Saturday, 26th October 2024

ಭಗವದ್ಗೀತೆ ಹಿಂದುಗಳ ನೈತಿಕ ಶಕ್ತಿಯ ಪ್ರತೀಕ : ಸಾಯಿಕುಮಾರ್ ಅಭಿಮತ

ಚಿಕ್ಕಬಳ್ಳಾಪುರ : ಭಗವದ್ಗೀತೆ ಹಿಂದುಗಳ ನೈತಿಕ ಬಲದ ಸಂಕೇತವಾಗಿದ್ದು ದ್ವಾಪರ ಯುಗದ ಕಾಲಕ್ಕಾಗಲೇ ನಾಗರೀಕ ಸಮಾಜಕ್ಕೆ ಬೇಕಾದ ಉದಾತ್ತ ಚಿಂತನೆಗಳನ್ನು ಶ್ರೀಕೃಷ್ಣ ಪರಮಾತ್ಮ ಸಾರಿರುವುದನ್ನು ಕಾಣಬಹುದು ಎಂದು ಬಹುಭಾಷಾ  ಚಲನಚಿತ್ರ ನಟ ಸಾಯಿಕುಮಾರ್ ಅಭಿಪ್ರಾಯ ಪಟ್ಟರು.

ತಾಲೂಕಿನ ಹೊಸಹುಡ್ಯ ಗ್ರಾಮದ ಶ್ರೀವಿಷ್ಣುಪ್ರಿಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶನಿವಾರ ನಡೆದ ೨೫ ವರ್ಷದ ಗೀತಾ ಜಯಂತಿ ಹಾಗೂ ಛದ್ಮವೇಷ, ಭಗವದ್ಗೀತೆ ಕಂಠ ಪಾಠ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು. ತಾಯಿ ತಂದೆ ಗುರು ದೈವ ಜೀವನದಲ್ಲಿ ತುಂಬಾ ಮುಖ್ಯ.ತಾಯಿತಂದೆಯನ್ನು ಪ್ರೀತಿಸಬೇಕು, ಗುರುವನ್ನು ಪೂಜಿಸಬೇಕು, ದೇವರನ್ನು ಪ್ರಾರ್ಥಿಸ ಬೇಕು. ಇಷ್ಟಾದರೆ ಜೀವನದಲ್ಲಿ ಏನಾದರೂ ಸಾಧಿಸ ಬಹುದು. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಮಾಡಬೇಕು.ಇದಾದರೆ ಖಂಡಿತ ಭವಿಷ್ಯದಲ್ಲಿ ಉನ್ನತ ಸ್ಥಾನ ಮಾನಗಳನ್ನು ಗಳಿಸಲು ಸಾಧ್ಯ.ಇಲ್ಲಿರುವ ಪ್ರತಿಯೊಬ್ಬ ಪೋಷಕರೂ ಮರೆಯದೆ ಮಕ್ಕಳನ್ನು ಪ್ರೋತ್ಸಾಹಿಸಿ ಎಂದು ಕಿವಿ ಮಾತು ಹೇಳಿದರು.

ಕಳೆದ ೨೫ ವರ್ಷಗಳಿಂದ ಗ್ರಾಮೀಣ ಪರಿಸರದಲ್ಲಿ ಭಗವದ್ಗೀತೆ ಜನಿಸಿದ ದಿನದಂದು ಸಾವಿರಾರು ಮಕ್ಕಳನ್ನು ಒಟ್ಟಿಗೆ ಒಂದೇ ವೇದಿಕೆಗೆ ತಂದು ಗೀತಾ ಪಾರಾಯಣ ಮಾಡಿಸುತ್ತಿರುವುದು ಅಭಿನಂದನೀಯ ಕಾಯಕವಾಗಿದೆ. ಇಂತಹ ಸಂತಾನ ಸಾವಿರ ವಾಗಲಿ, ಕಾರಣ ಗೀತೆಯಲ್ಲಿ ಇರದ ಜೀವನ ದರ್ಶನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇದನ್ನು ಅರಿಯದ ಅಜ್ಞಾನಿಗಳು ಇದೊಂದು ಧಾರ್ಮಿಕ ಗ್ರಂಥ ಎಂದು ಮೂಗುಮುರಿಯುತ್ತಾರೆ.ಕಸ್ತೂರಿಯ ಪರಿಮಮಳ ಮೆಲ್ಲುವವನಿಗೆ ತಾನೆ ತಿಳಿಯಲು ಸಾಧ್ಯ ಎಂದು ಗೀತೆಯ ಮಹತ್ವವನ್ನು ಸಾರಿದರು.

ಮಾನವ ಜಗತ್ತಿನ ಮೇಲಿನ ಕರುಣೆಯಿಂದಾಗಿ ಭಗವಂತನಾದ ಶ್ರೀಕೃಷ್ಣನು ಅವರ ಬದುಕಿಗೆ ಅವಶ್ಯವೆನಿಸುವ ತತ್ವವನ್ನು ಸಾಮಾನ್ಯರೂ ಅರಿಯಯುವ ಹಾಗೆ ಸರಳ ಭಾಷೆಯಲ್ಲಿ ಭಗವದ್ಗೀತೆ ರೂಪದಲ್ಲಿ ನೀಡಿದ್ದಾನೆ.ಇದು ಎಲ್ಲಾ ಉಪನಿಷತ್ತುಗಳ ಸಾರವಾಗಿದೆ.ಉಪನಿಷತ್ತುಗಳೇ ಗೋವುಗಳು ಅವುಗಳನ್ನು ಕರೆದವನೇ ಶ್ರೀಕೃಷ್ಣ ಎನ್ನುವುದು ಜಗತ್ತಿಗೆ ತಿಳಿದಿದೆ. ಮಾನವ ಜನ್ಮ ಸಾರ್ಥಕ ಆಗಬೇಕಾದರೆ ಜನ್ಮಧಾತೆ, ಜನ್ಮಭೂಮಿ, ಗುರುಹಿರಿ ಯರನ್ನು ಗೌರವ ಭಾವದಿಂದ ನೋಡಬೇಕು.

ಚಿಕ್ಕಬಳ್ಳಾಪುರ ಜಿಲ್ಲೆ ಕೈವಾರ ತಾತಯ್ಯ, ವೀರಬ್ರಹ್ಮೇಂದ್ರ ಯತಿ, ಮೊದಲಾದ ಶುಷಿ ಮುನಿಗಳು ಯೋಗಿಗಳಿಗೆ ಜನ್ಮನೀಡಿದ ತಪೋಭೂಮಿ ಯಾಗಿದೆ.ಇಂತಹ ನೆಲದಲ್ಲಿ ಭಗವಂತನ ನಾಮಸ್ಮರಣೆ ಮಾಡಿದರೆ ಸಾಕು ಪಾಪಪರಿಹಾರವಾಗುತ್ತದೆ ಎಂದರು.

ಭಗವoತನ ಗುಣ ಸ್ವಭಾವ, ಸ್ವರೂಪ, ತತ್ವ ,ಪ್ರಭಾವ,ರಹಸ್ಯ, ಉಪಸನಾ ಮಾರ್ಗ,ಮತ್ತು ಜ್ಞಾನದ ವರ್ಣನೆಯು ಗೀತೆಯಲ್ಲಿ ಮೂಡಿಬಂದಿರುವ ಹಾಗೆ ಬೇರಾವ ಕೃತಿಯಲ್ಲೂ ಕಾಣಲು ಸಾಧ್ಯವಿಲ್ಲ.ಯುವತಲೆಮಾರು ಗೀತೆಯನ್ನು ನಿತ್ಯವೂ ಪಠಣೆ ಮಾಡುವುದರಿಂದ ಸದ್ವಿಚಾರ ಸತ್‌ಚಿಂತನೆಗಳನ್ನು ಕಾಣಲು ಸಾಧ್ಯ.ಹೀಗಾಗಿಯೇ ಗೀತೆಯು ಪರಮ ರಹಸ್ಯಮಯ ಗ್ರಂಥವಾಗಿದೆ.ಹೀಗಾಗಿ ಗೀತೆಯು ಅಪರಿಮಿತ ಅವಿನಾಶಿ ಗುಣಹೊಂದಿರುವ ಶಾಸ್ತçಗ್ರಂಥವಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಟಿ.ಎಸ್.ನಾಗೇಂದ್ರ ಪ್ರಸಾದ್ ಮಾತನಾಡಿ ಗೀತೆಯು ಮಾನವೀಯ ಮೌಲ್ಯಗಳನ್ನು ಪೊರೆದು ಸರ್ವರ ಹಿತವನ್ನು ಬಯಸುವ ಮಹೋನ್ನತ ಗ್ರಂಥವಾಗಿದೆ.ಗೀತೆಯು ಗಾಯಿತ್ರಿಗಿಂತಲೂ ಹೆಚ್ಚಾಗಿದೆ.ಗಾಯಿತ್ರಿ ಜಪದಿಂದ ಮನುಷ್ಯನೊಬ್ಬನ ಮುಕ್ತಿ ಸಾಧ್ಯ. ಆದರೆ ಗೀತೆಯ ಅಭ್ಯಾಸ ಪಾರಾಯಣ ಮಾಡುವವರು ತಾವೂ ಉದ್ಧಾರವಾಗುವುದಲ್ಲದೆ ಬೇರೆಯವರನ್ನೂ ಉದ್ಧರಿಸಬಲ್ಲ ಶಕ್ತಿಯನ್ನು ಪಡೆಯುತ್ತಾರೆ.

ಗೀತೆಯು ಜ್ಞಾನದ ವಿಶಾಲ ಸಮುದ್ರವಾಗಿದೆ.ಇದರೊಳಗೆ ಜ್ಞಾನದ ಅನಂತ ಭಂಡಾರವೇ ತುಂಬಿದೆ.ಇದನ್ನು ದರ್ಶಸುವ ಮೂಲಕ ನಾವು ಇದರ ಸದುಪಯೋಗ ಪಡೆದುಕೊಳ್ಳೊಣ ಎಂದು ಕರೆ ನೀಡಿದರು.

ವಿಷ್ಣುಪ್ರಿಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರಾಮಚಂದ್ರರೆಡ್ಡಿ ಮಾತನಾಡಿ ಭಗವಂತನ ಕೃಪಾಶೀರ್ವಾಧ ಬಲದಿಂದಲೇ ೨೫ ವರ್ಷಗಳಿಂದ ನಿರಂತರವಾಗಿ ಗೀತಾ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ.ಇಲ್ಲಿ ಬಂದು ಭಾಗಿಯಾಗಿ ಹೋದವರು ಬದುಕಿನಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಸದ್ಗುಣ ಸಂಪನ್ನರಾಗಿದ್ದಾರೆ.ಭಗವದ್ಗೀತೆಯನ್ನು ಸರ್ವಾಂತರ್ಯಾಮಿ ಯಾದ ಶ್ರೀಕೃಷ್ಣ ಪರಮಾತ್ಮನೇ ಬೋಧಿಸಿದ್ದಾನೆ ಎಂದ ಮೇಲೆ ನರಮನುಷ್ಯರಾದ ನಾವು ಅದರ ಸತ್ವ ತತ್ವ ಸಂದೇಶ ಗಳನ್ನು ಅರಿತು ಬಾಳಬೇಕು.

ಬದುಕಿನಲ್ಲಿ ಜತೆಯಾಗುವ ಸಂಗಾತಿಗಳಿಗೆ ಅದರ ಸವಿಯನ್ನು ಹಂಚಬೇಕು.ಇದೇ ಕಾಯಕವನ್ನು ನನ್ನ ಜೀವನದಲ್ಲಿ ಅನುಸರಿಸುತ್ತಾ ಬಂದಿದ್ದೇನೆ. ಭಗವ0ತನ ಕರುಣೆ ಸರ್ವರ ಮೇಲೆ ಇರಲಿ,ಜನತೆ ಆಯುರಾರೋಗ್ಯ ಭಾಗ್ಯದಿಂದ ಸಂತೋಷದಿ0ದ ಬದುಕುವ ಮಾರ್ಗವನ್ನು ಶ್ರೀಕೃಷ್ಣ ಪರಮಾತ್ಮ ಕರುಣಿಸಲಿ ಎಂದರು.

ಕಾರ್ಯಕ್ರಮದಲ್ಲಿ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಛದ್ಮವೇಶಧಾರಿಗಳು, ಕಂಠಪಾಠ ಸ್ಪರ್ಧಿಗಳು, ಮಕ್ಕಳು ಪುಟಾಣಿಗಳು ಶ್ರೀಕೃಷ್ಣ, ರಾಧೆಯ ವೇಷ ಧರಿಸಿ ಶ್ಲೋಕಗಳನ್ನು ಉಸುರುತ್ತಿದ್ದರೆ ಸಾಕ್ಷಾತ್ ಧ್ವಾರಕೆಯೇ ಧರೆಗಿಳಿದಂತೆ ಭಾಸವಾಗುತ್ತಿತ್ತು.ಸ್ಪರ್ಧೆಯಾದ ಕಾರಣ ಪೋಷಕರು ತಮ್ಮ ಮಕ್ಕಳು ಮುದ್ದಾಗಿ ಕಾಣಬೇಕು ಎಂದು ಜಾಗ್ರತೆ ವಹಿಸಿದ್ದರಲ್ಲದೆ ಪ್ರಶಸ್ತಿ ತಮಗೇ ಬರಬೇಕು ಎಂಬ0ತೆ ಮಕ್ಕಳಿಗೆ ಅಲಂಕಾರ ಮಾಡಿದ್ದರು.

ವೇದಿಕೆಯಲ್ಲಿ ಮುಖಂಡರಾದ ರಾಮರೆಡ್ಡಿ, ವಿಕ್ರಾಂತ್, ಡಾ. ಸತ್ಯನಾರಾಯಣರಾವ್ ಅವರನ್ನು ಆತ್ಮೀಯವಾಗಿ ಸನ್ಮಾನಿಸ ಲಾಯಿತು. ಕಾರ್ಯಕ್ರಮದಲ್ಲಿಶ್ಯಾಮಲಾ ರಾಮಚಂದ್ರರೆಡ್ಡಿ,ಲಕ್ಷö್ಮಮ್ಮ ರಾಮಚಂದ್ರರೆಡ್ಡಿ, ರಕ್ಷಿತ್‌ರೆಡ್ಡಿ, ಮಂಚನಬಲೆ ಶ್ರೀನಿವಾಸ್, ಪದವಿ ಪ್ರಾಂಶುಪಾಲ ನಟರಾಜ್, ಪಿಯು ಪ್ರಾಂಶುಪಾಲ ಎಂ. ಪ್ರಸಾದ್, ಚದಲಪುರ ನಾರಾಯಣ್, ಎಲೆಹಳ್ಳಿ ರಾಮಕೃಷ್ಣ,ಜಯಗೋಪಿ, ರಂಜಿತ್ ಮತ್ತಿತರರು ಇದ್ದರು.