Saturday, 23rd November 2024

ನಿಷ್ಠೆ ಹೊಂದಿದ್ದರೂ ನಿರಾಕರಣೆಗೊಳಗಾದ ಮುತ್ಸದ್ದಿ

ಶಶಿಧರ ಹಾಲಾಡಿ

ಈವಾರ ನಮ್ಮನ್ನು ಅಗಲಿದ ಪ್ರಣವ್ ಮುಖರ್ಜಿಯವರ ರಾಜಕೀಯ ಜೀವನ ಸುದೀರ್ಘ ಮತ್ತು ಯಶಸ್ವಿ. ದೇಶದ ಅತ್ಯುನ್ನತ ಹುದ್ದೆ ಎನಿಸಿದ ರಾಷ್ಟ್ರಪತಿಯ ಸ್ಥಾನದಲ್ಲಿ ಸಮಚಿತ್ತದಿಂದ, ಸಮರ್ಥವಾಗಿ ಕಾರ್ಯನಿರ್ವಹಿಸಿದ ಪ್ರಣಬ್ ಮುಖರ್ಜಿಯವರದು ನಮ್ಮ ದೇಶದ ರಾಜಕಾರಣದಲ್ಲಿ ಬಹು ದೊಡ್ಡ ಹೆಸರು. ಕಾಂಗ್ರೆಸ್ ಪಕ್ಷದ ಮೂಲಕ ಬೆಳೆದವರಾದರೂ, ಬಿಜೆಪಿ ಸರಕಾರ ದಿಂದ ಭಾರತ ರತ್ನ ಪ್ರಶಸ್ತಿಗೆ ಭಾಜನರಾದದ್ದು ಅವರ ಜೀವನ ಅಮೂಲ್ಯ ಕ್ಷಣ.

ಪ್ರಣಬ್ ಮುಖರ್ಜಿಯವರ ತಂದೆ ಕಮದಾ ಶಂಕರ್ ಮುಖರ್ಜಿಯವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬ್ರಿಟಿಷ್ ಸರಕಾರ ಅವರನ್ನು ಸುಮಾರು ಹತ್ತು ವರ್ಷಗಳ ಕಾಲ ಜೈಲಿನಲ್ಲಿಟ್ಟಿತ್ತು. ಸ್ವಾತಂತ್ರ್ಯ ದೊರೆತ ನಂತರ, ಬಂಗಾಳದಲ್ಲಿ ಚುನಾವಣೆ ಗೆಲ್ಲುವ ಮೂಲಕ, ಸಕ್ರಿಯ ರಾಜಕಾರಣಿ ಎನಿಸಿದ್ದ ಅವರು, ಮಗ ಪ್ರಣಬ್‌ಗೆ ರೋಲ್ ಮಾಡೆಲ್ ಎನ್ನಬಹುದು. ರಾಜಕಾರಣದ ಪಟ್ಟುಗಳನ್ನು, ಸಂಕೀರ್ಣತೆಗಳನ್ನು ಬಾಲ್ಯದಿಂದಲೇ ಕಂಡಿದ್ದ ಪ್ರಣಬ್ ಮುಖರ್ಜಿ, ಆ ಹಾದಿಯಲ್ಲಿ ಯಶ ಗಳಿಸಲು ಅಗತ್ಯ ಎನಿಸುವ ಎಲ್ಲಾ ವಿದ್ಯೆಗಳನ್ನು ಬಲ್ಲವರಾದರು. ಕಾಂಗ್ರೆಸ್ ಪಕ್ಷದ ಆಶ್ರಯದಲ್ಲ ಬಂಗಾಳದಿಂದ ದೆಹಲಿ ಸೇರಿದ ಪ್ರಣಬ್ ಮುಖರ್ಜಿ, ಹಲವು ಸರಕಾರಗಳಲ್ಲಿ ವಿವಿಧ ಇಲಾಖೆಯ ಮಂತ್ರಿ ಯಾಗಿ ವಹಿಸಿದ ಪಾತ್ರ ಗುರುತರವಾದದ್ದು.

ಬಂಗಾಳದ ಸ್ವಾತಂತ್ರ್ಯ ಹೋರಾಟಗಾರನ ಪುತ್ರನಾದ ಪ್ರಣಬ್, ರಾಷ್ಟ್ರಪತಿ ಭವನದ ನಿವಾಸಿಯಾದ ಕ್ಷಣವು, ಆ ಕುಟುಂಬದ ಅತಿಮೌಲ್ಯಯುತ ಕ್ಷಣವೆಂಬುದರಲ್ಲಿ ಎರಡು ಮಾತಿಲ್ಲ. ನಂತರದ ನಿವೃತ್ತ ಜೀವನದಲ್ಲಿ ಪ್ರಣಬ್ ಮುಖರ್ಜಿಯವರು ಭಾರತರತ್ನ ಪ್ರಶಸ್ತಿಗೆ ಭಾಜನರಾಗುವ ಮೂಲಕ, ತಮ್ಮ ಯಶಸ್ವಿ ಜೀವನದ ಉನ್ನತ ಸ್ಥಾನವನ್ನು ತಲುಪಿದರು. ಅವರ ಜೀವನದ ಈ ಯಶಸ್ಸಿಗೆ ಅವರ ಬುದ್ಧಿಮತ್ತೆ, ಚಾತುರ್ಯ, ನೆನಪಿನ ಶಕ್ತಿ, ಚಾಣಾಕ್ಷತನ, ಮುತ್ಸದ್ದಿತನ ಮತ್ತು ಸಮಕಾಲೀನರೊಂದಿಗೆ
ಉತ್ತಮ ಬಾಂಧವ್ಯ ಇರಿಸಿಕೊಳ್ಳುವ ಜಾಣ್ಮೆ ಕಾರಣ.

ಕೈ ತಪ್ಪಿದ ಪ್ರಧಾನಿ ಹುದ್ದೆ: ಪ್ರಣಬ್ ಮುಖರ್ಜಿಯವರಿಗೆ ದಕ್ಕದ ಒಂದೇ ಒಂದು ಸ್ಥಾನವೆಂದರೆ, ಪ್ರಧಾನ ಮಂತ್ರಿ ಹುದ್ದೆ. ಎರಡು ಬಾರಿ ಅವರು ಪ್ರಧಾನಿಯಾಗುವ ಸಾಧ್ಯತೆಯಿಂದ ವಂಚಿತರಾದರು. ಅವರು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದ ಸ್ವಾಮಿನಿಷ್ಠೆಯು, ಹಲವು ಬಾರಿ ಮಂತ್ರಿಿಹುದ್ದೆೆಯನ್ನು ಅವರಿಗೆ ದೊರೆಯುವಂತೆ ಮಾಡಿದರೂ, ಪ್ರಧಾನಿ ಹುದ್ದೆಯನ್ನು ಕೊಡಿಸುವಲ್ಲಿ ವಿಫಲವಾಯಿತೆಂದೇ ಹೇಳಬೇಕು. ಮೊದಲಬಾರಿ ಅವರು ಪ್ರಧಾನಿಯಾಗುವ ಸಾಧ್ಯತೆ ಒದಗಿ ಬಂದದ್ದು 1984ರಲ್ಲಿ.

ಅದಾಗಲೇ ನೆಹರೂ ಕುಟುಂಬದ ಆಪ್ತರಾಗಿ ಮತ್ತು ಇಂದಿರಾಗಾಂಧಿಯವರ ಬಲಗೈ ಬಂಟರಾಗಿ ಗುರುತಿಸಿಕೊಂಡಿದ್ದ ಪ್ರಣವ್, ಒಬ್ಬ ಅನುಭವಿ ಮತ್ತು ಸಮತೂಕದ ಆಡಳಿತಗಾರನಾಗಿ, ದಕ್ಷ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. 1984ರಲ್ಲಿ ಇಂದಿರಾಗಾಂಧಿಯವರು ಕೊಲೆಯಾದಾಗ, ಪ್ರಧಾನಿ ಸ್ಥಾನದ ಜವಾಬ್ದಾರಿಯನ್ನು ಹೊರಲು, ಪ್ರಣವ್ ಮುಖರ್ಜಿಯಂತಹ ಯೋಗ್ಯ ಮತ್ತು ಅರ್ಹ ಅಭ್ಯರ್ಥಿ ಇನ್ನೊಬ್ಬರಿರಲಿಲ್ಲ.

ಆದರೆ, ಆ ಸಂದರ್ಭದಲ್ಲಿ ತರಾತುರಿಯಲ್ಲಿ ರಾಜೀವ್ ಗಾಂಧಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲಾಯಿತು. ಮಾತ್ರವಲ್ಲ, ಇಂದಿರಾ ಗಾಂಧಿಯವರ ಕೊಲೆಯಾದ ಕೂಡಲೆ, ಮುಖರ್ಜಿಯವರು ಪ್ರಧಾನ ಮಂತ್ರಿ ಹುದ್ದೆಗೆ ಆಸೆಪಟ್ಟರೆಂಬ ಅನುಮಾನದ ಮೇಲೆ, ಜೀವಮಾನದುದ್ದಕ್ಕೂ ರಾಜೀವ್ ಗಾಂಧಿಯವರು ಅವರನ್ನು ಮೂಲೆಗುಂಪು ಮಾಡಿಬಿಟ್ಟರು! ಇಂದಿರಾಗಾಂಧಿಯವರ ವಿಶ್ವಾಸ ಗಳಿಸಿ, 1969ರಿಂದ 1984ರ ತನಕ ವಿವಿಧ ಪ್ರಮುಖ ಹುದ್ದೆ ಮತ್ತು ಮಂತ್ರಿಿಸ್ಥಾಾನ
ದಲ್ಲಿದ್ದ ಮುಖರ್ಜಿಯವರಿಗೆ, 1984ರ ರಾಜೀವ್ ಗಾಂಧಿ ಸರಕಾರದಲ್ಲಿ ಯಾವ ಸ್ಥಾನವೂ ದೊರೆಯಲಿಲ್ಲ!

ಅವರಿಗೆ ಅಕ್ಷರಶಃ ಗೇಟ್‌ಪಾಸ್ ನೀಡಲಾಗಿತ್ತು. ತಮ್ಮ ಊರಿಗೆ ವಾಪಸಾದ ಮುಖರ್ಜಿ ಹೊಸ ಪಕ್ಷ ಕಟ್ಟಿ, ವಿಫಲರಾದರು. 1984ರಿಂದ ಹನ್ನೆರಡು ವರ್ಷಗಳ ತನಕ ಮುಖರ್ಜಿಯವರುಗೆ ಒಂದು ರೀತಿಯ ವನವಾಸ. ಅದೆಂತಹ ವನವಾಸವೆಂದರೆ, ಸಾಮಾನ್ಯ ರಾಜಕಾರಣಿಗಳು ಮತ್ತೆ ಮೇಲೇಳಲಾಗದಂತಹ ಹೊಡೆತ ಅದು.

ತಾವು ಯಾವ ಕುಟುಂಬಕ್ಕೆ ನಿಷ್ಠರಾಗಿದ್ದರೋ, ಆ ನೆಹರೂ ಕುಟುಂಬವೇ ಅವರನ್ನು ದೂರಮಾಡಿದಂತಹ ಆಘಾತ.
ರಾಜೀವ್ ಗಾಂಧಿಯವರ ವಿಶ್ವಾಸ ಗಳಿಸಲು ಪ್ರಣವ್ ಮುಖರ್ಜಿಯವರಿಗೆ ಕೊನೆಗೂ ಸಾಧ್ಯವಾಗಲಿಲ್ಲ. 1991ರಲ್ಲಿ ರಾಜೀವ್ ಗಾಂಧಿಯವರನ್ನು ಶ್ರೀಲಂಕಾದ ಭಯೋತ್ಪಾಾದಕರು ಕೊಲೆ ಮಾಡಿದ ನಂತರವಷ್ಟೇ, ಕಾಂಗ್ರೆಸ್‌ನಲ್ಲಿ ಮುಖರ್ಜಿಯವರಿಗೆ ಪ್ರಮುಖ ಸ್ಥಾನ ದೊರೆಯಿತು. ಪ್ರಣವ್ ಮುಖರ್ಜಿಯವರು ಪ್ರಧಾನ ಮಂತ್ರಿ
ಯಾಗುವ ಸಾಧ್ಯತೆ ಇನ್ನೊಮ್ಮೆ ಕೂಡಿಬಂದಿದ್ದು 2004ರಲ್ಲಿ. ವಾಜಪೇಯಿಯವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಬಿಜೆಪಿಯನ್ನು ಕಾಂಗ್ರೆಸ್ ಅನಿರೀಕ್ಷಿತವಾಗಿ ಸೋಲಿಸಿಬಿಟ್ಟಿತ್ತು. ಚುನಾವಣೆಗೆ ಮುಂಚೆ ಪ್ರಧಾನಿ ಅಭ್ಯರ್ಥಿಯನ್ನು ಕಾಂಗ್ರೆಸ್ ಸೂಚಿಸಿರಲಿಲ್ಲ.
ಕಾಂಗ್ರೆಸ್ ಗೆದ್ದಾಗ ಸೋನಿಯಾ ಗಾಂಧಿಯವರ ಮನಸ್ಸಿನಲ್ಲೇನಿತ್ತೋ ಸ್ಪಷ್ಟವಿರಲಿಲ್ಲ. ಪ್ರಣಬ್ ಮುಖರ್ಜಿಯವರು ಸೋನಿಯಾ ಗಾಂಧಿಯವರ ಆಪ್ತರು ಮತ್ತು ಅತ್ಯಂತ ಅನುಭವಿ ರಾಜಕಾರಣಿ. ಹಲವು ಬಾರಿ ಮಂತ್ರಿಯಾಗಿ ಪಳಗಿದ ಹಿರಿಯರು. 2004ರ ಆ ಕ್ಷಣದಲ್ಲಿ ತಾನು ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಬಹುದೆಂಬ ನಿರೀಕ್ಷೆ, ಆಸೆ, ಆತ್ಮವಿಶ್ವಾಾಸ ಎಲ್ಲವೂ ಪ್ರಣಬ್
ಮುಖರ್ಜಿಯವರಲ್ಲಿತ್ತು. ಜತೆಗೆ, ಅದೇ ಮೊತ್ತ ಮೊದಲಬಾರಿ ಚುನಾವಣೆ ಎದುರಿಸಿ, ಲೋಕಸಭೆಗೆ ಆಯ್ಕೆಯಾಗಿದ್ದರು!
ತಮ್ಮ ಆತ್ಮಕಥೆ, ‘ದ ಕೋಯಲಿಷನ್ ಇಯರ್ಸ್ 1996-2012’ ಪುಸ್ತಕದಲ್ಲಿ ಆ ಸಂದರ್ಭವನ್ನು ಮುಖರ್ಜಿ ಹೀಗೆ ಬರೆದುಕೊಂಡಿದ್ದಾರೆ. ‘ಸೋನಿಯಾ ಗಾಂಧಿಯವರು ಮನಮೋಹನ ಸಿಂಗ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಬಹುದೆಂದು ತಿಳಿದಿದ್ದೆ. ಆ ರೀತಿಯಾದರೆ, ನನ್ನನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಬಹುದೆಂದೂ ತಿಳಿದಿದ್ದೆ.’ ಆದರೆ, ಸೋನಿಯಾ ಅವರ ಯೋಜನೆ ಬೇರೆಯಾಗಿತ್ತು.

ಅವರು ಮನಮೋಹನ ಸಿಂಗ್ ಅವರನ್ನು ಪ್ರಧಾನಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸಿದರು. ಹಲವು ಬಾರಿ ಮಂತ್ರಿಯಾಗಿ ಅನುಭವವಿದ್ದ, ಸ್ವತಂತ್ರವಾಗಿ ಯೋಚಿಸಬಲ್ಲ, ಕೆಲವು ಬಾರಿ ತಿರುಗಿ ವಾದ ಮಾಡುವ ತಾಕತ್ತು ಹೊಂದಿದ್ದ ಪ್ರಣಬ್ ಮುಖರ್ಜಿಯವರನ್ನು ಸೋನಿಯಾ ಗಾಂಧಿ, ಪ್ರಧಾನಿ ಹುದ್ದೆಯಿಂದ ದೂರವಿಟ್ಟರು. ನೆಹರೂ ಕುಟುಂಬದ ನಿಷ್ಠೆ ಇಲ್ಲಿ ಕೆಲಸ ಮಾಡಲಿಲ್ಲ.

ಮನಮೋಹನ್ ಸಿಂಗ್ ಸರಕಾರದಲ್ಲಿ, 2004ರಲ್ಲಿ ಪ್ರಣಬ್ ಮುಖರ್ಜಿಯವರಿಗೆ ದೊರೆತದ್ದು ರಕ್ಷಣಾ ಮಂತ್ರಿಯ ಸ್ಥಾನ. ಇದೇ ಮನಮೋಹನಸಿಂಗ್ ಅವರು ರಿಸರ್ವ್ ಬ್ಯಾಾಂಕ್ ಗವರ್ನರ್ ಆಗಿ ಆಯ್ಕೆಗೊಂಡಾಗ, ಪ್ರಣಬ್ ಮುಖರ್ಜಿಯವರು ವಿತ್ತ ಮಂತ್ರಿಯಾಗಿದ್ದರು. ಅಂದರೆ, ಮನಮೋಹನ ಸಿಂಗ್ ಅವರು ಇವರ ಕೈಕೆಳಗಿನ ಅಧಿಕಾರಿಯಾಗಿದ್ದರು. ಈಗ ಅದೇ ಸಿಂಗ್ ಅವರ ಕೈಕೆಳಗೆ ಮಂತ್ರಿ ಸ್ಥಾನವನ್ನು ಮುಖರ್ಜಿ ನಿಭಾಯಿಸುವಂತಾಯಿತು.

2012ರಲ್ಲಿ ಪ್ರಣಬ್ ಮುಖರ್ಜಿಯವರು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು ಅವರ ಜೀವನದ ಪ್ರಮುಖ ಕ್ಷಣ. ಅದರಲ್ಲೂ ಸಣ್ಣ ಮಟ್ಟದ ರಾಜಕೀಯ ನಡೆದು, ಮುಖರ್ಜಿಯವರನ್ನು ದೂರವಿಡುವ ಪ್ರಯತ್ನ ನಡೆದಿತ್ತು. ಆಗ ಅವರು ವಿತ್ತ ಸಚಿವರಾಗಿದ್ದರು. ತಮ್ಮನ್ನೇ ರಾಷ್ಟ್ರಪತಿ ಅಭ್ಯರ್ಥಿಯನ್ನಾಾಗಿ ಕಾಂಗ್ರೆೆಸ್ ಸೂಚಿಸುವಂತೆ ಮುಖರ್ಜಿ ಅಂದು ಸಾಕಷ್ಟು ಗ್ರೌಂಡ್ ವರ್ಕ್ ಮಾಡಿ, ಅದರಲ್ಲಿ ಯಶಗಳಿಸಿದರು. ರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿ, ಎದುರಾಳಿ ಸಂಗ್ಮಾಾ ಅವರನ್ನು ದೊಡ್ಡ
ಅಂತರದಲ್ಲಿ ಸೋಲಿಸಿ, ರಾಷ್ಟ್ರಪತಿ ಭವನವನ್ನು ಪ್ರವೇಶಿಸಿದರು. ಬುದ್ಧಿವಂತರ ರಾಜ್ಯ ಎನಿಸಿದ್ದ ಬಂಗಾಳದಿಂದ ಆಯ್ಕೆಯಾದ ಮೊದಲ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.

ಗುಮಾಸ್ತ – ಉಪನ್ಯಾಸಕ – ಪತ್ರಕರ್ತ: 1935ರಲ್ಲಿ ಬಂಗಾಲದಲ್ಲಿ ಜನಿಸಿದ ಪ್ರಣಬ್ ಮುಖರ್ಜಿಯವರು, ಕೋಲ್ಕತಾದಲ್ಲಿ ವಿದ್ಯಾಭ್ಯಾಸ ಮಾಡಿ, ಎಂ.ಎ. ಮತ್ತು ಎಲ್.ಎಲ್.ಬಿ. ಪದವಿಗಳನ್ನು ಪಡೆದರು. ಮೊದಲಿಗೆ ಗುಮಾಸ್ ಆಗಿ ವೃತ್ತಿ ಜೀವನ ಆರಂಬಿಸಿ, ನಂತರ ಉಪನ್ಯಾಸಕರಾಗಿಯೂ ಕೆಲಸ ಮಾಡಿದರು. ಈ ನಡುವೆ ‘ದೇಶಿರ್ ಡಾಕ್’ ಎಂಬ ಪತ್ರಿಕೆಯಲ್ಲಿ ಪತ್ರಕರ್ತನಾಗಿ ದುಡಿದ ಅನುಭವ. ಆದರೆ ಅವರನ್ನು ರಾಜಕೀಯ ಜೀವನ ಕೈಬೀಸಿ ಕರೆಯುತ್ತಿತ್ತು.

ತಂದೆ ಎಂತಿದ್ದರೂ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಬಂಗಾಳದ ವಿಧಾನ ಸಭೆಯ ಸದಸ್ಯರಾಗಿದ್ದವರು. ರಾಜಕಾರಣಿಯ ಮಗ ರಾಜಕೀಯವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ ಕ್ಷಣ ಅದು. ‘ಬಾಂಗ್ಲಾ ಕಾಂಗ್ರೆಸ್’ನಲ್ಲಿ ಸಕ್ರಿಯ ರಾಜಕಾರಣ ಆರಂಭಿಸಿದ ಪ್ರಣಬ್ ಮುಖರ್ಜಿಯವರ ಸಂಘಟನಾ ಚಾತುರ್ಯವನ್ನು ತೋರಲು 1969ರ ಮಿಡ್ನಾಾಪುರ ಲೋಕಸಭಾ ಉಪಚುನಾವಣೆಯು ಸುವರ್ಣಾವಕಾಶವನ್ನು ಒದಗಿಸಿತು. ಪಕ್ಷೇತರ ಅಭ್ಯರ್ಥಿ ಮತ್ತು ಹಿರಿಯ ರಾಜಕಾರಣಿ ವಿ.ಕೆ.ಕೃಷ್ಣ ಮೆನನ್ ಅವರು ಲೋಕಸಭೆಗೆ
ಆಯ್ಕೆಯಾದ ಚುನಾವಣೆ ಅದು. ಅಲ್ಲಿ ಬೆಳಕಿಗೆ ಬಂದ ಮುಖರ್ಜಿಯವರ ಪ್ರತಿಭೆ, ಇಂದಿರಾಗಾಂಧಿಯವರ ಗಮನ ಸೆಳೆಯಿತು. ‘ಬಾಂಗ್ಲಾ ಕಾಂಗ್ರೆಸ್’ನಿಂದ ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’ಗೆ ಸೇರಿದ ಮುಖರ್ಜಿಯವರನ್ನು ಮೊತ್ತ ಮೊದಲ ಬಾರಿ ರಾಜ್ಯಸಭಾ ಸದಸ್ಯರನ್ನಾಗಿ 1969ರಲ್ಲಿ ಆರಿಸಲಾಯಿತು.

ವಿಶೇಷವೆಂದರೆ, ಆ ನಂತರ ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವ ಅವಕಾಶ ಮುಖರ್ಜಿಯವರದ್ದು! 1975, 1981, 1993 ಮತ್ತು 1999ರಲ್ಲಿ ರಾಜ್ಯಸಭಾ ಸದಸ್ಯರಾಗುವ ಅವಕಾಶ. ಪ್ರಣಬ್ ಮುಖರ್ಜಿ ಯವರು ಮೊತ್ತ ಮೊದಲ ಬಾರಿ ಚುನಾವಣೆಯಲ್ಲಿ ಗೆದ್ದು ಲೋಕಸಭೆಗೆ ಆಯ್ಕೆಯಾಗಿದ್ದು 2004ರಲ್ಲಿ!

ಈ ನಿಟ್ಟಿನಲ್ಲಿ, ಅವರು ಒಬ್ಬ ಮಾಸ್ ಲೀಡರ್ ಅಲ್ಲ ಎಂಬ ಟೀಕೆಗೂ ಒಳಗಾಗಿದ್ದುಂಟು. 1969ರಿಂದ ಇಂದಿರಾಗಾಂಧಿಯವರ
ಆಪ್ತರಾಗಿ ಗುರುತಿಸಿಕೊಂಡ ಮುಖರ್ಜಿಯವರು, ಕೊನೆಯ ತನಕವೂ ಆ ಕುಟುಂಬಕ್ಕೆ ನಿಷ್ಠರಾಗಿದ್ದರು. ಇಂದಿರಾಗಾಂಧಿಯವರು ಚಿಕ್ಕಮಗಳೂರಿನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ, ಮುಖರ್ಜಿಯವರು ಇಲ್ಲಿಗೆ ಬಂದು, ಚುನಾವಣಾ ತಂತ್ರಗಳನ್ನು ರೂಪಿಸಿ, ಇಂದಿರಾಗಾಂಧಿಯವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಂಜಯ್ ಗಾಂಧಿಯ ಅಭಿಮಾನಿ: ನೆಹರೂ ಕುಟುಂಬಕ್ಕೆ ಪ್ರಣಬ್ ಮುಖರ್ಜಿ ತೋರಿದ ಸ್ವಾಮಿನಿಷ್ಠೆಯ ಪರಾಕಾಷ್ಟೆಯನ್ನು ಅವರ ಮತ್ತು ಸಂಜಯ್ ಗಾಂಧಿಯವರ ಬಾಂಧವ್ಯದಲ್ಲಿ ನೋಡಬಹುದು. ಯುವಕ ಸಂಜಯ್ ಗಾಂಧಿಯವರನ್ನು ಬಹುವಾಗಿ ಮೆಚ್ಚುತ್ತಿದ್ದ ಮುಖರ್ಜಿಯವರು, ಅವರ ರಾಜಕೀಯ ಭವಿಷ್ಯವನ್ನು ರೂಪಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಂಜಯ್ ನಡೆಸಿದ ನಾನಾ ರೀತಿಯ ಸಾಹಸಗಳಿಗೆ ಇವರ ಪ್ರೋತ್ಸಾಹವಿತ್ತು.

ಸಂಜಯ್ ಗಾಂಧಿಗಿಂತ ಹನ್ನೊಂದು ವರ್ಷ ಹಿರಿಯರಾದ ಪ್ರಣಬ್ ಮುಖರ್ಜಿಯವರು, ಆ ಉತ್ಸಾಹಿ ರಾಜಕಾರಣಿಗೆ ಫ್ರೆಂಡ್, ಫಿಲಾಸಫರ್ ಮತ್ತು ಗೈಡ್! 1977-80ರ ಅವಧಿಯಲ್ಲಿ ಅಧಿಕಾರ ನಡೆಸಿದ ಜನತಾ ಸರಕಾರವು, ತನ್ನ ಒಳಜಗಳಗಳಿಂದ ಕುಸಿದು ಬಿದ್ದು, 1980ರಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆೆ ಬಂದಾಗ, ಆ ಗೆಲುವಿಗೆ ಸಂಜಯಗಾಂಧಿಯವರ ಕೊಡುಗೆ ಅಪಾರ ಎಂದು ಮುಖರ್ಜಿ ಹೇಳಿದ್ದಾರೆ. ಸಕಾರಾತ್ಮಕ ಬದಲಾವಣೆ ತರುವ ಸಂಜಯ್ ಅವರ ಹಲವು ಯೋಚನೆಗಳು ಉತ್ತಮವಾಗಿದ್ದವು ಎಂದೂ ಹೊಗಳಿದ್ದಾರೆ.

1980ರಲ್ಲಿ ಸಂಜಯ್ ವಿಮಾನ ಅಪಘಾತದಲ್ಲಿ ಮೃತರಾದದ್ದು ಮುಖರ್ಜಿಯವರಿಗೆ ಆಘಾತ ತಂದಿತ್ತು. 1975ರಲ್ಲಿ ಇಂದಿರಾಗಾಂಧಿಯವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿಯನ್ನು ಹೇರಿ, ಪತ್ರಿಕಾ ಸ್ವಾತಂತ್ರ್ಯವನ್ನು ಹರಣ ಮಾಡಿ, ವಿರೋಧ ಪಕ್ಷದ ನಾಯಕರನ್ನು ಏಕಾಏಕಿ ಸೆರೆಮನೆಗೆ ತಳ್ಳಿದಾಗ, ಪ್ರಣಬ್ ಮುಖರ್ಜಿಯವರು ಇಂದಿರಾ ಗಾಂಧಿಯ ಬಲಗೈ ಬಂಟರಾಗಿದ್ದರು. 1973ರ ಸಚಿವ ಸಂಪುಟದಲ್ಲಿ ಮುಖರ್ಜಿಯವರು ಕೈಗಾರಿಕಾ ಅಭಿವೃದ್ಧಿಯ ಡೆಪ್ಯುಟಿ ಮಂತ್ರಿಯಾಗಿದ್ದರು ಮತ್ತು ಸಂಜಯ್ ಗಾಂಧಿಯ ಆಪ್ತರಾಗಿದ್ದರು. 1975-77ರ ನಡುವೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಂದಿರಾ ಮತ್ತು ಸಂಜಯಗಾಂಧಿಯವರಿಗೆ ಸಲಹೆ ನೀಡುತ್ತಿದ್ದ ಪ್ರಮುಖರಲ್ಲಿ ಮುಖರ್ಜಿಯವರೂ ಒಬ್ಬರು. 1977ರಲ್ಲಿ ಜನತಾ ಸರಕಾರ ನೇಮಿಸಿದ ಷಾ ಕಮಿಷನ್ ವರದಿಯಲ್ಲಿ ಮುಖರ್ಜಿಯವರ ಹೆಸರು ಸಹ ತಪ್ಪಿತಸ್ಥರ ಪಟ್ಟಿಿಯಲ್ಲಿ ಸೇರಿತ್ತು. ಆದರೆ, ಅಂತಹದ್ದೇನೂ ಇಲ್ಲ ಎಂದು ವಾದ ಮಾಡಿದ ಮುಖರ್ಜಿಯವರು, ನಂತರ ಶುದ್ಧ ಚಾರಿತ್ರ್ಯರಾಗಿ ಹೊರಬರುವಲ್ಲಿ ಸಫಲರಾದರು.

ತುರ್ತು ಪರಿಸ್ಥಿತಿಯ ಸಮಯದಲ್ಲಿ, ನಂತರ ಇಂದಿರಾ ಗಾಂಧಿಯವರು ಸೋತುಹೋದ ಸಮಯದಲ್ಲಿ ಮತ್ತು 1980ರ ಚುನಾವಣೆಗಳಲ್ಲಿ ಜತೆಯಾಗಿ ಹೆಗಲು ಕೊಟ್ಟು ನಿಭಾಯಿಸಿದ್ದಕ್ಕೆ ಪ್ರತಿಫಲವಾಗಿ, ಇಂದಿರಾಗಾಂಧಿಯವರು ಮುಖರ್ಜಿಯವರನ್ನು ವಿತ್ತ ಸಚಿವರನ್ನಾಗಿ ಆಯ್ಕೆ ಮಾಡಿದರು. ಆಗ ಮಖರ್ಜಿಯವರಿಗೆ ಕೇವಲ 47 ವರ್ಷ ವಯಸ್ಸು!

1984ರಲ್ಲಿ ಇಂದಿರಾಗಾಂಧಿಯವರ ಸಾವಿನ ನಂತರ, ರಾಜೀವ್ ಗಾಂಧಿಯವರು ಮುಖರ್ಜಿಯನ್ನು ದೂರ ಮಾಡಿದ ನಂತರ, 12 ವರ್ಷ ಮುಖರ್ಜಿಯವರು ಮೂಲೆಗುಂಪಾಗಿದ್ದು ನಿಜ. 1995ರಲ್ಲಿ ನರಸಿಂಹ ರಾವ್ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆಗೊಂಡ ಮುಖರ್ಜಿಯವರು ಹಿಂತಿರುಗಿ ನೋಡಿದ್ದೇ ಇಲ್ಲ. ಮುಂದೆ ಅರ್ಥಮಂತ್ರಿಯಾಗುವ ಅವಕಾಶ. ಈ ಸಮಯದಲ್ಲೇ ಸೋನಿಯಾ ಗಾಂಧಿಯವರ ರಾಜಕೀಯ ಜೀವನದಲ್ಲಿ ಮಾರ್ಗದರ್ಶನ ನೀಡಿ, ಅವರನ್ನು ಚಾಣಾಕ್ಷ ಕಿಂಗ್ ಮೇಕರ್ ಮಾಡಿದ ಕೀರ್ತಿ, ಜಾಣ್ಮೆ ಪ್ರಣಬ್ ಮುಖರ್ಜಿಯವರದ್ದು.

ರಾಷ್ಟ್ರಪತಿ ಭವನದಲ್ಲಿ: 2012ರಿಂದ 2017ರ ತನಕ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿಯವರು, ಆ ಸಮಯದಲ್ಲಿ ತಮ್ಮ ವರ್ಚಸ್ಸನ್ನ ಹೆಚ್ಚಿಸಿಕೊಂಡಿದ್ದು ನಿಜ. 2014ರಲ್ಲಿ ಆಯ್ಕೆಗೊಂಡ ಬಿಜೆಪಿ ಸರಕಾರದೊಂದಿಗೂ ಸಮತೂಕದ ಬಾಂಧವ್ಯವನ್ನು ರೂಢಿಸಿಕೊಂಡ ಪ್ರಣಬ್ ಮುಖರ್ಜಿಯವರು, ಎರಡನೆಯ ಬಾರಿ ರಾಷ್ಟ್ರಪತಿಯಾಗುವ ಅಭಿಲಾಷೆಯನ್ನೂ ಹೊಂದಿದ್ದರು. ಬಿಜೆಪಿಯ ರಾಮ್‌ನಾಥ್ ಕೋವಿಂದ್ 2017ರಲ್ಲಿ ರಾಷ್ಟ್ರಪತಿಯಾಗಿ ಆಯ್ಕೆೆಗೊಂಡ ನಂತರ, ಪ್ರಣಬ್ ಮುಖರ್ಜಿಯವರು ತಮ್ಮ ಚಟುವಟಿಕೆಗಳಿಗೆ ನಿವೃತ್ತಿ ಘೋಷಿಸಿದರು. ಆದರೆ, ಅವರ ಜೀವಮಾನದ ಸಾಧನೆಗಳು ಅಲ್ಲಿಗೇ ನಿಲ್ಲಲಿಲ್ಲ. ಒಂದು ಕಾಲದಲ್ಲಿ ನೆಹರೂ ಕುಟುಂಬದ ಅತಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪ್ರಣಬ್‌ದಾ, 2018ರಲ್ಲಿ ನಾಗಪುರದಲ್ಲಿರುವ
ಆರ್.ಎಸ್.ಎಸ್. ಮುಖ್ಯ ಕಚೇರಿಗೆ ಭೇಟಿ ನೀಡಿ, ಆರ್.ಎಸ್.ಎಸ್.ನ ವಾರ್ಷಿಕ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಸ್ವಯಂಸೇವಕರನ್ನುದ್ದೇಶಿಸಿ ಭಾಷಣ ಮಾಡಿದರು.

ಕಾಂಗ್ರೆಸ್ ಮೂಲದ ಮುಖರ್ಜಿ, ನಾಗಪುರಕ್ಕೆ ಹೋಗಬಾರದು ಎಂದು ಕಾಂಗ್ರೆಸ್‌ನ ಹಲವರು ಬಹಿರಂಗವಾಗಿ ಟೀಕೆ ಮಾಡಿದರು. ಆದರೆ ಮುಖರ್ಜಿ ನಾಗಪುರಕ್ಕೆೆ ನಡೆದರು. ಜತೆಗೆ, ಹೆಡ್ಗೆವಾರ್ ಅವರು ಜನಿಸಿದ ಮನೆಗೆ ಭೇಟಿ ನೀಡಿ, ಗೌರವ ಸಲ್ಲಿಸಿ, ಹೆಡ್ಗೆವಾರ್ ಅವರನ್ನು ‘ಗ್ರೇಟ್ ಸನ್ ಆಫ್ ಇಂಡಿಯಾ’ ಎಂದು ವರ್ಣಿಸಿದರು. ನಾಗಪುರದ ಅವರ ಭೇಟಿಯು ಇನ್ನೊಂದು ದಾಖಲೆ ಬರೆಯಿತು. ಆರ್‌ಎಸ್‌ಎಸ್‌ನ ಇಂತಹ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ ಮೊದಲ ರಾಷ್ಟ್ರಪತಿ ಪ್ರಣಬ್ ಮುಖರ್ಜಿ!

ಇದಾಗಿ ಒಂದು ವರ್ಷದ ಅವಧಿಯಲ್ಲಿ, ಪ್ರಣಬ್ ಮುಖರ್ಜಿಯವರು ಭಾರತರತ್ನ ಗೌರವಕ್ಕೆ ಭಾಜನರಾದರು (2019). ಆ ಮೂಲಕ ಅವರ ಜೀವನದ ಅತ್ಯುನ್ನತ ಮೈಲಿಗಲ್ಲನ್ನು ತಲುಪಿದರು. ಇಂದಿರಾಗಾಂಧಿಯವರ ನಿಷ್ಠರಾಗಿ, ಕಾಂಗ್ರೆಸ್‌ನ ಪ್ರಮುಖ ರಾಜಕಾರಣಿಯಾಗಿ ತಮ್ಮ ಜೀವನವನ್ನು ಬೆಳೆಸಿಕೊಂಡ ಪ್ರಣಬ್ ಮುಖರ್ಜಿಯವರು, ರಾಷ್ಟ್ರಪತಿಯಾಗಿ ನಿವೃತ್ತರಾದ ನಂತರ, ಬಿಜೆಪಿ ಸರಕಾರದ ಅವಧಿಯಲ್ಲಿ ಭಾರತರತ್ನ ಪ್ರಶಸ್ತಿಗೆ ಭಾಜನರಾಗಿದ್ದು ವಿಶೇಷ. ರಾಜಕಾರಣ ದಲ್ಲಿದ್ದರೂ, ರಾಜಕೀಯ ನ್ನುಮೀರಿ, ರಾಷ್ಟ್ರಪತಿಯಾಗಿ, ಜತೆಗೆ ಓರ್ವ ಲೇಖಕರೂ ಆಗಿ ಪ್ರಣಬ್ ಮುಖರ್ಜಿಯವರು ನಮ್ಮ ದೇಶದ ಅವಿಸ್ಮರಣೀಯ ವ್ಯಕ್ತಿಿತ್ವಗಳಲ್ಲಿ ಒಬ್ಬರಾಗಿ ತಮ್ಮ ಸಾಧನೆಯನ್ನು ದಾಖಲಿಸಿದ್ದಾರೆ.