುಡ್ ಅಂಡ್ ಡ್ರಗ್ಸ್ ಆಕ್ಟ್) ಜಾರಿಗೆ ಬಂದಿತು. ಆಗ ಕೋಕಾ-ಕೋಲಾವನ್ನು ತಯಾರಿಸುತ್ತಿದ್ದ ಸಂಸ್ಥೆಯ ಮೇಲೆ ಒತ್ತಡಬಂತು. ಕೋಕಾ- ಕೋಲದಲ್ಲಿದ್ದ ಕೋಕಾ ಸಾರದಲ್ಲಿ ಕೋಕಾ ಅಂಶವನ್ನು, ಅಂದರೆ ಕೊಕೇನ್ ಭಾಗವನ್ನು ಪ್ರತ್ಯೇಕಿಸಬೇಕೆಂದು ಆಜ್ಞೆ
ನೀಡಿತು. ಆಗ ಕೋಕಾ-ಕೋಲಾ ಪಾನೀಯದಲ್ಲಿ ಕೋಕೇನ್ ಇಲ್ಲದ ಕೋಕಾ ಎಲೆಗಳ ಸಾರವನ್ನು ಮಾತ್ರ ಬಳಸಲು ಆರಂಭಿಸಿತು. ಕೋಕಾ-ಕೋಲಾ ಮೊದಲಿನ ಕಿಕ್ ಕಳೆದುಕೊಂಡಿತು.
ಆದರೆ ಅದು ತನ್ನ ಜನಪ್ರಿಯತೆಯನ್ನು ಪೂರ್ಣ ಕಳೆದುಕೊಳ್ಳಲಿಲ್ಲ. ಇಂದಿಗೂ ಸಹ, ಜಗತ್ತಿನ ಬಹು ಬೇಡಿಕೆಯ ಪಾನೀಯಗಳಲ್ಲಿ ಕೋಕಾ-ಕೋಲಾ ಸಹ ಒಂದಾಗಿದೆ. ಬೊಲೀವಿಯ, ಪೆರು, ಚಿಲಿ, ಅರ್ಜೆಂಟೀನ ಮುಂತಾದ ದೇಶಗಳಲ್ಲಿ ಇಂದಿಗೂ ಕೋಕಾ ಚಹ, ಗ್ರನೋಲಾ ಬಾರ್, ಕೋಕಾ ಕುಕೀಸ್, ಕೋಕಾ ಕ್ಯಾಂಡೀಸ್ ಇತ್ಯಾದಿಗಳು ಆ ದೇಶದ ಸಾಮಾನ್ಯ ಅಂಗಡಿಗಳಿಂದ ಸೂಪರ್ ಮಾರ್ಕೆಟಿನವರೆಗೆ ಎಲ್ಲ ಕಡೆ ದೊರೆಯುತ್ತವೆ. ಪೆರುವಿನಲ್ಲಿ ಸರ್ಕಾರವೇ ಕೋಕಾ ಚಹವನ್ನು ಮಾರಾಟ ಮಾಡುತ್ತದೆ. ಅಗ್ವಾ ಡಿ ಬೊಲೀವಿಯ ಮತ್ತು ರೆಡ್ ಬುಲ್ ಕೋಲಾ ಎನ್ನುವ ಪಾನೀಯವನ್ನು ಬೊಲೀವಿಯ ಸರಕಾರವು ತಯಾರಿಸಿ ಮಾರುತ್ತದೆ. ಬೊಲೀವಿಯ, ಪೆರು ಮತ್ತು ವೆನಿಜ಼ೂಲ ದೇಶಗಳ ಅಧ್ಯಕ್ಷರು ಕೋಕಾ ಎಲೆಗಳ ಅನಪಾಯ ಕಾರೀ ಗುಣಗಳಲ್ಲಿ ಪ್ರಚುರಪಡಿಸುವುದರಲ್ಲಿ ಮುಂಚೂಣಿಯಲ್ಲಿದ್ದಾರೆ.
ಬೊಲೀವಿಯ ದೇಶದ ಅಧ್ಯಕ್ಷ ಇವೋ ಮೊರೇಲ್ಸ್ ಕೋಕಾ ಎಲೆ, ಕೊಕೇನ್ ಅಲ್ಲ ಎಂದು ಕೋಕಾ ಎಲೆಗಳ ಪರವಹಿಸಿ ಮಾತನಾಡಿದ್ದಾರೆ. ಸೆಪ್ಟೆಂಬರ್ 19, 2006ರಲ್ಲಿ, ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ, ಇವೋ ಮೊರೇಲ್ಸ್ ತನ್ನ ಕೈಯಲ್ಲಿ ಒಂದು ಕೋಕಾ ಎಲೆಯನ್ನು ಹಿಡಿದುಕೊಂಡು,
ಅದರ ನಿರುಪದ್ರವೀ ಗುಣವನ್ನು ಹಾಡಿ ಹೊಗಳಿದರು. ಅಲನ್ ಗಾರ್ಸಿಯ, ಪೆರು ದೇಶದ ಅಧ್ಯಕ್ಷರು, ವಿನ್ ಮೇರಿಯಾನಿ ರೀತಿಯ ಕೊಕೇನ್ ಸಾರಯುಕ್ತ ಹಾಗೂ ಕೊಕೇನ್ ರಹಿತ ಕೋಕಾ ಎಲೆಗಳ ಪಾನೀಯವನ್ನು ತಾವೇ ಸಿದ್ಧಪಡಿಸಿ ಮಾರುವುದಾಗಿ ಹೇಳಿಕೆಯನ್ನಿತ್ತ. ವೆನಿಜ಼ೂಲದ
ಅಧ್ಯಕ್ಷ ಹ್ಯೂಗೋ ಶಾವೆಜ಼್ ನಾನು ಪ್ರತಿ ದಿನ ಕೋಕಾ ಎಲೆಗಳನ್ನು ಜಗಿಯುತ್ತೇನೆ. ನನ್ನ ಆರೋಗ್ಯ ಹೇಗಿದೆ ನೋಡಿ ಎಂದು ತುಂಬು ಸಭೆಯಲ್ಲಿ ತನ್ನ ಬೈಸೆಪ್ಸ್ ಪ್ರದರ್ಶಿಸಿದ.
ಬೊಲೀವಿಯ ದೇಶವು ಕೋಕಾ ಎಲೆಗಳ ಸಾರವನ್ನು ಒಳಗೊಂಡ ಶಕ್ತಿವರ್ಧಕ ಪೇಯ ಕೋಕಾ-ಕೋಲವನ್ನು 2010ರಲ್ಲಿ ಬಿಡುಗಡೆ ಮಾಡಿತು.
ಕೋಕಾ ಎಲೆಗಳಲ್ಲಿ ಸರಾಸರಿ 0.8% ಕೊಕೇನ್ ಇರುತ್ತದೆ. ಕೋಕಾ ಎಲೆಗಳಲ್ಲಿರುವ ಕೊಕೇನ್‌ನನ್ನು 1859ರಲ್ಲಿ ಪ್ರತ್ಯೇಕಿಸಿದ್ದು ಜರ್ಮನ್ ರಸಾಯನಶಾಸಜ್ಞ ಆಲ್ಬರ್ಟ್ ನೈಮನ್ (1834-1861). ಆಸ್ಟ್ರಿಯನ್ ಮನೋವೈದ್ಯ ಸಿಗ್ಮಂಡ್ ಫ್ರಾಯ್ಡ್ (1856-1939) ಕೊಕೇನನ್ನು ಸ್ವಯಂ ಬಳಸಿದ. ಇದು ಖಿನ್ನತೆ, ಲೈಂಗಿಕ ದೌರ್ಬಲ್ಯ ನಿವಾರಕ ಎಂದ.
1884ರಲ್ಲಿ ಈ ಬಗ್ಗೆ ಲೇಖನವನ್ನು ಬರೆದು, ಇದೊಂದು ಮ್ಯಾಜಿಕಲ್ ಔಷಧವೆಂದ. ಶುದ್ಧ ರೂಪದ ಕೊಕೇನ್ ಅತ್ಯುತ್ತಮ ಔಷಧಿಯ ಗುಣಗಳನ್ನು ಹೊಂದಿದ್ದರೂ ಸಹ, ಅದು ಮಹಾನ್ ಚಟವನ್ನು ಉಂಟು ಮಾಡುತ್ತಿತ್ತು. ಹಾಗಾಗಿ ಕೊಕೇನನ್ನು ಚಿಕಿತ್ಸೆಯಲ್ಲಿ ಬಳಸುವುದನ್ನು ನಿಲ್ಲಿಸಿದರು. ಬದಲಿಗೆ ಕೊಕೇನಿನ ಸಂಯೋಜಿತ ಸಮರೂಪಿ ಪ್ರೋಕೇನ್ ಬಳಸಲಾರಂಭಿಸಿದರು. ಕೊಕೇನ್ ಅನಧಿಕೃತ ರಾಸಾಯನಿಕಗಳ ಪಟ್ಟಿಯನ್ನು ಸೇರಿತು. 1961ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಮಾದಕದ್ರವ್ಯಗಳ ಸಮಾವೇಶವನ್ನು ನಡೆಸಿತು. ಈ ಸಮಾವೇಶದಲ್ಲಿ ನಿಷೇಧಿತ ಮಾದಕದ್ರವ್ಯಗಳ
ಪಟ್ಟಿಯಲ್ಲಿ ಪ್ರಕಟಿಸಿತು. ಅದರಲ್ಲಿ ಕೊಕೇನ್ ಮತ್ತು ಹೆರಾಯಿನ್‌ಗಳ ಜೊತೆಯಲ್ಲಿ ಕೋಕಾ ಎಲೆಯನ್ನೂ ಸೇರಿಸಿದ್ದರು.
ಕೋಕಾ ಎಲೆಯನ್ನು ಸೇರಿಸಿದ್ದಕ್ಕೆ ಎರಡು ಕಾರಣಗಳನ್ನು ನೀಡಿದರು. ಮೊದಲನೆಯದು ಕೋಕೇನ್ ಮಾದಕದ್ರವ್ಯ ಉತ್ಪಾದನೆಗೆ ಮೂಲ ಕಾರಣ ಕೋಕಾ ಮರ. ಹಾಗಾಗಿ ಅನಧಿಕೃತವಾಗಿ ಬೆಳೆಯುವ ಎಲ್ಲ ಕೋಕಾ ಮರಗಳನ್ನು ಬುಡಮೇಲು ಮಾಡಬೇಕು ಎಂದರು (ಆರ್ಟಿಕಲ್-25). ಕೋಕಾ ಎಲೆಗಳನ್ನು ಜಗಿಯುವ ಹಾಗೂ ಚಹ ಮಾಡಿ ಕುಡಿಯುವ ದುರಭ್ಯಾಸವನ್ನು ಪೂರ್ಣವಾಗಿ ನಿಲ್ಲಿಸಬೇಕು ಎಂದು ಹೇಳಿ, ಅದನ್ನು ಕಾರ್ಯರೂಪಕ್ಕೆ ತರಲು ೨೫ ವರ್ಷಗಳ ಅವಧಿಯನ್ನು, ಅಂದರೆ ಡಿಸೆಂಬರ್ 1989ರವರೆಗೆ ಸಮಯ ನೀಡಿದರು (ಆರ್ಟಿಕಲ್-49).
1949ರಲ್ಲಿ ಒಂದು ಆಯೋಗವು ಬೊಲೀವಿಯ ಮತ್ತು ಪೆರು ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಪ್ರಜೆಗಳು ಕೋಕಾ ಎಲೆಗಳನ್ನು ಬಳಸುತ್ತಿರುವ ರೀತಿಯನ್ನು ಅಧ್ಯಯನ ಮಾಡಿ, ಅವೆಲ್ಲ ಅನಾರೋಗ್ಯಕರ ಎಂಬ ವರದಿ ಬರೆದರು. ಅದನ್ನಾಧರಿಸಿ ವಿಶ್ವಸಂಸ್ಥೆ ಕೋಕಾ ಎಲೆಗಳನ್ನೂ ಮಾದಕ ವಸ್ತುಗಳ ಪಟ್ಟಿಯಲ್ಲಿ ಸೇರಿಸಿತು. ಅನೇಕ ತಜ್ಞರು ಈ ವರದಿ ಅತ್ಯಂತ ಅವೈಜ್ಞಾನಿಕ ಎಂದು ಪುರಾವೆಸಹಿತ ವಾದಿಸಿದರು. ಪಟ್ಟಭದ್ರ ಹಿತಾಸಕ್ತಿ ಗಳನ್ನು ಬಯಲು ಮಾಡಿದರು.
ಬೊಲೀವಿಯ ಮತ್ತು ಪೆರು ದೇಶಗಳು ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಬಳಸುತ್ತಿರುವ ಜನರಿಗೆ ಕೋಕಾ ಎಲೆಗಳ ಬಳಕೆ ಹಕ್ಕನ್ನು
ನೀಡಬೇಕೆಂದು ವಿಶ್ವಸಂಸ್ಥೆಯ ಮೇಲೆ ಒತ್ತಡ ತಂದರು. 1988ರಲ್ಲಿ ನಡೆದ ಸಮಾವೇಶದಲ್ಲಿ ಬೊಲೀವಿಯ ಮತ್ತು ಪೆರು ದೇಶಗಳ ಬೇಡಿಕೆಗೆ ವಿಶ್ವಸಂಸ್ಥೆ ಒಪ್ಪುವ ಹಾಗೆ ಕಂಡರೂ 2007ರ ಸಮಾವೇಶದಲ್ಲಿ ವಿಶ್ವಸಂಸ್ಥೆ ಕೋಕಾ ಎಲೆ ಜಗಿಯುವುದು ಹಾಗೂ ಕೋಕಾ ಚಹವನ್ನು ಸೇವಿ ಸುವುದು ಅಪಾಯಕಾರಿ, ಅವನ್ನು ನಿಷೇಧಿಸಬೇಕು ಎಂದಿತು. ವಿಶ್ವಸಂಸ್ಥೆ 2007ರಲ್ಲಿ ಸ್ಥಳೀಯರ ಹಕ್ಕುಗಳನ್ನು ಎತ್ತಿಹಿಡಿಯುವ ಘೋಷಣೆ ಮಾಡಿತು.
ಅದರನ್ವಯ ಅನಾದಿ ಕಾಲದಿಂದಲೂ ಪೆರು, ಬೊಲೀವಿಯ ಜನರ ಸಂಸ್ಕೃತಿಯ ಭಾಗವಾಗಿದ್ದ ಕೋಕಾ ಎಲೆಯ ಬಳಕೆಯನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದಾಯಿತು. ಹಾಗಾಗಿ ಬೊಲೀವಿಯದ ಅಧ್ಯಕ್ಷ ಇವೋ ಮೊರೇಲ್ಸ್ ವಿಶ್ವ ಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಅವರಿಗೆ ಪತ್ರವನ್ನು ಬರೆದು ನಿಷೇಧವನ್ನು ಹಿಂತೆಗೆದುಕೊಳ್ಳ ಬೇಕೆಂದರು. ಈ ವಿಚಾರವು ವಿಶ್ವ ಸದಸ್ಯರಾಷ್ಟ್ರಗಳ ಮುಂದೆ ಬಂದಾಗ, 184 ದೇಶಗಳು ನಿಷೇಧ ಹಿಂದೆಗೆದುಕೊಳ್ಳಬೇಕು ಎಂದರೆ, ಅಮೆರಿಕ, ಬ್ರಿಟನ್, ಕೆನಡ, ಡೆನ್ಮಾರ್ಕ್, ಜರ್ಮನಿ ಸಹಿತ ೧೭ ರಾಷ್ಟ್ರಗಳು ನಿಷೇಧವನ್ನು ಹಿಂದೆಗೆದು ಕೊಳ್ಳಬಾರದು ಎಂದವು. ಹಾಗಾಗಿ ಕೋಕಾ ಎಲೆಗಳ ಸಮಸ್ಯೆ ಇಂದಿಗೂ ನೆನೆಗುದಿಗೆ ಬಿದ್ದಿದೆ.