ತುಮಕೂರು: ಇಲ್ಲಿನ ಶ್ರೀರಾಮನಗರ ಸರಕಾರಿ ಶಾಲೆಯ ಶಿಥಿಲಾವಸ್ಥೆಯಲ್ಲಿರುವು ದನ್ನು ಮನಗಂಡ ಶಾಸಕ ಜಿ.ಬಿ.ಜ್ಯೋತಿ ಗಣೇಶ್ , ಸುಮಾರು 60 ಲಕ್ಷ ರು ವೆಚ್ಚದಲ್ಲಿ ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಬಹಳ ಹಳೆಯ ಪ್ರತಿಷ್ಠಿತ ಶಾಲೆ ಇದಾಗಿದ್ದು, ಶಿಥಿಲಾವಸ್ಥೆಗೆ ತಲುಪಿದೆ. ಈ ಬಗ್ಗೆ ಸ್ಥಳೀಯ ಮುಖಂಡರು, ಶಾಲಾ ಮುಖ್ಯೋ ಪಾಧ್ಯಾಯರು, ಎಸ್‌ಡಿಎಂಸಿ ಸದಸ್ಯರುಗಳು ಶಾಸಕ ಜ್ಯೋತಿಗಣೇಶ್ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಶಾಸಕರು ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ 60 ಲಕ್ಷ ರು. ಅನುದಾನ ನೀಡುವ ಮೂಲಕ ಶಾಲೆಯ ಅಭಿವೃದ್ಧಿ ಕಾಮಗಾರಿಗೆ ವಿದ್ಯುಕ್ತ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ನಗರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ 6 ತಿಂಗಳ ಹಿಂದೆ 40-50 ಕೋಟಿ ರೂ. ನೀಡಿದ್ದು, ಈ ಹಣದಲ್ಲಿ 60 ಲಕ್ಷ ರು.ಗಳನ್ನು ಪ್ರತಿಷ್ಠಿತ ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ನೀಡಿದ್ದೇನೆ ಎಂದರು.
ಸರಕಾರ ನೀಡಿರುವ ಈ ಅನುದಾನ ನಗರದ ರಸ್ತೆ, ಚರಂಡಿಗಳ ಅಭಿವೃದ್ಧಿಗೆ ವಿನಿಯೋಗಿಸಬೇಕು. ಆದರೆ ಶಾಲೆಯ ಶಿಥಿಲಾವಸ್ಥೆ ಯನ್ನು ಕಂಡು ಅಭಿವೃದ್ಧಿ ಪಡಿಸಿ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ 60 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಶಿಥಿಲಾವಸ್ಥೆಗೊಂಡಿರುವ ಈ ಶಾಲೆಯ ಅಭಿವೃದ್ಧಿಗೆ 60 ಲಕ್ಷ ರೂ. ಸಾಕಾಗುವುದಿಲ್ಲ. ಆದ್ದರಿಂದ ಚಿದಾನಂದ್ ಅವರು ಮನಸ್ಸು ಮಾಡಿ ರೋಟರಿ ಅಥವಾ ಬೇರೆ ಯಾವುದಾದರೂ ಸಂಘ ಸಂಸ್ಥೆಗಳಿಂದ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ರೂಪಶ್ರೀ ಶೆಟ್ಟಳ್ಳಯ್ಯ, ಮಹಾನಗರಪಾಲಿಕೆ ಆಯುಕ್ತ ಯೋಗಾನಂದ್, ಸಮಾಜ ಸೇವಕರಾದ ಚಿದಾನಂದ್, ಎಸ್‌ಡಿಎಂಸಿ ಅಧ್ಯಕ್ಷರಾದ ಬಷೀರ್, ಬಂಬು ಮೋಹನ್, ರವಿ, ರವೀಂದ್ರ, ಸುಬ್ಬಣ್ಣ, ಬಸವರಾಜು, ಕಿರಣ್, ಚಂದ್ರಶೇಖರ್, ರಾಮಚಂದ್ರರಾವ್, ವಿಷ್ಣು, ಪ್ರತಾಪ್, ರಾಘವೇಂದ್ರ, ವೆಂಕಟೇಶ್, ವಾಸು, ಇಂಜಿನಿಯರ್ ಸಿದ್ದಪ್ಪ, ಬಿಇಓ ಹನುಮನಾಯಕ್, ಶಾಲೆಯ ಮುಖ್ಯ ಶಿಕ್ಷಕರಾದ ರಂಗನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.