Sunday, 15th December 2024

ಭಾರತ – ಆಸ್ಟ್ರೇಲಿಯಾ ವ್ಯಾಪಾರ: ಮುಕ್ತ ಮುಕ್ತ ಮುಕ್ತ !

ವಿಶ್ವನೋಟ

ಸುಧೀರ್‌ ಕೀಳಂಬಿ

ಭಾರತ-ಆಸ್ಟ್ರೇಲಿಯಾ ಮುಕ್ತ ವ್ಯಾಪಾರ ಒಪ್ಪಂದ ಆಸ್ಟ್ರೇಲಿಯಾದ ಸಂಸತ್ತಿನ ಅನುಮೋದನೆ ಪಡೆದು, ಜಾರಿಗೆ ಬರಲು ಸನ್ನದ್ಧವಾಗಿದೆಯೆಂಬ ಸಮಾಚಾರ ದೊಡ್ಡ ಸುದ್ದಿಯಾಯಿತು. ಈ ಸಂಧಾನ ಮಾತುಕತೆಗೆ ಭಾರತದ ತಂಡದಲ್ಲಿ ಪಾಲ್ಗೊಂಡ ಅನುಭವಗಳ ಜತೆಗೆ, ಅದರ ಮಹತ್ವವನ್ನು ‘ವಿಶ್ವವಾಣಿ’ ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನದ ಅಂಗವಾಗಿ ಪ್ರಸ್ತುತ ಲೇಖನ.

ಜಾಗತೀಕರಣದ ಬಹು ಮುಖ್ಯ ಆಯಾಮ ಅಂತಾರಾಷ್ಟ್ರೀಯ ವ್ಯಾಪಾರ. ಇಂದಿನ ಜಗತ್ತಿನಲ್ಲಿ ಒಂದು ದೇಶ ನೈಸರ್ಗಿಕವಾಗಿ ಬೇರೊಂದು ದೇಶದ ಮೇಲೆ ಅವಲಂಬಿತವಾಗಲೇ ಬೇಕಾಗಿದೆ. ಉದಾಹರಣೆಗೆ ಪೆಟ್ರೋಲಿಯಂ ತೈಲಕ್ಕಾಗಿ ಕೊಲ್ಲಿ ರಾಷ್ಟ್ರಗಳ ಮೇಲಿನ ನಮ್ಮ ಅವಲಂಬನೆ. ಒಂದು ದೇಶವು ಬೇರೆ ದೇಶಗಳೊಂದಿಗೆ ವ್ಯಾಪಾರ (ಮಾರುವುದು, ಕೊಳ್ಳು ವುದು) ಮಾಡುವಾಗ ಹಲವಾರು ತೊಡಕುಗಳನ್ನು ಎದುರಿಸಬೇಕಾಗುತ್ತದೆ.

ಇದರಲ್ಲಿ ಪ್ರಮುಖವಾಗಿ ನಿರ್ಯಾತ ತೆರಿಗೆ ಮತ್ತು ಆಮದು ಸುಂಕ, ವ್ಯಾಪಾರ ನಿರ್ಬಂಧ, ಸಬ್ಸಿಡಿ, ಪ್ಯಾಕಿಂಗ್‌ನ ಮೇಲಿನ ನಿಬಂಧನೆಗಳು ಇತ್ಯಾದಿ. ತನ್ನ ದೇಶದ ಉತ್ಪಾದಕರನ್ನು, ಮಾರಾಟಗಾರರ ಹಿತರಕ್ಷಣೆಗಾಗಿ ವಿಧಿಸುವ ಸುಂಕಗಳು ಮುಕ್ತ ವ್ಯಾಪಾರಕ್ಕೆ ತೊಡಕಾಗಿ ಪರಿಣಮಿಸುತ್ತವೆ. ದೇಶಗಳ ಮದ್ಯೆ ಇರುವ ಪರಸ್ಪರ ಅವಲಂಬನೆಯನ್ನು ಮನಗೊಂಡು ವಿಶ್ವದ ರಾಷ್ಟ್ರಗಳು ಒಟ್ಟಿಗೆ ಸೇರಿ ೧೯೯೫ರಲ್ಲಿ ವಿಶ್ವ ವಾಣಿಜ್ಯ ಸಂಸ್ಥೆಯನ್ನು (WTO) ಹುಟ್ಟುಹಾಕಿದವು.

ಇದು ರಾಷ್ಟ್ರಗಳ ನಡುವಿನ ವ್ಯಾಪಾರದ ನಿಯಮಗಳನ್ನು ರೂಪಿಸುವ ಏಕೈಕ ಜಾಗತಿಕ ಸಂಸ್ಥೆ. ೧೬೪ ದೇಶಗಳನ್ನೊಳಗೊಂಡ ಈ ಸಂಸ್ಥೆಯು, ವಿಶ್ವ ವ್ಯಾಪಾರವನ್ನು ಸಾಧ್ಯವಾದಷ್ಟು ಮುಕ್ತವಾಗಿಸಿ, ಸರಳವಾಗಿಸಿ, ಸರಕು ಮತ್ತು ಸೇವೆಗಳ ಉತ್ಪಾದಕರು,
ರಫ್ತುದಾರರು ಮತ್ತು ಆಮದುದಾರರು ತಮ್ಮ ವ್ಯವಹಾರವನ್ನು ನಡೆಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

WTO ಮುಕ್ತ ವ್ಯಾಪರಕ್ಕೆ ಅಡಿಗಲ್ಲು ಹಾಗಿದ್ದರೂ, ದ್ವಿಪಕ್ಷೀಯವಾಗಿ ವ್ಯಾಪಾರದಲ್ಲಿ ಇನ್ನೂ ಹೆಚ್ಚಿನ ರಿಯಾಯ್ತಿಯನ್ನು ನೀಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಹಲವಾರು ದೇಶಗಳ ನಡುವೆ ದ್ವಿಪಕ್ಷೀಯ ಹಾಗೂ ಕೆಲವೇ ರಾಷ್ಟ್ರಗಳೊಂದಿಗೆ (ಉದಾ: RCEP) ಮುಕ್ತ ವ್ಯಾಪಾರ ಸಂಧಿಗಳೂ ಚಾಲ್ತಿಗೆ ಬಂದಿದೆ. ಭಾರತವು ಇಲ್ಲಿಯವರೆಗೆ ೧೩ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಹೊಂದಿದೆ. ಅದರಲ್ಲಿ, ಶ್ರೀಲಂಕಾ, ನೇಪಾಳ, ಸಿಂಗಾಪುರ, ದಕ್ಷಿಣ ಕೊರಿಯಾ, ಜಪಾನ್ ಇತ್ಯಾದಿಗಳು ಸೇರಿವೆ. ಇದರ ಜತೆಗೇ, ಕೆಲವು ಪ್ರಾಂತೀಯ ಸಂಘಟನೆಗಳಾದ ಆಸಿಯಾನ್, ದಕ್ಷಿಣ ಏಷಿಯಾ ದೇಶಗಳೂ (SAFTA) ಸೇರಿವೆ.

ಭಾರತವು ಇಂಗ್ಲೆಂಡ್, ಕೆನಡಾ, ಯೂರೋಪಿಯನ್ ಯೂನಿಯನ್‌ಗಳ ಜತೆಗೆ ಮುಕ್ತ ವ್ಯಾಪಾರದ ಮಾತಕತೆ ಮುಂದುವರಿಸಿದ್ದು, ಇಂಗ್ಲೆಂಡ್‌ನೊಂದಿಗೆ ಸದ್ಯದ ಮಾತುಕತೆ ಮುಗಿಯಲಿದೆ. ೨೦೧೯ರಲ್ಲಿ, ಚೀನಾ ಸಾರಥ್ಯದ ೧೫ ರಾಷ್ಟ್ರಗಳ ಮುಕ್ತ ವ್ಯಾಪಾರ ಒಪ್ಪಂದದಿಂದ (RCEP) ಹಿಂದೆ ಸರಿದಿದ್ದನ್ನು ಇಲ್ಲಿ ಸ್ಮರಿಸಬಹುದು. ಭಾರತ-ಆಸ್ಟ್ರೇಲಿಯಾ ಮುಕ್ತ ವ್ಯಾಪಾರ ಒಪ್ಪಂದ
೨೦೧೧ ರಿಂದ ೨೦೧೬ರವರೆಗೆ, ೯ ಸುತ್ತಿನ ದೀರ್ಘ ಮಾತುಕತೆಯ ನಂತರ, ಸಹಮತಿ ಮೂಡದ ಕಾರಣ ಕೈಬಿಡಲಾಗಿತ್ತು.

ಮುಕ್ತ ವ್ಯಾಪಾರ ಅದೆಷ್ಟು ಕ್ಲಿಷ್ಟಕರ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ನಂತರ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ವಾಣಿಜ್ಯ ಮಂತ್ರಿ ಪಿಯೂಷ್ ಗೋಯೆಲ್ ಅವರ ನೇತೃತ್ವದಲ್ಲಿ ಆಸ್ಟ್ರೇಲಿಯಾದೊಂದಿಗಿನ ಮಾತುಕತೆ ೨೦೨೧ ಸೆಪ್ಟೆಂಬರ್‌ನಲ್ಲಿ ಪುನರ್ ಆರಂಭವಾಯಿತು. ಇದರ ಸಂಧಾನಕಾರರು ರಾತ್ರಿ-ಹಗಲು ಅವಿರತವಾಗಿ ಶ್ರಮಿಸಿದ ಫಲವಾಗಿ
ಕೇವಲ ೮ ತಿಂಗಳ, ಅಂದರೆ ಏಪ್ರಿಲ್ ೨೦೨೨ಕ್ಕೆ ಮಾತುಕತೆ ಮುಕ್ತಾಯಗೊಂಡಿದ್ದು ಸಾಧನೆಯೇ ಸರಿ.

ದೂರದೃಷ್ಟಿಯ ನೇತೃತ್ವ ಒಂದಿದ್ದರೇ ಯಾವುದೇ ಕಾರ್ಯ ಅಸಾಧುವಲ್ಲ ಅಲ್ಲವೇ? ಆಸ್ಟ್ರೇಲಿಯಾದೊಂದಿಗಿನ ಒಪ್ಪಂದವು ಈ ದಶಕದ ಭಾರತವು ಮುಂದುವರಿದ ದೇಶದೊಂದಿಗೆ ಮಾಡಿಕೊಂಡ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಸುಮಾರು ಶೇ.೯೮.೩ರಷ್ಟು ಸರಕು, ಸೇವೆಗಳನ್ನು ಸುಂಕಮುಕ್ತಗೊಳಿಸಲಾಗಿದೆ. ಭಾರತಕ್ಕೆ ಕಲ್ಲಿದ್ದಿಲಿನಂಥ ಕಚ್ಚಾ ಪದಾರ್ಥಗಳನ್ನು ಆಸ್ಟ್ರೇಲಿಯಾ ಸುಲಭವಾಗಿ ರಫ್ತು ಮಾಡಲಿದ್ದು, ಭಾರತದಲ್ಲಿ ತಯಾರಾದ ಸರಕುಗಳಿಗೆ ಆಸ್ಟ್ರೇಲಿಯಾ ಉತ್ತಮ ಮಾರುಕಟ್ಟೆ ಒದಗಿಸಲಿದೆ.

ಇದಲ್ಲದೇ, ಆಸ್ಟ್ರೇಲಿಯಾದ ಸೇವಾ ಕ್ಷೇತ್ರ ಮುಕ್ತವಾಗಿ ತೆರೆದುಕೊಳ್ಳಲಿದ್ದು (service sector) ಭಾರತದ ಮಾಹಿತಿ ತಂತ್ರಜ್ಞಾನ (IT) ಮತ್ತು ಅವನ್ನೊಳಗೊಂಡ ಸೇವೆಗಳು, ವೃತ್ತಿಪರ ಸೇವೆ, ಅರೋಗ್ಯ ಇತ್ಯಾದಿ ವಲಯಗಳಲ್ಲಿ ಭಾರತದ ಸೇವಾದಾತರಿಗೆ ಬಹಳಷ್ಟು ಅನುಕೂಲವಾಗಲಿದೆ. ಮದ್ಯಪ್ರಿಯರಿಗೂ ಆಸ್ಟ್ರೇಲಿಯಾದ ವೈನ್ ಕಡಿಮೆ ಬೆಲೆಯಲ್ಲಿ ದೊರೆಯಲಿದ್ದು, ಭಾರತದ ಗ್ರಾಹಕರು ಇವೆಲ್ಲವುಗಳಿಂದ ಬಹುವಾಗಿ ಪ್ರಯೋಜನ ಪಡೆಯಲಿದ್ದಾರೆ.

ಇನ್ನು, ಭಾರತದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಗಿದ ನಂತರ ೪ ವರ್ಷಗಳ ಅವಧಿಯ ವೀಸಾ ವಿಸ್ತರಣೆ, ಭಾರತದ ಯೋಗ ಶಿಕ್ಷಕರಿಗೆ ಮತ್ತು ಬಾಣಸಿಗರಿಗೆ ಪ್ರತಿವರ್ಷ ೧೮೦೦ ವೀಸಾಗಳನ್ನು ಕಾಯ್ದಿರಿಸುವುದು, ರಜೆ ಕಾಲದ ಹಾಗೂ ಯುವ ವೃತ್ತಿಕಾರರಿಗೆ ವೀಸಾ ಇತ್ಯಾದಿ ಹಲವು ಆಕರ್ಷಣೆಗಳು ಈ ಒಪ್ಪಂದದಲ್ಲಿ ಸಮ್ಮಿಳಿಸಿದ್ದು, ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿ, ಕಾರ್ಯ ನಿರ್ವಹಿಸುವುದು
ಸುಲಭವಾಗಲಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದ ಅನೇಕ ಯುವಕರು ಆಸ್ಟ್ರೇಲಿಯಾದಲ್ಲಿನ ಅವಕಾಶವನ್ನು ಅರಸುತ್ತಿರುವಾಗ, ಈ  ಒಪ್ಪಂದದಿಂದ ತುಂಬಾ ಅನುಕೂಲವಾಗಲಿದೆ. ಆಸ್ಟ್ರೇಲಿಯಾವು ಭಾರತದ ೧೭ನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ದೇಶ. ೨೦೨೧ರಲ್ಲಿ ಭಾರತವು ೧೦.೫ ಬಿಲಿಯನ್ ಡಾಲರ್‌ನಷ್ಟು ರಫ್ತು ಮಾಡಿದ್ದರೆ, ೧೭ ಬಿಲಿಯನ್ ಡಾಲರ್‌ನಷ್ಟು ಸರಕು ಮತ್ತು ಸೇವೆಗಳನ್ನು ಆಮದು ಮಾಡಿಕೊಂಡು, ಒಟ್ಟು ವ್ಯಾಪಾರ ಮೊತ್ತ ೨೭ ಬಿಲಿಯನ್ ಡಾಲರ್ ತಲುಪಿದೆ. ಇನ್ನು ೫ ವರ್ಷದಲ್ಲಿ ಈ
ಒಪ್ಪಂದದ ಮೂಲಕ ದ್ವಿಪಕ್ಷೀಯ ವ್ಯಾಪಾರವನ್ನು ೫೦ ಬಿಲಿಯನ್ ಡಾಲರ್‌ಗೆ ಕೊಂಡೊಯ್ಯಲು ವಾಣಿಜ್ಯ ಮಂತ್ರಿ ಪೀಯೂಷ್ ಗೋಯಲ್ ಅವರು ಪಣ ತೊಟ್ಟಿದ್ದಾರೆ.

ಇನ್ನು ಕಾರ್ಮಿಕ ವಲಯಕ್ಕೆ ಈ ಒಪ್ಪಂದದಿಂದ ಹಲವು ಲಾಭಗಳಾಗಲಿದ್ದು, ಜವಳಿ, ಉಡುಪುಗಳು, ಕೃಷಿ ಉತ್ಪನ್ನಗಳು, ಮತ್ಸ್ಯ ಉತ್ಪನ್ನಗಳು, ಚರ್ಮದಿಂದ ಮಾಡಿದ ಉತ್ಪನ್ನಗಳು, ಆಭರಣ, ಔಷಧಗಳು, ಇತ್ಯಾದಿ ಕಾರ್ಮಿಕರಿಗೆ ಕೆಲಸ ಕೊಡುವ ಕ್ಷೇತ್ರ ಗಳಾಗಿದ್ದು, ಅನೇಕರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಈ ಒಪ್ಪಂದದಿಂದ ಭಾರತದಲ್ಲಿ ಹತ್ತು ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಅಂದಾಜಿದೆ.

ಕಲ್ಲಿದ್ದಿಲು, ಅದಿರು, ಉಣ್ಣೆಯಂಥ ಕಚ್ಚಾ ಸಾಮಗ್ರಿಗಳು ಕಡಿಮೆ ದರದಲ್ಲಿ ದೊರೆಯುವುದರಿಂದ, ಇವುಗಳನ್ನು ಬಳಸಿ ಭಾರತ ದಲ್ಲಿ ಕಡಿಮೆ ದರದ ಉತ್ಪನ್ನಗಳನ್ನು ತಯಾರಿಸಿ ಭಾರತದ ಒಳಗೆ ಮತ್ತು ಹೊರಗೆ ಕಡಿಮೆ ದರದ ಉತ್ಪನ್ನಗಳನ್ನು ಮಾರಬಹು ದಾಗಿದೆ. ಅಲ್ಲದೇ, ಆಸ್ಟ್ರೇಲಿಯಾದ ಬಂಡವಾಳವೂ ಇಲ್ಲಿಗೆ ಹರಿದು ಬಂದರೆ, ಉದ್ಯೋಗ ಮತ್ತಿತರ ಕ್ಷೇತ್ರಗಳಲ್ಲಿ ಇನ್ನೂ ಪ್ರಗತಿಯಾಗುವುದರಲ್ಲಿ ಸಂದೇಹವೇ ಇಲ್ಲ.

ಕ್ವಾಡ್ ಮುಂತಾದ ಮೈತ್ರಿಗಳ ಮೂಲಕ ಭಾರತ ಮತ್ತು ಆಸ್ಟ್ರೇಲಿಯಾದ ಸಂಭಂದಗಳು ರಾಜನೈತಿಕವಾಗಿಯೂ ಬಲಗೊಳ್ಳು ತ್ತಿರುವ ಈ ಸಂಧರ್ಭದಲ್ಲಿ, ಮುಕ್ತ ವ್ಯಾಪಾರ ಒಪ್ಪಂದದಿಂದ ಇದು ಮತ್ತಷ್ಟು ಬಲಗೊಂಡು ಭಾರತದ ನೆರೆ ರಾಷ್ಟ್ರಗಳ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. ಭಾರತದ ಪ್ರಭಲ ನೇತೃತ್ವ, ರಾಜಕೀಯ ಇಚ್ಚಾಶಕ್ತಿ, ಮತ್ತು ದೂರದೃಷ್ಟಿತ್ವದಿಂದ ಆಸ್ಟ್ರೇಲಿಯಾದ ಒಂದೇ ಅಲ್ಲದೇ ಹಲವು ಇತರ ರಾಷ್ಟ್ರಗಳ ಜತೆಗೂ ತನ್ನ ಸಂಬಂಧವನ್ನು ಗಾಢಗೊಳಿಸುತ್ತಿರುವುದು ನಮ್ಮ ನಡಿಗೆ ವಿಶ್ವಗುರು ಎಡೆಗೆ ಎಂಬ ಸಂಕೇತ ನೀಡುತ್ತಿದೆ.

ಲೇಖಕರು: ಭಾರತ ಸರಕಾದ ವಿದೇಶಾಂಗ
ಇಲಾಖೆಯ ಕಾನೂನು ಅಧಿಕಾರಿ