Saturday, 14th December 2024

ಡಿ.೬ ರಂದು ಬೆಂಗಳೂರಿನಲ್ಲಿ `ದಲಿತರ ಸಾಂಸ್ಕೃತಿಕ ಪ್ರತಿರೋಧ’ ಸಮಾವೇಶ ಎನ್.ಮುನಿಸ್ವಾಮಿ

ಚಿಕ್ಕಬಳ್ಳಾಪುರ : ಡಾ.ಬಿ.ಆರ್.ಅಂಬೇಡ್ಕರ್ ಅವರ ೬೬ ನೇ ಪರಿನಿಬ್ಬಾಣ ದಿನದ ಅಂಗವಾಗಿ ಸಂವಿಧಾನದ ಮತ್ತು ಪ್ರಜಾ ಪ್ರಭುತ್ವದ ರಕ್ಷಣೆಗಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿ.೬ ರಂದು `ದಲಿತರ ಸಾಂಸ್ಕೃತಿಕ ಪ್ರತಿರೋಧ’ ಎಂಬ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ರಾಜ್ಯ ಹಿರಿಯ ಮುಖಂಡ ಎನ್.ಮುನಿಸ್ವಾಮಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹಾಗೂ ಸ್ವಾತಂತ್ರ‍್ಯ, ಸಮಾನತೆ, ಸಹೋ ದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ನಾಶ ಮಾಡುತ್ತಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸರ್ವಾಧಿಕಾರಿ ದುರಾಡಳಿತದ ವಿರುದ್ಧ ಡಿ.೬ಕ್ಕೆ ಸಮಾ ವೇಶ ಆಯೋಜಿಸ ಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನವರು ಸಂವಿಧಾನವನ್ನು ಬದಲಾಯಿಸುವ ಹಠ ತೊಟ್ಟಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಾಯಿಸುವ ಮಾತುಗಳನ್ನು ಹೇಳುತ್ತಿದ್ದಾರೆ. ಇದರ ವಿರುದ್ಧ ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಮೆರವಣಿಗೆ, ಹೋರಾಟಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ಭಾರತ ದೇಶಕ್ಕೆ ಕೊಟ್ಟಿದ್ದಾರೆ. ಈ ಸಂವಿಧಾನದಿ0ದಲೇ ಸರ್ವರಿಗೂ ಸಮಾನವಾದ ಹಕ್ಕು ಸವಲತ್ತುಗಳನ್ನು ನೀಡಿದೆ. ಆದರೆ ಇದನ್ನು ಸಹಿಸದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಜನರ ಹಕ್ಕುಗಳನ್ನು ಕಿತ್ತೆಸೆದು ಸಂವಿಧಾನದ ಆಶಯಗಳನ್ನು ಬದಲಾಯಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ಮತ್ತು ಇಡೀ ದೇಶದಲ್ಲಿ ಜಾತಿ, ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ಜನರ ಭಾವನೆಗಳನ್ನು ಕೆರಳಿಸಿ, ಸಮಾಜವನ್ನು ವಿಭಜಿಸುವ ಪ್ರಕ್ರಿಯೆಯಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ತೊಡಗಿಸಿಕೊಂಡಿವೆ. ಉಡುಗೆ ತೊಡುಗೆ, ಆಹಾರ ಪದ್ಧತಿ, ಸಾಹಿತ್ಯ ಸಿನಿಮಾ, ನಾಟಕ, ಕವಿತೆ ಪ್ರತಿಯೊಂದನ್ನು ಅವರು ನಿಯಂತ್ರಿಸುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಸರ್ಕಾರ ನೇರವಾಗಿ ಸರ್ಕಾರಿ ಮತ್ತು ಸಹಕಾರಿ ಕ್ಷೇತ್ರದ ಉದ್ದಿಮೆಗಳನ್ನು ಹಾಗೂ ಸಾರ್ವಜನಿಕ ಆಸ್ತಿಗಳನ್ನೆಲ್ಲ ಕಾರ್ಪೊ ರೇಟ್ ಕಂಪನಿಗಳಿಗೆ ಒಪ್ಪಿಸುತ್ತಿದೆ. ಒಂದೆಡೆ ಮೀಸಲಾತಿಯ ಅಸ್ತಿತ್ವವನ್ನೆ ನಾಶಗೊಳಿಸಿ, ಮತ್ತೊಂದೆಡೆ ಮೀಸಲಾತಿ ಹೆಚ್ಚಳದ ನಾಟಕವಾಡುತ್ತಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಿದೆ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ. ಜನರಿಂದ ಸಂಗ್ರಹಿಸಿದ ಜಿಎಸ್‌ಟಿ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯ ಸಾಂಸ್ಕೃತಿಕ ಸಂಚಾಲಕ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ೬೬ ನೇ ಪರಿನಿಬ್ಬಾಣ ದಿನದ ನಿಮಿತ್ತವಾಗಿ ಬೆಂಗಳೂರಿನಲ್ಲಿ ಆಯೋಜಿಸಿರುವ `ದಲಿತರ ಸಾಂಸ್ಕೃತಿಕ ಪ್ರತಿರೋಧ’ ಎಂಬ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಗಂಗಪ್ಪ, ಸಂಘಟನಾ ಸಂಚಾಲಕ ನಾರಾಯಣಸ್ವಾಮಿ, ಆನಂದ್ ಮತ್ತಿತರರು ಇದ್ದರು.