Friday, 22nd November 2024

ಮಾಜಿ ಕೊಲಿಜಿಯಂ ಸದಸ್ಯರಿಗೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ವ್ಯವಸ್ಥೆಯನ್ನು ಟೀಕಿಸುವ ಕೆಲವು ಮಾಜಿ ಕೊಲಿಜಿಯಂ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ನ್ಯಾಯಾಧೀಶರು ನಿವೃತ್ತಿಯ ನಂತರ ಈ ರೀತಿ ಟೀಕಿಸುವುದು ಇತ್ತೀಚೆಗೆ ಫ್ಯಾಶನ್ ಆಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂನ ಭಾಗವಾಗಿರುವ ನ್ಯಾಯಮೂರ್ತಿ ಎಂ ಆರ್ ಷಾ ಅವರು, ಕೊಲಿಜಿಯಂ ಮಾಜಿ ಸದಸ್ಯರು ನೀಡಿದ ಹೇಳಿಕೆಗೆ ನಾವು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಹಿಂದಿನ ಸದಸ್ಯರು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಪ್ರತಿಕ್ರಿಯಿಸುವುದು ಒಂದು ಫ್ಯಾಶನ್ ಆಗಿದೆ ಎಂದರು.
ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಆತ್ಮಚರಿತ್ರ ‘ಜಸ್ಟಿಸ್ ಫಾರ್ ದಿ ಜಡ್ಜ್’ ನಲ್ಲಿ, ಕೊಲಿಜಿಯಂ ತನ್ನ ಡಿಸೆಂಬರ್ 2018 ರ ಸಭೆಯಲ್ಲಿ ಆಗ ರಾಜಸ್ಥಾನ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯ ಮೂರ್ತಿ ಪ್ರದೀಪ್ ನಂದಜೋಗ್ ಮತ್ತು ನ್ಯಾಯಮೂರ್ತಿ ರಾಜೇಂದ್ರ ಮೆನನ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ಗೆ ಉನ್ನತೀಕರಣಕ್ಕಾಗಿ ಶಿಫಾರಸು ಮಾಡಲು ಒಪ್ಪಿಕೊಂಡಿತ್ತು. ಆದರೆ ಅವರ ಉನ್ನತಿಯ ಸುದ್ದಿ ಮಾಧ್ಯಮಗಳಿಗೆ ಸೋರಿಕೆ ಯಾದಾಗಿನಿಂದ ನಿರ್ಧಾರವನ್ನು ಸ್ಥಗಿತಗೊಳಿಸಲಾಯಿತು.
ಸಿಜೆಐ ಗೊಗೊಯ್ ಅವರನ್ನು ಹೊರತುಪಡಿಸಿ, ಆಗಿನ ಕೊಲಿಜಿಯಂನಲ್ಲಿ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕೂರ್, ಎ ಕೆ ಸಿಕ್ರಿ, ಎಸ್ ಎ ಬೋಬ್ಡೆ ಮತ್ತು ಎನ್ ವಿ ರಮಣ ಇತರ ಸದಸ್ಯರಾಗಿದ್ದರು.
ಫೆಬ್ರವರಿ 2019 ರಲ್ಲಿ, ಆರ್ ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ಎಸ್ಸಿ ಕೊಲಿಜಿಯಂನ ಡಿಸೆಂಬರ್, 2018 ರ ಸಭೆ ಯ ನಿರ್ಣಯದ ನಡಾವಳಿಯ ಪ್ರತಿಯನ್ನು ಕೋರಿ ಆರ್ ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮನವಿಯನ್ನು ವಜಾಗೊಳಿಸಿದಾಗ, ಮೊದಲ ಮೇಲ್ಮನವಿ ಪ್ರಾಧಿಕಾರವು ಜನವರಿ 10, 2019 ರ ಕೊಲಿಜಿಯಂ ನಿರ್ಣಯವು ಡಿಸೆಂಬರ್ ಸಭೆಯಲ್ಲಿ ಸಮಾಲೋಚನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಔಪಚಾರಿಕವಾಗಿ ಯಾವುದೇ ನಿರ್ಣಯವನ್ನು ಅಂಗೀಕರಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿತು.