Thursday, 12th December 2024

ಗೂಳೂರು ಮಹಾಗಣಪತಿ ವಿಸರ್ಜನೆ

ತುಮಕೂರು: ಐತಿಹಾಸಿಕ ಪ್ರಸಿದ್ಧ ಗೂಳೂರು ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು.
ಬಲಿಪಾಢ್ಯಮಿಯಂದು ಪ್ರತಿಷ್ಠಾಪನೆಯಾಗಿ ಆರಂಭವಾದ ಗೂಳೂರು ಗಣಪನ ಪೂಜಾ ಕೈಂಕರ್ಯಗಳು ಕಾರ್ತಿಕ ಮಾಸದಲ್ಲಿ ಸಂಪೂರ್ಣಗೊಂಡು, ಸಕಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೂಳೂರು ಕೆರೆಯಲ್ಲಿ ವರ್ಣರಂಜಿತ ಸಿಡ್ಡಿಮದ್ದಿನ ಅಬ್ಬರದ ನಡುವೆ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಎರಡು ದಿನಗಳ ಕಾಲ ನಡೆದ ಗೂಳೂರು ಗಣೇಶ ಜಾತ್ರೆಯಲ್ಲಿ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಶನಿವಾರ ರಾತ್ರಿ ಊರಿನ ಯಜಮಾನರ ಮನೆಯಿಂದ ನಂದಿಧ್ವಜ ಮತ್ತು ಕರಡಿ ವಾದ್ಯದೊಂದಿಗೆ ಗಣಪತಿ ದೇವಾಲಯಕ್ಕೆ ಕಳಸ ತಂದು ಮಹಾಗಣಪತಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ಹೊನ್ನೇನಹಳ್ಳಿಯ ಭೋಮಿ ಸಮುದಾಯ ಸೇರಿದಂತೆ ಗ್ರಾಮದ ೧೮ ಕೋಮಿನ ಜನರು ಒಗ್ಗೂಡಿ ಮಹಾಗಣಪತಿಯನ್ನು ದೇವಾಲಯದಿಂದ ಹೊರತಂದು  ಸರ್ವಾಲಂಕೃತ ವಾಹನದಲ್ಲಿ ಕೂರಿಸಿ ಮಧ್ಯರಾತ್ರಿವರೆಗೂ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ನಂತರ ಭಾನುವಾರ  ಜಾನಪದ ಕಲಾತಂಡದಿಂದ ನಂದಿ, ನವಿಲು,  ನಾದಸ್ವರ, ಕರಡಿ ಮಜಲು, ನಾಸಿಕ್ ಡೋಲ್, ನಂದಿಕೋಲು, ಕೀಲು ಕುದುರೆ, ಬೊಂಬೆ ಕುಣಿತ, ವೀರಭದ್ರನ ಕುಣಿತ, ಡೊಳ್ಳುಕುಣಿತ, ಪೂಜಾಕುಣಿತ, ಸೋಮನ ಕುಣಿತದಂತಹ ಜನಪದ ಕಲಾತಂಡಗಳ ಜತೆಗೆ ಆಕರ್ಷಕ ಬಾಣ ಬಿರುಸು, ಸಿಡಿಮದ್ದಿನ ಸದ್ದಿನೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಣೇಶಮೂರ್ತಿಯ ಮೆರವಣಿಗೆ ನಡೆಸಲಾಯಿತು.  ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಗ್ರಾಮದ ಜನತೆ ಮತ್ತು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿ ವಿಘ್ನೇಶ್ವರಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.
ವೈಭವೋಪೇತ ಮೆರವಣಿಗೆಯಲ್ಲಿ ಗೂಳೂರು ಕೆರೆ ಬಳಿ ಸಾಗಿದ ಗಣೇಶಮೂರ್ತಿಯನ್ನು ಆಕರ್ಷಕ ವರ್ಣರಂಜಿತ ಸಿಡ್ಡಿಮದ್ದು ಸಿಡಿಸಿ ಸಂಭ್ರಮಿಸಿದ ನಂತರ ಭಕ್ತಾದಿಗಳ ಹರ್ಷೋದ್ಗಾರದ ನಡುವೆ ಮಹಾಗಣಪತಿ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸಲಾಯಿತು.  ಗೂಳೂರು ಶ್ರೀ ಮಹಾಗಣಪತಿ ಭಕ್ತಮಂಡಳಿಯ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ವಿಸರ್ಜನಾ ಮಹೋತ್ಸವದಲ್ಲಿ ನಾಡಿನ ವಿವಿಧೆಡೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.