Saturday, 14th December 2024

ವಕೀಲರ ವೃತ್ತಿ ಉಜ್ವಲವಾಗಿರಲಿ,ಕಕ್ಷಿದಾರರ ನಂಬಿಕೆಗೆ ಜೀವತುಂಬಲಿ : ನ್ಯಾ. ಕೆ.ಬಿ.ಶಿವಪ್ರಸಾದ್

ಚಿಕ್ಕಬಳ್ಳಾಪುರ : ಸಂವಿಧಾನ ದಿನಾಚರಣೆಯ ದಿವಸ ಕಾನೂನು ಪದವಿ ವಿದ್ಯಾರ್ಥಿಗಳಿಗೆ ೨೦೨೨-೨೩ನೇ ಸಾಲಿನ ಶೈಕ್ಷಣಿಕ ತರಗತಿಗಳು ಪ್ರಾರಂಭವಾಗುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶುಭ ಸೂಚಕವಾಗಿದೆ.ಮುಂದಿನ ದಿನಗಳಲ್ಲಿ ನಿಮ್ಮ ವಕೀಲರ ವೃತ್ತಿ ಉಜ್ವಲವಾಗಿರಲಿ ಕಕ್ಷಿದಾರರ ನಂಬಿಕೆಗೆ ಜೀವತುಂಬಲಿ, ಸಂವಿಧಾನದ ಪಾವಿತ್ರö್ಯತೆ ಉಳಿಯಲಿ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಬಿ.ಶಿವಪ್ರಸಾದ್ ಹೇಳಿದರು

ನಗರದ ವಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕೆಂಪೇಗೌಡ ಕಾನೂನು ಮಹಾವಿದ್ಯಾಲಯ ಕಾಲೇಜು ವತಿಯಿಂದ ಆಯೋಜಿಸಿದ್ದ “ಭಾರತ ಸಂವಿಧಾನ ದಿನಾಚರಣೆ”ಯನ್ನು ಹಾಗೂ ವಿದ್ಯಾರ್ಥಿಗಳ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದರು.

ಸಂವಿಧಾನದ ರಚನೆಯಲ್ಲಿ ಕರುಡು ಸಮಿತಿಯ ಅಧ್ಯಕ್ಷರಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ಇದೇ ವಕೀಲಿ ವೃತ್ತಿಯಲ್ಲಿದ್ದವರು. ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕೂಡ ವಕೀಲರಾಗಿದ್ದವರು. ಸಂವಿಧಾನಕ್ಕೆ ಏನಾದರೂ ಧಕ್ಕೆ ಬರುವ ಸಂಭ ವಿದ್ದಾಗ ಅದರ ರಕ್ಷಣೆಯಲ್ಲಿ ವಕೀಲರೇ ಮುಂದಾಗಿರುತ್ತಾರೆ. ಅರ್ಚಕರಾದವರಿಗೆ ವೇದ ಉಪನಿಷತ್ ಎಷ್ಟೋ ಮುಖ್ಯವೋ ವಕೀಲರಿಗೆ ಸಂವಿಧಾನ ಅಷ್ಟೇ ಮುಖ್ಯ. ವಕೀಲ ವೃತ್ತಿಯೆಂಬುದು ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುವ ಸಂವಿಧಾನಿಕ ಕರ್ತವ್ಯವಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಸಂವಿಧಾನದ ಮುನ್ನುಡಿ ಬೋಧಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಜೆ ಮಿಸ್ಕಿನ್ ಇಂದಿನ ಕಾನೂನು ವಿದ್ಯಾರ್ಥಿಗಳೇ ಮುಂದಿನ ದಿನಗಳಲ್ಲಿ ವಕೀಲರುಗಳಾಗಿ ಕೆಲಸ ನಿರ್ವಹಿಸುವ ನೀವು ನ್ಯಾಯಾಲಯದ ಮೂಲ ಮಂತ್ರವಾದ ಸತ್ಯ ಮೇವ ಜಯತೇ ಎಂಬ ಘೋಷವಾಕ್ಯದಂತೆ ಅರ್ಥಪೂರ್ಣವಾಗಿ ಕೆಲಸ ಮಾಡಬೇಕು. ಹಾಗೆಯೇ ನಾಗರೀಕತೆ, ತಾಂತ್ರಿಕತೆ ಅಭಿವೃದ್ಧಿ ಹೊಂದಿದAತೆ ಹೊಸಹೊಸ ಅಪರಾಧಗಳು ಕಂಡುಬರುತ್ತಿದ್ದು ಅವುಗಳನ್ನು ತಡೆಗಟ್ಟಲು ಎದುರಿಸಲು ಗಂಭೀರ ಅಧ್ಯಯನ ಬೇಕು. ಕಾನೂನು ಅರಿವು ಎಲ್ಲರಿಗೂ ಇರುವುದಿಲ್ಲ, ವಿಶೇಷವಾಗಿ ಅನಕ್ಷರಸ್ಥರಲ್ಲಿ ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವು ಕಾರ್ಯನಿರ್ವಹಿಸುತ್ತಿದೆ. ಕಾನೂನು ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸಲು ಪ್ರಾಧಿಕಾರ ಅವಕಾಶ ಮಾಡಿಕೊಡುತ್ತಿದ್ದು, ಕಾನೂನು ವಿದ್ಯಾರ್ಥಿಗಳಾದ ನೀವೂ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ವಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮಾತನಾಡಿ, ಕೆಂಪೇಗೌಡ ಕಾನೂನು ಕಾಲೇಜು ಸದಾ ಕಾನೂನು ಸೇವೆಗಳ ಪ್ರಾಧಿಕಾರದ ಜೊತೆ ಕಾರ್ಯನಿರ್ವಹಿಸುತ್ತಿದ್ದು, ನೂತನ ವಿದ್ಯಾರ್ಥಿಗಳ ತರಗತಿ ಪ್ರಾರಂಭದ ಕಾರ್ಯಕ್ರಮಕ್ಕೆ ಆಗಮಿಸಿ ಸಲಹೆ ನೀಡಿದ್ದು ನಮಗೆ ತುಂಬಾ ಸಂತೋಷವಾಗಿದೆ.ಹಳ್ಳಿಗಾಡಿನ ಕಟ್ಟಕಡೆ ವ್ಯಕ್ತಿಗೆ ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ನಮ್ಮ ಕಾನೂನು ಕಾಲೇಜು ವಿದ್ಯಾರ್ಥಿಗಳು ಪ್ರಾಧಿಕಾರದ ಜೊತೆ ಸದಾ ಇರಬೇಕೆಂದು ತಿಳಿಸಿದರು.

ಇದೇವೇಳೆ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಸಮಿತಿ ಅಧ್ಯಕ್ಷ ಮೋಹನ್, ಉಪಾಧ್ಯಕ್ಷ ಚನ್ನಪ್ಪರೆಡ್ಡಿ, ಪ್ರಾಂಶುಪಾಲೆ ಶೋಭಾ ಮತ್ತು ಭೋದಕ, ಭೋಧಕತೇರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.